ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳಲ್ಲಿ ಇನ್ನುಮುಂದೆ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ನಡೆಸುವ ಮಾದರಿಯಲ್ಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಬೇಕು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (ಕೆಎಸ್‌ಇಎಬಿ) ಸರ್ಕಾರಕ್ಕೆ ಶಿಫಾರಸು ಮಾಡಿದೆ. ತೇರ್ಗಡೆಗೆ ಬೇಕಾದ ಅಂಕಗಳ ಪ್ರಮಾಣವನ್ನು 35ರಿಂದ 33ಕ್ಕೆ ಇಳಿಸಬೇಕು ಮತ್ತು ಪ್ರಥಮ ಭಾಷೆಯ ಪ್ರಶ್ನೆಪತ್ರಿಕೆಯನ್ನು 125ರಿಂದ 100 ಅಂಕಗಳಿಗೆ ಇಳಿಸಬೇಕು ಎನ್ನುವುದು ಶಿಫಾರಸಿನ ಮುಖ್ಯ ತಿರುಳು. ‘ಸಿಬಿಎಸ್‌ಇ–ಐಸಿಎಸ್‌ಇಯಲ್ಲಿರುವ ಅಂಕ ನೀಡುವ ವ್ಯವಸ್ಥೆಗೆ ಹೋಲಿಸಿದರೆ ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳು ಈಗಿರುವ ಪರೀಕ್ಷಾ ವ್ಯವಸ್ಥೆಯಲ್ಲಿ ಅನನುಕೂಲ ಎದುರಿಸುವಂತಹ ಸನ್ನಿವೇಶ ಇದೆ. ಈ ಸಮಸ್ಯೆಯನ್ನು ನಿವಾರಿಸಬೇಕು’ ಎಂಬ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒತ್ತಡಕ್ಕೆ ಕೆಎಸ್‌ಇಎಬಿ ಮಣಿದಂತಿದೆ. ಶಿಕ್ಷಣ ಮಂಡಳಿಗಳ ನಡುವಿನ ಪರೀಕ್ಷಾ ವ್ಯವಸ್ಥೆಗಳಲ್ಲಿ ಸಮಾನತೆ ತರಬೇಕು ಎನ್ನುವ ಆಶಯವೇನೋ ಅರ್ಥವಾಗುವಂಥದ್ದೇ. ಆದರೆ, ಆ ಗುರಿ ಸಾಧಿಸಲು ಹಿಡಿದ ಹಾದಿ ನೋಡಿದರೆ ಶೈಕ್ಷಣಿಕ ಗುಣಮಟ್ಟದಲ್ಲೂ ರಾಜಿ ಮಾಡಿಕೊಳ್ಳಲು ಹೊರಟಂತಿದೆ ಎಂಬ ಕಳವಳ ಉಂಟಾಗುತ್ತದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಶೇ 62ಕ್ಕೆ ಕುಸಿದಿದೆ. ಅದರಲ್ಲೂ ಉತ್ತರ ಕರ್ನಾಟಕ ಜಿಲ್ಲೆಗಳ ಸಾಧನೆ ಕಳಪೆಯಾಗಿದೆ. ಇಂತಹ ಸನ್ನಿವೇಶದಲ್ಲಿ ಫಲಿತಾಂಶದ ಸುಧಾರಣೆಗೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎನ್ನುವುದು ನಿರ್ವಿವಾದ. ಆದರೆ, ತೇರ್ಗಡೆಯಾಗಲು ಬೇಕಾಗಿರುವ ಅಂಕಗಳ ಪ್ರಮಾಣವನ್ನು ಇಳಿಕೆ ಮಾಡುವುದಷ್ಟೇ ಅರ್ಥಪೂರ್ಣ ಸುಧಾರಣೆ ಎನಿಸಿಕೊಳ್ಳುವುದಿಲ್ಲ. ಬದಲಾಗಿ, ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ
ಇರುವ ದೋಷಗಳನ್ನು ಮರೆಮಾಚಿಸುವ ನಿಟ್ಟಿನಲ್ಲಿ ಇದೊಂದು ತಂತ್ರದಂತೆ ಭಾಸವಾಗುತ್ತದೆ.
ಫಲಿತಾಂಶ ಸುಧಾರಣೆಯೇ ಕೆಎಸ್‌ಇಎಬಿಯ ನೈಜ ಉದ್ದೇಶವಾಗಿದ್ದರೆ, ಅದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ಶಾಲೆಗಳ ಸಾಧನೆಯತ್ತ ದೃಷ್ಟಿ ಹರಿಸಬೇಕಿತ್ತು. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆಯು ಈ ಶಾಲೆಗಳನ್ನು ನಡೆಸುತ್ತಿದೆ. ಈ ಶಾಲೆಗಳು ಪ್ರತೀ ಪರೀಕ್ಷೆಯಲ್ಲಿ ಸತತವಾಗಿ ಶೇ 90ಕ್ಕಿಂತ ಹೆಚ್ಚಿನ ಫಲಿತಾಂಶವನ್ನು ತರುತ್ತಿವೆ. ಮಾನದಂಡಗಳ ಮಟ್ಟವನ್ನು ಕೆಳಗಿಳಿಸಿ ಮಾಡಿದಂತಹ ಸಾಧನೆಯಲ್ಲ ಈ ಶಾಲೆಗಳದ್ದು. ಬದಲಾಗಿ, ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಎಲ್ಲ ರೀತಿಯ ಬೆಂಬಲ ಒದಗಿಸುವ ಮೂಲಕ, ವಸತಿ ಶಾಲೆಯಲ್ಲಿ ಮೂಲಸೌಕರ್ಯದ ವ್ಯವಸ್ಥೆ ಮಾಡುವ ಮೂಲಕ, ಸೂಕ್ತ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಿಕೊಳ್ಳುವ ಮೂಲಕ, ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತಾ, ನಿರಂತರ ಮೌಲ್ಯಮಾಪನ ಮಾಡುತ್ತಾ ಅವರನ್ನು ತಿದ್ದುವ ಮೂಲಕ ಮಾಡಿದ ಸಾಧನೆ ಇದಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಎಷ್ಟೋ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ದಯನೀಯ ಸ್ಥಿತಿಯಲ್ಲಿದ್ದರೆ, ಶಿಕ್ಷಕರ ಕೊರತೆಯೂ ತೀವ್ರವಾಗಿದೆ. ಹೀಗಾಗಿ 50 ಸಾವಿರ ಅತಿಥಿ ಶಿಕ್ಷಕರನ್ನು ಈ ಶಾಲೆಗಳು ಅವಲಂಬಿಸುವಂತಾಗಿದೆ. ಸುಸ್ಥಿರ ಕಲಿಕಾ ವ್ಯವಸ್ಥೆಯಿಲ್ಲದೆ ಮಕ್ಕಳು ಪರೀಕ್ಷೆಗೆ ಸಮರ್ಪಕವಾಗಿ ತಯಾರಾಗಲು ಸಾಧ್ಯವಿಲ್ಲ. ವಸ್ತುಸ್ಥಿತಿ ಹೀಗಿರುವಾಗ ತೇರ್ಗಡೆಯಾಗಲು ಬೇಕಾದ ಅಂಕಗಳ ಪ್ರಮಾಣವನ್ನು ಕಡಿಮೆ ಮಾಡುವುದು ಸಮಸ್ಯೆಗಳಿಂದಲೇ ಪಲಾಯನ ಮಾಡಿದಂತೆ.
ಫಲಿತಾಂಶ ಸುಧಾರಣೆಗೆ ಸರ್ಕಾರವು ಅಡ್ಡಮಾರ್ಗ ಹಿಡಿಯುವ ಬದಲು ಇಡೀ ಶಿಕ್ಷಣ ವ್ಯವಸ್ಥೆಯನ್ನು ಪರಾಮರ್ಶೆಗೆ ಒಳಪಡಿಸಿ ಲೋಪದೋಷಗಳನ್ನು ಪತ್ತೆ ಮಾಡಬೇಕು. ತೇರ್ಗಡೆ ಪ್ರಮಾಣ ಹೆಚ್ಚಿಸುವ ಸಂಕುಚಿತ ಗುರಿಯ ಬದಲಾಗಿ, ವಿದ್ಯಾರ್ಥಿಗಳು ಕಲಿಕೆಯಲ್ಲಿ –ಅದು ಸರ್ಕಾರಿ ಶಾಲೆಯೇ ಆಗಿರಲಿ ಅಥವಾ ಖಾಸಗಿ ಶಾಲೆಯೇ ಆಗಿರಲಿ– ಹಿಂದೆ ಬೀಳಲು ಕಾರಣವಾದ ಅಂಶಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಪಠ್ಯಕ್ರಮವು ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಮೀರಿದೆಯೇ? ಶಿಕ್ಷಕರಿಗೆ ಸರಿಯಾದ ತರಬೇತಿ ಸಿಕ್ಕಿದೆಯೇ? ಮೂಲ ಪರಿಕಲ್ಪನೆಗಳು ಮಕ್ಕಳಿಗೆ ಅರ್ಥವಾಗುತ್ತಿವೆಯೇ? ಸಾಮಾಜಿಕ–ಆರ್ಥಿಕ ಅಡೆತಡೆ ಮೀರಿ ಕಲಿಕೆಯಲ್ಲಿ ತೊಡಗಲು ಅವರಿಗೆ ಬೆಂಬಲದ ಅಗತ್ಯವಿದೆಯೇ? –ಇವೇ ಮೊದಲಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು. ಮೂಲ ಪರಿಕಲ್ಪನೆಗಳನ್ನು ಸರಿಯಾಗಿ ಅರ್ಥ
ಮಾಡಿಕೊಳ್ಳದ ವಿದ್ಯಾರ್ಥಿಯನ್ನು ತೇರ್ಗಡೆ ಮಾಡಿದರೆ ತಾತ್ಕಾಲಿಕವಾಗಿ ಫಲಿತಾಂಶ ಸುಧಾರಿಸಬಹುದು. ಆದರೆ, ಉನ್ನತ ಶಿಕ್ಷಣದ ಹಂತ ತಲುಪಿದಾಗ ಆ ವಿದ್ಯಾರ್ಥಿಯು ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. ರಾಷ್ಟ್ರೀಯ ಶಿಕ್ಷಣ ಮಂಡಳಿಗಳ ಜೊತೆ ಹೆಜ್ಜೆ ಹಾಕುವುದು ದೋಷಪೂರಿತ ಕ್ರಮ ಎಂದು ಹೇಳಲಾಗದು. ಆದರೆ, ಗುಣಮಟ್ಟದ ಬೋಧನೆ, ಮೂಲಸೌಕರ್ಯ ಒದಗಿಸುವಿಕೆ ಮತ್ತು ವಿದ್ಯಾರ್ಥಿಗಳಿಗೆ ಅಗತ್ಯವಾದ ಬೆಂಬಲದ ಮೂಲಕ ಆ ಪಯಣ ಸಾಗಬೇಕು. ರಾಜ್ಯಕ್ಕೆ ಬೇಕಾಗಿರುವುದು ತೇರ್ಗಡೆಯಾಗಲು ಬೇಕಾದ ಅಂಕಗಳ ಪ್ರಮಾಣ ಕುಗ್ಗಿಸುವ ಕ್ರಮವಲ್ಲ; ಬದಲು, ಶೈಕ್ಷಣಿಕ ಗುಣಮಟ್ಟವನ್ನು ಎತ್ತರಿಸುವ ಕಾರ್ಯ ಜರೂರಾಗಿ ಆಗಬೇಕು. ಕ್ಷಣಿಕ ಪ್ರಯೋಜನಕ್ಕಾಗಿ ದೂರಗಾಮಿ ಪ್ರಗತಿಯಲ್ಲಿ ಮಾರಕವಾಗುವಂತಹ ಅಡ್ಡಮಾರ್ಗ ಹಿಡಿಯುವುದು ಸರಿಯಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.