ADVERTISEMENT

ಸಂಪಾದಕೀಯ: ಗೃಹ ಸಚಿವರ ಸಂವೇದನಾರಹಿತ ಮಾತು ಖಂಡನಾರ್ಹ

ಕೋಮು ಸೌಹಾರ್ದ ಕದಡುವ ಮಾತಿಗೆ ಕಡಿವಾಣ ಬೀಳಲಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 19:31 IST
Last Updated 7 ಏಪ್ರಿಲ್ 2022, 19:31 IST
   

ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮತ್ತೆ ನಗೆಪಾಟಲಿಗೆ ಈಡಾಗಿದ್ದಾರೆ. ನಾಲಗೆಯನ್ನು ಬೇಕಾಬಿಟ್ಟಿಯಾಗಿ ಹರಿಯಬಿಟ್ಟು ಟೀಕೆಗೆ ಗುರಿಯಾಗಿದ್ದಾರೆ. ಬೆಂಗಳೂರಿನ ಜಗಜೀವನರಾಮ್‌ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಚಂದ್ರಶೇಖರ್‌ ಕೊಲೆಗೆ ಸಂಬಂಧಿಸಿದಂತೆ ಅಜ್ಞಾನದ ಮಾತುಗಳನ್ನು ಆಡಿ ಪೇಚಿಗೆ ಸಿಲುಕಿದ್ದಾರೆ. ಅವರ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾದ ನಂತರ ತಪ್ಪು ಒಪ್ಪಿಕೊಂಡು ಮಾತು ಬದಲಿಸಿದ್ದಾರೆ. ಗೃಹ ಸಚಿವರ ಹೇಳಿಕೆ ವಿವೇಚನೆಯಿಂದ ಕೂಡಿದ್ದಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ವ್ಯಕ್ತಿ ಹೊಣೆ ಮರೆತು ಮಾತನಾಡುವುದು ತೀರಾ ವಿಷಾದಕರ. ಗೃಹ ಸಚಿವರು ಯಾವುದೇ ಮಾತು ಆಡುವಾಗ ಎಚ್ಚರಿಕೆಯಿಂದ ಇರಬೇಕು. ಎಚ್ಚರಿಕೆಯಿಂದ ಇರಬೇಕು ಎಂಬ ಮಾತನ್ನು ಬೇರೆಯವರಿಂದ ಹೇಳಿಸಿಕೊಳ್ಳುವ ಪರಿಸ್ಥಿತಿಯನ್ನು ಸೃಷ್ಟಿಸಿಕೊಳ್ಳಬಾರದು. ಅದರಲ್ಲೂ, ರಾಜ್ಯದಲ್ಲಿ ಈಗ ಕೋಮುಸೂಕ್ಷ್ಮ ಪರಿಸ್ಥಿತಿ ಇರುವುದು ಮೇಲ್ನೋಟಕ್ಕೇ ಗೊತ್ತಾಗುವಂತೆ ಇದೆ. ಇಂತಹ ಸಂದರ್ಭದಲ್ಲಿ, ಕೋಮು ಸೌಹಾರ್ದಕ್ಕೆ ಧಕ್ಕೆ ತರುವಂತಹ ಮತ್ತು ಸತ್ಯಕ್ಕೆ ದೂರವಾದ ಮಾತುಗಳನ್ನು ಗೃಹ ಸಚಿವರೇ ಆಡುವುದು ವಿಪರ್ಯಾಸ. ಕೋಮು ಸಾಮರಸ್ಯ ಕದಡುವಂತಹ ವಿದ್ಯಮಾನಗಳು ರಾಜ್ಯದಲ್ಲಿ ಒಂದರ ನಂತರ ಮತ್ತೊಂದು ಘಟಿಸುತ್ತಿವೆ.ಹಿಜಾಬ್ ವಿವಾದದಿಂದ ಆರಂಭವಾದ ಇಂತಹ ಬೆಳವಣಿಗೆಯು ಹಲಾಲ್, ಜಾತ್ರೆ–ಹಬ್ಬಗಳಲ್ಲಿ ಮುಸ್ಲಿಂ ವರ್ತಕರಿಗೆ ಬಹಿಷ್ಕಾರ, ಮಸೀದಿ ಧ್ವನಿವರ್ಧಕಗಳ ಬಳಕೆಗೆ ತಕರಾರು, ಮಾವಿನಹಣ್ಣು ಖರೀದಿ ಮುಂತಾದ ವಿಷಯಗಳ ಮೂಲಕ ಹೊಸ ಹೊಸ ರೂಪ ಪಡೆಯುತ್ತಿದೆ. ಇಂತಹ ಹೊತ್ತಿನಲ್ಲಿ ಗೃಹ ಸಚಿವರು ಕೋಮು ದ್ವೇಷಕ್ಕೆ ಕುಮ್ಮಕ್ಕು ಕೊಡುವ ರೀತಿಯಲ್ಲಿ ಮಾತನಾಡಿದ್ದು ಅಕ್ಷಮ್ಯ. ರಾಜ್ಯದಲ್ಲಿ ಕಾನೂನು–ಸುವ್ಯವಸ್ಥೆಗೆ ಸಂಬಂಧಿಸಿದಂತೆ ಯಾವುದೇ ಪ್ರಮುಖ ಘಟನೆ ನಡೆದರೂ ಗೃಹ ಸಚಿವರಿಗೆ ಅದರ ಸಂಪೂರ್ಣ ಮಾಹಿತಿ ಸಿಗುತ್ತದೆ. ಗೃಹ ಸಚಿವರು ಯಾವುದೇ ಮಾಹಿತಿಯನ್ನು ಪೊಲೀಸರಿಂದ ಪಡೆಯಬೇಕೇ ವಿನಾ ಬೇರೆ ಮೂಲಗಳಿಂದ ಅಲ್ಲ. ಬೇರೆ ಮೂಲಗಳಿಂದ ಮಾಹಿತಿ ಬಂದರೂ ಅದನ್ನು ಪೊಲೀಸರ ಜೊತೆ ಚರ್ಚಿಸಿ ನಿಜವಾದ ಮಾಹಿತಿಯನ್ನು ಪಡೆದುಕೊಂಡು ಪ್ರತಿಕ್ರಿಯೆ ನೀಡಬೇಕು. ಜವಾಬ್ದಾರಿಯುತ ಸಚಿವರ ಕರ್ತವ್ಯ ಇದು. ಆದರೆ ಆರಗ ಜ್ಞಾನೇಂದ್ರ ಅವರು ಹಾಗೆ ನಡೆದುಕೊಳ್ಳಲಿಲ್ಲ. ಇದು ರಾಜ್ಯದ ದೌರ್ಭಾಗ್ಯ. ‘ಉರ್ದು ಮಾತನಾಡಲು ಬರಲ್ಲ ಎಂಬ ಕಾರಣಕ್ಕೆ ಚಂದ್ರು ಅವರನ್ನು ಚೂರಿಯಿಂದ ಚುಚ್ಚಿ ಚುಚ್ಚಿ ಕೊಲ್ಲಲಾಗಿದೆ’ ಎಂದು ಹೇಳುವ ಮೂಲಕ ಕೋಮು ಸೌಹಾರ್ದ ಹದಗೆಡಿಸುವುದರ ಜೊತೆಗೆ ಭಾಷಾ ವಿವಾದಕ್ಕೂ ಕಾರಣವಾಗುವಂತಹ ಹೇಳಿಕೆಯನ್ನು ಸಚಿವರು ನೀಡಿದ್ದರು. ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಚಂದ್ರಶೇಖರ್‌ ಕೊಲೆಯ ಬಗ್ಗೆ ಸ್ಪಷ್ಟನೆ ನೀಡಿದ ನಂತರ ಗೃಹ ಸಚಿವರು ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ.

ಜ್ಞಾನೇಂದ್ರ ಅವರು ಹೀಗೆ ಅಪ್ರಬುದ್ಧವಾಗಿ ನಾಲಗೆ ಹರಿಯಬಿಟ್ಟಿರುವುದು ಇದೇ ಮೊದಲು ಅಲ್ಲ. ಈ ಹಿಂದೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಒಬ್ಬ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಸಂದರ್ಭದಲ್ಲಿಯೂ ಗೃಹ ಸಚಿವರು ಇದೇ ರೀತಿ ಸಂವೇದನಾರಹಿತ ಹೇಳಿಕೆ ನೀಡಿದ್ದರು.ನಿರ್ಜನ ಪ್ರದೇಶಕ್ಕೆ ಯುವತಿ–ಯುವಕ ರಾತ್ರಿ 7.30ರ ಸಮಯದಲ್ಲಿ ಹೋಗಬಾರದಿತ್ತು ಎಂದು ಗೃಹ ಸಚಿವರು ಹೇಳಿದ್ದರು.ಅಪರಾಧ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸುವುದನ್ನು ಬಿಟ್ಟು ಯುವತಿಯದ್ದೇ ತಪ್ಪು ಎಂಬರ್ಥದ ಮಾತುಗಳನ್ನು ಆಡಿದ್ದರು. ಆಗಲೂ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಇಂತಹ ಎಡವಟ್ಟುಗಳನ್ನು ಗೃಹ ಸಚಿವರು ಪದೇ ಪದೇ ಮಾಡುತ್ತಿದ್ದರೂ ಅವುಗಳನ್ನು ಮುಖ್ಯಮಂತ್ರಿ ಹೇಗೆ ಸಹಿಸಿಕೊಂಡಿದ್ದಾರೆ? ಗೃಹ ಸಚಿವರ ಅಪ್ರಬುದ್ಧ ನಡೆಯ ಬಗ್ಗೆ ಮುಖ್ಯಮಂತ್ರಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಬೇಜವಾಬ್ದಾರಿಯಿಂದ ನಡೆದುಕೊಂಡ ಸಚಿವರ ಕಿವಿ ಹಿಂಡಿ ಬುದ್ಧಿ ಹೇಳಬೇಕಾದ ಮುಖ್ಯಮಂತ್ರಿ ಸುಮ್ಮನಿರುವುದು ಸರಿಯಲ್ಲ. ಸಚಿವರ ನಡವಳಿಕೆಯನ್ನು ಆಡಳಿತಾರೂಢ ಬಿಜೆಪಿಯ ಕೆಲವು ಮುಖಂಡರು ಬೆಂಬಲಿಸುತ್ತಿರುವುದಂತೂ ಅಕ್ಷಮ್ಯ. ಪೊಲೀಸ್ ಕಮಿಷನರ್ ಸ್ಪಷ್ಟನೆ ನೀಡಿದ ನಂತರವೂ ‘ಚಂದ್ರು ಹತ್ಯೆ ಉರ್ದು ಭಾಷೆ ಬಾರದಿರುವ ಕಾರಣಕ್ಕೇ ನಡೆದಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಪಕ್ಷದ ಮುಖಂಡರ ಮತ್ತು ಸಂಪುಟ ಸಹೋದ್ಯೋಗಿಗಳ ಹದ್ದುಮೀರಿದ ಹೇಳಿಕೆಗಳನ್ನು ಕೇಳಿಸಿಕೊಂಡು ಸುಮ್ಮನಿರುವುದು ಮುಖ್ಯಮಂತ್ರಿ ಅವರಿಗೆ ಶೋಭೆ ತರುವುದಿಲ್ಲ. ಬೇಕಾಬಿಟ್ಟಿ ಹೇಳಿಕೆ ನೀಡುವುದನ್ನು ನಿಯಂತ್ರಿಸುವುದು ಅವರ ಹೊಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT