ADVERTISEMENT

ಸಂಪಾದಕೀಯ | ಆಹಾರ ಪೊಟ್ಟಣಗಳ ಮೇಲೆ ವಿವರ: ಎಫ್‌ಎಸ್‌ಎಸ್‌ಎಐ ಹೊಣೆ ಹೊರಲಿ

ಸಂಪಾದಕೀಯ
Published 22 ಫೆಬ್ರುವರಿ 2026, 23:30 IST
Last Updated 22 ಫೆಬ್ರುವರಿ 2026, 23:30 IST
   
ಆಹಾರ ಪದಾರ್ಥಗಳಲ್ಲಿ ಯಾವೆಲ್ಲ ವಸ್ತುಗಳು ಇವೆ ಎನ್ನುವ ಮಾಹಿತಿ ಪೊಟ್ಟಣಗಳ ಮೇಲೆ ಇರುವುದು ಅಗತ್ಯ. ಈ ವಿಚಾರವಾಗಿ ಸ್ಪಷ್ಟ ನಿಯಮಗಳು ರೂಪುಗೊಳ್ಳಬೇಕು.

ಸಕ್ಕರೆ, ಉಪ್ಪು ಮತ್ತು ಪರ್ಯಾಪ್ತ ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿ ಇರುವ ಎಚ್ಚರಿಕೆಯ ಸಂದೇಶವನ್ನು ಪ್ಯಾಕ್ ಆಗಿರುವ ಆಹಾರದ ಪೊಟ್ಟಣದ ಮುಂಭಾಗದಲ್ಲಿಯೇ ಪ್ರಕಟಿಸುವುದನ್ನು ಕಡ್ಡಾಯಗೊಳಿಸುವ ಪ್ರಸ್ತಾವನೆಯು ಬಹುವರ್ಷಗಳಿಂದ ಚರ್ಚೆಯಲ್ಲಿದೆ. ಈ ವಿಚಾರವಾಗಿ ಅಂತಿಮ ತೀರ್ಮಾನ ಕೈಗೊಳ್ಳಬೇಕಿರುವ ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಶೀಘ್ರವೇ ನಿರ್ಧಾರವೊಂದನ್ನು ಕೈಗೊಳ್ಳಲಾಗುತ್ತದೆ ಎಂಬ ಸೂಚನೆಯನ್ನು ಈ ಹಿಂದೆ ನೀಡಿತ್ತು. ವಿಷಯದ ಬಗ್ಗೆ ವರದಿ ಸಿದ್ಧಪಡಿಸುವಂತೆ ಪ್ರಾಧಿಕಾರವು ಅಹಮದಾಬಾದ್‌ನ ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆಗೆ (ಐಐಎಂ–ಎ) ಸೂಚನೆಯನ್ನೂ ನೀಡಿತ್ತು. ಈ ರೀತಿ ಕಡ್ಡಾಯವಾಗಿ ಎಚ್ಚರಿಕೆಯ ಸಂದೇಶ ಪ್ರಕಟಿಸುವುದರಿಂದ ಜನರಲ್ಲಿ ಆರೋಗ್ಯಕರವಾದ ಆಹಾರ ಸೇವನೆಯ ಅಭ್ಯಾಸ ಬೆಳೆಸಲು ನೆರವಾಗುತ್ತದೆ; ಕೆಲವು ಬಗೆಯ ಕಾಯಿಲೆಗಳನ್ನು ತಡೆಯಲು ಕೂಡ ಸಾಧ್ಯವಾಗುತ್ತದೆ ಎಂದು ಹೇಳಿತ್ತು. ಈ ಬಗೆಯ ಸಂದೇಶ ಪ್ರಕಟಿಸುವುದನ್ನು 2023ರಿಂದ ಐಚ್ಛಿಕವಾಗಿಸಲಾಗುತ್ತದೆ, ನಾಲ್ಕು ವರ್ಷಗಳ ನಂತರದಲ್ಲಿ ಅದನ್ನು ಕಡ್ಡಾಯ ಮಾಡಲಾಗುತ್ತದೆ ಎಂಬ ವರದಿಗಳೂ ಇದ್ದವು. ಈ ವ್ಯವಸ್ಥೆಯ ಅಡಿಯಲ್ಲಿ ಪೌಷ್ಟಿಕಾಂಶಗಳ ಮಾಹಿತಿ ನೀಡುವ, ಎಚ್ಚರಿಕೆಯ ಸಂದೇಶವನ್ನು ನೀಡುವ ಪದ್ಧತಿ ಜಾರಿಗೆ ಬರಬೇಕಿತ್ತು. ಪ್ಯಾಕ್ ಮಾಡಲಾಗಿರುವ ಆಹಾರ ವಸ್ತುಗಳಿಗೆ 0.5ರಿಂದ 5ರವರೆಗೆ ಅಂಕ ನೀಡಬೇಕಾಗಿತ್ತು.

ಆಹಾರದ ಪೊಟ್ಟಣದ ಮುಂಭಾಗದಲ್ಲಿಯೇ ಈ ವಿವರಗಳನ್ನು ಪ್ರಕಟಿಸುವಂತೆ ಮಾಡಲು ಕಾನೂನಿನಲ್ಲಿ ಅಗತ್ಯ ಇರುವ ಬದಲಾವಣೆಗಳು ಏನು ಎಂಬುದರ ಬಗ್ಗೆ ತಿಳಿಸಲು ತಜ್ಞರ ಸಮಿತಿಯೊಂದಕ್ಕೆ ಸುಪ್ರೀಂ ಕೋರ್ಟ್‌ ಕಳೆದ ವರ್ಷ ಸೂಚಿಸಿತ್ತು. ಈಚೆಗೆ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರವೊಂದನ್ನು ಸಲ್ಲಿಸಿರುವ ಎಫ್‌ಎಸ್‌ಎಸ್‌ಎಐ, ಪೊಟ್ಟಣದಲ್ಲಿ ಬರುವ ಆಹಾರ ವಸ್ತುಗಳನ್ನು ವ್ಯವಸ್ಥಿತವಾಗಿ ಗುರುತಿಸುವ–ವರ್ಗೀಕರಿಸುವ ಉದ್ದೇಶ ತನಗಿದೆ ಎಂದು ಹೇಳಿದೆ. ಈ ಬಗೆಯ ಮಾಹಿತಿಯನ್ನು ಗ್ರಾಹಕರು ಯಾವ ಬಗೆಯಲ್ಲಿ ಬಳಸುತ್ತಾರೆ ಎಂಬುದನ್ನು ತಿಳಿಯಲು ಸಮೀಕ್ಷೆ ನಡೆಸುವ, ಆ ಮಾಹಿತಿಯನ್ನು ನೀಡುವ ವಿಚಾರವಾಗಿ ಜಾಗತಿಕ ಮಟ್ಟದಲ್ಲಿ ಯಾವ ಕ್ರಮ ಅನುಸರಿಸಲಾಗುತ್ತಿದೆ ಎಂಬುದನ್ನು ತಿಳಿಯುವ, ಎಂಎಸ್‌ಎಂಇ ವಲಯದ ಉದ್ದಿಮೆಗಳ ಜೊತೆ ಸಮಾಲೋಚನೆ ನಡೆಸುವ ಪ್ರಸ್ತಾವವನ್ನೂ ಪ್ರಾಧಿಕಾರ ಮಾಡಿದೆ. ಆದರೆ ಎಫ್‌ಎಸ್‌ಎಸ್‌ಎಐ ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ನ್ಯಾಯಮೂರ್ತಿಗಳಾದ ಎ.ಬಿ. ಪಾರ್ದೀವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರು ಇರುವ ವಿಭಾಗೀಯ ಪೀಠವು ‘‍ಪ್ರಾಧಿಕಾರವು ಬಹುರಾಷ್ಟ್ರೀಯ ಕಂಪನಿಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ, ದೇಶದ ಜನರ ಆರೋಗ್ಯದ ಹಕ್ಕಿನ ಬಗ್ಗೆ ಆಲೋಚಿಸಬೇಕು’ ಎಂದು ಹೇಳಿದೆ. ಸಲಹೆಗಳನ್ನು ಅನುಷ್ಠಾನಕ್ಕೆ ತರುವುದರ ಬಗ್ಗೆ ಆಲೋಚಿಸಿ, ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಪೀಠವು ಪ್ರಾಧಿಕಾರಕ್ಕೆ ಸೂಚಿಸಿದೆ. ಪೊಟ್ಟಣದಲ್ಲಿ ಇರುವ ಎಲ್ಲ ಆಹಾರ ವಸ್ತುಗಳ ವಿಚಾರದಲ್ಲಿ, ಪೊಟ್ಟಣದ ಮುಂಭಾಗದಲ್ಲಿಯೇ ಎಚ್ಚರಿಕೆಯ ಸಂದೇಶವನ್ನು ಪ್ರಕಟಿಸಬೇಕು ಎಂಬ ಮನವಿ ಇರುವ ಅರ್ಜಿಗಳ ವಿಚಾರಣೆ ನಡೆಸಿದ ಪೀಠವು ಈ ಸೂಚನೆ ನೀಡಿದೆ. ಪೊಟ್ಟಣದ ಮೇಲೆ ಅಂಕಗಳನ್ನು ‍ಪ್ರಕಟಿಸುವುದನ್ನು ಅರ್ಜಿದಾರರು ವಿರೋಧಿಸಿದ್ದಾರೆ. ಈ ರೀತಿ ಅಂಕಗಳನ್ನು ಪ್ರಕಟಿಸುವುದರಿಂದ ಸಕ್ಕರೆ, ಉಪ್ಪು ಮತ್ತು ಪರ್ಯಾ‍ಪ್ತ ಕೊಬ್ಬಿನ ಮಟ್ಟ ಅತಿಯಾಗಿರುವ ವಿಚಾರ ಗ್ರಾಹಕರಿಗೆ ಸ್ಪಷ್ಟವಾಗಿ ಗೊತ್ತಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳು ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿರುವ ಸಂದರ್ಭದಲ್ಲಿ ಈ ಬಗೆಯಲ್ಲಿ ಆಹಾರದ ಬಗ್ಗೆ ಕೆಲವು ಅಗತ್ಯ ಮಾಹಿತಿಗಳನ್ನು ಒದಗಿಸುವುದು ಮುಖ್ಯವಾಗುತ್ತದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 11ಕ್ಕೂ ಹೆಚ್ಚಿನವರಿಗೆ ಮಧುಮೇಹದ ಸಮಸ್ಯೆ ಇದೆ. ಜಗತ್ತಿನ ಮಧುಮೇಹದ ರಾಜಧಾನಿ ಎಂಬ ಅಪಖ್ಯಾತಿಗೆ ಭಾರತ ಪಾತ್ರವಾಗಿದೆ. ಅತಿಯಾದ ಉದ್ವೇಗ, ಬೊಜ್ಜು, ಅತಿಯಾದ ಕೊಬ್ಬಿನ ಸಮಸ್ಯೆ ಕೂಡ ವ್ಯಾಪಕವಾಗಿದೆ. ಪ್ಯಾಕ್‌ ಮಾಡಿರುವ ಆಹಾರದಲ್ಲಿ ಬಳಕೆಯಾಗಿರುವ ಪದಾರ್ಥಗಳ ಬಗ್ಗೆ, ಅತಿಯಾಗಿ ಸಂಸ್ಕರಿಸಲಾಗಿರುವ ಆಹಾರದಲ್ಲಿ ಬಳಸಲಾಗಿರುವ ಪದಾರ್ಥಗಳ ಬಗ್ಗೆ ಜನರಿಗೆ ಸರಿಯಾಗಿ ಮಾಹಿತಿ ಒದಗಿಸಬೇಕು, ಎಚ್ಚರಿಕೆಯ ಸಂದೇಶ ನೀಡಬೇಕು. ಜನರಿಗೆ ಇಂತಹ ಆಹಾರ ವಸ್ತುಗಳ ಬದಲು ಆರೋಗ್ಯಕರವಾದ ಪರ್ಯಾಯ ಆಯ್ಕೆಗಳು ಬೇಕು. ಆಹಾರ ವಸ್ತುಗಳ ಬಗ್ಗೆ ನೀಡುವ ಮಾಹಿತಿಯು ವಿವರವಾಗಿರಬೇಕು, ಎಲ್ಲ ಅಂಶಗಳನ್ನೂ ಒಳಗೊಂಡಿರಬೇಕು. ಈ ವಿಚಾರವಾಗಿ ನಿಯಮಗಳನ್ನು ರೂಪಿಸಿ, ಅವುಗಳನ್ನು ಅನುಷ್ಠಾನಕ್ಕೆ ತರುವ ಹೊಣೆಯು ಎಫ್‌ಎಸ್‌ಎಸ್‌ಎಐ ಮೇಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.