ADVERTISEMENT

ಸಂಪಾದಕೀಯ: ಬೆದರಿಕೆಗೆ ಬಾಗುವ ಪ್ರವೃತ್ತಿ– ಭಾರತದ ನಡೆ ನಿರಾಶಾದಾಯಕ

ಸಂಪಾದಕೀಯ
Published 9 ಜನವರಿ 2026, 23:49 IST
Last Updated 9 ಜನವರಿ 2026, 23:49 IST
   
ದಾಳಿಕೋರ ಮನಃಸ್ಥಿತಿಯನ್ನು ದಿಟ್ಟವಾಗಿ ಖಂಡಿಸುತ್ತಿದ್ದ ಭಾರತ, ಇತ್ತೀಚೆಗೆ ಯಾರನ್ನೂ ನೋಯಿಸದ ನಿಲುವು ಅನುಸರಿಸುತ್ತಿದೆ. ಈ ನೀತಿ ವೆನೆಜುವೆಲಾ ಮೇಲಿನ ಅಮೆರಿಕ ದಾಳಿಗೆ ಸಂಬಂಧಿಸಿದಂತೆಯೂ ಮುಂದುವರಿದಿದೆ.

ತೈಲನಿಕ್ಷೇಪ ಸಂಪದ್ಭರಿತ ರಾಷ್ಟ್ರ ವೆನೆಜುವೆಲಾ ಮೇಲೆ ದಾಳಿ ನಡೆಸಿ, ಆ ದೇಶದ ಅಧ್ಯಕ್ಷ ನಿಕೊಲಸ್‌ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋಸ್‌ ಅವರನ್ನು ಬಂಧಿಸಿರುವ ಅಮೆರಿಕದ ಕ್ರಮಕ್ಕೆ ಸಂಬಂಧಿಸಿದಂತೆ ಭಾರತ ನೀಡಿರುವ ಪ್ರತಿಕ್ರಿಯೆ ಎಚ್ಚರಿಕೆಯಿಂದ ಕೂಡಿದುದಾಗಿದೆ ಹಾಗೂ ನಡೆದ ಘಟನೆ ಸ್ವೀಕಾರಾರ್ಹ ಎನ್ನುವ ಧಾಟಿಯಲ್ಲಿದೆ. ಘಟನೆಗೆ ಪ್ರತಿಕ್ರಿಯಿಸಲು ತಡಬಡಾಯಿಸಿರುವ ಕೇಂದ್ರ ಸರ್ಕಾರ, ಒಂದು ದಿನದ ವಿಳಂಬದ ನಂತರ ನೀಡಿರುವ ಪ್ರತಿಕ್ರಿಯೆ ಔಪಚಾರಿಕತೆಯಿಂದ ಕೂಡಿದುದಾಗಿದೆ. ‘ಬೆಳವಣಿಗೆಗಳ’ ಬಗ್ಗೆ ‘ತೀವ್ರ ಕಳವಳ’ ವ್ಯಕ್ತಪಡಿಸಿರುವ ಸರ್ಕಾರದ ಹೇಳಿಕೆಯು ಅಮೆರಿಕದ ಹೆಸರಿನ ಉಲ್ಲೇಖ ಹಾಗೂ ದಾಳಿಯ ಬಗ್ಗೆ ಖಂಡನೆ ಇಲ್ಲದಿರುವ ಹಾಗೆ ಎಚ್ಚರಿಕೆಯಿಂದ ಆಯ್ದ ಪದಗಳಿಂದ ರೂಪುಗೊಂಡಿದೆ. ವೆನೆಜುವೆಲಾ ಜನರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಸಂಬಂಧಿಸಿದ ತನ್ನ ಕಾಳಜಿಯನ್ನು ಮರುದೃಢೀಕರಿಸುವುದಾಗಿಯೂ ಹೇಳಿರುವ ಈ ಹೇಳಿಕೆಯು, ಉಭಯ ದೇಶಗಳು ಎಲ್ಲ ಸಮಸ್ಯೆಗಳನ್ನು ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳುವ ಹಾಗೂ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವ ಕರೆಯನ್ನು ಒಳಗೊಂಡಿದೆ. ಅಂತರರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ ಹಾಗೂ ಶಾಂತಿ–ಸೌಹಾರ್ದತೆಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಮೂಲ ಆಶಯಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಭಾರತದ ಪ್ರತಿಕ್ರಿಯೆಯು ಅತ್ಯಂತ ನಿರಾಶಾದಾಯಕ ಆದುದಾಗಿದೆ. ಉಕ್ರೇನ್‌ನಲ್ಲಿನ ಯುದ್ಧ ಹಾಗೂ ಗಾಜಾದಲ್ಲಿನ ಹತ್ಯಾಕಾಂಡ ಘಟನೆಗಳ ಖಂಡನೆಗೆ ಸಂಬಂಧಿಸಿದಂತೆಯೂ ಭಾರತ ವಿಫಲ ಆಗಿರುವುದರ ಮುಂದುವರಿದ ಭಾಗದಂತೆ, ವೆನೆಜುವೆಲಾ ಮೇಲಿನ ಅಮೆರಿಕದ ದಾಳಿಗೆ ಸಂಬಂಧಿಸಿದ ಪ್ರತಿಕ್ರಿಯೆಯನ್ನು ಗಮನಿಸಬಹುದು.

ಹಿಂಜರಿಕೆಯ ನಿಲುವು ಹಾಗೂ ಎಚ್ಚರಿಕೆಯ ಪದಪುಂಜಗಳು ವೆನೆಜುವೆಲಾ ಮೇಲಿನ ದಾಳಿಗೆ ಸೀಮಿತವಾಗಿರದೆ, ಅಂತರರಾಷ್ಟ್ರೀಯ ಕಾನೂನುಗಳು ಮತ್ತು ವಿಶ್ವಸಂಸ್ಥೆಯ ಆಶಯಗಳಿಗೆ ಸಂಬಂಧಿಸಿದ ವಿದ್ಯಮಾನಗಳನ್ನು ನಿಭಾಯಿಸುವಲ್ಲಿ ಭಾರತ ಎದುರಿಸುತ್ತಿರುವ ಸಮಸ್ಯೆಗೆ ಸಂಬಂಧಿಸಿದ್ದಾಗಿವೆ. ಇಲ್ಲಿಯವರೆಗೆ ದುರ್ಬಲ ದೇಶಗಳ ಮೇಲೆ ಪ್ರಬಲ ದೇಶಗಳು ದಾಳಿ ನಡೆಸಿದಾಗ ಭಾರತ ಹಿಂಜರಿಕೆ ಇಲ್ಲದೆ ಖಂಡಿಸುತ್ತಿತ್ತು. ನೈತಿಕತೆ, ಶಿಷ್ಟಾಚಾರ, ದೇಶದ ಸಾರ್ವಭೌಮತೆಯನ್ನು ಗೌರವಿಸುವುದು ಹಾಗೂ ಮತ್ತೊಂದು ದೇಶದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವುದರ ಪರವಾಗಿ ಭಾರತ ತನ್ನನ್ನು ಗುರ್ತಿಸಿಕೊಳ್ಳುತ್ತಿತ್ತು. ಆದರೆ, ಕಳೆದ ಕೆಲವು ದಶಕಗಳಲ್ಲಿ ಜಗತ್ತು ಸಾಕಷ್ಟು ಬದಲಾಗಿದೆ ಹಾಗೂ ಗಾಳಿ ಬಂದೆಡೆ ತೂರಿಕೊಳ್ಳುವ ಅಭ್ಯಾಸವನ್ನು ಭಾರತ ರೂಢಿಸಿಕೊಳ್ಳುತ್ತಿದೆ. ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ನಿರ್ದೇಶಿಸಬೇಕಾದ ಉನ್ನತ ಆದರ್ಶಗಳು ಹಾಗೂ ಸನ್ನಡತೆಯ ಸ್ಥಳದಲ್ಲಿ ಸ್ವಹಿತಾಸಕ್ತಿ ಕಾಣಿಸಿಕೊಳ್ಳುತ್ತಿದೆ. ಆದರ್ಶವಾದಿಯಾಗಿ ವಿಷಾದಿಸುವ ಸ್ಥಿತಿ ತಂದುಕೊಳ್ಳುವುದರ ಬದಲಾಗಿ, ಅಪಾಯಕ್ಕೆ ಆಸ್ಪದ ಕಲ್ಪಿಸದಿರುವ ವಾಸ್ತವವಾದಿ ಆಗುವುದೇ ಉತ್ತಮ ಎನ್ನುವ ಚಿಂತನೆ ಇದಾಗಿರುವಂತಿದೆ. ದಕ್ಷಿಣ ಆಫ್ರಿಕಾ, ಬ್ರೆಜಿಲ್‌, ಮೆಕ್ಸಿಕೊ ಸೇರಿದಂತೆ ದಕ್ಷಿಣ ಭೂಖಂಡದ ಪ್ರಮುಖ ರಾಷ್ಟ್ರಗಳು ವೆನೆಜುವೆಲಾದ ಮೇಲಿನ ಅಮೆರಿಕದ ದಾಳಿಯನ್ನು ಖಂಡಿಸಿವೆ. ಆದರೆ, ಈ ದೇಶಗಳ ಪ್ರಮುಖ ಪ್ರತಿನಿಧಿಯಂತಿರುವ ಹಾಗೂ ಅಂತರರಾಷ್ಟ್ರೀಯ ವೇದಿಕೆಯಲ್ಲಿ ತನ್ನದೇ ಆದ ಧ್ವನಿ ಹೊಂದಿರುವ ಭಾರತ, ಅಮೆರಿಕಕ್ಕೆ ಅಸಮಾಧಾನ ಆಗದಂತೆ ನಡೆದುಕೊಳ್ಳಲು ಪ್ರಯತ್ನಿಸುತ್ತಿದೆ.

ಭಾರತದ ಮೇಲೆ ಸುಂಕ ಸಮರವನ್ನು ತೀವ್ರಗೊಳಿಸುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಬೆದರಿಕೆಯ ಹಿನ್ನೆಲೆಯಲ್ಲಿ ಭಾರತದ ಪ್ರತಿಕ್ರಿಯೆಯನ್ನು ಗಮನಿಸಬೇಕಾಗಿದೆ. ರಷ್ಯಾದಿಂದ ತೈಲ ಖರೀದಿಯನ್ನು ಭಾರತ ನಿಲ್ಲಿಸಬೇಕೆಂದು ಟ್ರಂಪ್‌ ಬಯಸುತ್ತಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಶೇ 500ರಷ್ಟು ತೆರಿಗೆ ವಿಧಿಸಲು ಅನುಮತಿಸುವ ಮಸೂದೆಗೆ ಅವರು ಒಪ್ಪಿಗೆ ನೀಡಿದ್ದಾರೆ. ಈ ಮಸೂದೆ ಕಾಯ್ದೆಯಾಗಿ ಬದಲಾದರೆ, ಅದರ ತೀವ್ರ ಪರಿಣಾಮ ಭಾರತದ ಮೇಲಾಗಲಿದೆ. ಶೇ 500ರಷ್ಟು ಸುಂಕ ಹೆಚ್ಚಳ ಅಮೆರಿಕದೊಂದಿಗೆ ರಫ್ತು ವ್ಯವಹಾರವನ್ನು ಕೊನೆಗೊಳಿಸಬಹುದು. ಪ್ರಸ್ತುತ, ಉಭಯ ದೇಶಗಳ ನಡುವಣ ವಾಣಿಜ್ಯ ಒಪ್ಪಂದಗಳು ನನೆಗುದಿಗೆ ಬಿದ್ದಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಟ್ರಂಪ್‌ ಅವರು ಆಕ್ಷೇಪಾರ್ಹ ಹೇಳಿಕೆಗಳನ್ನೂ ನೀಡಿದ್ದಾರೆ. ಬಲಿಷ್ಠರಿಗೆ ನೋವಾಗದಂತೆ ನಡೆದುಕೊಳ್ಳುವುದು ಸ್ವಹಿತದ ದಾರಿ ಎನ್ನುವ ಚಿಂತನೆ ಕೇಂದ್ರ ಸರ್ಕಾರದ್ದಾಗಿರುವಂತಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.