ವಿದ್ಯಾರ್ಥಿ ಪ್ರತಿಭೆಗಳ ಸೃಜನಶೀಲ ಅಭಿವ್ಯಕ್ತಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವ ‘ವಿಶೇಷ ಶಿಕ್ಷಕ’ರನ್ನು ‘ಹೆಚ್ಚುವರಿ’ ಎಂದು ಗುರ್ತಿಸುವ ನಿರ್ಧಾರ ಅವೈಜ್ಞಾನಿಕ.
ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಶೇಷ ಶಿಕ್ಷಕರನ್ನು, 240ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಿಗೆ ವರ್ಗಾಯಿಸುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನಿರ್ಧಾರ ಗ್ರಾಮೀಣ ಮಕ್ಕಳ ಶೈಕ್ಷಣಿಕ ಹಿತಾಸಕ್ತಿಯನ್ನು ಗಾಸಿಗೊಳಿಸುವಂತಹದ್ದು. ಪ್ರೌಢಶಾಲೆಗಳಲ್ಲಿನ ಸಿಬ್ಬಂದಿಯ ಸ್ತರ ವಿನ್ಯಾಸವನ್ನು ಪರಿಷ್ಕರಿಸಿದ್ದು, 240ಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿನ ವಿಶೇಷ ಶಿಕ್ಷಕರನ್ನು ‘ಹೆಚ್ಚುವರಿ’ ಎಂದು ಗುರ್ತಿಸಿರುವುದಾಗಿ ಇಲಾಖೆ ಹೇಳಿದೆ. ಇದರಿಂದಾಗಿ, ಕಡಿಮೆ ಮಕ್ಕಳು ಇರುವ ಗ್ರಾಮೀಣ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಶೇಷ ಶಿಕ್ಷಕರು ನಗರ ಪ್ರದೇಶಗಳಿಗೆ ವರ್ಗ ಆಗಲಿದ್ದಾರೆ.
ಮೂಲ ಸೌಕರ್ಯದ ಕೊರತೆಯೊಂದಿಗೆ ವಿದ್ಯಾರ್ಥಿಗಳ ದಾಖಲಾತಿಯೂ ಕಡಿಮೆಯಾಗಿ, ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳು ವರ್ಷದಿಂದ ವರ್ಷಕ್ಕೆ ದುರ್ಬಲಗೊಳ್ಳುತ್ತಿವೆ. ಈಗ ವಿಶೇಷ ಶಿಕ್ಷಕರನ್ನೂ ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವರ್ಗಾಯಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ಸರ್ಕಾರಿ ಶಾಲೆಗಳ ನಡುವೆ ಭೇದ ಕಲ್ಪಿಸಲು ಹೊರಟಂತಿರುವ ಇಲಾಖೆ, ಗ್ರಾಮೀಣ ಮಕ್ಕಳಿಗೆ ‘ಕಲೆ’ ಅಗತ್ಯವಿಲ್ಲ ಎಂದು ಭಾವಿಸಿರುವಂತಿದೆ. ವಿದ್ಯಾರ್ಥಿಗಳು ಕಡಿಮೆ ಇದ್ದಾರೆ ಎನ್ನುವ ಕಾರಣಕ್ಕಾಗಿ ವಿಶೇಷ ಶಿಕ್ಷಕರನ್ನು ವರ್ಗಾಯಿಸಲು ಮುಂದಾಗಿರುವ ಶಿಕ್ಷಣ ಇಲಾಖೆ, ಮಕ್ಕಳ ಹಿತಾಸಕ್ತಿಯನ್ನು ನಿರ್ಲಕ್ಷಿಸಿದೆ ಹಾಗೂ ವ್ಯಾವಹಾರಿಕ ನಿರ್ಧಾರ ಕೈಗೊಂಡಿದೆ.
ಚಿತ್ರಕಲೆ, ಸಂಗೀತ, ನಾಟಕ, ನೃತ್ಯದಂತಹ ಸೃಜನಶೀಲ ವಿಷಯಗಳನ್ನು ಕಲಿಸುವವರನ್ನು ‘ವಿಶೇಷ ಶಿಕ್ಷಕ’ರೆಂದು ಶಿಕ್ಷಣ ಇಲಾಖೆ ಹೆಸರಿಸಿದೆ. ಈ ಶಿಕ್ಷಕರು, ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸುತ್ತಾರೆ; ಚಿತ್ರಕಲೆ, ಸಂಗೀತ, ನಾಟಕದಂತಹ ವಿವಿಧ ಕಲಾ ಪ್ರಕಾರಗಳಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಹೊರಹೊಮ್ಮಲು ಪ್ರೋತ್ಸಾಹಿಸುತ್ತಾರೆ. ವಿದ್ಯಾರ್ಥಿಗಳು ಕೀಳರಿಮೆಯಿಂದ ಹೊರಬಂದು, ಸ್ವಯಂ ಅಭಿವ್ಯಕ್ತಿಯ ಕೌಶಲಗಳನ್ನು ರೂಢಿಸಿಕೊಳ್ಳಲು ನೆರವಾಗುತ್ತಾರೆ. ಪಠ್ಯೇತರ ಚಟುವಟಿಕೆಗಳ ಮಹತ್ವವನ್ನು ಗುರ್ತಿಸಿ, ವಿಶೇಷ ಶಿಕ್ಷಕರ ನೇಮಕಾತಿಗೆ ಆದ್ಯತೆ ನೀಡಬೇಕೆಂದು ‘ರಾಷ್ಟ್ರೀಯ ಶಿಕ್ಷಣ ನೀತಿ’ಗಳೂ ಪ್ರತಿಪಾದಿಸಿವೆ. ಆದರೆ, ಪಠ್ಯೇತರ ಚಟುವಟಿಕೆಗಳೆಂದು ಪರಿಗಣಿಸಲಾಗುವ ಕಲಾ ಪ್ರಕಾರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಪ್ರೋತ್ಸಾಹವಿಲ್ಲ. ಅಂಕ ಗಳಿಕೆಯೇ ಪ್ರಧಾನವಾದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಆಸಕ್ತಿಯುಳ್ಳ ಹೆಚ್ಚಿನ ಪಾಲಕರೂ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಉತ್ಸಾಹ ವ್ಯಕ್ತಪಡಿಸುವುದಿಲ್ಲ. ಈ ಅವಗಣನೆಯ ಸೋಂಕನ್ನು ಗ್ರಾಮೀಣ ಸರ್ಕಾರಿ ಶಾಲೆಗಳಿಗೂ ಹಬ್ಬಿಸಲು ಶಿಕ್ಷಣ ಇಲಾಖೆ ಹೊರಟಂತಿದೆ.
ವಿದ್ಯಾರ್ಥಿಗಳಿಗೆ ಕಲೆಯ ಬಗ್ಗೆ ಅಭಿರುಚಿ ಮೂಡಿಸುವ ವಿಶೇಷ ಶಿಕ್ಷಕರು ಸವಾಲುಗಳ ನಡುವೆಯೇ ಕಾರ್ಯ ನಿರ್ವಹಿಸಬೇಕಾಗಿದೆ. ವಿಶೇಷ ಶಿಕ್ಷಕರನ್ನು ಅವರು ಕಾರ್ಯ ನಿರ್ವಹಿಸುವ ಶಾಲೆಗಳಲ್ಲಿಯೇ ಎರಡನೇ ದರ್ಜೆಯ ಶಿಕ್ಷಕರಂತೆ ನಡೆಸಿಕೊಳ್ಳುವ ಉದಾಹರಣೆ ಗಳಿವೆ; ಪಠ್ಯ ವಿಷಯಗಳನ್ನು ಬೋಧಿಸುವ ಶಿಕ್ಷಕರಿಗೆ ದೊರೆಯುವ ಮಹತ್ವ ಅವರಿಗೆ ದೊರೆಯುವುದಿಲ್ಲ. ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಕೆಲವು ಶಿಕ್ಷಕರು, ತಾವು ಕರ್ತವ್ಯ ನಿರ್ವಹಿಸುವ ಶಾಲೆಗಳಿಗೆ ತಮ್ಮ ಸೃಜನಶೀಲತೆಯ ಮೂಲಕ ಹೊಸ ವರ್ಚಸ್ಸು ನೀಡಿದ್ದಾರೆ; ಗ್ರಾಮೀಣ ಶಾಲೆಗಳ ಮಕ್ಕಳು ರಾಜ್ಯಮಟ್ಟದ ಚಟುವಟಿಕೆಗಳಲ್ಲಿ ನಗರ ಪ್ರದೇಶಗಳ ಮಕ್ಕಳೊಂದಿಗೆ ಸ್ಪರ್ಧಿಸಿ ಗೆಲ್ಲಲು ಕಾರಣರಾಗಿದ್ದಾರೆ.
ಇಂಥ ಶಿಕ್ಷಕರನ್ನು ‘ಹೆಚ್ಚುವರಿ’ ಎನ್ನುವ ಹಣೆಪಟ್ಟಿಯೊಂದಿಗೆ ನಗರ ಪ್ರದೇಶದ ಶಾಲೆಗಳಿಗೆ ವರ್ಗ ಮಾಡುವುದು ವಿವೇಚನೆಯಿಂದ ಕೂಡಿದ ನಿರ್ಧಾರವಲ್ಲ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗುತ್ತಿರುವ ಶಿಕ್ಷಕರನ್ನು ‘ಹೆಚ್ಚುವರಿ’ಯೆಂದು ಗುರ್ತಿಸುವ ಅವೈಜ್ಞಾನಿಕ ಹಾಗೂ ಅಸಾಂಸ್ಕೃತಿಕ ನಿರ್ಧಾರವನ್ನು ಶಿಕ್ಷಣ ಇಲಾಖೆ ಕೈಬಿಡಬೇಕು. ಸಾಮೂಹಿಕ ವರ್ಗಾವಣೆಯ ಜೊತೆಗೆ, ಕಲಾ ಪ್ರಕಾರಗಳಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರಿಗೆ ಬಳಸಲಾಗುತ್ತಿರುವ ‘ವಿಶೇಷ’ ಎನ್ನುವ ಅಸೂಕ್ಷ್ಮ ಪದ ಬಳಕೆಯನ್ನೂ ಕೈಬಿಡಬೇಕು. ಈ ಮೊದಲು, ಶಿಕ್ಷಕರನ್ನು ಅವರು ಶೈಕ್ಷಣಿಕ ಪರಿಣತಿ ಹೊಂದಿದ ಸಂಗೀತ, ನಾಟಕ, ಚಿತ್ರಕಲೆಯಂಥ ಕಲಾಪ್ರಕಾರದ ಜೊತೆಗೇ ಗುರ್ತಿಸ ಲಾಗುತ್ತಿತ್ತು.
ಆ ಪದ್ಧತಿ ಮತ್ತೆ ಜಾರಿಗೆ ಬರಬೇಕು. ಭಾಷೆ, ಗಣಿತ, ವಿಜ್ಞಾನದ ಶಿಕ್ಷಕರಂತೆ ಕಲಾ ಪ್ರಕಾರಗಳಿಗೆ ಸಂಬಂಧಿಸಿದ ಕಾಯಂ ಶಿಕ್ಷಕರ ಹುದ್ದೆಯೂ ಶಾಲೆಗಳಲ್ಲಿರುವುದು ಅಗತ್ಯ. ಈಗ ‘ವಿಶೇಷ’ ಹಣೆಪಟ್ಟಿಯಲ್ಲಿ 2,400ಕ್ಕೂ ಹೆಚ್ಚು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ನಿಯಮಿತ ನೇಮಕಾತಿ ಪ್ರಕ್ರಿಯೆ ಜಾರಿಗೆ ತರುವ ಮೂಲಕ, ಎಲ್ಲ ಶಾಲೆಗಳಲ್ಲೂ ಕಲಾ ಪ್ರಕಾರಗಳ ಶಿಕ್ಷಕರು ಇರುವಂತೆ ಶಿಕ್ಷಣ ಇಲಾಖೆ ನೋಡಿಕೊಳ್ಳಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.