ADVERTISEMENT

ಸಂಪಾದಕೀಯ | ಮತಕಳವು: ಪಲಾಯನವಾದ ಬೇಡ; ಆಯೋಗ ನಂಬಿಕೆ ಉಳಿಸಿಕೊಳ್ಳಲಿ

ಸಂಪಾದಕೀಯ
Published 22 ಸೆಪ್ಟೆಂಬರ್ 2025, 0:30 IST
Last Updated 22 ಸೆಪ್ಟೆಂಬರ್ 2025, 0:30 IST
   
ರಾಹುಲ್‌ ಗಾಂಧಿ ಮಾಡಿರುವ ಮತಗಳ್ಳತನದ ಆರೋಪಗಳನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು. ಪಾರದರ್ಶಕ ತನಿಖೆಯಿಂದಷ್ಟೇ ಆಯೋಗದ ವಿಶ್ವಾಸಾರ್ಹತೆ ಉಳಿಯಲು ಸಾಧ್ಯ.

ಕರ್ನಾಟಕದಲ್ಲಿ ಮತಗಳ್ಳತನದ ಪ್ರಕರಣಗಳು ದೊಡ್ಡ ಪ್ರಮಾಣದಲ್ಲಿ ನಡೆದಿವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮಹದೇವಪುರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನಕಲಿ ನೋಂದಣಿ ಗಳಿವೆ ಎಂದು ಕೆಲವು ದಿನಗಳ ಹಿಂದೆ ರಾಹುಲ್ ಆಪಾದಿಸಿದ್ದರು. ಈಗ, ಆಳಂದ ಕ್ಷೇತ್ರದಲ್ಲಿ ಸಾವಿರಾರು ಹೆಸರುಗಳನ್ನು ಮತದಾರರ ಪಟ್ಟಿಯಿಂದ ಉದ್ದೇಶಪೂರ್ವಕವಾಗಿ ಅಳಿಸಲಾಗಿದೆ ಎಂದು ದೂರಿದ್ದಾರೆ. ಮಹದೇವಪುರ ಕ್ಷೇತ್ರದ ಮತದಾರರ ಪಟ್ಟಿಗಳಲ್ಲಿ ಲೋಪದೋಷಗಳು ಇರುವುದನ್ನು ಸ್ವತಂತ್ರ ಪರಿಶೀಲನೆಗಳೂ ದೃಢಪಡಿಸಿದ್ದವು, ಆ ಮೂಲಕ ರಾಹುಲ್ ಅವರ ಆರೋಪಕ್ಕೆ ಹೆಚ್ಚಿನ ವಿಶ್ವಾಸಾರ್ಹತೆ ದೊರೆತಂತಾಗಿತ್ತು.

ಆದರೆ, ಆರೋಪಗಳ ಬಗ್ಗೆ ತನಿಖೆ ನಡೆಸಬೇಕಾದ ಚುನಾವಣಾ ಆಯೋಗ ವಿಚಿತ್ರವಾಗಿ ವರ್ತಿಸಿತ್ತು ಹಾಗೂ ತಮ್ಮ ಆರೋಪಗಳಿಗೆ ಸಾಕ್ಷ್ಯಗಳನ್ನು ನೀಡುವಂತೆ ಹಾಗೂ ಲಿಖಿತ ಪ್ರಮಾಣ ಪತ್ರ ಸಲ್ಲಿಸುವಂತೆ ರಾಹುಲ್‌ ಗಾಂಧಿ ಅವರನ್ನು ಒತ್ತಾಯಿಸಿತ್ತು. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ಹೊಣೆ‌ ಹೊತ್ತಿರುವ ಸಂಸ್ಥೆ ತನ್ನ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸುವ ಹೊಣೆಗಾರಿಕೆಯಿಂದ ನುಣುಚಿಕೊಂಡಿತ್ತು. ಈಗ ಆಳಂದ ಕ್ಷೇತ್ರದಲ್ಲಿನ ಲೋಪಗಳ ಕುರಿತಾದ ಆರೋಪಕ್ಕೆ ಸಂಬಂಧಿಸಿದಂತೆಯೂ ಆಯೋಗದ ಧೋರಣೆ ಬದಲಾಗಿಲ್ಲ.

ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 6,000ಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು, ತಂತ್ರಜ್ಞಾನದ ದುರ್ಬಳಕೆ ಮಾಡಿಕೊಂಡು ಅಳಿಸಿ ಹಾಕಲು ಆಯೋಗ‌ ಪ್ರಯತ್ನಿಸಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಅವರ ಈ ಆರೋಪ ಮೇಲ್ನೋಟಕ್ಕೆ ದುರ್ಬಲವಾಗಿದೆ. ಮತದಾರರ ಪಟ್ಟಿಯಿಂದ ತೆಗೆದು ಹಾಕಿರುವ ಹೆಸರುಗಳ ಸಂಖ್ಯೆ ಬರೀ 24, ಸಾವಿರಾರು ಅಲ್ಲ ಎಂದು ಆಯೋಗ ಸ್ಪಷ್ಟನೆ ನೀಡಿದೆ. ಈ ಪ್ರಕ್ರಿಯೆಗೆ ಸಂಬಂಧಿಸಿದ ಐಪಿ ವಿಳಾಸಗಳು, ಆಕ್ಷೇಪ ಸಲ್ಲಿಸಿದವರ ವಿವರಗಳು ಸೇರಿದಂತೆ ಎಲ್ಲ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ಸಲ್ಲಿಸಿರುವುದಾಗಿಯೂ ಹೇಳಿದೆ. ಆಳಂದ ವಿಷಯದಲ್ಲಿ ರಾಹುಲ್ ಅವರ ಆರೋಪ ಉತ್ಪ್ರೇಕ್ಷೆಯಿಂದ ಕೂಡಿರುವಂತಿದೆ.

ADVERTISEMENT

ಆದರೆ, ಉತ್ಪ್ರೇಕ್ಷೆಯ ಕಾರಣದಿಂದಾಗಿ ಚುನಾವಣಾ ಆಯೋಗ ಆರೋಪಮುಕ್ತ ಆಗುವುದಿಲ್ಲ. ಹೊರ ರಾಜ್ಯಗಳ ಮೊಬೈಲ್ ಸಂಖ್ಯೆಗಳನ್ನು ಬಳಸಿ, ಮತದಾರರ ಹೆಸರುಗಳನ್ನು ಸಣ್ಣ ಪ್ರಮಾಣದಲ್ಲಿ ಅಳಿಸಿಹಾಕಲಾಗಿದೆ ಹಾಗೂ ಸಂದೇಹಾಸ್ಪದ ವಿಧಾನಗಳನ್ನು ಅನುಸರಿಸಲಾಗಿದೆ ಎನ್ನುವುದು ಗಂಭೀರ ಪ್ರಶ್ನೆಗಳಿಗೆ ಆಸ್ಪದ ಕಲ್ಪಿಸುವಂತಿದೆ. ಇದು ತಂತ್ರಜ್ಞಾನದ ಸಂಘಟಿತ ಬಳಕೆಯ ಮೂಲಕ ನಡೆದ ಕಾರ್ಯಾಚರಣೆ ಆಗಿತ್ತೇ? ಹೌದು ಎಂದಾದಲ್ಲಿ, ಈ ಪ್ರಕ್ರಿಯೆ ಬೇರೆ ಕ್ಷೇತ್ರಗಳಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ನಡೆದಿರಬಹುದಲ್ಲವೇ? ಈ ಪ್ರಶ್ನೆಗಳಿಗೆ ಪೂರ್ಣ ಪ್ರಮಾಣದ ಸ್ವತಂತ್ರ ತನಿಖೆಯ ಮೂಲಕ ಉತ್ತರಗಳು ದೊರೆಯಬೇಕಾಗಿದೆ.

ಮತಗಳ್ಳತನದ ಆರೋಪಗಳಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರ
ರಾಜಕೀಯ ನಿಲುವು ವಿರೋಧಾಭಾಸದಿಂದ ಕೂಡಿದೆ. ಸತ್ಯಗಳನ್ನು ಬಹಿರಂಗಪಡಿಸುವು ದಷ್ಟೇ ತಮ್ಮ ಕೆಲಸ, ಪ್ರಜಾಪ್ರಭುತ್ವದ ರಕ್ಷಣೆಯ ಕರ್ತವ್ಯ ತಮಗೆ ಸೇರಿದ್ದಲ್ಲ ಎನ್ನುವ ಧೋರಣೆ ಅವರ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವಂತಹದ್ದಲ್ಲ. ಚುನಾವಣಾ ಆಯೋಗ ನಿಜವಾಗಿಯೂ ತಡೆಗೋಡೆಗಳನ್ನು ನಿರ್ಮಿಸುತ್ತಿದ್ದರೆ, ನ್ಯಾಯಾಲಯದ ಮೊರೆ ಹೋಗುವುದು ರಾಹುಲ್ ಅವರ ಆಯ್ಕೆ ಮತ್ತು ಕರ್ತವ್ಯ ಎರಡೂ ಆಗಿದೆ. ಚುನಾವಣಾ ಆಯುಕ್ತರಿಗೆ ಕಾನೂನಿನ ಸುರಕ್ಷಾಕವಚವಿದೆ ಎನ್ನುವ ಕಾಂಗ್ರೆಸ್ ವಾದ ದಿಕ್ಕುತಪ್ಪಿಸುವಂತಹದ್ದು. ಆಯುಕ್ತರಿಗೆ ಇರುವ ಕಾನೂನಿನ ಸುರಕ್ಷತೆ, ಚುನಾವಣಾ ಅವ್ಯವಹಾರಗಳಂತಹ ವಿಶಾಲ ವ್ಯಾಪ್ತಿಗೆ ಅನ್ವಯ ಆಗುವಂತಹದ್ದಲ್ಲ. ಚುನಾವಣಾ ಅವ್ಯವಹಾರದ ಪ್ರಕರಣಗಳು ನ್ಯಾಯಾಂಗದ ಪರಾಮರ್ಶೆಗೆ ಮುಕ್ತವಾಗಿವೆ. ಚುನಾವಣಾ ಆಯೋಗ ಹಲವು ಪ್ರಶ್ನೆಗಳಿಗೆ ಉತ್ತರಿಸಲೇಬೇಕಾಗಿದೆ. ರಾಹುಲ್ ಗಾಂಧಿ ಅವರ ದೂರುಗಳಿಗೆ ಉತ್ತರಿಸಲು ಪಾರದರ್ಶಕ ಪ್ರಕ್ರಿಯೆ ಅನುಸರಿಸುವ ಬದಲಾಗಿ, ಆರೋಪಗಳನ್ನು ಸಾರಾಸಗಟಾಗಿ ತಿರಸ್ಕರಿಸುವ ಮೂಲಕ ಆಯೋಗ ತನ್ನ ಸಾರ್ವಜನಿಕ ವಿಶ್ವಾಸಾರ್ಹತೆಗೆ ತಾನೇ ಧಕ್ಕೆ ತಂದುಕೊಂಡಿದೆ; ತನ್ನ ಸ್ವಾಯತ್ತತೆಯ ಕುರಿತು ಪ್ರಶ್ನೆಗಳು ಉಂಟಾಗಲು ಆಯೋಗವೇ ಆಸ್ಪದ ಕಲ್ಪಿಸಿದೆ.

ಅಂತಿಮವಾಗಿ, ಪ್ರಜಾಪ್ರಭುತ್ವದ ಸುರಕ್ಷತೆಯು ರಾಜಕಾರಣಿಗಳ ಆಲಂಕಾರಿಕ ಆರೋಪಗಳು ಹಾಗೂ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅವಲಂಬನೆ ಆಗಿರುವುದಿಲ್ಲ. ರಾಹುಲ್ ಗಾಂಧಿ ಅವರು ತಮ್ಮ ಆರೋಪಗಳನ್ನು ಸೂಕ್ತ ಕಾನೂನು ಮಾರ್ಗಗಳು ಹಾಗೂ ಸಾಂವಿಧಾನಿಕ ಸಂಸ್ಥೆಗಳ ಪರಾಮರ್ಶೆಗೆ ಒಡ್ಡಬೇಕಾಗಿದೆ ಹಾಗೂ ಚುನಾವಣಾ ಆಯೋಗ ಸುರಕ್ಷಿತ ಧೋರಣೆಯಿಂದ ಹೊರಬಂದು ಪಾರದರ್ಶಕ ತನಿಖೆಯ ಮಾರ್ಗವನ್ನು ಅನುಸರಿಸಬೇಕಾಗಿದೆ. ಮತದಾರರ ಪಟ್ಟಿಯ ಪಾವಿತ್ರ್ಯಕ್ಕೆ ಸಂಬಂಧಿಸಿದ ಹೋರಾಟದಲ್ಲಿ ಅರ್ಧಸತ್ಯಗಳು ಹಾಗೂ ಅಧಿಕಾರಿ ವರ್ಗದ ಅಸಹಕಾರ, ಎರಡೂ ಸಮಾನವಾಗಿ ಅಪಾಯಕಾರಿ. ರಾಜಕೀಯ ನಾಯಕರು ಹಾಗೂ ಸಂವಿಧಾನದ ರಕ್ಷಕರಿಂದ ಪಕ್ಷಪಾತ ರಹಿತ ಹಾಗೂ ನಿಜವಾದ ಸಾಂಸ್ಥಿಕ ಸುಧಾರಣೆಯ ಜವಾಬ್ದಾರಿಯನ್ನು ಅಪೇಕ್ಷಿಸುವುದಕ್ಕೆ ಭಾರತದ ಪ್ರಜಾಪ್ರಭುತ್ವಕ್ಕೆ ಎಲ್ಲ ಅಧಿಕಾರವೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.