ADVERTISEMENT

ಸಂಪಾದಕೀಯ | ಅದಾನಿ ಸಮೂಹ ಕುರಿತ ತೀರ್ಪು; ಉತ್ತರ ಸಿಗದ ಪ್ರಶ್ನೆಗಳು

ಸಂಪಾದಕೀಯ
Published 6 ಜನವರಿ 2024, 0:30 IST
Last Updated 6 ಜನವರಿ 2024, 0:30 IST
   

ಕೋರ್ಟ್‌ ನಿಗದಿ ಮಾಡಿರುವ ಕಾಲಮಿತಿಯಲ್ಲಿ ಸೆಬಿ ತನಿಖೆ ಪೂರ್ಣಗೊಳಿಸಬೇಕು. ಅದಕ್ಕಿಂತ ಮುಖ್ಯವಾಗಿ, ತನಿಖೆಯಲ್ಲಿ ಕಂಡುಕೊಂಡ ಎಲ್ಲ ಅಂಶಗಳನ್ನು ಸೆಬಿ ಸಾರ್ವಜನಿಕರ ಮುಂದೆ ಇರಿಸಬೇಕು

ಕಂಪನಿಗಳ ಷೇರುಗಳ ಬೆಲೆಯ ಮೇಲೆ ಕೃತಕವಾಗಿ ಪ್ರಭಾವ ಬೀರಿದ ಹಾಗೂ ಲೆಕ್ಕಪತ್ರಗಳಲ್ಲಿ ವಂಚನೆ ಎಸಗಿರುವ ಆರೋಪ ಎದುರಿಸುತ್ತಿರುವ ಅದಾನಿ ಸಮೂಹದ ವಿರುದ್ಧದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಅಥವಾ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಇದರಿಂದಾಗಿ, ಕೆಲವು ಪ್ರಶ್ನೆಗಳನ್ನು ಉತ್ತರಿಸದೆ ಹಾಗೆಯೇ ಬಿಟ್ಟಂತೆ ಆಗಿದೆ. ಅಮೆರಿಕದ ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯು ಒಂದು ವರ್ಷದ ಹಿಂದೆ ಈ ಆರೋಪಗಳನ್ನು ಮಾಡಿತ್ತು; ಈ ಸಂಸ್ಥೆಯು ಷೇರು ಮಾರುಕಟ್ಟೆಯಲ್ಲಿ ಶಾರ್ಟ್‌ ಸೆಲ್ಲಿಂಗ್‌ ವಹಿವಾಟು (ಷೇರು ಮೌಲ್ಯ ಕುಸಿಯುತ್ತಿರುವಾಗ ಲಾಭ ಮಾಡಿಕೊಳ್ಳುವ ವಹಿವಾಟು) ನಡೆಸುತ್ತದೆ.

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ನಡೆಸುತ್ತಿರುವ ತನಿಖೆಯಲ್ಲಿ ಕೋರ್ಟ್‌ ವಿಶ್ವಾಸ ವ್ಯಕ್ತಪಡಿಸಿದೆ. ನಿಯಂತ್ರಣ ಕ್ರಮಗಳಲ್ಲಿ ವೈಫಲ್ಯ ಆಗಿರುವಂತೆ ಕಂಡುಬಂದಿಲ್ಲ, ಸೆಬಿ ಸಂಸ್ಥೆಯು ಸಮಗ್ರ ತನಿಖೆ ನಡೆಸುತ್ತಿದೆ, 22 ಪ್ರಕರಣಗಳಲ್ಲಿ ಸೆಬಿ ತನಿಖೆಯನ್ನು ಪೂರ್ಣಗೊಳಿಸಿದೆ ಎಂದು ಕೋರ್ಟ್ ಹೇಳಿದೆ. ಅಲ್ಲದೆ, ಇನ್ನುಳಿದ ಎರಡು ಪ್ರಕರಣಗಳಿಗೆ ಸಂಬಂಧಿಸಿದ ತನಿಖೆಯನ್ನು ಸಾಧ್ಯವಾದಷ್ಟುಮಟ್ಟಿಗೆ ಮೂರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಸೆಬಿಗೆ ಸೂಚಿಸಿದೆ. ಷೇರುಗಳ ಶಾರ್ಟ್‌ ಸೆಲ್ಲಿಂಗ್ ವಹಿವಾಟು ನಡೆಸಿದವರು ಯಾವುದಾದರೂ ಕಾನೂನು ಉಲ್ಲಂಘಿಸಿದ್ದರೇ, ಅದರಿಂದಾಗಿ ಹೂಡಿಕೆದಾರರಿಗೆ ನಷ್ಟ ಆಯಿತೇ ಎಂಬುದನ್ನು ತನಿಖೆಗೆ ಒಳಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಕೋರ್ಟ್‌ ಸೂಚಿಸಿದೆ.

ADVERTISEMENT

ಆದರೆ ಅದಾನಿ ಸಮೂಹಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರವಾಗಿ ಕೆಲವು ಪ್ರಶ್ನೆಗಳು ಹಾಗೇ ಉಳಿದುಕೊಂಡಿವೆ. ಏಕೆಂದರೆ, ಷೇರು ಬೆಲೆಯ ಮೇಲೆ ಪ್ರಭಾವ ಬೀರಿದ್ದರ ಕುರಿತ ಆರೋಪ ಮತ್ತು ವಿದೇಶಿ ಹೂಡಿಕೆ ಕುರಿತ ತನಿಖೆಯನ್ನು ಸೆಬಿ ಇದುವರೆಗೆ ಪರಿಣಾಮಕಾರಿಯಾಗಿ ಮಾಡಿಲ್ಲ. ವಿದೇಶಿ ಹೂಡಿಕೆದಾರರಿಗೆ ಸಂಬಂಧಿಸಿದ ಸಂಸ್ಥೆಗಳು ತೆರಿಗೆಗಳ್ಳರ ಪಾಲಿನ ಸ್ವರ್ಗವೆಂದು ಪರಿಗಣಿತ
ವಾಗಿರುವ ಸ್ಥಳಗಳಲ್ಲಿ ಇರುವ ಕಾರಣ, 12 ವಿದೇಶಿ ಹೂಡಿಕೆದಾರರ ಪಾಲುದಾರರ ಆರ್ಥಿಕ ಹಿತಾಸಕ್ತಿ
ಗಳನ್ನು ಸಾಬೀತು ಮಾಡುವುದು ಸವಾಲಿನ ಕೆಲಸವಾಗಿಯೇ ಉಳಿದಿದೆ ಎಂದು ಸೆಬಿ ಹೇಳಿದೆ. ಹಿಂಡನ್‌ಬರ್ಗ್‌ ಸಂಸ್ಥೆಯ ವರದಿ ಬಹಿರಂಗ ಆಗುವ ಮೊದಲೂ, ಅದಾನಿ ಸಮೂಹದ ಬಗ್ಗೆ ಸೆಬಿಗೆ ಸರ್ಕಾರಿ ಸಂಸ್ಥೆಗಳಿಂದಲೇ ದೂರುಗಳು ಸಲ್ಲಿಕೆಯಾಗಿದ್ದವು. ವಿದೇಶಿ ಹೂಡಿಕೆಗೆ ಹಾಗೂ ಮಾರುಕಟ್ಟೆಗೆ ನೀಡಬೇಕಿರುವ ಮಾಹಿತಿಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸುವಂತೆ ಸೆಬಿಗೆ ತಾನು ಸೂಚಿಸಲು ಸಾಧ್ಯವಿಲ್ಲ, ಏಕೆಂದರೆ ನಿಯಮಗಳು ಈಗಾಗಲೇ ಕಠಿಣವಾಗಿವೆ ಎಂದು ಕೋರ್ಟ್‌ ಹೇಳಿದೆ.

ಸೆಬಿ ತನಿಖೆಯಲ್ಲಿನ ಲೋಪಗಳನ್ನು ಗುರುತಿಸಿದ್ದ ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿಗಾರಿಕೆ ಯೋಜನೆಯ ವರದಿಯನ್ನು ಆಧರಿಸಿ ತಾನು ಆದೇಶ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಈ ವರದಿಯನ್ನು ನಿರ್ಣಾಯಕ ಸಾಕ್ಷ್ಯವೆಂದು ಪರಿಗಣಿಸಲು ಆಗದು ಎಂದು ಅದು ಕಾರಣ ನೀಡಿದೆ. ಕೋರ್ಟ್‌ ನೀಡಿರುವ ಕಾರಣವೇ, ತನಿಖೆಯನ್ನು ಮುಂದಿನ ಹಂತಕ್ಕೆ ಒಯ್ಯುವುದು ಸೂಕ್ತವಾಗುತ್ತಿತ್ತೇ
ಎಂಬ ಪ್ರಶ್ನೆಯು ಜನರ ಮುಂದೆ ಎದುರಾಗುವಂತೆ ಮಾಡಿದೆ. ತನಿಖಾ ಪತ್ರಕರ್ತರಿಗೆ ನಿರ್ಣಾಯಕ ಸಾಕ್ಷ್ಯವನ್ನು ಕಂಡುಹಿಡಿಯಲು ಬೇಕಿರುವ ಪೊಲೀಸ್ ಅಧಿಕಾರ ಇರುವುದಿಲ್ಲ; ಎಸ್‌ಐಟಿಗೆ ಅಂತಹ ಅಧಿಕಾರ ಇರುತ್ತದೆ.

ಸೆಬಿ ಕಾರ್ಯವ್ಯಾಪ್ತಿಯಲ್ಲಿ ಪ್ರವೇಶಿಸುವ ಇಚ್ಛೆ ಕೋರ್ಟ್‌ಗೆ ಇರಲಿಲ್ಲ ಎಂಬುದು ಅದು ನೀಡಿರುವ ತೀರ್ಪಿನಿಂದಾಗಿ ಸ್ಪಷ್ಟವಾಗುತ್ತದೆ. ತನ್ನ ಅಧಿಕಾರವ್ಯಾಪ್ತಿಯಲ್ಲಿ ಸ್ವಾಯತ್ತೆಯನ್ನು ಸೆಬಿ ಹೊಂದಿರುವ ಕಾರಣದಿಂದಾಗಿ, ಕೋರ್ಟ್‌ ಈ ನಿಲುವು ತಾಳಿರಬಹುದು. ನಿಯಂತ್ರಣ ಕ್ರಮಗಳು ಮನಸ್ಸಿಗೆ ತೋಚಿದಂತೆ ರೂಪಿಸಿದವು ಆಗಿದ್ದರೆ, ಆ ಕ್ರಮಗಳು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ರೀತಿಯಲ್ಲಿ ಇದ್ದರೆ ನ್ಯಾಯಾಂಗವು ಅದರ ಪರಿಶೀಲನೆಗೆ ಮುಂದಾಗಬಹುದು. ಅಸಾಮಾನ್ಯ ಸಂದರ್ಭಗಳಲ್ಲಿ ಮಾತ್ರ ತನಿಖೆಯನ್ನು ಸೆಬಿ ಕೈಯಿಂದ ಕಿತ್ತು ಇನ್ನೊಂದು ಸಂಸ್ಥೆಗೆ ವಹಿಸಬಹುದು ಎಂದು ಹೇಳಿದೆ. ಈ ಪ್ರಕರಣದಲ್ಲಿ ಅಂತಹ ಸಂದರ್ಭ ಎದುರಾಗಿಲ್ಲ ಎಂದು ಕೋರ್ಟ್‌ ಹೇಳಿದೆ. ಕೋರ್ಟ್‌ ನಿಗದಿ ಮಾಡಿರುವ ಕಾಲಮಿತಿಯಲ್ಲಿ ಸೆಬಿ ತನಿಖೆ ಪೂರ್ಣಗೊಳಿಸಬೇಕು.

ಅದಕ್ಕಿಂತ ಮುಖ್ಯವಾಗಿ ತನಿಖೆಯಲ್ಲಿ ಕಂಡುಕೊಂಡ ಎಲ್ಲ ಅಂಶಗಳನ್ನು ಸೆಬಿ ಸಾರ್ವಜನಿಕರ ಮುಂದೆ ಇರಿಸಬೇಕು. ಏಕೆಂದರೆ, ಇದು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯ, ಇದು ದೇಶದ ಷೇರುಪೇಟೆಯ ಮೇಲೆ ಪರಿಣಾಮ ಬೀರುವಂತೆ ಇದೆ, ಇಲ್ಲಿ ರಾಜಕೀಯ ಆಯಾಮಗಳು ಇವೆ. ಸೆಬಿ ತನ್ನ ನಿರ್ಣಯಗಳಿಗೆ ಆಧಾರವಾಗಿ ಇರಿಸಿಕೊಂಡ ಕಾರಣಗಳು ಯಾವುವು ಎಂಬುದನ್ನು ತಿಳಿಯುವ ಹಕ್ಕು ಜನರಿಗೆ ಇದೆ. ಹಿಂಡನ್‌ಬರ್ಗ್‌ ಸಂಸ್ಥೆ ಎತ್ತಿದ ಪ್ರಶ್ನೆಗಳಿಗೆ ಆಗಲೇ ಪೂರ್ತಿಯಾದ ಉತ್ತರ ಸಿಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.