ADVERTISEMENT

ಸಂಪಾದಕೀಯ | ಹುಲಿಗಳ ಸಾವು ಅಕ್ಷಮ್ಯ; ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ

ಸಂಪಾದಕೀಯ
Published 30 ಜೂನ್ 2025, 1:17 IST
Last Updated 30 ಜೂನ್ 2025, 1:17 IST
   

ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಐದು ಹುಲಿಗಳು ವಿಷಪ್ರಾಶನಕ್ಕೆ ಬಲಿ ಆಗಿರುವುದರಲ್ಲಿ ಅರಣ್ಯ ಇಲಾಖೆಯ ನಿರ್ಲಕ್ಷ್ಯದೊಂದಿಗೆ ಮನುಷ್ಯ ಹಾಗೂ ವನ್ಯಜೀವಿ ಸಂಘರ್ಷದ ಪಾತ್ರವೂ ಇದೆ. ಹುಲಿಗಳ ಸಂರಕ್ಷಣೆಯಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಕಳೆದೊಂದು ದಶಕದ ಅವಧಿಯಲ್ಲಿ ದೇಶದಲ್ಲಿನ ಹುಲಿಗಳ ಸಂಖ್ಯೆ ದುಪ್ಪಟ್ಟಾಗಿದ್ದು, 3,650ಕ್ಕೂ ಹೆಚ್ಚು ಹುಲಿಗಳು ಭಾರತದಲ್ಲಿವೆ. ವಿಶ್ವದ ಒಟ್ಟು ಹುಲಿಗಳಲ್ಲಿ ಶೇ 75ರಷ್ಟು ಭಾರತದಲ್ಲಿಯೇ ಇವೆ. ಹುಲಿ ಸಂರಕ್ಷಣೆಯ ಸಾಧನೆ ಮೂಲಕ ವಿಶ್ವದ ಗಮನಸೆಳೆದಿರುವ ದೇಶದಲ್ಲಿ ಮನುಷ್ಯನ ಹಸ್ತಕ್ಷೇಪದಿಂದಾಗಿ ಹುಲಿಗಳ ದಾರುಣ ಸಾವುಗಳೂ ಸಂಭವಿಸುತ್ತಿವೆ. ಈ ಸಾಲಿಗೆ ಹೊಸ ಸೇರ್ಪಡೆ, ಚಾಮರಾಜನಗರ ಜಿಲ್ಲೆಯ ಹೂಗ್ಯಂ ವನ್ಯಜೀವಿ ವಲಯದ ಮೀಣ್ಯಂನ ಕಾಡಿನಲ್ಲಿ ಸಂಭವಿಸಿರುವ ಐದು ಹುಲಿಗಳ ಸಾವು. ತಾಯಿ ಹುಲಿ ಹಾಗೂ ನಾಲ್ಕು ಮರಿ ಹುಲಿಗಳು ವಿಷ ಬೆರೆಸಿದ್ದ ಜಾನುವಾರುವಿನ ಕಳೇಬರ ತಿಂದು ದುರ್ಮರಣಕ್ಕೆ ಒಳಗಾಗಿವೆ. ಹುಲಿಗಳಿಗೆ ವಿಷಪ್ರಾಶನ ಮಾಡಿ ಕೊಂದಿರುವ ಆರೋಪದ ಮೇಲೆ ಹನೂರು ತಾಲ್ಲೂಕಿನ ಕೊಪ್ಪ ಗ್ರಾಮದ ಮೂವರು ಹಾಗೂ ಕೃತ್ಯಕ್ಕೆ ನೆರವು ನೀಡಿರುವ ಆರೋಪದಲ್ಲಿ ಮೂವರನ್ನು ಬಂಧಿಸಲಾಗಿದೆ. ಅರಣ್ಯದೊಳಗೆ ಮೇಯುತ್ತಿದ್ದ ಹಸುವನ್ನು ಹುಲಿ ಕೊಂದು ಹಾಕಿರುವ ಘಟನೆಗೆ ಪ್ರತೀಕಾರದ ರೂಪದಲ್ಲಿ ದುಷ್ಕೃತ್ಯ ನಡೆದಿದ್ದು; ಹುಲಿ ತಿಂದು ಉಳಿಸಿದ್ದ ಕಳೇಬರಕ್ಕೆ ವಿಷ ಹಾಕಲಾಗಿದೆ. ಆ ವಿಷಪೂರಿತ ಕಳೇಬರವನ್ನು ತಿಂದು ಐದು ಹುಲಿಗಳೂ ಪ್ರಾಣಬಿಟ್ಟಿವೆ ಎಂದು ಹೇಳಲಾಗಿದೆ. ಹುಲಿಗಳ ಸಾವಿನ ಹಿಂದೆ ತಮಿಳುನಾಡಿನ ಜಾನುವಾರುಗಳ ಮಾಲೀಕರ ‘ಸಗಣಿ ಮಾಫಿಯಾ’ದ ಪರೋಕ್ಷ ಪಾತ್ರ ಇರುವುದರ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ವಾಸವಿರುವ ಬಹುತೇಕರು ಪಶುಪಾಲನೆ ವೃತ್ತಿ ಅವಲಂಬಿಸಿದ್ದರೂ ಅವರಲ್ಲಿ ಸ್ವಂತ ಜಾನುವಾರು ಹೊಂದಿರುವವರು ವಿರಳ. ಬಹುತೇಕರು ತಮಿಳುನಾಡಿನ ಜಾನುವಾರುಗಳನ್ನು ಮೇಯಿಸುವ ಕೆಲಸ ನಿರ್ವಹಿಸುತ್ತಿದ್ದಾರೆ. ಸಾವಿರಾರು ಜಾನುವಾರುಗಳನ್ನು ನಿಯಮಬಾಹಿರವಾಗಿ ಕಾಡಿನೊಳಗೆ ನುಗ್ಗಿಸಿ ಮೇಯಿಸುವ ಸಂದರ್ಭದಲ್ಲಿ, ದನಕರುಗಳ ಮೇಲೆ ದಾಳಿ ಮಾಡುವ ಹುಲಿಗಳ ಮೇಲೆ ಸೇಡು ತೀರಿಸಿಕೊಳ್ಳುವ ಕೃತ್ಯಗಳು ನಡೆಯುತ್ತಿವೆ ಎನ್ನಲಾಗಿದೆ. ಈ ಮಾನವ– ಪ್ರಾಣಿ ಸಂಘರ್ಷವೇ ಪ್ರಸಕ್ತ ಐದು ಹುಲಿಗಳ ಸಾವಿನ ಹಿನ್ನೆಲೆಯಲ್ಲಿಯೂ ಗುರುತಿಸಲಾಗುತ್ತಿದೆ. 

ಹುಲಿಗಳ ಸಾವಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಪಾತ್ರವೂ ಇದೆ. ಅರಣ್ಯದ ಸಂರಕ್ಷಣೆಯಲ್ಲಿ ಹೊರಗುತ್ತಿಗೆ ವಾಚರ್‌ಗಳ ಪಾತ್ರ ಮಹತ್ವದ್ದು. ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಕಾರ್ಯನಿರ್ವಹಿಸುವ 65ಕ್ಕೂ ಹೆಚ್ಚು ಹೊರಗುತ್ತಿಗೆ ವಾಚರ್‌ಗಳಿಗೆ ಐದು ತಿಂಗಳಿಂದ ವೇತನ ದೊರೆತಿಲ್ಲ. ವೇತನ ಬಿಡುಗಡೆಗೆ ಸಂಬಂಧಿಸಿದಂತೆ ವಾಚರ್‌ಗಳು ಕೊಳ್ಳೇಗಾಲದ ಡಿಸಿಎಫ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭವನ್ನು ಉಪಯೋಗಿಸಿಕೊಂಡಿರುವ ದುಷ್ಕರ್ಮಿಗಳು, ಕಾಡಿನೊಳಗೆ ಯಾರೂ ಇಲ್ಲದಿರುವ ಸಮಯ ನೋಡಿ ಹುಲಿಗಳ ಆಹಾರಕ್ಕೆ ಕೀಟನಾಶಕ ಸೇರಿಸಿದ್ದಾರೆ. ಸಕಾಲಕ್ಕೆ ಸಂಬಳ ದೊರಕದೇ ಹೋದರೆ ವಾಚರ್‌ಗಳು ತಮ್ಮ ಕೆಲಸದಲ್ಲಿ ಉತ್ಸಾಹ ಉಳಿಸಿಕೊಳ್ಳುವುದಾದರೂ ಹೇಗೆ? ಮಲೆ ಮಹದೇಶ್ವರ ವನ್ಯಜೀವಿ ವಿಭಾಗವನ್ನು ‘ಹುಲಿ ಸಂರಕ್ಷಿತ ವಲಯ’ ಎಂದು ಘೋಷಿಸದಿರುವುದು ಕೂಡ ಹುಲಿಗಳ ಸುರಕ್ಷತೆಗೆ ತೊಡಕಾಗಿ ಪರಿಣಮಿಸಿದೆ. ‘ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ’ ಹಸಿರು ನಿಶಾನೆ ತೋರಿಸಿ ವರ್ಷಗಳೇ ಕಳೆದಿದ್ದರೂ ಮಲೆ ಮಹದೇಶ್ವರ ವನ್ಯಜೀವಿ ವಿಭಾಗವನ್ನು ಹುಲಿ ಸಂರಕ್ಷಿತ ವಲಯ ಎಂದು ಘೋಷಿಸಲು ಸರ್ಕಾರಗಳು ಮುಂದಾಗಿಲ್ಲ. ಕಾಡು ಹಾಗೂ ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದಂತೆ ವಿವಿಧ ಲಾಬಿಗಳಿಗೆ ಮಣಿಯುವ ಸರ್ಕಾರಗಳು, ವಿಳಂಬ ತಂತ್ರ ಅನುಸರಿಸುವುದು ಸಾಮಾನ್ಯ ಎನ್ನುವಂತಾಗಿದೆ. ವನ್ಯಜೀವಿಗಳ ಅಸಹಜ ಸಾವು ಸಂಭವಿಸಿದ ಸಂದರ್ಭದಲ್ಲಿ ತನಿಖೆ ವಸ್ತುನಿಷ್ಠವಾಗಿ ನಡೆಯುವುದೂ ಅಪರೂಪ. ಪ್ರಸಕ್ತ ವರ್ಷದಲ್ಲೇ, ಶಿವಮೊಗ್ಗ ಜಿಲ್ಲೆಯ ಅಂಬಲಿಗೊಳ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಹುಲಿಯ ಕಳೇಬರ ಪತ್ತೆಯಾಗಿತ್ತು. ಆ ಸಾವಿಗೆ ಕಾರಣ ನಿಗೂಢವಾಗಿಯೇ ಉಳಿದಿದೆ. ಭದ್ರಾ ವನ್ಯಜೀವಿ ಅಭಯಾರಣ್ಯದಲ್ಲಿ ಆನೆಯೊಂದು ಸಾವಿಗೀಡಾದಾಗ, ಅದನ್ನು ಹೆಣ್ಣು ಆನೆ ಎಂದು ಅರಣ್ಯ ಇಲಾಖೆ ಪ್ರಕಟಿಸಿತ್ತು. ಆದರೆ, ಸಾವಿಗೀಡಾದುದು ಗಂಡು ಆನೆ ಎನ್ನುವುದನ್ನು ಡಿಎನ್‌ಎ ಪರೀಕ್ಷೆ ಸ್ಪಷ್ಟಪಡಿಸಿತ್ತು ಹಾಗೂ ಆನೆಯ ದಂತಗಳು ನಾಪತ್ತೆಯಾಗಿದ್ದವು. ವನ್ಯಜೀವಿಗಳ ಅಸಹಜ ಸಾವುಗಳು ತಾರ್ಕಿಕ ಅಂತ್ಯ ಮುಟ್ಟುವುದು ಅಪರೂಪ. ಸಣ್ಣಪುಟ್ಟ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವ ಮೂಲಕ ಹಿರಿಯ ಅಧಿಕಾರಿಗಳು ಪ್ರಕರಣಗಳನ್ನು ಹಳ್ಳ ಹಿಡಿಸುತ್ತಾರೆ. ಮಲೆ ಮಹದೇಶ್ವರ ವನ್ಯಜೀವಿ ವಲಯದಲ್ಲಿನ ಐದು ಹುಲಿಗಳ ಸಾವಿನ ಪ್ರಕರಣವಾದರೂ ತಾರ್ಕಿಕ ಅಂತ್ಯ ಮುಟ್ಟಬೇಕು. ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳಬಾರದು. ಕಾಡು, ಕಾಡಿನ ಜೀವವೈವಿಧ್ಯದ ಮಹತ್ವದ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವ ಕೆಲಸವೂ ವ್ಯಾಪಕವಾಗಿ ನಡೆಯಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT