
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ನಡುವೆ ಮುಂಬೈನಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯ ನಂತರ ಘೋಷಿಸಲಾದ ಹಲವಾರು ಕ್ರಮಗಳು, ಉಭಯ ದೇಶಗಳ ನಡುವಣ ಗಾಢ ಸಂಬಂಧವನ್ನು ಮುಂದುವರಿಸುವ ಹಾಗೂ ಮತ್ತಷ್ಟು ಬಲಪಡಿಸುವ ಪ್ರಯತ್ನದಂತಿವೆ. ಎರಡೂ ದೇಶಗಳು ದೀರ್ಘಕಾಲಿಕ ಸಂಬಂಧ ಹಾಗೂ ರಚನಾತ್ಮಕ ಸಹಭಾಗಿತ್ವವನ್ನು ಹೊಂದಿವೆ; ಅಂತರರಾಷ್ಟ್ರೀಯ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ವಿಭಿನ್ನ ನಿಲುವುಗಳನ್ನು ಹೊಂದಿರುವ ಸಂದರ್ಭದಲ್ಲಿಯೂ, ಆ ನಿಲುವು ಸ್ಥಿರವಾಗಿರುವ ತಮ್ಮ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ಎಚ್ಚರವಹಿಸಿವೆ. 1998ರಲ್ಲಿ ಭಾರತ ನಡೆಸಿದ ಅಣ್ವಸ್ತ್ರ ಪರೀಕ್ಷೆಯನ್ನು ಟೀಕಿಸಲು ನಿರಾಕರಿಸಿದ ರಷ್ಯಾ ನಂತರದ ಪ್ರಮುಖ ದೇಶ ಫ್ರಾನ್ಸ್ ಆಗಿತ್ತು ಎನ್ನುವುದು ಗಮನಾರ್ಹ. ಉಭಯ ದೇಶಗಳ ಸಂಬಂಧಕ್ಕೆ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಆಯಾಮಗಳೂ ಇವೆ. ಸರ್ಕಾರಗಳ ಬದಲಾವಣೆ ಹಾಗೂ ಜಾಗತಿಕ ರಾಜಕಾರಣದಲ್ಲಿನ ಪಲ್ಲಟಗಳು ತಮ್ಮ ಸಂಬಂಧದ ಮೇಲೆ ಪರಿಣಾಮ ಬೀರದಂತೆ ಎರಡೂ ದೇಶಗಳು ನಿರಂತರವಾಗಿ ಪ್ರಯತ್ನಿಸಿವೆ. ಈ ನಂಬಿಕೆ–ವಿಶ್ವಾಸದ ತಳಹದಿಯ ಮೇಲೆ ರೂಪುಗೊಂಡ ಸಂಬಂಧವನ್ನು ಮೋದಿ ಮತ್ತು ಮ್ಯಾಕ್ರನ್ ಮುಂದುವರಿಸಿದ್ದಾರೆ.
ಫ್ರಾನ್ಸ್ ಅಧ್ಯಕ್ಷರ ಭಾರತ ಭೇಟಿಯ ಸಂದರ್ಭದಲ್ಲಿ, ಕರ್ನಾಟಕದ ಕೋಲಾರ ಜಿಲ್ಲೆಯ ವೇಮಗಲ್‌ನಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್‌ಎಲ್) ನಿರ್ಮಿಸಿರುವ ‘ಏರ್‌ಬಸ್ ಎಚ್ 125’ ಲಘು ಹೆಲಿಕಾಪ್ಟರ್‌ನ ಜೋಡಣಾ ಘಟಕಕ್ಕೆ ಚಾಲನೆ ದೊರೆತಿದೆ. ಇದರ ಜೊತೆಗೆ, ಭಾರತದಲ್ಲಿ ‘ಹ್ಯಾಮರ್’ ಕ್ಷಿಪಣಿಗಳನ್ನು ತಯಾರಿಸುವ ಮಹತ್ವದ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ರಕ್ಷಣಾ ಸಹಕಾರವು ಮೇಲ್ದರ್ಜೆಗೇರಿದಂತಾಗಿದೆ. ಕಳೆದ ವಾರವಷ್ಟೇ ಫ್ರಾನ್ಸ್‌ನಿಂದ 114 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ₹3.25 ಲಕ್ಷ ಕೋಟಿ ಮೊತ್ತದ ಒಪ್ಪಂದಕ್ಕೆ ಭಾರತದ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿತ್ತು. 2025ರಲ್ಲಿ ಭಾರತೀಯ ನೌಕಾಪಡೆಗೆ 26 ರಫೇಲ್ ಮರೀನ್ ವಿಮಾನಗಳ ಖರೀದಿಸುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಉಭಯ ದೇಶಗಳು ಹತ್ತು ವರ್ಷಗಳ ಅವಧಿಯ ರಕ್ಷಣಾ ಸಹಕಾರದ ಒಪ್ಪಂದವನ್ನು ನವೀಕರಿಸಿವೆ. ಫ್ರಾನ್ಸ್ ಈಗ ರಷ್ಯಾ ನಂತರದಲ್ಲಿ ಭಾರತದ ಎರಡನೇ ಅತಿದೊಡ್ಡ ರಕ್ಷಣಾ ಪಾಲುದಾರ ದೇಶವಾಗಿದೆ. ಸಂಕೀರ್ಣ ಹಾಗೂ ವಿರಳ ಲೋಹಗಳ ಅನ್ವೇಷಣೆ ಹಾಗೂ ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆಯೂ ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.
ದೆಹಲಿಯಲ್ಲಿ ನಡೆದ ‘ಎಐ ಇಂಪ್ಯಾಕ್ಟ್ ಶೃಂಗಸಭೆ’ಯಲ್ಲಿ ಮ್ಯಾಕ್ರನ್ ಭಾಗವಹಿಸಿದ್ದಾರೆ. ಫ್ರಾನ್ಸ್ ಅಧ್ಯಕ್ಷರ ಭಾರತ ಭೇಟಿಯು ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧದ ಮುಂದುವರಿಕೆ, ಬಲಪಡಿಸುವಿಕೆ ಹಾಗೂ ವಿಸ್ತರಣೆಗೆ ಅಗತ್ಯವಾದ ಬದ್ಧತೆಯನ್ನು ದೃಢೀಕರಿಸುವ ಸಂಕೇತದಂತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಏಕಪಕ್ಷೀಯ ನಿರ್ಧಾರಗಳ ಕಾರಣದಿಂದಾಗಿ ಉಂಟಾಗಿರುವ ಜಾಗತಿಕ ಅಸ್ಥಿರತೆಯ ಸಂದರ್ಭದಲ್ಲಿ ಭಾರತ–ಫ್ರಾನ್ಸ್ ದ್ವಿಪಕ್ಷೀಯ ಸಂಬಂಧಕ್ಕೆ ವಿಶೇಷ ಮಹತ್ವವಿದೆ. ‘ಐರೋಪ್ಯ ಒಕ್ಕೂಟ’ದ ಭಾಗವಾಗಿದ್ದರೂ, ಇತರ ದೇಶಗಳೊಂದಿಗೆ ಸ್ವತಂತ್ರ ಸಂಬಂಧಗಳನ್ನು ರೂಪಿಸಿಕೊಳ್ಳಲು ಫ್ರಾನ್ಸ್ ಪ್ರಯತ್ನಿಸುತ್ತಿದೆ. ವ್ಯಾಪಾರ ಮತ್ತು ಇತರ ಕ್ಷೇತ್ರಗಳಲ್ಲಿ ವಿಶ್ವ ಅಸ್ಥಿರ ಪರಿಸ್ಥಿತಿ ಎದುರಿಸುತ್ತಿರುವ ಸನ್ನಿವೇಶದಲ್ಲಿ ಸ್ಥಿರವಾದ ದ್ವಿಪಕ್ಷೀಯ ಸಂಬಂಧಗಳು ಸಹಜವಾಗಿಯೇ ವಿಶೇಷ ಮಹತ್ವ ಪಡೆದುಕೊಳ್ಳುತ್ತವೆ. ಇದು ಮ್ಯಾಕ್ರನ್ ಅವರ ನಾಲ್ಕನೇ ಭಾರತ ಭೇಟಿಯಾಗಿದ್ದು, ಈ ಭೇಟಿಯ ಸಂದರ್ಭದಲ್ಲಿ ಫ್ರಾನ್ಸ್‌ನೊಂದಿಗಿನ ಸಂಬಂಧವನ್ನು ಜಾಗತಿಕ ಕಾರ್ಯತಂತ್ರದ ವಿಶೇಷ ಪಾಲುದಾರಿಕೆಯ ಹಂತಕ್ಕೆ ಏರಿಸುವುದಾಗಿ ಮೋದಿ ಅವರು ಘೋಷಿಸಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಉಭಯ ದೇಶಗಳ ಸಂಬಂಧದ ಬಲಪಡಿಸುವಿಕೆಯು, ಇತ್ತೀಚೆಗಷ್ಟೇ ನಡೆದ ಐರೋಪ್ಯ ಒಕ್ಕೂಟದೊಂದಿಗೆ ಭಾರತ ಮಾಡಿಕೊಂಡ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಪೂರಕವಾದ ನಡೆಯಾಗಿ ಪರಿಣಮಿಸುವ ಸಾಧ್ಯತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.