ADVERTISEMENT

ಸಂಪಾದಕೀಯ | ನಟಿ ರನ್ಯಾ ರಾವ್‌ ಬಂಧನ: ಚಿನ್ನದ ಕಳ್ಳಸಾಗಣೆಗೆ ಅಂಕುಶ ಹಾಕಿ

ಸಂಪಾದಕೀಯ
Published 11 ಮಾರ್ಚ್ 2025, 23:30 IST
Last Updated 11 ಮಾರ್ಚ್ 2025, 23:30 IST
   

ಕನ್ನಡ ಚಲನಚಿತ್ರ ನಟಿ ರನ್ಯಾ ರಾವ್‌ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯವು (ಡಿಆರ್‌ಐ) ಈಚೆಗೆ ಬಂಧಿಸಿರುವುದು ದೇಶದಲ್ಲಿ ನಡೆಯುತ್ತಿರುವ ಚಿನ್ನದ ಕಳ್ಳಸಾಗಣೆಯ ಬಗ್ಗೆ ಎಚ್ಚರಿಕೆಯ ಕರೆಗಂಟೆಯಂತೆ ಇದೆ. ರನ್ಯಾ ಅವರು ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಬಗೆಯ ಕುರಿತ ವರದಿಗಳು ಉನ್ನತ ಅಧಿಕಾರ ಸ್ಥಾನಗಳಲ್ಲಿ ಇರುವವರು ತೋರಿರಬಹುದಾದ ಪ್ರಭಾವ ಮತ್ತು ಇಂತಹ ಅಪರಾಧಗಳನ್ನು ತಡೆಯುವಲ್ಲಿ ವ್ಯವಸ್ಥೆಯು ಸೋತಿರುವುದನ್ನು ಹೇಳುತ್ತಿವೆ. ರನ್ಯಾ ರಾವ್‌ ಅವರನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ತಿಂಗಳ 3ರಂದು ಬಂಧಿಸಲಾಯಿತು. ದುಬೈನಿಂದ ಬಂದಿಳಿದಾಗ ಅವರ ಬಳಿ ವಿದೇಶಿ ಮೂಲದ 14.8 ಕೆ.ಜಿ.ಯಷ್ಟು ಚಿನ್ನ ಇತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಚಿನ್ನದ ಮಾರುಕಟ್ಟೆ ಮೌಲ್ಯ ಅಂದಾಜು ₹12.56 ಕೋಟಿ. ಕಳೆದ ಒಂದು ವರ್ಷದ ಅವಧಿಯಲ್ಲಿ ರನ್ಯಾ ಅವರು ದುಬೈಗೆ ಇಪ್ಪತ್ತಕ್ಕೂ ಹೆಚ್ಚು ಬಾರಿ ತೆರಳಿದ್ದರು, ಪ್ರತಿ ಬಾರಿಯೂ ಅವರು ಚಿನ್ನವನ್ನು ಅಕ್ರಮವಾಗಿ ದೇಶದೊಳಕ್ಕೆ ತರುತ್ತಿದ್ದರು, ಪ್ರತಿ ಕೆ.ಜಿ. ಚಿನ್ನದಿಂದ ಅವರು ಗರಿಷ್ಠ ₹4 ಲಕ್ಷದವರೆಗೆ ಲಾಭ ಮಾಡಿಕೊಳ್ಳುತ್ತಿದ್ದರು ಎಂದು ವರದಿಗಳು ಹೇಳಿವೆ. ಬಂಧನದ ನಂತರ ರನ್ಯಾ ಅವರ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಅಲ್ಲಿ ₹2.67 ಕೋಟಿ ನಗದು ಹಾಗೂ ₹2.06 ಕೋಟಿ ಮೌಲ್ಯದ ಚಿನ್ನ ಸಿಕ್ಕಿದೆ.

ರನ್ಯಾ ಅವರು ದುಬೈಗೆ ಮತ್ತೆ ಮತ್ತೆ ತೆರಳುತ್ತಿ ದ್ದರು, ಅವರು ಅಲ್ಲಿಗೆ ಹೋಗಿಬರುತ್ತಿದ್ದ ಬಗೆಯು ಅನುಮಾನ ಮೂಡಿಸುವಂತೆ ಇತ್ತು. ಹೀಗಿದ್ದರೂ ಬೆಂಗಳೂರಿನಲ್ಲಿರುವ ಕೇಂದ್ರೀಯ ಏಜೆನ್ಸಿಗಳ ಅಧಿಕಾರಿ ಗಳಿಗೆ ರನ್ಯಾ ಅವರ ಅಕ್ರಮ ಇದುವರೆಗೆ ಅರಿವಿಗೆ ಬಂದಿರಲಿಲ್ಲ ಎಂಬುದು ಕಳವಳಕ್ಕೆ ಕಾರಣವಾಗುವ ಸಂಗತಿ. ವಿವಿಧ ಮೂಲಗಳಿಂದ ಲಭ್ಯವಾದ ಸುಳಿವು ಆಧರಿಸಿ ಡಿಆರ್‌ಐ ದೆಹಲಿ ಘಟಕವು ರನ್ಯಾ ಅವರನ್ನು ಬಂಧಿಸಿದೆ. ಅಂದರೆ, ಬೆಂಗಳೂರಿನಲ್ಲಿನ ಅಧಿಕಾರಿಗಳಿಗೆ ರನ್ಯಾ ಅವರ ಚಟುವಟಿಕೆಗಳು ಗೊತ್ತಾಗಿರಲಿಲ್ಲ ಅಥವಾ ಅವರು ಗೊತ್ತಿದ್ದರೂ ಸುಮ್ಮನಿದ್ದರು ಎಂಬ ಅನುಮಾನಗಳು ಮೂಡುತ್ತವೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಯಮಗಳ ಪಾಲನೆಯಲ್ಲಿ ಗಂಭೀರ ಲೋಪ ಆಗಿರುವ ಸಾಧ್ಯತೆಯನ್ನು ಇದು ಸೂಚಿಸುತ್ತಿದೆ. ರನ್ಯಾ ಅವರು ಹಿರಿಯ ಪೊಲೀಸ್‌ ಅಧಿಕಾರಿ ಕೆ. ರಾಮಚಂದ್ರ ರಾವ್‌ ಅವರ ಮಲಮಗಳು. ರನ್ಯಾ ಅವರು ತಮ್ಮ ಕುಟುಂಬದ ಪ್ರಭಾವವನ್ನು ಬಳಸಿಕೊಂಡು ಭದ್ರತಾ ತಪಾಸಣೆಗಳಿಂದ ವಿನಾಯಿತಿ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಇದು ನಿಜವೇ ಆಗಿದ್ದರೆ ದೇಶದ ವಿಐಪಿ ಸಂಸ್ಕೃತಿಯು ದೇಶದ ಹಿತಕ್ಕೇ ಕೆಡುಕು ಉಂಟುಮಾಡುತ್ತಿದೆ ಎಂಬುದಕ್ಕೆ ಇದೊಂದು ನಿದರ್ಶನವಾಗುತ್ತದೆ. ರನ್ಯಾ ಅವರ ಪ್ರಕರಣವು ರಾಯಭಾರಿಗಳಿಗೆ ಇರುವ ಸೌಲಭ್ಯವನ್ನು ಬಳಸಿಕೊಂಡು ಹಿಂದೆ ಕೇರಳದಲ್ಲಿ 30 ಕೆ.ಜಿ. ಚಿನ್ನವನ್ನು ಕಳ್ಳಸಾಗಣೆ ಮಾಡಿದ ಪ್ರಕರಣವನ್ನು ನೆನಪಿಸುವಂತಿದೆ. ಉನ್ನತ ಸ್ಥಾನಗಳಲ್ಲಿನ ಅಧಿಕಾರಿಗಳಿಗೆ ಇರುವ ವಿಶೇಷ ಅಧಿಕಾರವನ್ನು ಬಳಸಿಕೊಂಡು, ಭದ್ರತಾ ತಪಾಸಣೆಯಿಂದ ವಿನಾಯಿತಿ ಪಡೆದು, ಅಕ್ರಮಗಳಲ್ಲಿ ತೊಡಗುವುದು ವ್ಯವಸ್ಥೆಯಲ್ಲಿನ ಹುಳುಕುಗಳನ್ನು ಎತ್ತಿತೋರಿಸುತ್ತದೆ.

ಈಗ ನಡೆದಿರುವ ತನಿಖೆಯು ರನ್ಯಾ ಮತ್ತು ಅವರ ಜೊತೆಗಾರರ ಆಚೆಗೂ ವಿಸ್ತರಿಸಿಕೊಳ್ಳಬೇಕು. ರನ್ಯಾ ಅವರಿಗೆ ಅಕ್ರಮ ಎಸಗಲು ಅಧಿಕಾರಿಗಳ ಮಟ್ಟದಲ್ಲಿ ಯಾರಾದರೂ ಬೆಂಬಲ ನೀಡಿದ್ದರೇ ಎಂಬುದನ್ನು, ರನ್ಯಾ ಅವರಿಗೆ ಕೆಲವು ಸಚಿವರ ಜೊತೆ ನಂಟು ಇದೆ ಎಂಬ ಆರೋಪಗಳನ್ನು ತನಿಖೆಯು ಪರಿಶೀಲನೆಗೆ ಒಳಪಡಿಸಬೇಕು. ಚಿನ್ನದ ಅಕ್ರಮ ಸಾಗಣೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದ ಆಭರಣ ಮಳಿಗೆಯ ಮಾಲೀಕರನ್ನು ಕೂಡ ತನಿಖೆಯಿಂದ ಪತ್ತೆ ಮಾಡಬೇಕು. ಉನ್ನತ ಹಂತಗಳಲ್ಲಿನ ವ್ಯಕ್ತಿಗಳ ಬೆಂಬಲ ಇಲ್ಲದೆ ರನ್ಯಾ ಅವರು ಅಕ್ರಮವನ್ನು ನಡೆಸಿರುವ ಸಾಧ್ಯತೆ ಕಡಿಮೆ. ಅಧಿಕಾರಿಗಳ ಹಂತದಲ್ಲಿನ ಭ್ರಷ್ಟಾಚಾರ ಮತ್ತು ವಿಐಪಿ ಸಂಸ್ಕೃತಿಯ ದುರ್ಬಳಕೆಯನ್ನು ರನ್ಯಾ ಪ್ರಕರಣವು ಹೇಳುತ್ತಿರುವಂತಿದೆ. ಚಿನ್ನದ ಕಳ್ಳಸಾಗಣೆಯನ್ನು ತಡೆಯಲು ಸರ್ಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಂದರೆ ಕಳ್ಳಸಾಗಣೆ ಯಲ್ಲಿ ತೊಡಗಿರುವ ಜಾಲವನ್ನು ಮುರಿಯಬೇಕು, ತಪ್ಪು ಮಾಡಿದವರು ಎಷ್ಟೇ ದೊಡ್ಡವರಾಗಿದ್ದರೂ ಅವರು ಶಿಕ್ಷೆಗೆ ಗುರಿಯಾಗುವಂತೆ ನೋಡಿಕೊಳ್ಳಬೇಕು, ಅಕ್ರಮಗಳಿಗೆ ಕಾರಣವಾಗುವ ಅಂಶಗಳನ್ನು ನಿವಾರಿಸಬೇಕು. ಭದ್ರತಾ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಕಣ್ಗಾವಲು ಇನ್ನಷ್ಟು ಬಿಗಿಗೊಳ್ಳಬೇಕು ಮತ್ತು ಸರ್ಕಾರದ ನೀತಿಗಳಲ್ಲಿ ಸುಧಾರಣೆಗಳು ಆಗಬೇಕು. ಪಾರದರ್ಶಕತೆ ಮತ್ತು ಉತ್ತರ ದಾಯಿತ್ವಕ್ಕೆ ತನಗೆ ಬದ್ಧತೆ ಇದೆ ಎಂಬುದನ್ನು ಸರ್ಕಾರ ತೋರಿಸಿಕೊಡಬೇಕು. ಈಗ ಬಯಲಾಗಿರುವ ಅಕ್ರಮದಲ್ಲಿ ಭಾಗಿಯಾದ ಎಲ್ಲರೂ ಕಾನೂನಿನ ಮುಂದೆ ತಲೆಬಾಗುವಂತೆ ಮಾಡಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.