ADVERTISEMENT

ಸಂಪಾದಕೀಯ| ನೆಲದ ಕಾನೂನೇ ನೆಲಸಮ: ಬುಲ್ಡೋಜರ್‌ಗೆ ತಡೆಯೊಡ್ಡಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 19:31 IST
Last Updated 23 ಜೂನ್ 2022, 19:31 IST
Edit 240622
Edit 240622   

ಉತ್ತರಪ್ರದೇಶ ಸರ್ಕಾರವು ಈಗ ಪ್ರತಿಭಟನೆಗಳನ್ನೂ ಪ್ರತಿಭಟನಕಾರರನ್ನೂ ಹೇಗೆ ನಿರ್ವಹಿಸುತ್ತಿದೆ ಎಂಬುದರ ಸಂಕೇತವಾಗಿ ಕಾಣುತ್ತಿದೆ ಅಬ್ಬರಿಸುವ ಬುಲ್ಡೋಜರ್‌. ಅದರಲ್ಲೂ ಮುಸ್ಲಿಮರೇ ಅದರ ಆರ್ಭಟದ ಗುರಿಯಾಗಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸಹಾರನ್‌ಪುರ
ದಿಂದ ಕಾನ್ಪುರದವರೆಗೆ, ಅಲ್ಲಿಂದ ಪ್ರಯಾಗರಾಜ್‌ವರೆಗೆ ಅಲ್ಪಸಂಖ್ಯಾತ ಸಮುದಾಯದವರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಮತ್ತು ಪ್ರತೀಕಾರದಿಂದ ಅವರನ್ನು ಮನಬಂದಂತೆ ಥಳಿಸಲಾಗಿದೆ. ಅವರ ಮನೆಗಳನ್ನು ನೆಲಸಮಗೊಳಿಸಲಾಗಿದೆ ಇಲ್ಲವೆ ನೆಲಸಮಗೊಳಿಸಲಿರುವ ಕಟ್ಟಡಗಳ ಪಟ್ಟಿಯಲ್ಲಿ ಅವರ ಆಸ್ತಿಗಳ ವಿವರವನ್ನೂ ಸೇರ್ಪಡೆ ಮಾಡಲಾಗಿದೆ. ಕೆಲವು ಮುಸ್ಲಿಂ ಪ್ರತಿಭಟನಕಾರರನ್ನು ಸಹಾರನ್‌ಪುರ ಪೊಲೀಸ್‌ ಠಾಣೆಯಲ್ಲಿಯೇ ಥಳಿಸುತ್ತಿದ್ದರು ಎನ್ನಲಾದ ಭಯಾನಕ ದೃಶ್ಯದ ತುಣುಕೊಂದು ಕೆಲವು ದಿನಗಳ ಹಿಂದೆ ವೈರಲ್‌ ಆಗಿತ್ತು. ಈ ದೃಶ್ಯದ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದವರು ಬಿಜೆಪಿಯ ಶಾಸಕ ಶಲಭ್‌ ಮಣಿ ತ್ರಿಪಾಠಿ. ಪ್ರವಾದಿ ಮಹಮ್ಮದ್‌ ಅವರ ಕುರಿತು ಬಿಜೆಪಿಯ ಪದಾಧಿಕಾರಿ ಸ್ಥಾನದಲ್ಲಿದ್ದುಕೊಂಡು ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದ ನೂಪುರ್‌ ಶರ್ಮಾ ಹಾಗೂ ನವೀನ್‌ ಜಿಂದಾಲ್‌ ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ ಪೊಲೀಸರು ನೀಡಿದ ‘ಮರು ಕಾಣಿಕೆ’ ಇದು ಎಂದು ಅವರು ಸಂಭ್ರಮಿಸಿದ್ದರು. ಪೊಲೀಸರ ಕೃತ್ಯದಿಂದ ಹೆಮ್ಮೆಯಿಂದ ಬೀಗುತ್ತಿದ್ದ ಈ ಶಾಸಕ, ಪ್ರತಿಭಟನೆ ನಡೆಸುವವರು ಉರ್ದು ಮಾತನಾಡುವವರಾ ಗಿದ್ದು, ಮುಸ್ಲಿಮರಾಗಿದ್ದರೆ ಅವರಿಗೆ ಇದೇ ಗತಿ ಎಂಬ ಅರ್ಥದ ಸಂದೇಶ ರವಾನಿಸಲು ಬಯಸಿದ್ದರು. ಉತ್ತರಪ್ರದೇಶದಲ್ಲಿ ಏನು ನಡೆದಿದೆ ಎನ್ನುವುದು ತುಂಬಾ ಸ್ಪಷ್ಟವಾಗಿದ್ದರೂ ಅಲ್ಲಿನ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಹೇಳಿಕೆಯಲ್ಲಿ ಪ್ರವಾದಿ ಮಹಮ್ಮದ್‌ ಅವರ ವಿರುದ್ಧದ ಹೇಳಿಕೆಗೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆಗೂ ಕಟ್ಟಡ ನೆಲಸಮಗೊಳಿಸುವ ಪ್ರಕ್ರಿಯೆಗೂ ಯಾವುದೇ ಸಂಬಂಧವಿಲ್ಲ ಎಂದಿರುವುದು ನ್ಯಾಯಾಲಯವನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ.

ಪ್ರಯಾಗರಾಜ್‌ನ ರಾಜಕೀಯ ಕಾರ್ಯಕರ್ತ ಮಹಮ್ಮದ್‌ ಜಾವೇದ್‌ ಅವರ ಮನೆಯನ್ನು, ವಾಸ್ತವವಾಗಿ ಆ ಕಟ್ಟಡ ಅವರ ಪತ್ನಿಯ ಒಡೆತನ ದಲ್ಲಿದ್ದರೂ, ಕಳೆದ ಭಾನುವಾರ ನೆಲಸಮಗೊಳಿಸಲಾಯಿತು. ಮೇ 10ರ ಹಳೆಯ ದಿನಾಂಕವನ್ನು ನಮೂದಿಸಿ, ಮನೆಯ ಮುಂದೆ ನೋಟಿಸ್‌ ಅಂಟಿಸಿದ ಕೆಲವೇ ಗಂಟೆಗಳಲ್ಲಿ ಕಟ್ಟಡ ನೆಲಸಮಗೊಳಿಸುವ ಕಾರ್ಯಾಚರಣೆ ನಡೆಸಲಾಯಿತು ಎಂದು ಸಂತ್ರಸ್ತರು ಹೇಳಿದ್ದಾರೆ. ಆ ವೇಳೆಗಾಗಲೇ ಕುಟುಂಬದ ಎಲ್ಲ ಸದಸ್ಯರನ್ನೂ ಪೊಲೀಸರು ಮನೆಯಿಂದ ದೂರ ಕರೆದೊಯ್ದಿದ್ದರು. ಕಾರ್ಯಾಚರಣೆಗೆ ಇದ್ದ ಏಕೈಕ ಸಮರ್ಥನೆಯೆಂದರೆ ಅದು ಅಕ್ರಮ ಕಟ್ಟಡವಾಗಿತ್ತು ಎನ್ನುವುದು. ಒಂದು ವೇಳೆ ಅದು ಅಕ್ರಮ ಕಟ್ಟಡ ವಾಗಿದ್ದರೂ ಸರಿಯಾದ ಕಾನೂನು ಪ್ರಕ್ರಿಯೆ ಪೂರೈಸದೆ ಕೆಡವುವಂತಿಲ್ಲ. ಕಾರ್ಯಾಚರಣೆ ನಡೆಸುವ ಮುನ್ನ ಕಟ್ಟಡದ ಮಾಲೀಕನ ವಾದವನ್ನು ಆಲಿಸಬೇಕು. ಆದರೆ, ಈ ಪ್ರಕರಣದಲ್ಲಿ ಯಾವುದನ್ನೂ ಪರಿಗಣನೆಗೆ ತೆಗೆದುಕೊಂಡಿಲ್ಲ. ಉಳಿದ ಪ್ರತಿಭಟನಕಾರರ ಆಸ್ತಿಗಳು ಸಹ ನೆಲಸಮಗೊಳಿಸುವ ಕಟ್ಟಡಗಳ ಪಟ್ಟಿಯಲ್ಲಿ ಸೇರಿವೆ ಎಂದು ಹೇಳಲಾಗಿದೆ. ಸಹಾರನ್‌ಪುರದಲ್ಲಿ ಇಬ್ಬರು ಪ್ರತಿಭಟನಕಾರರ ‘ಅಕ್ರಮ ಕಟ್ಟಡ’ಗಳನ್ನು ಉರುಳಿಸುವ ಮೂಲಕ ತನ್ನ ಆರ್ಭಟ ಆರಂಭಿಸಿದ ಬುಲ್ಡೋಜರ್‌, ಅಲ್ಲಿಂದ ಕಾನ್ಪುರಕ್ಕೆ ಬಂತು. ಅಲ್ಲಿ ಆರೋಪಿಯೊಬ್ಬನ ಸಂಬಂಧಿಯ ಮನೆಯನ್ನು ಧ್ವಂಸಗೊಳಿಸಲಾಯಿತು.

‘ಸಮಾಜಘಾತುಕ ಶಕ್ತಿಗಳು’ ಹಾಗೂ ‘ಅಪರಾಧಿಗಳು’ ಎಂಬುದಾಗಿ ತಾನು ಗುರುತಿಸುವ ವ್ಯಕ್ತಿ
ಗಳನ್ನು ದಂಡಿಸಲು ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರವು ಬುಲ್ಡೋಜರ್‌ ಅಸ್ತ್ರವನ್ನು ಪ್ರಯೋಗಿಸು
ತ್ತಿದೆ. ‘ಸಮಾಜಘಾತುಕ ಶಕ್ತಿಗಳು’ ಹಾಗೂ ‘ಅಪರಾಧಿಗಳು’ ಎಂದರೆ ಆ ಸರ್ಕಾರದ ಅರ್ಥದಲ್ಲಿ ಮುಸ್ಲಿಮರೇ ಆಗಿದ್ದಾರೆ. ಪ್ರತಿಭಟಿಸುವ ನಾಗರಿಕರ ವಿರುದ್ಧ ಬುಲ್ಡೋಜರ್‌ಗಳನ್ನು ತಂದು ನಿಲ್ಲಿಸುವುದು ರಾಜಕೀಯ ಅಸಹನೆ ಯಾವ ಮಟ್ಟಕ್ಕೆ ಕುಸಿದಿದೆ ಎಂಬುದರ ದ್ಯೋತಕ. ನೆಲದ ಕಾನೂನು ಮತ್ತು ನಾಗರಿಕರ ಹಕ್ಕುಗಳನ್ನು ಅಲ್ಲಿನ ಸರ್ಕಾರವು ಬುಲ್ಡೋಜರ್‌ ಅಡಿಯಲ್ಲಿ ಕರುಣೆಯಿಲ್ಲದೆ ಹತ್ತಿಕ್ಕುತ್ತಿದೆ. ಹೀಗಿದ್ದೂ ‘ಬುಲ್ಡೋಜರ್‌ ಅನ್ನು ಅಕ್ರಮ ಕಟ್ಟಡಗಳ ವಿರುದ್ಧವಷ್ಟೇ ಬಳಸಲಾಗುತ್ತಿದೆ’ ಎಂಬ ಅದರ ಹೇಳಿಕೆಯು ಆತ್ಮವಂಚನೆಯಿಂದ ಕೂಡಿದೆ. ಅಲ್ಪಸಂಖ್ಯಾತರಲ್ಲಿ ಭೀತಿಯನ್ನು ಉಂಟುಮಾಡಲು, ಅವರನ್ನು ದಂಡಿಸಲು ಮತ್ತು ಪೂರ್ಣ ನಿಗ್ರಹಿಸಲು ಪ್ರಜ್ಞಾಪೂರ್ವಕವಾಗಿಯೇ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನುವುದು ಸ್ಪಷ್ಟವಾಗಿದೆ. ಕಾನೂನು ಪ್ರಕ್ರಿಯೆಯನ್ನು ಪರಿಪಾಲಿಸುವಂತೆ ಸುಪ್ರೀಂ ಕೋರ್ಟ್‌ ಹೇಳಿದರೆ, ಕೋರ್ಟ್‌ ಆದೇಶಗಳಿಂದ ತಪ್ಪಿಸಿಕೊಳ್ಳುವ ಹಾದಿಯನ್ನು ಉತ್ತರಪ್ರದೇಶ ಸರ್ಕಾರ ಹುಡುಕುತ್ತಿದೆ. ಒಂದು ಸ್ಥಳದಲ್ಲಿ ತಡೆಯಾಜ್ಞೆ ತಂದರೆ ಮತ್ತೊಂದು ಸ್ಥಳಕ್ಕೆ ಬುಲ್ಡೋಜರ್‌ ಹೋಗುತ್ತಿದೆಯೇ ವಿನಾ ವಿರಮಿಸುತ್ತಿಲ್ಲ. ದ್ವೇಷ ಹಾಗೂ ಪೂರ್ವಗ್ರಹಗಳಿಂದ ಮುನ್ನಡೆಸುತ್ತಿರುವ ಈ ಬುಲ್ಡೋಜರ್‌ ಅನ್ನು ನಾಗರಿಕರ ಹಕ್ಕುಗಳ ರಕ್ಷಣೆಯ ಸಲುವಾಗಿ, ನೆಲದ ಕಾನೂನಿನ ಹಿರಿಮೆಯನ್ನು ಎತ್ತಿ ಹಿಡಿಯುವ ಸಲುವಾಗಿ ತಡೆದು ನಿಲ್ಲಿಸಲೇಬೇಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.