ADVERTISEMENT

ಸಂಪಾದಕೀಯ: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸಿಗಲಿ ಒತ್ತಾಸೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 1:26 IST
Last Updated 17 ಸೆಪ್ಟೆಂಬರ್ 2020, 1:26 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

‘ಹೈದರಾಬಾದ್‌ ಕರ್ನಾಟಕ ಎಂಬ ಹೆಸರಿನಲ್ಲಿ ನಿಜಾಮರಿಂದ ಆಳಿಸಿಕೊಂಡ ದಾಸ್ಯದ ಧ್ವನಿಯೂ ಇದೆ; ಹೀಗಾಗಿ ಅದನ್ನು ಬದಲಿಸಬೇಕು’ ಎಂಬ ಅಲ್ಲಿನ ಹೋರಾಟಗಾರರ ಒತ್ತಾಸೆಗೆ ಸ್ಪಂದಿಸಿದ ರಾಜ್ಯ ಸರ್ಕಾರ, ಆ ಪ್ರದೇಶಕ್ಕೆ ‘ಕಲ್ಯಾಣ ಕರ್ನಾಟಕ’ ಎಂದು ಮರುನಾಮಕರಣ ಮಾಡಿದೆ. ಹೆಸರು ಬದಲಾಗಿ ಈಗ ವರ್ಷವೇ ಕಳೆದಿದೆ. ಆದರೆ, ಈ ಪ್ರದೇಶದ ಹೆಸರು ಬದಲಾವಣೆ ವಿಷಯದಲ್ಲಿ ಜನರ ಭಾವನೆಗೆ ಸಿಕ್ಕ ಸ್ಪಂದನೆ, ಇಲ್ಲಿನ ಅಭಿವೃದ್ಧಿಯ ವಿಚಾರದಲ್ಲೂ ಸಿಕ್ಕಿದೆಯೇ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಇದು ಸಕಾಲ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಮೂಲಕ ಈ ಪ್ರದೇಶದ ದಾಸ್ಯದ ಸಂಕೋಲೆಯನ್ನು ಕಳಚುವುದಾಗಿ, ಹೊಸ ಹೆಸರು ಘೋಷಣೆ ಸಮಯದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದರು. ಇದು, ಶರಣರ ತವರು, ಬಸವಣ್ಣನ ಕಲ್ಯಾಣ ಪರಿಕಲ್ಪನೆಯ ನೆಲೆವೀಡು. ಆದ್ದರಿಂದ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದ್ದಾಗಿ ಸಮರ್ಥಿಸಿಕೊಂಡಿದ್ದರು. ಆದರೆ, ತಮ್ಮ ಮಾತಿನಂತೆ ನಡೆದುಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಈ ಪ್ರದೇಶದ ವ್ಯಾಪ್ತಿಗೊಳಪಡುವ ಬೀದರ್‌, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಈ ಆರೂ ಜಿಲ್ಲೆಗಳಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ‘ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ’ ಸ್ಥಾಪಿಸಿ, ₹ 500 ಕೋಟಿ ಅನುದಾನವನ್ನೇನೋ ಘೋಷಿಸಲಾಗಿದೆ. ಕ್ರಿಯಾ ಯೋಜನೆಯೂ ಸಿದ್ಧವಾಗಿದೆ. ಆ ಸಂಘಕ್ಕೆ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಕೆಲವು ಅಧಿಕಾರಿಗಳು ಸಹ ಇದ್ದಾರೆ. ಕೆಲಸ ಮಾತ್ರ ಆರಂಭವಾಗಿಲ್ಲ. ಈ ನಿರ್ಲಕ್ಷ್ಯವನ್ನು ಗಮನಿಸಿದರೆ,ಹಿಂದುಳಿದ ಪ್ರದೇಶವೊಂದರ ಸಮಗ್ರ ಚಹರೆಯನ್ನು ಹುಸಿ ವಾಗ್ದಾನಗಳಿಂದ ಬದಲಾಯಿಸಲು ಸಾಧ್ಯವಿಲ್ಲ ಎನ್ನುವುದು ಮನದಟ್ಟಾಗುತ್ತದೆ.

ಸಂವಿಧಾನದ 371(ಜೆ) ವಿಧಿಯ ಮೂಲಕ ಈ ಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ಬಕಲ್ಪಿಸಲಾಗಿದೆ. ಇದರಿಂದಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಇಲ್ಲಿನವರಿಗೆ ಮೀಸಲಾತಿ ದೊರೆಯುತ್ತಿದೆ. ವೃತ್ತಿಪರ ಕೋರ್ಸ್‌ಗಳಿಗೆ ಸೇರಿಕೊಳ್ಳುವವರ ಸಂಖ್ಯೆ ಸಹ ಗಣನೀಯವಾಗಿ ಹೆಚ್ಚಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರತೀ ವರ್ಷ ಬಜೆಟ್‌ನಲ್ಲಿ ₹ 1,500 ಕೋಟಿ ಅನುದಾನ ಸಿಗುತ್ತಿದೆ. ಈ ಎಲ್ಲ ಕಾರಣಗಳಿಂದ ಸ್ವಲ್ಪಮಟ್ಟಿಗೆ ಕಣ್ಣಿಗೆ ಕಾಣಿಸುವಂತಹ ಕೆಲಸಗಳು ನಡೆಯುತ್ತಿವೆ. ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆ ಹೆಚ್ಚಿದೆ. ಇದರ ನಡುವೆಯೂ ಸುಮಾರು 15 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಈ ಪ್ರದೇಶದ ಸುಸ್ಥಿರ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ಆರಂಭಿಸುವುದಾಗಿ ಹಾಗೂ 371(ಜೆ) ಕೋಶವನ್ನು ಬೆಂಗಳೂರಿನಿಂದ ಕಲಬುರ್ಗಿಗೆ ಸ್ಥಳಾಂತರ ಮಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿ ವರ್ಷವೇ ಆಗಿದ್ದರೂ ಆ ಕಾರ್ಯಗಳು ಇನ್ನೂ ಆಗಿಲ್ಲ. ಇದು, ಈ ಪ್ರದೇಶದ ಅಭಿವೃದ್ಧಿಯ ವಿಚಾರದಲ್ಲಿ ಸರ್ಕಾರ ತೋರುತ್ತಿರುವ ಕಾಳಜಿ ಹಾಗೂ ಬದ್ಧತೆ ಹೇಗಿದೆ ಎನ್ನುವುದಕ್ಕೆ ಸಾಕ್ಷಿ. ಹೊಸ ಯೋಜನೆ, ಕಾರ್ಯಕ್ರಮ ಘೋಷಣೆ ಮಾಡಲು ಅಧಿಕಾರಸ್ಥರು ಇನ್ನಿಲ್ಲದ ಆಸಕ್ತಿ, ಉತ್ಸಾಹ ತೋರಿಸುತ್ತಾರೆ. ಅನುಷ್ಠಾನದ ವಿಷಯ ಬಂದಾಗ ಮಾತ್ರ ನಿರ್ಲಕ್ಷ್ಯ ಹಾಗೂ ನಿರಾಸಕ್ತಿಯ ಪ್ರವೃತ್ತಿಗೆ ಶರಣಾಗುತ್ತಾರೆ. ಚಾರಿತ್ರಿಕ ಕಾರಣಗಳಿಂದಾಗಿ ಆಗಿರುವ ಹಿನ್ನಡೆಯನ್ನು ಸರಿಪಡಿಸಲು ಸರ್ಕಾರ ಇಚ್ಛಾಶಕ್ತಿ ತೋರಬೇಕು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬೇಕಾಗಿರುವ ಅಲ್ಪಾವಧಿ ಮತ್ತು ದೀರ್ಘಾವಧಿ ಯೋಜನೆಗಳ ನೀಲನಕ್ಷೆಯನ್ನು ಸಿದ್ಧಪಡಿಸಿ, ಅವುಗಳನ್ನು ಕಾಲಮಿತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಕಾಲಕಾಲಕ್ಕೆ ಪ್ರಗತಿ ಪರಿಶೀಲನೆಯನ್ನು ನಡೆಸಬೇಕು. ಅನುದಾನ ಸೋರಿಕೆಯನ್ನೂ ತಡೆಗಟ್ಟಬೇಕು. ಇಲ್ಲದೇ ಹೋದರೆ ಅಭಿವೃದ್ಧಿ ಎಂಬುದು ಮರೀಚಿಕೆ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.