ADVERTISEMENT

ಸಂಪಾದಕೀಯ | ಕ್ಷಯದ ತಡೆಗೆ ದಿಟ್ಟ ಹೋರಾಟ: ಸಾಗಬೇಕಾದ ದಾರಿ ಇನ್ನೂ ಇದೆ

ಸಂಪಾದಕೀಯ
Published 30 ನವೆಂಬರ್ 2025, 23:30 IST
Last Updated 30 ನವೆಂಬರ್ 2025, 23:30 IST
   
ಕ್ಷಯರೋಗ ತಡೆ ಆಂದೋಲನದಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದರೂ, ವಿಶ್ವದ ನಾಲ್ಕನೇ ಒಂದರಷ್ಟು ಪ್ರಕರಣಗಳು ಭಾರತದಿಂದಲೇ ಬೆಳಕಿಗೆ ಬರುತ್ತಿರುವುದು ಕಳವಳಕಾರಿ.

ಕ್ಷಯರೋಗ (ಟಿಬಿ) ವಿರುದ್ಧದ ಹೋರಾಟದಲ್ಲಿ ಭಾರತ ಗಣನೀಯ ಪ್ರಗತಿ ಸಾಧಿಸಿದೆ. ಆದರೂ, ಉದ್ದೇಶಿತ ಗುರಿ ಸಾಧನೆಗಾಗಿ ಇನ್ನೂ ಸಾಕಷ್ಟು ಹೋರಾಟ ನಡೆಸಬೇಕಾಗಿರುವ ಗಂಭೀರ ಆರೋಗ್ಯ ಸವಾಲುಗಳಲ್ಲೊಂದಾಗಿ ಕ್ಷಯ ಉಳಿದಿರುವುದನ್ನು ‘ವಿಶ್ವ ಆರೋಗ್ಯ ಸಂಸ್ಥೆ’ಯ (ಡಬ್ಲ್ಯುಎಚ್‌ಒ) 2025ರ ಜಾಗತಿಕ ಕ್ಷಯರೋಗ ವರದಿ ತಿಳಿಸಿದೆ. ಕಾಯಿಲೆಯ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಇಳಿಕೆ ಪ್ರಮಾಣವನ್ನು ಭಾರತ ಸಾಧಿಸಿದ್ದರೂ, ವಿಶ್ವದ ಒಟ್ಟು ಟಿಬಿ ಪ್ರಕರಣಗಳಲ್ಲಿ ಶೇ 25ರಷ್ಟು ಭಾರತದಲ್ಲಿಯೇ ವರದಿಯಾಗುತ್ತಿವೆ. 2015ರಲ್ಲಿ 1 ಲಕ್ಷ ಜನರಿಗೆ 235 ರೋಗ ಪ್ರಕರಣಗಳು ದಾಖಲಾಗಿದ್ದರೆ, 2024ರ ವೇಳೆಗೆ ಆ ಪ್ರಮಾಣ 187ಕ್ಕೆ ಇಳಿಕೆಯಾಗಿದೆ. ವಾರ್ಷಿಕ ಇಳಿಕೆಯ ಪ್ರಮಾಣ ಸರಾಸರಿ ಶೇ 3ರಷ್ಟಿದೆ. ರೋಗಪತ್ತೆ ಪ್ರಮಾಣವೂ ಹೆಚ್ಚಾಗಿರುವುದರ ಜೊತೆಗೆ, ಚಿಕಿತ್ಸೆ ಸುಲಭವಾಗಿ ಮತ್ತು ವ್ಯಾಪಕವಾಗಿ ಲಭಿಸುತ್ತಿದೆ. 2015ರಲ್ಲಿ 1 ಲಕ್ಷಕ್ಕೆ 28ರಷ್ಟಿದ್ದ ಸಾವಿನ ಪ್ರಮಾಣ 2024ರಲ್ಲಿ 21ಕ್ಕೆ ಕುಸಿದಿದೆ. ಈ ಎಲ್ಲ ಸಕಾರಾತ್ಮಕ ಬೆಳವಣಿಗೆಯ ಜೊತೆಯಲ್ಲಿಯೇ ಕೆಲವು ಆತಂಕಕಾರಿ ಸಂಗತಿಗಳನ್ನು ಗಮನಿಸಬೇಕಾಗಿದೆ. ಕ್ಷಯರೋಗ ಈಗಲೂ ದೇಶದ ಬಹುದೊಡ್ಡ ಸಾಂಕ್ರಾಮಿಕವಾಗಿ ಉಳಿದಿದೆ. ಕ್ಷಯದಿಂದ ಉಂಟಾಗುವ ಒಟ್ಟು ಸಾವುಗಳಲ್ಲಿ ಮೂರನೇ ಒಂದು ಭಾಗದಷ್ಟು ಪ್ರಕರಣಗಳು ಭಾರತದಲ್ಲೇ ಸಂಭವಿಸುತ್ತಿದ್ದು, ಪ್ರತಿವರ್ಷ ಸುಮಾರು 5 ಲಕ್ಷ ಜನರು ಈ ಕಾಯಿಲೆಗೆ ಬಲಿಯಾಗುತ್ತಿದ್ದಾರೆ.

ರೋಗಿಯು ಕಾರಣಾಂತರದಿಂದ ಮಧ್ಯದಲ್ಲಿ ಚಿಕಿತ್ಸೆ ನಿಲ್ಲಿಸಿದರೆ ಆತನ ದೇಹದೊಳಗೆ ರೋಗಾಣುಗಳ ಸಂಖ್ಯೆ ಹೆಚ್ಚಾಗಿ ‘ಎಂಡಿಆರ್‌–ಟಿಬಿ’ ಆಗುವ ಸಾಧ್ಯತೆ ಇರುತ್ತದೆ. ಕ್ಷಯರೋಗದ ಸಾಮಾನ್ಯ ಪ್ರಕರಣಗಳಿಗಿಂತಲೂ ಎಂಡಿಆರ್‌–ಟಿಬಿ ಪ್ರಕರಣಗಳ ನಿಯಂತ್ರಣದಲ್ಲಿ ಭಾರತದ ಸಾಧನೆ ಕಳಪೆಯಾಗಿದೆ. ಜಾಗತಿಕ ಎಂಡಿಆರ್‌–ಟಿಬಿ ಪ್ರಕರಣಗಳಲ್ಲಿ ಭಾರತದ ಪಾಲು ಶೇ 32ರಷ್ಟಿದೆ. ಈ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೂ, ಮರಣ ಪ್ರಮಾಣ ಹೆಚ್ಚಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಜಾಗತಿಕವಾಗಿ ಕ್ಷಯರೋಗ ನಿರ್ಮೂಲನೆಗೆ 2030ರ ಗಡುವನ್ನು ಗೊತ್ತುಪಡಿಸಲಾಗಿದ್ದರೂ, ಆ ಅವಧಿಯನ್ನು ಭಾರತ 2025ಕ್ಕೆ ನಿಗದಿಪಡಿಸಿಕೊಂಡಿತ್ತು. ಕಾರ್ಯಸಾಧುವಲ್ಲದ ಗುರಿಯನ್ನು ಗಡುವಿನೊಳಗೆ ಮುಟ್ಟುವುದಕ್ಕೆ ಅಗತ್ಯವಾದ ಕಾರ್ಯತಂತ್ರಗಳ ಕೊರತೆಯ ಕಾರಣದಿಂದಾಗಿ, ಉದ್ದೇಶಿತ ಗುರಿಸಾಧನೆ ಅಪೂರ್ಣವಾಗಲಿದೆ. ರೋಗಪತ್ತೆ, ಚಿಕಿತ್ಸೆ, ಮುನ್ನೆಚ್ಚರಿಕೆ ಮತ್ತು ಆರೋಗ್ಯ ಕ್ಷೇತ್ರದ ಬಲವರ್ಧನೆ ಎನ್ನುವ ನಾಲ್ಕು ಹಂತಗಳಲ್ಲಿ ಪರಿಣಾಮಕಾರಿ ಕ್ರಮಗಳ ಅನುಷ್ಠಾನಕ್ಕೆ ರಾಷ್ಟ್ರೀಯ ಕಾರ್ಯತಂತ್ರ ಯೋಜನೆ (2017–2025) ರೂಪಿಸಲಾಗಿತ್ತು. ಈ ಎಲ್ಲ ಕ್ಷೇತ್ರಗಳಲ್ಲೂ ಆಗಬೇಕಾದ ಕೆಲಸ ಸಾಕಷ್ಟು ಬಾಕಿಯುಳಿದಿದೆ.

ಕ್ಷಯರೋಗ ಪತ್ತೆ ಪ್ರಮಾಣದಲ್ಲಿ ಗಣನೀಯ ಸುಧಾರಣೆ ಆಗಿದ್ದರೂ, ವರದಿಯಾಗದೇ ಉಳಿದಿರುವ ಪ್ರಕರಣಗಳ ಸಂಖ್ಯೆ ಒಂದು ಲಕ್ಷದಷ್ಟಿದೆ ಎಂದು ವರದಿಗಳು ಹೇಳುತ್ತಿವೆ. ಈ ಸಂಖ್ಯೆ, ದಾಖಲಾಗದ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶ್ವದಲ್ಲೇ ಅತ್ಯಂತ ಹೆಚ್ಚಿನದಾಗಿದೆ. ಹೀಗಿದ್ದರೂ, ಚಿಕಿತ್ಸೆಯ ಯಶಸ್ಸಿನ ಪ್ರಮಾಣ ವಿಶ್ವದ ಸರಾಸರಿಗಿಂತಲೂ ಹೆಚ್ಚಿನದಾಗಿದೆ. ಸುಲಭವಾಗಿ ಬಳಸಬಹುದಾದ ಸಲಕರಣೆಗಳು ಸೇರಿದಂತೆ ಪರಿಣಾಮಕಾರಿ ತಂತ್ರಜ್ಞಾನದ ಬಳಕೆಯ ಫಲಿತಾಂಶ ಸ್ಪಷ್ಟವಾಗಿ ಕಾಣಿಸುವಂತಿದೆ. 2024ರಲ್ಲಿ 26 ಲಕ್ಷ ಕ್ಷಯರೋಗ ಪ್ರಕರಣಗಳು ದೇಶದ ವಿವಿಧ ಭಾಗಗಳಲ್ಲಿ ಪತ್ತೆಯಾಗಿದ್ದವು. ಇದು ಈವರೆಗೆ ವರ್ಷವೊಂದರಲ್ಲಿ ಪತ್ತೆಯಾದ ಅತ್ಯಂತ ಹೆಚ್ಚಿನ ಪ್ರಕರಣಗಳ ಸಂಖ್ಯೆಯಾಗಿದೆ. ಕ್ಷಯರೋಗದ ಚಿಕಿತ್ಸೆಗೆ ಸಂಬಂಧಿಸಿದ ಬಹುದೊಡ್ಡ ಸವಾಲು, ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಗೆ ಸಂಬಂಧಿಸಿದ್ದಾಗಿದೆ. ರೋಗಕ್ಕೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಎದುರಾಗುವ ತೊಡಕುಗಳಲ್ಲಿ ರೋಗಿಗಳ ಕಡಿಮೆ ಆದಾಯ ಮತ್ತು ಅಪೌಷ್ಟಿಕತೆ ಮುಖ್ಯವಾದವುಗಳು. ಪೌಷ್ಟಿಕಾಂಶದ ಕೊರತೆ ಹೋಗಲಾಡಿಸುವುದನ್ನು ಚಿಕಿತ್ಸೆಯ ಭಾಗವಾಗಿ ಮಾಡಿಕೊಳ್ಳಲಾಗಿದೆ. ಆದರೆ, ರೋಗ ವರದಿಯಾಗದ ಹೆಚ್ಚಿನ ಪ್ರಕರಣಗಳು ಕಡಿಮೆ ಆದಾಯ ಹೊಂದಿರುವ ಸಮುದಾಯಗಳಿಗೆ ಸಂಬಂಧಿಸಿರುವುದು ದೇಶದ ಸಾಮಾಜಿಕ ಸಂಕಥನವನ್ನು ಬೇರೆಯದೇ ರೀತಿಯಲ್ಲಿ ನೋಡಲು ಒತ್ತಾಯಿಸುವಂತಿದೆ. ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಹಾಗೂ ಉದ್ದೇಶಿತ ಗುರಿಯನ್ನು ತಲಪಲು ಸ್ಥಿರ ಮತ್ತು ಪರಿಣಾಮಕಾರಿ ಯೋಜನೆಗಳನ್ನು ಸರ್ಕಾರ ಅನುಷ್ಠಾನಕ್ಕೆ ತರಬೇಕಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.