ADVERTISEMENT

ಸಂಪಾದಕೀಯ | ಜಿಎಸ್‌ಟಿ ಪದ್ಧತಿಯಲ್ಲಿ ಬದಲಾವಣೆ: ರಾಜ್ಯಗಳಿಗೆ ಅನ್ಯಾಯ ಆಗದಿರಲಿ

ಸಂಪಾದಕೀಯ
Published 2 ಸೆಪ್ಟೆಂಬರ್ 2025, 23:30 IST
Last Updated 2 ಸೆಪ್ಟೆಂಬರ್ 2025, 23:30 IST
.
.   

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿಯು 2017ರಲ್ಲಿ ಜಾರಿಗೊಂಡಾಗ, ದೇಶದಲ್ಲಿ ಏಕರೂಪದ ತೆರಿಗೆ ವ್ಯವಸ್ಥೆಯ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿತ್ತು. ಆದರೆ, ಜಿಎಸ್‌ಟಿ ಜಾರಿಯಿಂದಾಗಿ ರಾಜ್ಯಗಳು ತೆರಿಗೆ ಸಂಗ್ರಹದಲ್ಲಿನ ತಮ್ಮ ಪಾಲು ಪಡೆಯಲು ಕೇಂದ್ರವನ್ನು ಅವಲಂಬಿಸುವಂತಾಯಿತು. ರಾಜ್ಯಗಳ ಆದಾಯದಲ್ಲಿನ ಸಂಭಾವ್ಯ ನಷ್ಟ ತಪ್ಪಿಸಲಿಕ್ಕಾಗಿ ಕೇಂದ್ರ ಸರ್ಕಾರ ಪರಿಚಯಿಸಿದ್ದ ವಿಶೇಷ ಪರಿಹಾರ ಯೋಜನೆಯು 2022ರ ಜೂನ್‌ನಲ್ಲಿ ಕೊನೆಗೊಂಡಿತ್ತು. ಬಳಿಕ ಇದನ್ನು 2026ರ ಮಾರ್ಚ್‌ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಈಗ ಜಿಎಸ್‌ಟಿ ತೆರಿಗೆ ಹಂತಗಳನ್ನು ಕೇಂದ್ರ ಸರ್ಕಾರ ಪರಿಷ್ಕರಿಸುತ್ತಿದ್ದು, ಶೇ 5 ಮತ್ತು ಶೇ 18ರ ಎರಡು ಹಂತಗಳಲ್ಲಿ ಸರಕುಗಳನ್ನು ಗುರ್ತಿಸಲು ಉದ್ದೇಶಿಸಿದೆ. ಈ ಪರಿಷ್ಕಾರದಿಂದ ದೊಡ್ಡ ಪ್ರಮಾಣದ ನಷ್ಟ ಉಂಟಾಗುತ್ತದೆನ್ನುವ ಆತಂಕವನ್ನು ರಾಜ್ಯಗಳು ವ್ಯಕ್ತಪಡಿಸಿವೆ. ಈ ಆತಂಕದ ಕಾರಣದಿಂದಾಗಿಯೇ, ರಾಜ್ಯಗಳ ಹಣಕಾಸಿನ ಹಿತಾಸಕ್ತಿ ರಕ್ಷಣೆಗಾಗಿ ಐದು ವರ್ಷಗಳ ವಿಶೇಷ ಪರಿಹಾರ ಯೋಜನೆಯನ್ನು ಹೊಸತಾಗಿ ರೂಪಿಸಬೇಕೆಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ವರಮಾನ ನಷ್ಟವಾಗುತ್ತದೆನ್ನುವ ರಾಜ್ಯಗಳ ಆತಂಕ ನಿರಾಧಾರವಾದುದೇನೂ ಅಲ್ಲ. ಕೋವಿಡ್ ಸೋಂಕು ತೀವ್ರವಾಗಿದ್ದ ಸಮಯದಲ್ಲಿ ರಾಜ್ಯಗಳ ಜಿಎಸ್‌ಟಿ ಪಾಲನ್ನು ವರ್ಗಾಯಿಸಲು ಕೇಂದ್ರ ಸರ್ಕಾರ ವಿಳಂಬ ಮಾಡಿದುದರಿಂದ ಹಲವು ರಾಜ್ಯಗಳು ತೀವ್ರ ಸಂಕಷ್ಟಕ್ಕೊಳಗಾದವು ಹಾಗೂ ಹೆಚ್ಚಿನ ಸಾಲವನ್ನು ಪಡೆಯಬೇಕಾದ ಅನಿವಾರ್ಯತೆಗೆ ಸಿಲುಕಿದವು.

ಕರ್ನಾಟಕದಲ್ಲಿನ ಆರ್ಥಿಕ ಬಿಕ್ಕಟ್ಟಿಗೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳು ಕಾರಣವೇ ಹೊರತು, ಜಿಎಸ್‌ಟಿ ಪದ್ಧತಿಯಲ್ಲ ಎಂದು ಬಿಜೆಪಿ ಹೇಳುತ್ತಿದೆ. ಭಾರತದ ಮಹಾಲೇಖಪಾಲರ (ಸಿಎಜಿ) ವರದಿ ಕೂಡ ಕಲ್ಯಾಣ ಕಾರ್ಯಕ್ರಮಗಳು ರಾಜ್ಯದ ಆರ್ಥಿಕತೆಗೆ ಹೊರೆಯಾಗಿ ಪರಿಣಮಿಸಿವೆ ಎಂದಿದೆ. ಇದಕ್ಕೆ ಪ್ರತಿಯಾಗಿ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ನಿರ್ಣಯಗಳನ್ನು ಪ್ರಸಕ್ತ‌ ಹಣಕಾಸಿನ ಬಿಕ್ಕಟ್ಟಿಗೆ ಕಾಂಗ್ರೆಸ್ ಗುರಿಯಾಗಿಸುತ್ತಿದೆ. ಆಯವ್ಯಯದಲ್ಲಿ ಅವಕಾಶ ಕಲ್ಪಿಸದೆ ₹2.7 ಲಕ್ಷ ಕೋಟಿ ಮೊತ್ತದ ಯೋಜನೆಗಳನ್ನು ಹಿಂದಿನ ಸರ್ಕಾರ ಜಾರಿಗೊಳಿಸಿತ್ತು ಹಾಗೂ ₹35 ಸಾವಿರ ಕೋಟಿ ಮೊತ್ತದ ಕಾಮಗಾರಿಗಳ ಬಿಲ್‌ಗಳನ್ನು ಬಾಕಿಯುಳಿಸಿತ್ತು; ಆ ಹೊರೆ ನಮ್ಮ ಸರ್ಕಾರದ ಮೇಲೆ ಬಿದ್ದಿದೆ ಎಂದು ಕಾಂಗ್ರೆಸ್ ಹೇಳಿದೆ. ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಕೊಳ್ಳುವ ಶಕ್ತಿ ಹೆಚ್ಚಿಸಿವೆ; ಜಿಎಸ್‌ಟಿ ಸಂಗ್ರಹ ಉತ್ತಮಗೊಳ್ಳಲು ಕಾರಣವಾಗಿವೆ ಎಂದೂ ಸಿದ್ದರಾಮಯ್ಯ ಸರ್ಕಾರ ಹೇಳಿಕೊಂಡಿದೆ. ತಲಾ ಆದಾಯದಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿರುವುದಕ್ಕೆ ಸರ್ಕಾರದ‌ ಕಲ್ಯಾಣ ಕಾರ್ಯಕ್ರಮಗಳೂ ಕಾರಣವಾಗಿವೆ ಎನ್ನಲಾಗಿದೆ. ಜಿಎಸ್‌ಟಿ ವ್ಯವಸ್ಥೆಯಲ್ಲಿನ ತೆರಿಗೆ ಹಂತಗಳನ್ನು ಕಡಿಮೆ ಮಾಡುವುದರಿಂದ ಮುಂದಿನ ಐದು ವರ್ಷಗಳ ಅವಧಿಯಲ್ಲಿ ₹90 ಸಾವಿರ ಕೋಟಿ ನಷ್ಟ ಆಗಬಹುದೆಂದು ರಾಜ್ಯ ಸರ್ಕಾರ ಅಂದಾಜಿಸಿದೆ. 15ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ₹5,495 ಕೋಟಿ ವಿಶೇಷ ಅನುದಾನ ನೀಡಲು ಶಿಫಾರಸು ಮಾಡಿತ್ತು. ಇದನ್ನು ಕೇಂದ್ರ ಸರ್ಕಾರ ಪುರಸ್ಕರಿಸಿಲ್ಲ. ದೇಶದ ಜಿಡಿಪಿಗೆ
ಶೇ 8.7ರಷ್ಟು ಕೊಡುಗೆ ನೀಡುವ ರಾಜ್ಯಕ್ಕೆ ಆಗಿರುವ ಅನ್ಯಾಯ ಸ್ಪಷ್ಟವಾಗಿ ಗೋಚರಿಸುವಂತಿದೆ. ಜಿಎಸ್‌ಟಿಯ ಪರಿಷ್ಕೃತ ತೆರಿಗೆ ಹಂತ ಜಾರಿಗೆ ಬಂದರೆ ರಾಜ್ಯಕ್ಕೆ ವಾರ್ಷಿಕ ಕನಿಷ್ಠ ₹15 ಸಾವಿರ ವರಮಾನ ಖೋತಾ ಆಗಲಿದ್ದು, ಅದನ್ನು ಕೇಂದ್ರ ತುಂಬಿ ಕೊಡಬೇಕು ಎಂಬುದು ರಾಜ್ಯದ ಬೇಡಿಕೆಯಾಗಿದೆ.

ರಾಜ್ಯಗಳ ಹಿತಾಸಕ್ತಿ ರಕ್ಷಣೆಗಾಗಿ ಕೇಂದ್ರ ಸರ್ಕಾರ ಸಮತೋಲಿತ ತೆರಿಗೆ ನೀತಿಯನ್ನು ರೂಪಿಸುವುದು ಅಗತ್ಯ. ರಾಷ್ಟ್ರದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುವ ರಾಜ್ಯಗಳು ಶಿಕ್ಷೆ ಅನುಭವಿಸುವಂತೆ ಕೇಂದ್ರದ ನೀತಿ ಇರಬಾರದು. ಸಾಮಾಜಿಕ ನ್ಯಾಯ ಮಹತ್ವದ್ದಾಗಿದ್ದು, ಬಡ ರಾಜ್ಯಗಳನ್ನು ಬೆಂಬಲಿಸುವುದೂ ಅಗತ್ಯವಾಗಿದೆ. ಆದರೆ, ಈ ಬೆಂಬಲ, ಕಠಿಣ ಶ್ರಮ ಹಾಗೂ ಉತ್ತಮ ನಿರ್ವಹಣೆಯ ರಾಜ್ಯಗಳಿಗೆ ದಂಡ ವಿಧಿಸುವಂತೆ ಇರಬಾರದು. ತೆರಿಗೆ ಸಂಗ್ರಹದಲ್ಲಿ ಉತ್ತಮ ನಿರ್ವಹಣೆ ತೋರದ ರಾಜ್ಯಗಳಿಗೂ ಉತ್ತರದಾಯಿತ್ವ ಇರುವುದು ಅಪೇಕ್ಷಣೀಯ ಹಾಗೂ ಆ ರಾಜ್ಯಗಳು ನಿರಂತರವಾಗಿ ಇತರ ರಾಜ್ಯಗಳನ್ನು ಅವಲಂಬಿಸುವಂತೆ ಆಗಬಾರದು. ರಾಜ್ಯದ ಸಂಸದರು, ಮುಖ್ಯವಾಗಿ ಬಿಜೆಪಿ ಸಂಸದರು, ಜಿಎಸ್‌ಟಿ ಸಂಗ್ರಹದಲ್ಲಿನ ನ್ಯಾಯಬದ್ಧ ಪಾಲು ಕರ್ನಾಟಕಕ್ಕೆ ದೊರಕುವಂತೆ ಮಾಡಲು ಧ್ವನಿ ಎತ್ತಬೇಕಾಗಿದೆ; ಜಿಎಸ್‌ಟಿ ತೆರಿಗೆ ಹಂತಗಳ ಪರಿಷ್ಕರಣೆಯಿಂದ ರಾಜ್ಯಕ್ಕೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕಾಗಿದೆ. ಆರ್ಥಿಕ ಒಕ್ಕೂಟ ವ್ಯವಸ್ಥೆಯನ್ನು ರಕ್ಷಿಸುವುದು ರಾಜ್ಯವೊಂದರ‌ ಹಕ್ಕೊತ್ತಾಯ ಮಾತ್ರವಲ್ಲ; ಅದು, ಕೇಂದ್ರ ಸರ್ಕಾರ ನಿರ್ವಹಿಸಲೇಬೇಕಾದ ಸಾಂವಿಧಾನಾತ್ಮಕ ಕರ್ತವ್ಯವೂ ಆಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.