ಸೌಹಾರ್ದ ಕದಡಲು ಕಾರಣವಾಗಬಹುದಾದ ಕೃತ್ಯಗಳು ನಡೆದಾಗ, ಆಡಳಿತ ಪಕ್ಷವು ಪರಿಸ್ಥಿತಿಯನ್ನು ತುಂಬಾ ಎಚ್ಚರದಿಂದ ಮತ್ತು ಜವಾಬ್ದಾರಿಯಿಂದ ನಿಭಾಯಿಸಬೇಕು. ವಿರೋಧ ಪಕ್ಷ ಸಂಯಮದಿಂದ ವರ್ತಿಸಬೇಕು.
ಬೆಂಗಳೂರಿನ ಚಾಮರಾಜಪೇಟೆಯ ರಸ್ತೆಬದಿಯಲ್ಲಿನ ಶೆಡ್‌ವೊಂದರಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲುಗಳನ್ನು ಕೊಯ್ದು, ಅವುಗಳನ್ನು ಗಂಭೀರವಾಗಿ ಗಾಸಿಗೊಳಿಸಿರುವುದು ನಾಗರಿಕ ಸಮಾಜವನ್ನೇ ಬೆಚ್ಚಿಬೀಳಿಸುವಂತಹ ಮೃಗೀಯ ಕೃತ್ಯ. ವಿಕೃತ ಮನೋಭಾವದ ಪುಂಡರಿಗೆ ಮಾತ್ರ ಮೂಕಪ್ರಾಣಿಗಳಿಗೆ ಈ ರೀತಿ ಚಿತ್ರಹಿಂಸೆ ನೀಡಲು ಸಾಧ್ಯ. ರಕ್ತದ ಮಡುವಿನಲ್ಲಿ ಮೂಕರೋದನೆ ಅನುಭವಿಸುತ್ತಿದ್ದ ಹಸುಗಳಿಗೆ ತಕ್ಷಣ ಚಿಕಿತ್ಸೆ ಕೊಡಿಸಿ, ಅವುಗಳನ್ನು ಪ್ರಾಣಾಪಾಯದಿಂದ ರಕ್ಷಿಸಿರುವುದು ಸಮಾಧಾನದ ಸಂಗತಿ. ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಕೃತ್ಯವು ಕೋಮುಸೂಕ್ಷ್ಮ ಸ್ವರೂಪದ್ದಾಗಿರುವ ಕಾರಣ ಮತ್ತು ಸಂಕ್ರಾಂತಿಯ ಸಂದರ್ಭವೂ ಇದಾಗಿದ್ದರಿಂದ ಸನ್ನಿವೇಶದ ಲಾಭ ಪಡೆಯುವ ಹವಣಿಕೆಯಲ್ಲಿ ರಾಜಕೀಯ ಮಾಡಲು ಹೊರಟಿರುವುದು ಕೂಡ ನಾಚಿಕೆಗೇಡಿನ ನಡೆ. ಕಿಡಿಗೇಡಿಗಳು ಎಸಗಿದ ದುಷ್ಕೃತ್ಯವನ್ನು ಮುಂದಿಟ್ಟುಕೊಂಡು ಸಮಾಜದ ಸ್ವಾಸ್ಥ್ಯ ಕೆಡಿಸುವ ಪ್ರವೃತ್ತಿಯು ಚುನಾಯಿತ ಪ್ರತಿನಿಧಿಗಳಿಗೆ ಶೋಭೆ ತರುವಂಥದ್ದಲ್ಲ. ಸಾಮಾಜಿಕ ಕಂದರಗಳು ಹೆಚ್ಚುತ್ತಿರುವ ಈ ಹೊತ್ತಿನಲ್ಲಿ, ಯಾರೇ ಆಗಲಿ, ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತಹ ಕೆಲಸವನ್ನು ಮಾಡಬಾರದು.
ರಾಜ್ಯದಲ್ಲಿ ಎಲ್ಲಿಯೇ ಆಗಲಿ, ಸೌಹಾರ್ದ ಕದಡಲು ಕಾರಣವಾಗಬಹುದಾದ ಕೃತ್ಯಗಳು ನಡೆದಾಗ, ಆಡಳಿತ ಪಕ್ಷವು ಪರಿಸ್ಥಿತಿಯನ್ನು ತುಂಬಾ ಎಚ್ಚರದಿಂದ ಮತ್ತು ಜವಾಬ್ದಾರಿಯಿಂದ ನಿಭಾಯಿಸಬೇಕು. ವಿರೋಧ ಪಕ್ಷ ಸಂಯಮದಿಂದ ವರ್ತಿಸಬೇಕು. ಪರಸ್ಪರರು ಭಾವೋದ್ರೇಕದ ಹೇಳಿಕೆಗಳನ್ನು ನೀಡುತ್ತಾ ಹೋದರೆ ಸಮಾಜದ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ಎಚ್ಚರಿಕೆ ಎಲ್ಲರಿಗೂ ಇರಬೇಕು. ಆದರೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ವಕ್ಫ್ ಮಂಡಳಿ ವಿರುದ್ಧದ ಪ್ರತಿಭಟನೆಯಲ್ಲಿ ಸಾಂಕೇತಿಕವಾಗಿ ಇವೇ ಹಸುಗಳನ್ನು ಬಳಸಲಾಗಿತ್ತು.
ಅದಕ್ಕಾಗಿ ಮಚ್ಚು, ಡ್ಯಾಗರ್ ಬಳಸಿ, ಅವುಗಳ ಕೆಚ್ಚಲು ಕೊಯ್ದು, ಕಾಲು ಕತ್ತರಿಸಲಾಗಿದೆ’ ಎಂದು ಭಾವೋದ್ರೇಕಗೊಳಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಬಿಜೆಪಿಯ ಇನ್ನೂ ಕೆಲವು ನಾಯಕರೂ ಇದೇ ಧಾಟಿಯಲ್ಲಿ ಮಾತನಾಡಿದ್ದಾರೆ. ಅವರ ಈ ಹೇಳಿಕೆಗಳು ಅನಪೇಕ್ಷಿತ. ಸ್ಥಳೀಯ ಶಾಸಕರೂ ಆಗಿರುವ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ತಕ್ಷಣ ಸ್ಥಳಕ್ಕೆ ಧಾವಿಸಿ, ಹಸುಗಳ ಮಾಲೀಕನನ್ನು ಸಂತೈಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ. ಗಾಯಗೊಂಡ ಹಸುಗಳಿಗೆ ಚಿಕಿತ್ಸೆ ಸಿಗುತ್ತಿರುವುದನ್ನು ಖಚಿತಪಡಿಸಿಕೊಂಡ ಅವರು, ಅವುಗಳ ಮಾಲೀಕನಿಗೆ ಬೇರೆ ಮೂರು ಹಸುಗಳನ್ನೂ ಕೊಡಿಸುವ ಭರವಸೆ ನೀಡಿದ್ದಾರೆ. ಸೂಕ್ಷ್ಮ ಸನ್ನಿವೇಶದಲ್ಲಿ ಇರಿಸಿದ ಸೂಕ್ತ ನಡೆ ಇದಾಗಿದೆ.
ಈ ಹೀನ ಕೃತ್ಯದಿಂದ ಆಕ್ರೋಶಗೊಂಡ ಸ್ಥಳೀಯರು, ತಮ್ಮ ಪ್ರದೇಶದಲ್ಲಿ ಮಾದಕ ವ್ಯಸನಿಗಳು ಮತ್ತು ಪುಂಡರ ಹಾವಳಿ ಹೆಚ್ಚಾಗಿದೆ ಎಂದು ದೂರಿದ್ದಾರೆ. ಅಂತಹ ಪುಂಡಾಟಿಕೆ ಏನಾದರೂ ಅಲ್ಲಿ ನಡೆಯುತ್ತಿದ್ದರೆ ಅದನ್ನು ಮಟ್ಟಹಾಕುವ ಕೆಲಸವನ್ನು ಪೊಲೀಸರು ಮಾಡಬೇಕು ಮತ್ತು ಪೊಲೀಸರು ಆ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಕೆಲಸವನ್ನು ಸರ್ಕಾರ ಮಾಡಬೇಕು.
ಈ ಕೃತ್ಯ ಕುರಿತಂತೆ ಪೊಲೀಸರು ನಿಷ್ಪಕ್ಷಪಾತವಾದ ತನಿಖೆ ನಡೆಸಿ, ಸತ್ಯಸಂಗತಿ ಏನೆಂಬುದನ್ನು ಸಮಾಜದ ಮುಂದಿಡುವ ಕೆಲಸ ಮಾಡಬೇಕು ಮತ್ತು ಈ ಕೆಲಸ ಸಾಧ್ಯವಾದಷ್ಟು ಬೇಗ ಆಗಬೇಕು. ಅವಘಡಗಳು ಸಂಭವಿಸಿದ ಮೇಲೆ, ಅಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಇರಲಿಲ್ಲ ಎಂದು ಹಲುಬುವ ಬದಲು, ಪ್ರಮುಖ ರಸ್ತೆಗಳು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಕ್ಯಾಮೆರಾ ಕಣ್ಗಾವಲಿನ ವ್ಯವಸ್ಥೆಯನ್ನು ಆದ್ಯತೆ ಮೇರೆಗೆ ಮಾಡಬೇಕು. ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಈ ದಿಸೆಯಲ್ಲಿ ಕಾರ್ಯಪ್ರವೃತ್ತ
ವಾಗಬೇಕು. ಸಮಾಜದ ನೆಮ್ಮದಿ ಕದಡುವ ಘಟನೆಗಳು ನಡೆದಾಗ ನಮ್ಮ ರಾಜಕಾರಣಿಗಳು ಕ್ಷುಲ್ಲಕ ರಾಜಕೀಯದಲ್ಲಿ ತೊಡಗದೆ, ಪರಿಸ್ಥಿತಿಯನ್ನು ತಿಳಿಗೊಳಿಸಲು ಸಹಕರಿಸುವಂತಹ ಪ್ರಬುದ್ಧ ನಡೆಯನ್ನು ಪ್ರದರ್ಶಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.