ADVERTISEMENT

ಸಂಪಾದಕೀಯ: ದ್ವೇಷ ಹಾಗೂ ಹಿಂಸೆಯ ವಿಷ; ವ್ಯಾಪಕ ಹೋರಾಟದ ಸಮಯ

ಸಂಪಾದಕೀಯ
Published 7 ಆಗಸ್ಟ್ 2025, 20:10 IST
Last Updated 7 ಆಗಸ್ಟ್ 2025, 20:10 IST
ಸಂಪಾದಕೀಯ
ಸಂಪಾದಕೀಯ   

ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಸರ್ಕಾರಿ ಶಾಲೆಗಳಲ್ಲಿ ದಿನವೂ ಅನುಸರಿಸಬೇಕಾದ 25 ಅಂಶಗಳನ್ನು ಪಟ್ಟಿ ಮಾಡಿ ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಬೆಳಗಾವಿ ಮತ್ತು ಶಿವಮೊಗ್ಗದ ಶಾಲೆಗಳಲ್ಲಿ ಕುಡಿಯುವ ನೀರಿಗೆ ವಿಷ ಬೆರೆಸಿದ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ, ಮಕ್ಕಳ ಸುರಕ್ಷತೆಗಾಗಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಶಿಕ್ಷಣ ಇಲಾಖೆ ಪಟ್ಟಿಮಾಡಿದೆ. ಶಿಕ್ಷಣ ಹಕ್ಕು ಕಾಯ್ದೆ ಹಾಗೂ ಮಕ್ಕಳ ಸುರಕ್ಷತಾ ನೀತಿ ಅನ್ವಯ ಈ ಪಟ್ಟಿಯನ್ನು ರೂಪಿಸಲಾಗಿದೆ. ಕುಡಿಯುವ ನೀರಿಗೆ ವಿಷ ಬೆರೆಸಿದ ಎರಡೂ ಘಟನೆಗಳು ಮಕ್ಕಳ ಸುರಕ್ಷತೆಯ ಬಗ್ಗೆ ಕಳವಳ ಹುಟ್ಟಿಸುವಂತಹವು. ವಿಶೇಷವಾಗಿ, ಬೆಳಗಾವಿಯ ಘಟನೆ ಹೆಚ್ಚು ಹೇಯವಾದುದು ಹಾಗೂ ಕೋಮುದ್ವೇಷದಿಂದ ಪ್ರೇರಿತವಾದುದು. ಶಾಲೆಯಲ್ಲಿನ ಮುಸ್ಲಿಂ ಸಮುದಾಯದ ಮುಖ್ಯ ಶಿಕ್ಷಕರ ವಿರುದ್ಧ ಅಪಪ್ರಚಾರ ಮಾಡಲು ಹಾಗೂ ಅವರನ್ನು ವರ್ಗ ಮಾಡಿಸುವ ಉದ್ದೇಶದಿಂದ ದುಷ್ಕೃತ್ಯ ನಡೆದಿದ್ದು, ವಿಷ ಬೆರೆತ ನೀರು ಕುಡಿದು ಕೆಲವು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಬೇಕಾಯಿತು. ಈ ಪ್ರಕರಣದಲ್ಲಿ ಶ್ರೀರಾಮಸೇನೆಯ ಮುಖಂಡ ಸಾಗರ್‌ ಪಾಟೀಲ್‌ ಸೇರಿದಂತೆ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಧಾರ್ಮಿಕ ಅಸಹಿಷ್ಣುತೆಯ ದ್ವೇಷಪೂರಿತ ಕಾರ್ಯಸೂಚಿ ಜಾರಿಗೊಳಿಸಲು ಮಕ್ಕಳನ್ನು ಗುರಿ ಮಾಡಿಕೊಂಡಿರುವುದು ಧಾರ್ಮಿಕ ಮೂಲಭೂತವಾದದ ವಿಕೃತ ಸ್ವರೂಪ ವನ್ನು ಅನಾವರಣಗೊಳಿಸುವಂತಿದೆ. ರಾಜಕಾರಣದಲ್ಲಿ ಧರ್ಮಾಂಧತೆಯನ್ನು ಬೆರೆಸುವುದು ಹಾಗೂ ತಾವು ನಿರ್ಲಜ್ಜೆಯಿಂದ ವರ್ತಿಸಬಹು ದೆಂದು ದುಷ್ಕರ್ಮಿಗಳು ನಂಬಿರುವುದು ಪರಿಸ್ಥಿತಿ ತೀವ್ರವಾಗಿ ವಿಷಮಗೊಂಡಿರುವುದನ್ನು ಸೂಚಿಸುವಂತಿದೆ. ರಾಜಕೀಯ ಸಿದ್ಧಾಂತಗಳು ಕುರುಡು ದ್ವೇಷವಾಗಿ ರೂಪುಗೊಂಡಾಗ, ಅಮಾಯಕ ಮಕ್ಕಳನ್ನೂ ಆ ದ್ವೇಷ ಗುರಿಯಾಗಿಸಿಕೊಳ್ಳುತ್ತದೆ ಎನ್ನುವುದಕ್ಕೆ ಬೆಳಗಾವಿಯ ಶಾಲೆಯಲ್ಲಿ ನಡೆದ ಘಟನೆ ಉದಾಹರಣೆ ಯಂತಿದೆ. ಆ ದುಷ್ಕೃತ್ಯದ ಜವಾಬ್ದಾರಿ ಯನ್ನು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌, ಬಿಜೆಪಿ ನಾಯಕರಾದ ಬಿ.ವೈ. ವಿಜಯೇಂದ್ರ ಮತ್ತು ಆರ್‌. ಅಶೋಕ ಅವರು ತೆಗೆದುಕೊಳ್ಳುತ್ತಾರೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿರುವುದು ಸೂಕ್ತವಾಗಿದೆ. ದುರ್ಘಟನೆಗೆ ಸಂಬಂಧಿಸಿದಂತೆ ಖಂಡನೆ, ತನಿಖೆಗೆ ಒತ್ತಾಯ, ಆಕ್ರೋಶ, ಯಾವುದೂ ಇಲ್ಲದೆ, ಬಿಜೆಪಿ ಮೌನವಹಿಸಿರುವುದು ಅಚ್ಚರಿ ಹುಟ್ಟಿಸುವಂತಿದೆ. ಮುಗ್ಧ ಮಕ್ಕಳ ಜೀವಗಳು ಅಪಾಯಕ್ಕೆ ಸಿಲುಕಿದ ಸಂದರ್ಭದಲ್ಲಿ ವಹಿಸುವ ಮೌನ ಹಾಗೂ ‘ಅನುಕೂಲಸಿಂಧು ಆಕ್ರೋಶ’ ವ್ಯಕ್ತಪಡಿಸುವುದು ಆಷಾಢಭೂತಿತನ ಮಾತ್ರವಾಗಿರದೆ, ದುಷ್ಕೃತ್ಯದಲ್ಲಿ ಭಾಗಿಯಾದಂತೆಯೂ ಹೌದು.

ಶಾಲೆಗಳಲ್ಲಿ ವಹಿಸಬೇಕಾದ ಮುನ್ನಚ್ಚರಿಕಾ ಕ್ರಮಗಳ ಕುರಿತು ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅಗತ್ಯವಾಗಿದ್ದ ಕ್ರಮ. ಶಾಲೆಗಳ ಮುಖ್ಯ ಶಿಕ್ಷಕರು ತರಗತಿಗಳು ಆರಂಭವಾಗುವ ಮುನ್ನ ಶಾಲಾ ಪರಿಸರದ ತಪಾಸಣೆ ನಡೆಸುವುದು ಇನ್ನು ಮುಂದೆ ಕಡ್ಡಾಯವಾಗಲಿದೆ. ನೀರಿನ ಗುಣಮಟ್ಟದ ಪರೀಕ್ಷೆ, ನೀರಿನ ಟ್ಯಾಂಕ್‌ಗಳಿಗೆ ಬೀಗ ಹಾಕಿರುವುದನ್ನು ಹಾಗೂ ಶೌಚಾಲಯಗಳು ಶುಚಿಯಾಗಿ ಇರುವುದನ್ನು ಖಚಿತಪಡಿಸಿಕೊಳ್ಳುವುದು, ಪ್ರಥಮ ಚಿಕಿತ್ಸೆಯ ಪೆಟ್ಟಿಗೆಗಳು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುವುದು ಸೇರಿದಂತೆ ಪರಿಶೀಲನೆಯ ಎಲ್ಲ ಸಂಗತಿಗಳನ್ನೂ ‘ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್‌ ವ್ಯವಸ್ಥೆ’ (ಸ್ಯಾಟ್ಸ್‌) ಪೋರ್ಟಲ್‌ನಲ್ಲಿ ಪ್ರತಿನಿತ್ಯ ದಾಖಲಿಸ ಬೇಕಾಗಿದೆ. ಆದರೆ, ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಮುನ್ನೆಚ್ಚರಿಕಾ ಕ್ರಮಗಳು ಕಾಗದದ ಮೇಲಷ್ಟೇ ಉಳಿಯದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕಾಗಿದೆ. ತಮಗೆ ಸಂಬಂಧಿಸದ ಯುದ್ಧದಲ್ಲಿ ಮಕ್ಕಳು ಅಪಾಯಕ್ಕೆ ಗುರಿಯಾಗಬಾರದು. ವಿಷ, ಪೂರ್ವಗ್ರಹ ಅಥವಾ ಸ್ವಚ್ಛತೆಯ ಕೊರತೆಯಂತಹ ಕಾರಣಗಳೊಂದಿಗೆ ಮಕ್ಕಳ ಹಿತಾಸಕ್ತಿಯನ್ನು ರಾಜಿ ಮಾಡಿಕೊಳ್ಳುವಂತೆಯೂ ಆಗಬಾರದು. ಬೆಳಗಾವಿ ದುಷ್ಕೃತ್ಯಕ್ಕೆ ಕಾರಣರಾದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕಾಗಿದೆ. ನ್ಯಾಯಾಲಯದ ಚೌಕಟ್ಟನ್ನು ಮೀರಿ, ಇಂಥ ಹೇಯ ಹಿಂಸೆಗೆ ಕಾರಣವಾಗುವ ದ್ವೇಷದ ಮನಃಸ್ಥಿತಿಯನ್ನು ತಿರಸ್ಕರಿಸುವ ನಿಟ್ಟಿನಲ್ಲಿ ಸಮಾಜ ಸಂವೇದನಾಶೀಲ ಆಗಬೇಕಿದೆ. ಇಂಥ ದುಷ್ಕೃತ್ಯಗಳಿಗೆ ವಿಭಜಕ ಮನಃಸ್ಥಿತಿಯ ರಾಜಕಾರಣಿಗಳು, ಶಿಕ್ಷೆಯ ಭಯವಿಲ್ಲದೆ ಅತಿರೇಕದಿಂದ ವರ್ತಿಸುವ ಗುಂಪುಗಳು ಮಾತ್ರವಲ್ಲದೆ, ಎಲ್ಲವನ್ನೂ ಸಹಿಸಿಕೊಳ್ಳುವ ಸಮಾಜದ ಉದಾಸೀನ ಪ್ರವೃತ್ತಿಯೂ ಕಾರಣವಾಗಿದೆ. ನಮ್ಮ ಮುಂದಿರುವ ಆಯ್ಕೆಯು ಸ್ಪಷ್ಟವಾಗಿದೆ: ವಿಷಕಾರಿ ಕಾರ್ಯಸೂಚಿ ಯನ್ನು ಒಗ್ಗಟ್ಟಿನಿಂದ ವಿರೋಧಿಸುವುದು ಅಥವಾ ಸಮಾಜದ ಮಾನವೀಯ ಸಂರಚನೆ ದ್ವೇಷದ ಉರಿಗೆ ಬಲಿಯಾಗುತ್ತಿರುವುದನ್ನು ನೋಡಿಕೊಂಡು ನಿಷ್ಕ್ರಿಯರಾಗಿರುವುದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.