ಹಣದುಬ್ಬರವು ದೇಶದ ಜನರನ್ನು ವರ್ಷಗಳಿಂದ ಕಾಡುತ್ತಲೇ ಇದೆ. ಇದು ನಿಯಂತ್ರಣಕ್ಕೆ ಬಾರದ ಪರಿಣಾಮವಾಗಿ ಅಗತ್ಯ ವಸ್ತುಗಳ ದರ ಏರುಮುಖವಾಗಿಯೇ ಇದೆ. ಕಡಿಮೆ ಆದಾಯದ ಜನಸಮೂಹವು ಜೀವನ ನಿರ್ವಹಣೆಯ ವೆಚ್ಚವನ್ನು ಹೊಂದಿಸಿಕೊಳ್ಳುವುದಕ್ಕೂ ಕಷ್ಟಪಡಬೇಕಾದ ಸ್ಥಿತಿ ಇದೆ. ವಿದ್ಯುತ್ ಪೂರೈಕೆಯ ಕೆಲಸ ನಿರ್ವಹಿಸುತ್ತಿರುವ ನೌಕರರ ಪಿಂಚಣಿ ಮತ್ತು ಗ್ರಾಚ್ಯುಟಿ ಪಾವತಿಗೆ ರಾಜ್ಯ ಸರ್ಕಾರ ಭರಿಸಬೇಕಿದ್ದ ಮೊತ್ತವನ್ನು ಗ್ರಾಹಕರ ಮೇಲೆ ಹೊರಿಸುವ ತೀರ್ಮಾನಕ್ಕೆ ಇಂಧನ ಇಲಾಖೆ ಬಂದಿದೆ.
ಈ ಮೊತ್ತವನ್ನು ವಿದ್ಯುತ್ ಬಳಕೆದಾರರಿಂದಲೇ ವಸೂಲಿ ಮಾಡಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ಮತ್ತು ಅದರ ಅಧೀನದಲ್ಲಿರುವ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂ) ನಿರ್ಧರಿಸಿವೆ. ಈ ಮೊತ್ತವನ್ನು ಗ್ರಾಹಕರಿಗೆ ನೀಡುವ ವಿದ್ಯುತ್ ಬಿಲ್‌ನಲ್ಲಿ ಸೇರಿಸಲು ಅನುಮತಿ ಕೋರಿ ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಪುರಸ್ಕರಿಸಿದೆ. ಏಪ್ರಿಲ್ 1ರ ನಂತರ ನೀಡಲಾಗುವ ವಿದ್ಯುತ್ ಬಿಲ್‌ನಲ್ಲಿ ಈ ಹೊರೆಯೂ ಇರಲಿದೆ. ಇಂಧನ ಇಲಾಖೆಯ ಕಾರ್ಯನಿರ್ವಹಣೆಗೆ ಕಾರ್ಪೊರೇಟ್ ಸ್ವರೂಪ ನೀಡುವ ಉದ್ದೇಶದಿಂದ ಕೆಪಿಟಿಸಿಎಲ್ ಮತ್ತು ಎಸ್ಕಾಂಗಳನ್ನು ಅಸ್ತಿತ್ವಕ್ಕೆ ತಂದ ಕಾರಣವನ್ನೇ ನೆಪ ಮಾಡಿಕೊಂಡು ಅಲ್ಲಿನ ನೌಕರರ ಪಿಂಚಣಿ ಮತ್ತು ಗ್ರಾಚ್ಯುಟಿಯ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.
2002ರವರೆಗಿನ ಅವಧಿಗೆ ಈ ನೌಕರರ ಪಿಂಚಣಿ ಮತ್ತು ಗ್ರಾಚ್ಯುಟಿ ಬಾಬ್ತಿನ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಿ, ನಂತರದ ಅವಧಿಯ ಸರ್ಕಾರದ ಪಾಲನ್ನು ಗ್ರಾಹಕರಿಗೆ ವರ್ಗಾಯಿಸುವ ತೀರ್ಮಾನವನ್ನು ಇಂಧನ ಇಲಾಖೆ ಹಿಂದೆ ಮಾಡಿತ್ತು. ಅದನ್ನು ಹಲವು ಗ್ರಾಹಕರು ಪ್ರಶ್ನಿಸಿದ್ದರು. ಈಗ ಕೆಇಆರ್‌ಸಿಯಿಂದ ಪೂರಕ ಆದೇಶವೊಂದನ್ನು ಪಡೆಯುವ ಮೂಲಕ ಅದನ್ನು ಜಾರಿಗೊಳಿಸಲು ಇಂಧನ ಇಲಾಖೆ ಸಜ್ಜಾಗಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ₹ 4,659 ಕೋಟಿ ಹಿಂಬಾಕಿ ಮೊತ್ತವೂ ಸೇರಿದಂತೆ ₹ 8,519 ಕೋಟಿಯನ್ನು ಗ್ರಾಹಕರಿಂದ ವಸೂಲಿ ಮಾಡಲು ಉದ್ದೇಶಿಸಲಾಗಿದೆ.
ಏಪ್ರಿಲ್ 1ರ ನಂತರ ನೀಡಲಾಗುವ ವಿದ್ಯುತ್ ಬಿಲ್‌ಗಳಲ್ಲಿ ಪ್ರತಿ ಯೂನಿಟ್ ವಿದ್ಯುತ್ ಮೇಲೆ 36 ಪೈಸೆಯನ್ನು ಹೆಚ್ಚುವರಿಯಾಗಿ ವಸೂಲಿ ಮಾಡಲಾಗುತ್ತದೆ. 2026–27ರಲ್ಲಿ ಈ ದರ ಪ್ರತಿ ಯೂನಿಟ್‌ಗೆ 35 ಪೈಸೆ ಇದ್ದರೆ, 2027–28ರಲ್ಲಿ ಪ್ರತಿ ಯೂನಿಟ್‌ಗೆ 34 ಪೈಸೆ ಇರಲಿದೆ. ರಾಜ್ಯದಲ್ಲಿ 2022 ಮತ್ತು 2023ರಲ್ಲಿ ವಿದ್ಯುತ್ ದರ ಏರಿಕೆ ಮಾಡಲಾಗಿತ್ತು. ವಾರ್ಷಿಕ ದರ ಪರಿಷ್ಕರಣೆ ಆದೇಶ ಹೊರಡಿಸುವಂತೆ ಕೋರಿ ಕೆಪಿಟಿಸಿಎಲ್ ಮತ್ತು ಎಸ್ಕಾಂಗಳು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕೆಇಆರ್‌ಸಿ ತೀರ್ಮಾನ
ಪ್ರಕಟಿಸಬೇಕಿದೆ. ಅದಕ್ಕೂ ಮುನ್ನ ಗ್ರಾಹಕರ ಮೇಲೆ ಪಿಂಚಣಿ ಹಾಗೂ ಗ್ರಾಚ್ಯುಟಿ ಪಾಲಿನ ಹೊರೆ ಹೊರಿಸಲಾಗಿದೆ. ಕೆಪಿಟಿಸಿಎಲ್ ಮತ್ತು ಎಸ್ಕಾಂಗಳು ಸ್ವತಂತ್ರ ಕಂಪನಿಗಳೆಂದು ಬಿಂಬಿಸಿ, ಅವುಗಳ ನೌಕರರ ಪಿಂಚಣಿ ಮತ್ತು ಗ್ರಾಚ್ಯುಟಿಗೆ ಸರ್ಕಾರ ಭರಿಸಬೇಕಿದ್ದ ಮೊತ್ತವನ್ನು ಗ್ರಾಹಕರಿಗೆ ವರ್ಗಾಯಿಸುವ ರಾಜ್ಯ ಸರ್ಕಾರದ ನಡೆ ಜನವಿರೋಧಿಯಾದುದು.
ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ವಿದ್ಯುತ್ ಬಿಲ್ ಪಾವತಿ ಕಷ್ಟವಾಗುತ್ತಿದೆ ಎಂಬ ಕಾರಣಕ್ಕಾಗಿಯೇ ಸರ್ಕಾರವು ‘ಗೃಹ ಜ್ಯೋತಿ’ ಯೋಜನೆಯಡಿ 200 ಯೂನಿಟ್‌ಗಳವರೆಗೆ ವಿದ್ಯುತ್ ಅನ್ನು ಉಚಿತವಾಗಿ ಪೂರೈಸುತ್ತಿದೆ. ಈಗ ವಿದ್ಯುತ್ ನೌಕರರ ಪಿಂಚಣಿ, ಗ್ರಾಚ್ಯುಟಿಯ ಆರ್ಥಿಕ ಹೊರೆಯನ್ನು ಗ್ರಾಹಕರ ಮೇಲೆ ಹೇರುವುದು ತದ್ವಿರುದ್ಧವಾದ ನಡೆ. ಕೆಪಿಟಿಸಿಎಲ್ ಮತ್ತು ಎಸ್ಕಾಂಗಳ ನೌಕರರನ್ನು ಸರ್ಕಾರಿ ನೌಕರರೆಂದೇ ಪರಿಗಣಿಸಲಾಗಿದೆ. ಹೀಗಿರುವಾಗ ಆ ನೌಕರರ ಪಿಂಚಣಿ, ಗ್ರಾಚ್ಯುಟಿಯಂತಹ ಸೌಲಭ್ಯಗಳಿಗೆ ಅಗತ್ಯ ಆರ್ಥಿಕ ಸಂಪನ್ಮೂಲ ಒದಗಿಸುವುದು ಸರ್ಕಾರದ ಹೊಣೆಗಾರಿಕೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಬೀದಿ ದೀಪಗಳು, ಕುಡಿಯುವ ನೀರು ಪೂರೈಕೆ, ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಕೆ ಬಾಬ್ತಿನ ಭಾರಿ ಮೊತ್ತದ ವಿದ್ಯುತ್ ಬಿಲ್‌ಗಳು ಪಾವತಿಯಾಗದೆ ಉಳಿದಿವೆ. ಈ ಬಾಕಿ ಮೊತ್ತವನ್ನು ತ್ವರಿತವಾಗಿ ಎಸ್ಕಾಂಗಳಿಗೆ ಪಾವತಿಸಬೇಕು. ಕಾರ್ಯ ನಿರ್ವಹಣಾ ವೆಚ್ಚ ತಗ್ಗಿಸುವುದು, ವಿದ್ಯುತ್ ಪೂರೈಕೆಯಲ್ಲಿನ ಸೋರಿಕೆ ತಡೆಯುವಂತಹ ಬಿಗಿ ಕ್ರಮಗಳ ಮೂಲಕ ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳನ್ನು ನಷ್ಟದಿಂದ ಹೊರತರಬೇಕು. ಈ ಕಂಪನಿಗಳು ತಮ್ಮ ನೌಕರರಿಗೆ ತಾವೇ ಪಿಂಚಣಿ, ಗ್ರಾಚ್ಯುಟಿ ನೀಡುವಷ್ಟು ಸಶಕ್ತವಾಗಬೇಕು. ಇಲ್ಲವೇ ರಾಜ್ಯ ಸರ್ಕಾರವೇ ಆ ಪಾಲನ್ನು ಭರಿಸಬೇಕು.
ಏಪ್ರಿಲ್ ಒಂದರಿಂದ ವಿದ್ಯುತ್ ಬಿಲ್‌ನಲ್ಲಿ ಹೆಚ್ಚುವರಿ ಮೊತ್ತ ಸೇರಿಸುವಂತಹ ನಿರ್ಧಾರದಿಂದಾಗಿ ಗೃಹ ಜ್ಯೋತಿ ಯೋಜನೆಯ ಸೌಲಭ್ಯ ಪಡೆದವರಿಗೆ ತಕ್ಷಣಕ್ಕೆ ತೊಂದರೆ ಆಗದಿರಬಹುದು. ಆದರೆ, ಆ ಸೌಲಭ್ಯ ಪಡೆಯದೇ ಇರುವವರು ಮತ್ತು ವಾಣಿಜ್ಯ, ಕೈಗಾರಿಕಾ ಉದ್ದೇಶಕ್ಕೆ ವಿದ್ಯುತ್ ಬಳಸುತ್ತಿರುವವರನ್ನು ಈ ನಿರ್ಧಾರವು ಆರ್ಥಿಕ ಸಂಕಷ್ಟಕ್ಕೆ ತಳ್ಳಲಿದೆ. ಈ ನಿರ್ಧಾರವನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು. ವಿದ್ಯುತ್ ನೌಕರರ ಪಿಂಚಣಿ, ಗ್ರಾಚ್ಯುಟಿಯ ಪಾಲು ತುಂಬುವುದಕ್ಕೆ ಪರ್ಯಾಯ ವ್ಯವಸ್ಥೆಯತ್ತ ಗಮನಹರಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.