ADVERTISEMENT

ಸಂಪಾದಕೀಯ | ಭೂಮಿಗೆ ಮರಳಿದ ಸುನಿತಾ: ನಿಜಕ್ಕೂ ಸಂಭ್ರಮಿಸಬೇಕಾದ ಹೊತ್ತು

ಸಂಪಾದಕೀಯ
Published 21 ಮಾರ್ಚ್ 2025, 23:30 IST
Last Updated 21 ಮಾರ್ಚ್ 2025, 23:30 IST
.
.   

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ‘ನಾಸಾ’ದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್‌ ಮತ್ತು ಬುಚ್‌ ವಿಲ್ಮೋರ್‌ ಅವರು ಭೂಮಿಗೆ ಸುರಕ್ಷಿತವಾಗಿ ಮರಳಿರುವುದು ಸಂಭ್ರಮಿಸಬೇಕಾದ ಸಂಗತಿ. ಹಲವು ತಾಂತ್ರಿಕ ಅಡಚಣೆಗಳ ಕಾರಣದಿಂದಾಗಿ ಇವರಿಬ್ಬರೂ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) ಒಂಬತ್ತು ತಿಂಗಳು ಸಿಲುಕಿದ್ದರು. ಇವರನ್ನು ಹಾಗೂ ಇನ್ನೂ ಇಬ್ಬರು ಗಗನಯಾತ್ರಿಗಳನ್ನು ಹೊತ್ತಿದ್ದ ಬಾಹ್ಯಾಕಾಶ ಕೋಶವು (ಕ್ಯಾಪ್ಸೂಲ್) ಅಮೆರಿಕದ ಫ್ಲಾರಿಡಾ ರಾಜ್ಯದ ಕಡಲ ತೀರದ ಸನಿಹದಲ್ಲಿ ಜಲಸ್ಪರ್ಶ ಮಾಡಿರುವುದು‌ ಸುದೀರ್ಘ ಅವಧಿಯಿಂದ ಮನೆಮಾಡಿದ್ದ ಅನಿಶ್ಚಿತತೆಯೊಂದನ್ನು ಕೊನೆಗೊಳಿಸಿದೆ. ಈ ಅನಿಶ್ಚಿತತೆಯ ಅವಧಿಯು ವಿಶ್ವದ ಮುಂಚೂಣಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಿತ್ತು, ಅನಿರೀಕ್ಷಿತ ಸಂದರ್ಭವನ್ನು ನಿರ್ವಹಿಸುವ ಸಾಮರ್ಥ್ಯ ತನಗೆ ಇದೆ ಎಂಬುದನ್ನು ಸಾಬೀತು ಮಾಡಲು ಅದಕ್ಕೆ ಅವಕಾಶ ಒದಗಿಸಿತು. ಬೋಯಿಂಗ್‌ ಸ್ಟಾರ್‌ಲೈನರ್‌ ಗಗನಯಾತ್ರಿಗಳನ್ನು ಹೊತ್ತು 2024ರ ಜೂನ್‌ನಲ್ಲಿ ಐಎಸ್‌ಎಸ್‌ ಕಡೆ ಹಾರಿತ್ತು. ಸುನಿತಾ ಮತ್ತು ವಿಲ್ಮೋರ್‌ ಅವರು ಐಎಸ್‌ಎಸ್‌ನಲ್ಲಿ ಎಂಟು ದಿನ ಇರುವ ಯೋಜನೆ ಹೊಂದಿದ್ದರು. ಆದರೆ ಅವರಿಬ್ಬರನ್ನು ವಾಪಸ್‌ ಕರೆತರಬೇಕಿದ್ದ ಬಾಹ್ಯಾಕಾಶ ಕೋಶದಲ್ಲಿನ ತಾಂತ್ರಿಕ ಸಮಸ್ಯೆಗಳು ಹಾಗೂ ಅದರಿಂದ ಸೃಷ್ಟಿಯಾದ ಸುರಕ್ಷತೆಗೆ ಸಂಬಂಧಿಸಿದ ಆತಂಕದ ಕಾರಣದಿಂದಾಗಿ ಇಬ್ಬರೂ ಐಎಸ್‌ಎಸ್‌ನಲ್ಲಿ ಹೆಚ್ಚಿನ ಅವಧಿಗೆ ಉಳಿಯಬೇಕಾಯಿತು. ಇದು ಬಾಹ್ಯಾಕಾಶ ಯಾನಗಳು ಒಡ್ಡುವ ಅಪಾಯಗಳನ್ನು ಹೇಳುವಂತೆ ಇದೆ. ಬಾಹ್ಯಾಕಾಶ ಯಾನಗಳ ಸಂದರ್ಭದಲ್ಲಿ ಗಗನಯಾತ್ರಿಗಳು ಪ್ರಾಣ ಕಳೆದುಕೊಂಡ ನಿದರ್ಶನಗಳು ಇವೆ, ಕೆಲವು ಅನಿರೀಕ್ಷಿತ ಸವಾಲುಗಳು ಎದುರಾದ ಉದಾಹರಣೆಗಳೂ ಇವೆ. ಮುನ್ನೆಚ್ಚರಿಕೆಯ ಕ್ರಮವಾಗಿ ಕೈಗೊಂಡ ಕೆಲವು ತೀರ್ಮಾನಗಳು ಅಪಘಾತಗಳನ್ನು ತಡೆದಿರುವ ಉದಾಹರಣೆಗಳು ಕೂಡ ಇವೆ. ಸುನಿತಾ ಮತ್ತು ವಿಲ್ಮೋರ್‌ ಅವರನ್ನು ಐಎಸ್‌ಎಸ್‌ನಿಂದ ವಾಪಸ್‌ ಕರೆತರಲು ಮತ್ತೆ ಮತ್ತೆ ನಡೆಸಿದ ಯತ್ನಗಳು ಯಶಸ್ಸು ಕಾಣದೇ ಇದ್ದುದು ಕೂಡ ಅವರ ಯಾನದ ಬಗ್ಗೆ ಇಡೀ ಜಗತ್ತಿನ ಗಮನ ಹರಿಯಲು ಕಾರಣವಾಯಿತು.

ಸ್ಪೇಸ್‌ಎಕ್ಸ್‌ನ ‘ಡ್ರ್ಯಾಗನ್‌’ ಬಾಹ್ಯಾಕಾಶ ಕೋಶದಲ್ಲಿ ಗಗನಯಾತ್ರಿಗಳು ಮರಳಿ ಬಂದಿರುವುದನ್ನು ಬಾಹ್ಯಾಕಾಶ ವಿಜ್ಞಾನ ಕುತೂಹಲಿಗರು ಎಲ್ಲೆಡೆ ಸಂಭ್ರಮಿಸಿದ್ದಾರೆ. ಇಡೀ ಜಗತ್ತು ಹಲವು ಕಾರಣಗಳಿಂದಾಗಿ ಈ ಗಗನಯಾತ್ರಿಗಳ ಕಡೆ ದೃಷ್ಟಿ ಹಾಯಿಸಿತ್ತು. ಅವರನ್ನು ವಾಪಸ್‌ ಕರೆತರುವಲ್ಲಿ ಎದುರಾದ ತಾಂತ್ರಿಕ ಸಮಸ್ಯೆಗಳು ವ್ಯಾಪಕವಾಗಿ ಚರ್ಚೆಗೊಳಗಾದವು. ಐಎಸ್‌ಎಸ್‌ ಮತ್ತು ಭೂಮಿಯ ನಡುವಿನ ಸಂವಹನಕ್ಕೆ ಧಕ್ಕೆ ಆಗಿಲ್ಲದಿದ್ದರೂ ಗಗನಯಾತ್ರಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಬಗ್ಗೆ ಕಳವಳ ಮೂಡಿತ್ತು. ಸುನಿತಾ ಅವರು ಭಾರತ ಮೂಲದವರಾದ ಕಾರಣಕ್ಕೆ ಪರಿಸ್ಥಿತಿಯ ಬಗ್ಗೆ ಭಾರತವು ವಿಶೇಷವಾಗಿ ಗಮನ ಹರಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಸುನಿತಾ ಮತ್ತು ವಿಲ್ಮೋರ್‌ ಅವರು ಸುರಕ್ಷಿತವಾಗಿ ಮರಳಿದ ಸಂದರ್ಭದಲ್ಲಿ ‘ಭೂಮಿಗೆ ಸ್ವಾಗತ’ ಎಂದು ಅಭಿನಂದಿಸಿದ್ದಾರೆ. ಅಲ್ಲದೆ, ಅವರು ಐಎಸ್‌ಎಸ್‌ನಲ್ಲಿ ದೀರ್ಘಕಾಲ ಉಳಿದುಕೊಂಡಿದ್ದ ಅವಧಿಯನ್ನು ಮೋದಿ ಅವರು ‘ವ್ಯಕ್ತಿತ್ವದ ತಾಕತ್ತು, ಧೈರ್ಯ ಮತ್ತು ಮನುಷ್ಯನ ಅಸೀಮ ಉತ್ಸಾಹಕ್ಕೆ ಎದುರಾಗಿದ್ದ ಪರೀಕ್ಷೆ’ ಎಂದು ಬಣ್ಣಿಸಿದ್ದಾರೆ. ಸುನಿತಾ ಅವರನ್ನು ಪ್ರಧಾನಿಯವರು ಭಾರತಕ್ಕೆ ಆಹ್ವಾನಿಸಿದ್ದಾರೆ.

ಬಾಹ್ಯಾಕಾಶದಲ್ಲಿ ಅತಿಹೆಚ್ಚಿನ ಅವಧಿಯನ್ನು ಕಳೆದ ಅಮೆರಿಕದ ಗಗನಯಾತ್ರಿಗಳ ಪೈಕಿ ಸುನಿತಾ ಅವರು ಎರಡನೆಯ ಸ್ಥಾನದಲ್ಲಿದ್ದಾರೆ. ಮೂರು ಬಾರಿ ಐಎಸ್‌ಎಸ್‌ಗೆ ಭೇಟಿ ನೀಡಿರುವ ಸುನಿತಾ ಅವರು ಒಟ್ಟು 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. ಗಗನಯಾತ್ರಿಗಳು ಈಗ ಸುರಕ್ಷಿತವಾಗಿ ಮರಳಿ ಬಂದಿದ್ದಾರಾದರೂ ಅವರು ದೈಹಿಕವಾಗಿ ಸಂಪೂರ್ಣವಾಗಿ ಸುಧಾರಿಸಿಕೊಳ್ಳುವುದಕ್ಕೆ ಇನ್ನೂ ಬಹಳ ಕಾಲ ಬೇಕಾಗುತ್ತದೆ. ಬಹುಶಃ ಅದಕ್ಕೆ ತಿಂಗಳುಗಳೇ ಬೇಕಾಗಬಹುದು. ಬಾಹ್ಯಾಕಾಶದಲ್ಲಿ ಬಹಳ ಕಾಲ ವಾಸ ಮಾಡಿದ್ದರಿಂದ ಅವರ ಮೇಲೆ ಆಗಿರಬಹುದಾದ ಪರಿಣಾಮಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ ಅವರನ್ನು ಹಲವು ವೈದ್ಯಕೀಯ ಪರೀಕ್ಷೆಗಳಿಗೆ ಗುರಿಪಡಿಸಲಾಗಿದೆ. ಈ ವೈದ್ಯಕೀಯ ಪರೀಕ್ಷೆಗಳು ಬಾಹ್ಯಾಕಾಶ ನಿಲ್ದಾಣದಲ್ಲಿನ ಪರಿಸ್ಥಿತಿಯ ಬಗ್ಗೆ ಇನ್ನಷ್ಟು ಹೆಚ್ಚು ತಿಳಿದುಕೊಳ್ಳಲು, ಮುಂದೆ ಇಂಥದ್ದೇ ಪರಿಸ್ಥಿತಿ ಸೃಷ್ಟಿಯಾದಲ್ಲಿ ಅದಕ್ಕೆ ಅಗತ್ಯವಾದ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ನೆರವಾಗಬಹುದು. ಈಗ ಐಎಸ್‌ಎಸ್‌ನಲ್ಲಿ ಬೇರೆ ಬೇರೆ ದೇಶಗಳ ಸಿಬ್ಬಂದಿ ಆರು ತಿಂಗಳ ಅವಧಿಗೆ ಕರ್ತವ್ಯ ನಿರ್ವಹಿಸಲಿದ್ದಾರೆ. ಐಎಸ್‌ಎಸ್‌ನಲ್ಲಿನ ಚಟುವಟಿಕೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿನ ಸಹಕಾರದ ದ್ಯೋತಕವೂ ಹೌದು. ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಮರಳಿದ ಸಂದರ್ಭದಲ್ಲಿ ಒಂದಿಷ್ಟು ರಾಜಕೀಯ ಮಾತುಗಳು ಕೂಡ ಬಂದವು. ಗಗನಯಾತ್ರಿಗಳು ಐಎಸ್‌ಎಸ್‌ನಲ್ಲಿ ಬಹುಕಾಲ ಉಳಿಯುವಂತೆ ಆಗಿದ್ದಕ್ಕೆ ಕಾರಣ ಯಾರು ಎಂಬುದಕ್ಕೆ ಸಂಬಂಧಿಸಿದ, ಅಷ್ಟೇನೂ ವಿಶೇಷವಲ್ಲದ ಆರೋಪ, ಪ್ರತ್ಯಾರೋಪಗಳು ಅವು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.