‘ಸಕ್ಕರೆ ಫಲಕ’ ಅಳವಡಿಸುವಂತೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ತನ್ನ ವ್ಯಾಪ್ತಿಯ ಎಲ್ಲ ಶಾಲೆಗಳಿಗೆ ಸೂಚನೆ ನೀಡುವ ತೀರ್ಮಾನ ತೆಗೆದುಕೊಂಡಿರುವುದು ಸಕಾರಾತ್ಮಕ ಹೆಜ್ಜೆ. ಇದು, ಆರೋಗ್ಯಕರವಾದ ಆಹಾರ ಸೇವಿಸುವ ಅಭ್ಯಾಸವನ್ನು ಮಕ್ಕಳಲ್ಲಿ ಬೆಳೆಸಲು ನೆರವಾಗುತ್ತದೆ. ಸಿಬಿಎಸ್‌ಇ ವ್ಯಾಪ್ತಿಯ ಅಂದಾಜು 26,000 ಶಾಲೆಗಳು ತಮ್ಮ ಆವರಣದಲ್ಲಿ ‘ಸಕ್ಕರೆ ಫಲಕ’ವನ್ನು ಅಳವಡಿಸಿ, ಸಕ್ಕರೆ ಹೆಚ್ಚು ಇರುವ ಆಹಾರ ಸೇವನೆಯ ಅಪಾಯವನ್ನು ಮಕ್ಕಳಿಗೆ ತಿಳಿಸಬೇಕು.
ಆರೋಗ್ಯಕರವಾದ ಆಹಾರ ಸೇವನೆಯ ಪ್ರಯೋಜನಗಳನ್ನು ಹೇಳಬೇಕು ಎಂದು ಮಂಡಳಿ ಹೇಳಿದೆ. ದೇಶದಲ್ಲಿ ಮಕ್ಕಳು ಮಧುಮೇಹಕ್ಕೆ ತುತ್ತಾಗುವ ಪ್ರಮಾಣ ಹೆಚ್ಚಾಗುತ್ತಿದೆ ಎಂಬ ವರದಿಗಳ ಜೊತೆ ಈ ಕ್ರಮವನ್ನು ಕಂಡಾಗ, ಇದೊಂದು ಸಕಾಲಿಕವಾದ ಹೆಜ್ಜೆ ಎಂಬುದು ಗೊತ್ತಾಗುತ್ತದೆ. ವಿಶ್ವದ ಮಧುಮೇಹ ರಾಜಧಾನಿ ಎಂಬ ಕೆಟ್ಟ ಹಣೆಪಟ್ಟಿಯು ಭಾರತಕ್ಕೆ ಇದೆ, ವಿಶ್ವದ ಒಟ್ಟು ಮಧುಮೇಹಿಗಳಲ್ಲಿ ಭಾರತೀಯರ ಪಾಲು ಶೇಕಡ 25ಕ್ಕಿಂತ ಹೆಚ್ಚಾಗಿದೆ. ಇದು ಬಹಳ ಗಂಭೀರವಾದ ಆರೋಗ್ಯ ಸಮಸ್ಯೆ. ಮುಂದೆ ಈ ಸಮಸ್ಯೆಯು ಇನ್ನಷ್ಟು ತೀವ್ರವಾಗದಂತೆ ನೋಡಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಬೇಕಿದೆ.
ಮಕ್ಕಳಲ್ಲಿ ಸ್ಥೂಲಕಾಯ ಹಾಗೂ ಮಧುಮೇಹ (ಟೈಪ್ 2) ಹೆಚ್ಚಾಗುತ್ತಿದೆ ಎಂದು ಹಲವು ಅಧ್ಯಯನ ವರದಿಗಳು ಹೇಳಿವೆ. ಅದರಲ್ಲೂ ಮುಖ್ಯವಾಗಿ, ಹದಿಹರೆಯದ ಮಕ್ಕಳಲ್ಲಿ ಇದು ಹೆಚ್ಚಾಗಿದೆ. 2022ರಲ್ಲಿ 5 ವರ್ಷದಿಂದ 19 ವರ್ಷ ವಯಸ್ಸಿನ ನಡುವಿನ ಅಂದಾಜು 1.25 ಕೋಟಿ ಮಕ್ಕಳು ಸ್ಥೂಲಕಾಯ ಹೊಂದಿದ್ದರು. ಹದಿಹರೆಯದ ಹೆಣ್ಣುಮಕ್ಕಳಲ್ಲಿ ಶೇ 12ರಷ್ಟು ಮಂದಿ ಮಧುಮೇಹಕ್ಕೆ ತುತ್ತಾಗಿದ್ದರು. ಇದು ಗಂಡುಮಕ್ಕಳಲ್ಲಿ ಶೇ 8ರಷ್ಟಕ್ಕಿಂತ ಹೆಚ್ಚಾಗಿತ್ತು. ಇದಕ್ಕೆ ಒಂದು ಮುಖ್ಯ ಕಾರಣ ಆರೋಗ್ಯಕರವಲ್ಲದ ಆಹಾರ ಸೇವನೆ. ಈ ಸಮಸ್ಯೆಯ ನಿವಾರಣೆಗೆ ಸಿಬಿಎಸ್‌ಇ ಈಗ ಮುಂದಡಿ ಇರಿಸಿದೆ. ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಸಕ್ಕರೆಯನ್ನು ಸೇವಿಸಬಹುದು ಹಾಗೂ ಹೆಚ್ಚು ಸಕ್ಕರೆ ಸೇವಿಸಿದಲ್ಲಿ ಆಗಬಹುದಾದ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ಒದಗಿಸಬೇಕು ಎಂದು ಅದು ಹೇಳಿದೆ. ಸಾಮಾನ್ಯವಾಗಿ ಬಳಕೆ ಮಾಡುವ ತಿಂಡಿ, ಪಾನೀಯಗಳಲ್ಲಿ ಇರುವ ಸಕ್ಕರೆ ಪ್ರಮಾಣದ ಬಗ್ಗೆಯೂ ಮಾಹಿತಿ ಒದಗಿಸಬೇಕಿದೆ. ಈ ರೀತಿ ಮಾಡಿದಾಗ, ತಾವು ಸೇವಿಸುವ ಆಹಾರ ಪದಾರ್ಥಗಳ ಒಳಿತು, ಕೆಡುಕುಗಳ ಬಗ್ಗೆ ಮಕ್ಕಳಿಗೆ ಸರಿಯಾದ ಅರಿವು ಮೂಡುತ್ತದೆ. ಮಕ್ಕಳ ಕಲಿಕಾ ಶಕ್ತಿ ಹೆಚ್ಚಿರುತ್ತದೆ. ಹೀಗಾಗಿ, ಇಂತಹ ವಿಷಯಗಳನ್ನು ಚೆನ್ನಾಗಿ, ಸೃಜನಶೀಲವಾಗಿ ತಿಳಿಸಿದಾಗ ಅವರ ಆಹಾರ ಆಯ್ಕೆಗಳ ಮೇಲೆ ಸಕಾರಾತ್ಮಕವಾದ
ಪರಿಣಾಮ ಉಂಟಾಗುತ್ತದೆ.
ಆಹಾರದ ಆಯ್ಕೆಗಳ ಬಗ್ಗೆ ಈ ಬಗೆಯ ಮಾಹಿತಿ ನೀಡುವ ಜೊತೆಯಲ್ಲೇ ಒಂದಿಷ್ಟು ಹೆಚ್ಚುವರಿ ಕ್ರಮಗಳನ್ನು ಕೂಡ ಕೈಗೊಳ್ಳಬೇಕು. ಶಾಲೆಗಳ ಕ್ಯಾಂಟೀನ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯಕರವಾದ ತಿಂಡಿ–ತಿನಿಸುಗಳು ಮಾತ್ರ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಒಳ್ಳೆಯ ಆಹಾರದ ಬಗ್ಗೆ ಮಕ್ಕಳಲ್ಲಿ ಹೆಚ್ಚು ಒಲವು ಮೂಡುವಂತೆ ಮಾಡುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಾಗಿರುತ್ತದೆ. ಈ ಅಭಿಯಾನದಲ್ಲಿ ಪಾಲಕರೂ ಕೈಜೋಡಿಸಬೇಕು. ಇಂತಹ ಫಲಕಗಳನ್ನು ಶಾಲೆಗಳಲ್ಲಿ ಹಲವು ಸ್ಥಳಗಳಲ್ಲಿ ಅಳವಡಿಸಬೇಕು. ಆಗ ಉದ್ದೇಶಿತ ಸಂದೇಶವು ಎಲ್ಲ ಮಕ್ಕಳಿಗೆ ಹೆಚ್ಚು ಪರಿಣಾಮಕಾರಿಯಾಗಿ ರವಾನೆ ಆಗುತ್ತದೆ. ಆರೋಗ್ಯಕರವಾದ ಆಹಾರ ಸೇವನೆಯ ಮಹತ್ವವನ್ನು ಇತರ ಪಠ್ಯಕ್ರಮ ಮಂಡಳಿಗಳು ಹಾಗೂ ಶಾಲೆಗಳು ಮಕ್ಕಳಿಗೆ ತಿಳಿಹೇಳುವ ಕೆಲಸ ಮಾಡಬೇಕು. ಹಲವು ಬಗೆಗಳಲ್ಲಿ, ಹೊಸ ವಿಧಾನಗಳ ಮೂಲಕ ಈ ಸಂದೇಶವನ್ನು ಮಕ್ಕಳಿಗೆ ರವಾನಿಸಬೇಕು. ನಾವು ಉಪಭೋಗ ಸಂಸ್ಕೃತಿಯ ಸಮಾಜದಲ್ಲಿ ಇದ್ದೇವೆ. ದಿಢೀರನೆ ಸಿದ್ಧವಾಗುವ ಆಹಾರದ ಬಗ್ಗೆ ಮಕ್ಕಳಿಗೆ ಬಹಳ ರಂಜನೀಯವಾಗಿ ಮಾಹಿತಿ ನೀಡುವ ಕೆಲಸವನ್ನು ಈ ವ್ಯವಸ್ಥೆ ಮಾಡುತ್ತಿದೆ. ಇಂತಹ ಆಹಾರ ಬಹಳ ಸುಲಭದ ಆಯ್ಕೆ ಎಂದೂ ಹೇಳಲಾಗುತ್ತಿದೆ. ಇಂತಹ ತಿಂಡಿ–ತಿನಿಸುಗಳ ಬಗ್ಗೆ ದತ್ತಾಂಶ ಬಳಸಿ ಮಾಹಿತಿ ಒದಗಿಸಬೇಕು, ಆರೋಗ್ಯಕರ ಆಹಾರದ ಮಹತ್ವದ ಬಗ್ಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.