ADVERTISEMENT

ಸಂಪಾದಕೀಯ: ಪುರುಷ ಠೇಂಕಾರ ಕೊನೆಯಾಗಲಿ ಸದನದ ಘನತೆ ಮುಕ್ಕಾಗದಿರಲಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 19:31 IST
Last Updated 19 ಡಿಸೆಂಬರ್ 2021, 19:31 IST
   

ಶಾಸಕ ಕೆ.ಆರ್. ರಮೇಶ್ ಕುಮಾರ್ ಅವರು ಅತ್ಯಾಚಾರದ ಕುರಿತು ವಿಧಾನಸಭೆಯಲ್ಲಿಆಡಿರುವ ಮಾತು ಸಂವೇದನಾರಾಹಿತ್ಯದಿಂದ ಕೂಡಿರುವುದು ಮಾತ್ರವಲ್ಲ, ಸದನದ ಗೌರವಕ್ಕೂ ಧಕ್ಕೆ ತರುವಂತಹದ್ದು. ‘ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಅದನ್ನು ಆನಂದಿಸಿ ಎಂಬ ಮಾತಿದೆ’ ಎನ್ನುವ ತಮ್ಮ ಮಾತಿಗೆ ರಮೇಶ್ ಕುಮಾರ್ ಕ್ಷಮೆ ಕೋರಿದ್ದಾರೆ. ಆ ಕ್ಷಮಾಪಣೆಯನ್ನು ತಕ್ಷಣವೇ ಒಪ್ಪಿಕೊಂಡಿರುವ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ವಿಷಯವನ್ನು ಇಲ್ಲಿಗೆ ಮುಕ್ತಾಯ ಮಾಡೋಣ’ ಎಂದು ಹೇಳಿದ್ದಾರೆ. ಆದರೆ ಇದು ಸುಲಭಕ್ಕೆ ಮುಗಿಯುವಂತಹ ವಿಷಯವಲ್ಲ. ಲೈಂಗಿಕ ಹಿಂಸಾವಿನೋದದ ಪ್ರಕರಣದಲ್ಲಿ ಸದನ ನಡೆದುಕೊಂಡ ರೀತಿ ವಿಧಾನಸಭೆಯ ವರ್ಚಸ್ಸನ್ನು ಹೆಚ್ಚಿಸುವಂತಹದ್ದಲ್ಲ.

ರಮೇಶ್ ಕುಮಾರ್ ಅವರ ಮಾತು ಆಕ್ಷೇಪಾರ್ಹವಾದುದು, ಆ ರೀತಿ ಮಾತನಾಡಬಾರದು ಎಂದು ತಿಳಿಹೇಳಬೇಕೆಂದು ಸದನದಲ್ಲಿದ್ದ ಯಾರಿಗೂ ಅನ್ನಿಸಿಲ್ಲ. ಆಕ್ಷೇಪಾರ್ಹ ಮಾತನ್ನು ಕಡತದಿಂದ ತೆಗೆಯಬೇಕೆಂದು ಯಾರೊಬ್ಬರೂ ಹೇಳಿಲ್ಲ. ಸಭಾಧ್ಯಕ್ಷರು ಕೂಡ ರಮೇಶ್ ಕುಮಾರ್ ಅವರ ಮಾತನ್ನು ಆಕ್ಷೇಪಿಸಿಲ್ಲ. ಹೇಳಿಕೆಯು ಮಾಧ್ಯಮಗಳಲ್ಲಿ ವರದಿಯಾಗಿ ವ್ಯಾಪಕ ಟೀಕೆಗಳು ವ್ಯಕ್ತವಾದ ನಂತರ ಶಾಸಕರು ತಮ್ಮ ಮಾತಿಗೆ ಕ್ಷಮೆ ಯಾಚಿಸಿದ್ದಾರೆ. ಕ್ಷಮೆಯನ್ನು ಮೌನವಾಗಿ ಅಂಗೀಕರಿಸುವ ಮೂಲಕ ಸದನ ತನ್ನ ನೈತಿಕ ಹೊಣೆಗಾರಿಕೆಯಿಂದ ನುಣುಚಿಕೊಂಡಿದೆ.

ಇಂಥ ನಡವಳಿಕೆಯೊಂದರ ಹಿನ್ನೆಲೆಯಲ್ಲಿ, ಮಹಿಳೆಯರ ಬಗ್ಗೆ ವಿಧಾನಸಭೆಗೆ ಗೌರವವಿಲ್ಲ ಎಂದು ಬಿಡುಬೀಸಾಗಿ ಹೇಳುವುದು ಸಾಧ್ಯವಿಲ್ಲವಾದರೂ, ಲಿಂಗಭೇದದ ವಿಷಯದಲ್ಲಿ ನಮ್ಮ ರಾಜಕಾರಣಿಗಳು ಅಸೂಕ್ಷ್ಮರಾಗಿದ್ದಾರೆ ಎನ್ನುವುದಂತೂ ಸ್ಪಷ್ಟವಾಗಿದೆ. ರಮೇಶ್ ಕುಮಾರ್ ಅವರ ಮಾತು ಹೆಣ್ಣಿನ ಬಗೆಗಿನ ಪೂರ್ವಗ್ರಹದ ಪುರುಷ ಮನಃಸ್ಥಿತಿಯಿಂದ ಕೂಡಿರುವಂತಹದ್ದು. ಅವರ ಮಾತಿಗೆ ಸದನದಲ್ಲಿ ವ್ಯಕ್ತವಾದ ನಗು ಉತ್ತಮ ಅಭಿರುಚಿಯದ್ದಲ್ಲ ಎನ್ನುವುದನ್ನು ವಿಷಾದದಿಂದಲೇ ಹೇಳಬೇಕಾಗಿದೆ.

ADVERTISEMENT

ರಮೇಶ್‌ ಕುಮಾರ್‌ ಅವರ ಮಾತಿಗೆ ಸಭಾಧ್ಯಕ್ಷರು ಕೂಡ ಜೋರಾಗಿ ನಕ್ಕಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅತ್ಯಾಚಾರದ ಬಗೆಗಿನ ಮಾತು ನಗುವಿಗೆ ಕಾರಣವಾಗಬಾರದು. ಅತ್ಯಾಚಾರದ ನೋವಿನ ಅನುಭವವು ಹೆಣ್ಣನ್ನು ಜೀವನದುದ್ದಕ್ಕೂ ದುಃಸ್ವಪ್ನವಾಗಿ ಕಾಡುತ್ತಲೇ ಇರುತ್ತದೆ. ಆ ನೋವನ್ನು ಆನಂದವನ್ನಾಗಿ ಬದಲಿಸಿಕೊಳ್ಳಬೇಕು ಎನ್ನುವ ಮಾತನ್ನು ಹಾಸ್ಯದ ರೂಪದಲ್ಲೂ ಒಪ್ಪಲಾಗದು. ಸದನದಲ್ಲಂತೂ ಅಂಥ ಮಾತುಗಳು ಕೇಳಿಸಲೇಬಾರದು.

ಮಹಿಳೆಯರನ್ನು ಅಪಮಾನಿಸುವಂತಹ ಮಾತುಗಳನ್ನು ಅನೇಕ ರಾಜಕಾರಣಿಗಳು ಸದನದ ಒಳಗೂ ಹೊರಗೂ ಬಹಳಷ್ಟು ಸಲ ಆಡಿದ್ದಾರೆ. ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಿರುವವರಲ್ಲಿ ಎಲ್ಲ ರಾಜ್ಯಗಳ ಹಾಗೂ ಎಲ್ಲ ಪಕ್ಷಗಳ ರಾಜಕಾರಣಿಗಳೂ ಸೇರಿದ್ದಾರೆ. ಮಾತಿನ ಹಂತ ಮೀರಿ ಮಹಿಳಾ ಪ್ರತಿನಿಧಿಗಳ ಉಡುಪಿಗೆ ಕೈಹಾಕಿದ ಪ್ರಸಂಗಗಳನ್ನೂ ಆಧುನಿಕ ಭಾರತದ ರಾಜಕಾರಣ ಕಂಡಿದೆ. ಎದುರಾಳಿಯ ಸಾಮರ್ಥ್ಯ ಹಾಗೂ ಪೌರುಷವನ್ನು ಹೀಗಳೆಯಲು, ಮಹಿಳೆಯರ ಸೀರೆ, ಬಳೆ ಹಾಗೂ ಅಡುಗೆಮನೆಯನ್ನು ಬಳಸಲಾಗುತ್ತದೆ.

‘ದೇಶದಲ್ಲಿನ ಆಧುನಿಕ ಮಹಿಳೆಯರು ಒಬ್ಬರೇ ಇರಲು ಬಯಸುತ್ತಿದ್ದಾರೆ. ವಿವಾಹವಾದರೂ ಮಕ್ಕಳಿಗೆ ಜನ್ಮನೀಡಲು ಬಯಸದೆ, ಬಾಡಿಗೆ ತಾಯ್ತನದಿಂದ ಸಂತಾನ ಪಡೆಯುತ್ತಿದ್ದಾರೆ’ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಇತ್ತೀಚೆಗಷ್ಟೇ ಹೇಳಿದ್ದರು. ಈ ಹೇಳಿಕೆಯು ವಿವಾದವಾದ ಬಳಿಕ, ಅದು ಅಧ್ಯಯನವೊಂದನ್ನು ಆಧರಿಸಿ ಮಾಡಿದ ಉಲ್ಲೇಖ ಎಂಬ ಸ್ಪಷ್ಟನೆಯನ್ನೂ ಅವರು ನೀಡಿದ್ದರು. ಗೃಹ ಸಚಿವ ಆರಗ ಜ್ಞಾನೇಂದ್ರ ಅವರುಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣವೊಂದರ ಸಂದರ್ಭದಲ್ಲಿ, ‘ಸಂತ್ರಸ್ತ ಯುವತಿಯು ಸಂಜೆಯ ನಂತರ ನಿರ್ಜನ ಪ್ರದೇಶಕ್ಕೆ ಹೋಗಬಾರದಿತ್ತು’ ಎಂದು ಅಭಿಪ್ರಾಯಪಟ್ಟಿದ್ದರು.

ಶಾಸಕ ಸಾ.ರಾ. ಮಹೇಶ್ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಅಡುಗೆ ಮಾಡಿಕೊಂಡಿರಲಿ ಎಂದು ಹೇಳಿಕೆ ನೀಡಿದ್ದರು. ಮನೆಯ ಚೌಕಟ್ಟಿನಿಂದ ಹೆಣ್ಣು ಹೊರಬರುವುದನ್ನು ಬಯಸದ ಮನೋಭಾವ ಹಾಗೂ ಹೆಣ್ಣುಮಕ್ಕಳು ಅಡುಗೆಮನೆಗಷ್ಟೇ ಲಾಯಕ್ಕು ಎನ್ನುವ ಪುರುಷ ಠೇಂಕಾರ ಮತ್ತೆ ಮತ್ತೆ ವ್ಯಕ್ತವಾಗುತ್ತಿದೆ. ಹೆಣ್ಣಿನ ದೇಹದ ಬಗ್ಗೆ ಸಾರ್ವಜನಿಕವಾಗಿ ಎಗ್ಗಿಲ್ಲದೆ ಮಾತನಾಡುವುದಲ್ಲದೆ, ಅದನ್ನು ಸಮರ್ಥಿಸಿಕೊಳ್ಳುವವರೂ ಇದ್ದಾರೆ. ಚಾರಿತ್ರ್ಯದ ಬಗ್ಗೆ ಮಾತನಾಡುವ ಮೂಲಕ ಮಹಿಳಾ ರಾಜಕಾರಣಿಗಳ ಸ್ಥೈರ್ಯ ಕುಂದಿಸಲು ಪ್ರಯತ್ನಿಸಲಾಗುತ್ತಿದೆ. ಪದೇ ಪದೇ ಕೇಳಿಸುವ ಲಿಂಗಭೇದದ ಮಾತುಗಳು ಹಾಗೂ ವಿಕೃತವಿನೋದವು ಜನಪ್ರತಿನಿಧಿಗಳ ಮನಸ್ಸಿನಲ್ಲಿ ಪಿತೃಪ್ರಧಾನ ಸಂಸ್ಕೃತಿಯ ಪೂರ್ವಗ್ರಹ ಬೇರೂರಿರುವುದಕ್ಕೆ ನಿದರ್ಶನವಾಗಿವೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣಿಗಳು ನೈತಿಕ ಮೌಲ್ಯಗಳ ರಾಯಭಾರಿಗಳಾಗಬೇಕು ಹಾಗೂ ವಿಧಾನಮಂಡಲವು ನೈತಿಕತೆಯ ಪ್ರಯೋಗಶಾಲೆ ಆಗಬೇಕು. ಆದರೆ, ಲಿಂಗಭೇದಕ್ಕೆ ಇಂಬು ಕೊಡುವ ಪ್ರಸಂಗಗಳೇ ರಾಜಕಾರಣದಲ್ಲಿ ಹೆಚ್ಚು ನಡೆಯುತ್ತಿವೆ. ಕೆಲವು ರಾಜ್ಯಗಳಲ್ಲಂತೂ ಲೈಂಗಿಕ ಅಪರಾಧಗಳಲ್ಲಿ ರಾಜಕಾರಣಿಗಳ ಪಾತ್ರವಿರುವುದು ಹಾಗೂ ಅತ್ಯಾಚಾರಿಗಳಿಗೆ ರಾಜಕೀಯ ಬೆಂಬಲ ನೀಡಿರುವುದು ವರದಿಯಾಗಿವೆ. ರಾಜಕಾರಣವನ್ನು ಲಿಂಗಭೇದದಿಂದ ಮುಕ್ತಗೊಳಿಸುವ ಪ್ರಕ್ರಿಯೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಪ್ರಾಮಾಣಿಕವಾಗಿ ತೊಡಗಿಕೊಳ್ಳಬೇಕು. ಯಾರಾದರೊಬ್ಬರು ನಾಲಿಗೆ ಸಡಿಲ ಬಿಟ್ಟಾಗ, ಅವರನ್ನು ತಿದ್ದುವ ಹಾಗೂ ಶಿಕ್ಷಿಸುವ ಆಂತರಿಕ ವ್ಯವಸ್ಥೆಯನ್ನು ಪಕ್ಷಗಳು ರೂಪಿಸಿಕೊಳ್ಳಬೇಕು. ಅಂಥ ವ್ಯವಸ್ಥೆ ರೂಪುಗೊಳ್ಳುವವರೆಗೂ ಕರ್ನಾಟಕ ವಿಧಾನಸಭೆಯಲ್ಲಿ ನಡೆದಂಥ ಪ್ರಕರಣಗಳು ಮರುಕಳಿಸುತ್ತಲೇ ಇರುತ್ತವೆ ಹಾಗೂ ಮಹಿಳಾ ಕಾಳಜಿಯ ಪ್ರಹಸನಗಳು ಜಾರಿಯಲ್ಲಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.