ADVERTISEMENT

ಸಂಪಾದಕೀಯ: ಭಾರತ–ಚೀನಾ ಮಾತುಕತೆ ಎಚ್ಚರಿಕೆಯೊಂದಿಗೆ ಆಶಾವಾದ

ಸಂಪಾದಕೀಯ
Published 1 ಸೆಪ್ಟೆಂಬರ್ 2025, 23:30 IST
Last Updated 1 ಸೆಪ್ಟೆಂಬರ್ 2025, 23:30 IST
   

ವಿವಿಧ ದೇಶಗಳ ನಡುವಿನ ಸಂಬಂಧದಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ. ಭಾರತ ಮತ್ತು ಚೀನಾ ನಡುವಿನ ಸಂಬಂಧಕ್ಕೂ ಈ ಮಾತು ಅನ್ವಯವಾಗುತ್ತಿದೆ. ಭಾರತ ಮತ್ತು ಚೀನಾ ನಡುವಿನ ಹೊಸ ಸ್ನೇಹಬಂಧವು ಶಾಂಘೈನಲ್ಲಿ ಹಾಗೂ ತಿಯಾನ್‌ಜಿನ್‌ನಲ್ಲಿ ಕಳೆದ ಕೆಲವು ದಿನಗಳಲ್ಲಿ ಕಂಡುಬಂದಿದೆ. ಈಗ ಕಾಣಿಸುತ್ತಿರುವ ಬದಲಾವಣೆಗಳು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ನಡುವೆ ಹಸ್ತಲಾಘವದ ಹಂತದಲ್ಲಿ ಮಾತ್ರವೇ ಇವೆ. ಬದಲಾವಣೆಯ ಗಾಳಿ ಬೀಸಲು ಕಾರಣವಾಗಿ ಒದಗಿಬಂದಿದ್ದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಆರಂಭಿಸಿದ ಸುಂಕ ಸಮರ. ಭಾರತ ಮತ್ತು ಚೀನಾ ನಡುವಿನ ಸಂಬಂಧವು ಬಹಳ ಪುರಾತನವಾದುದು, ಅದು ನಾಗರಿಕತೆಗಳ ನಡುವಿನ ಸಂಬಂಧ ಎಂದು ಹೇಳಲಾಗುತ್ತದೆಯಾದರೂ, ಆಧುನಿಕ ಕಾಲಘಟ್ಟದಲ್ಲಿ ಈ ಸಂಬಂಧವು ಹಲವಾರು ಏರಿಳಿತಗಳನ್ನು ಕಂಡಿದೆ. ಗಾಲ್ವನ್‌ ಕಣಿವೆಯಲ್ಲಿ ಎರಡೂ ದೇಶಗಳ ಯೋಧರ ನಡುವೆ ನಡೆದ ಸಂಘರ್ಷ, ಸಿಂಧೂರ ಕಾರ್ಯಾಚರಣೆ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಚೀನಾ ಬೆಂಬಲ ನೀಡಿದ್ದುದು, ಜಾಗತಿಕ ವೇದಿಕೆಗಳಲ್ಲಿ ಭಾರತದ ವಿರುದ್ಧ ಚೀನಾ ಅಭಿಯಾನ ನಡೆಸಿರುವುದು... ಇವೆಲ್ಲವೂ ಬಹುಶ್ರುತ. ಆದರೆ ಇದೇ ಸಂದರ್ಭದಲ್ಲಿ ಹವಾಮಾನ ಬದಲಾವಣೆ ಕುರಿತ ಮಾತುಕತೆಗಳಲ್ಲಿ ಎರಡೂ ದೇಶಗಳ ನಡುವೆ ಸಹಕಾರ ಇದೆ. ಭಾರತ–ಚೀನಾ ನಡುವಿನ ಸಂಬಂಧವನ್ನು ಉತ್ತಮಪಡಿಸುವ ಯತ್ನವು ಟ್ರಂಪ್ ಅವರ ಸುಂಕ ಸಮರಕ್ಕೂ ಮೊದಲೇ ಶುರುವಾಗಿರಬಹುದು. ಬಹುಶಃ, ಕಾಜನ್‌ನಲ್ಲಿ ಕಳೆದ ವರ್ಷ ನಡೆದ ಬ್ರಿಕ್ಸ್ ದೇಶಗಳ ಶೃಂಗಸಭೆಯ ಸಂದರ್ಭದಲ್ಲಿ ಆ ಯತ್ನಗಳು ನಡೆದಿರಬಹುದು. ವಿಶ್ವದ ಎರಡು ಅತ್ಯಂತ ಜನನಿಬಿಡ ದೇಶಗಳ ನಡುವೆ ಇನ್ನಷ್ಟು ಉತ್ತಮವಾದ ಸಂಬಂಧದ ಅಗತ್ಯ ಇದೆ ಎಂಬುದು ಆಗ ಅನ್ನಿಸಿದ್ದಿರಬಹುದು.

ಪರಸ್ಪರ ಸಹಕಾರ ಮತ್ತು ಪರಸ್ಪರರನ್ನು ಅರ್ಥ ಮಾಡಿಕೊಳ್ಳುವ ಕೆಲಸ ಆಗಬೇಕು ಎಂಬ ಸಂದೇಶವನ್ನು ಎರಡೂ ದೇಶಗಳ ನಾಯಕರು ರವಾನಿಸಿದ್ದಾರೆ. ಚೀನಾ ಜೊತೆಗಿನ ಸಂಬಂಧವನ್ನು ಬಲಪಡಿಸುವ ಬಯಕೆ ಭಾರತಕ್ಕೆ ಇದೆ ಎಂದು ಮೋದಿ ಅವರು ಹೇಳಿದ್ದಾರೆ. ಭಾರತ ಮತ್ತು ಚೀನಾ ಪಾಲುದಾರರೇ ವಿನಾ ಎದುರಾಳಿಗಳಲ್ಲ ಎಂದು ಜಿನ್‌ಪಿಂಗ್ ಅವರು ಹೇಳಿದ್ದಾರೆ. ಇಬ್ಬರೂ ಜೊತೆಯಾಗಿ ಕೆಲಸ ಮಾಡುವುದೇ ಸರಿಯಾದ ಆಯ್ಕೆ ಎಂದು ತಾವು ಭಾವಿಸಿರುವುದಾಗಿಯೂ ಜಿನ್‌ಪಿಂಗ್ ಹೇಳಿದ್ದಾರೆ. ವ್ಯಾಪಾರ ಹಾಗೂ ಹೂಡಿಕೆ ಒಪ್ಪಂದಗಳನ್ನು ಬಲಪಡಿಸಲು ಎರಡೂ ದೇಶಗಳು ಈಗ ಸಹಮತ ವ್ಯಕ್ತಪಡಿಸಿವೆ. ಭಾರತವು ಸಂಬಂಧದಲ್ಲಿ ಸುಧಾರಣೆ ತರಲು ಈಗ ಯತ್ನಿಸುತ್ತಿರುವುದಕ್ಕೆ ಇದೇ ಮುಖ್ಯ ಕಾರಣವಾಗಿರುವಂತಿದೆ. ಸಂಬಂಧವು ಸುಧಾರಣೆ ಕಂಡಲ್ಲಿ, ಜಾಗತಿಕ ಶಕ್ತಿಕೇಂದ್ರಗಳ ನಡುವಿನ ಸಂಬಂಧಗಳಲ್ಲಿ ಹೊಸ ಹೊಂದಾಣಿಕೆಗಳು ಉಂಟಾಗಬಹುದು. ಇಡೀ ಸಮೀಕರಣದಲ್ಲಿ ರಷ್ಯಾವನ್ನು ಒಳಗೊಂಡಿರುವುದು, ಜಾಗತಿಕ ವ್ಯವಸ್ಥೆಯಲ್ಲಿ ಹಿಂದೆ ಕಾಣದಂತಹ ಪರಿಣಾಮಗಳು ಉಂಟಾಗಬಹುದು.

ಆದರೆ, ಯಾವುದೇ ಒಂದು ಒಕ್ಕೂಟದ ಜೊತೆ ಗುರುತಿಸಿಕೊಳ್ಳುವುದು ಭಾರತದ ಹಿತಕ್ಕೆ ಪೂರಕವಾಗಿ ಇಲ್ಲ. ಚೀನಾದ ಕಡೆ ಭಾರತ ಚಾಚಿರುವ ಸ್ನೇಹಹಸ್ತವು ತನ್ನ ಹಿತಕ್ಕೆ ಪೂರಕವಾಗಿ ಇರಬೇಕು. ಚೀನಾ ಜೊತೆ ಹೊಂದಿರುವ ಭಿನ್ನಾಭಿಪ್ರಾಯಗಳು ಯಾವುವು, ಚೀನಾ ಜೊತೆ ಯಾವೆಲ್ಲ ಸಂಗತಿಗಳಲ್ಲಿ ಸಹಮತ ಇದೆ ಎಂಬುದು ಸ್ಪಷ್ಟವಾಗಿರಬೇಕು. ಈಗಿನ ಸಂದರ್ಭದಲ್ಲಿ ಸಹಕಾರದಿಂದ ಸಾಧಿಸಬಹುದಾದುದು ಬಹಳಷ್ಟಿದೆ. ಅಮೆರಿಕವು ವಿಧಿಸಿರುವ ಭಾರೀ ಸುಂಕದ ಪರಿಣಾಮವನ್ನು ನಿಭಾಯಿಸುವಲ್ಲಿ ಚೀನಾದ ಹೂಡಿಕೆಗಳು ನೆರವಿಗೆ ಬರಬಹುದು. ಆದರೆ ಭಾರತ ಮತ್ತು ಚೀನಾ ನಡುವೆ ಗಡಿ ತಕರಾರು ಬಹುಕಾಲದಿಂದಲೂ ಇತ್ಯರ್ಥವಾಗದೆ ಉಳಿದಿದೆ. ಚೀನಾ ದೇಶವು ಭಾರತಕ್ಕೆ ರಫ್ತು ಮಾಡುವ ಸರಕು–ಸೇವೆಗಳ ಮೊತ್ತವು, ಅದು ಇಲ್ಲಿಂದ ಆಮದು ಮಾಡಿಕೊಳ್ಳುವ ಸರಕು ಮತ್ತು ಸೇವೆಗಳ ಮೊತ್ತಕ್ಕಿಂತ ಹೆಚ್ಚು. ಎರಡೂ ದೇಶಗಳ ಮಹತ್ವಾಕಾಂಕ್ಷೆಗಳಲ್ಲಿ ಹಿತಾಸಕ್ತಿಯ ಸಂಘರ್ಷಕ್ಕೆ ಕಾರಣವಾಗುವ ಅಂಶಗಳು ಇರಬಹುದು, ಪಾಕಿಸ್ತಾನದ ಜೊತೆ ಚೀನಾ ಹೊಂದಿರುವ ಗೆಳೆತನವು ಭಾರತಕ್ಕೆ ಪಥ್ಯವಾಗುವಂತೆ ಇಲ್ಲ. ಹೀಗಾಗಿ ಭಾರತವು ತನ್ನ ಎಚ್ಚರಿಕೆಯಲ್ಲಿ ತಾನಿರಬೇಕು. ಚೀನಾದ ಜೊತೆ ವ್ಯವಹರಿಸುವಾಗ ಎಚ್ಚರಿಕೆಯೊಂದಿಗೇ ಆಶಾವಾದವನ್ನು ಹೊಂದಬಹುದು. ಬೇರೆ ದೇಶಗಳ ಜೊತೆಗಿನ ಸಂಬಂಧವನ್ನು ಕೆಲವು ನಾಯಕರ ವೈಯಕ್ತಿಕ ಸಂಬಂಧದ ಜೊತೆ ಜೋಡಿಸುವ ಮೂಲಕ ಭಾರತವು ಈ ಹಿಂದೆ ಕೆಟ್ಟ ಅನುಭವ ಸಂಪಾದಿಸಿದೆ. ಅದು ಭವಿಷ್ಯಕ್ಕೆ ಒಂದು ಪಾಠವಾಗಬೇಕು. ಅಂತರರಾಷ್ಟ್ರೀಯ ಹಾಗೂ ದ್ವಿಪಕ್ಷೀಯ ಸಂಬಂಧಗಳು ರಾಷ್ಟ್ರದ ಹಿತಾಸಕ್ತಿಯನ್ನು ಆಧರಿಸಿರುತ್ತವೆ, ಈ ಹಿತಾಸಕ್ತಿಯು ಬದಲಾಗುತ್ತಿರುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.