ADVERTISEMENT

ಸಂಪಾದಕೀಯ | ಹೈಕೋರ್ಟ್‌ ಸ್ಥಳಾಂತರ ಅನಿವಾರ್ಯ; ಕಬ್ಬನ್‌ ಉದ್ಯಾನಕ್ಕೆ ಜೀವಕಳೆ ಬರಲಿ

ಸಂಪಾದಕೀಯ
Published 3 ನವೆಂಬರ್ 2025, 1:53 IST
Last Updated 3 ನವೆಂಬರ್ 2025, 1:53 IST
.
.   

ಬೆಂಗಳೂರಿನ ಕಬ್ಬನ್‌ ಪಾರ್ಕ್‌ ಉದ್ಯಾನದ ಆವರಣದಲ್ಲಿರುವ ಕರ್ನಾಟಕ ಹೈಕೋರ್ಟ್‌ ಅನ್ನು ಬೇರೆಡೆಗೆ ಸ್ಥಳಾಂತರಿಸುವ ಚಿಂತನೆ, ಉದ್ಯಾನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಿಂದ ಮಹತ್ವದ್ದಾಗಿದೆ. ನ್ಯಾಯಾಂಗದ ಅಗತ್ಯಗಳನ್ನು ಪೂರೈಸುವುದರ ಜೊತೆಗೆ, ರಾಜಧಾನಿಯ ಪರಿಸರದ ಹಿತಾಸಕ್ತಿಗೆ ತಕ್ಕಂತೆ ಕಬ್ಬನ್‌ ಉದ್ಯಾನವನ್ನು ಸಂರಕ್ಷಿಸುವ ಉದ್ದೇಶದಿಂದಲೂ ಹೈಕೋರ್ಟ್‌ ಸ್ಥಳಾಂತರಗೊಳ್ಳುವುದು ಉತ್ತಮ. ದಶಕಗಳ ಕಾಲದಿಂದಲೂ ಕಬ್ಬನ್‌ ಉದ್ಯಾನ ಬೆಂಗಳೂರಿಗೆ ಜೀವದುಂಬುವ ಹಸುರುತಾಣಗಳಲ್ಲಿ ಒಂದಾಗಿದೆ; ಮಹಾನಗರದ ಶ್ವಾಸಕೋಶ ಎಂದು ಪ್ರಸಿದ್ಧವಾಗಿದೆ. ಆದರೆ, ಉದ್ಯಾನದ ಪರಿಸರದೊಳಗೆ ಕಾರ್ಯ ನಿರ್ವಹಿಸುವ ಹೈಕೋರ್ಟ್‌ ಚಟುವಟಿಕೆಗಳಿಂದ ಉಂಟಾಗುವ ಒತ್ತಡ ಈ ತಾಣದ ಉಸಿರುಗಟ್ಟಿಸುವಂತಿದೆ. 1870ರಲ್ಲಿ ಮೈಸೂರಿನ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸರ್‌ ಜಾನ್‌ ಮೀಡೆ ಅವರ ಅವಧಿಯಲ್ಲಿ ಹಾಗೂ ಸಂಸ್ಥಾನದ ಮುಖ್ಯ ಎಂಜಿನಿಯರ್‌ ಮೇಜರ್‌ ಜನರಲ್‌ ರಿಚರ್ಡ್‌ ಸ್ಯಾಂಕಿ ಅವರ ಪರಿಕಲ್ಪನೆಯಲ್ಲಿ ನಿರ್ಮಾಣಗೊಂಡ ಉದ್ಯಾನವನ್ನು, ಸಂಸ್ಥಾನದ ಬ್ರಿಟಿಷ್‌ ಆಯುಕ್ತರಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ ಸರ್ ಮಾರ್ಕ್‌ ಕಬ್ಬನ್‌ ಅವರ ಹೆಸರಿನಿಂದ ಕರೆಯಲಾಗಿತ್ತು. ನಂತರದಲ್ಲಿ, ಶ್ರೀ ಚಾಮರಾಜೇಂದ್ರ ಉದ್ಯಾನ ಎಂದು ಮರು ನಾಮಕರಣಗೊಂಡರೂ ಜನಬಳಕೆಯಲ್ಲಿ ‘ಕಬ್ಬನ್‌ ಪಾರ್ಕ್‌’ ಎಂದೇ ಪ್ರಸಿದ್ಧವಾಗಿದೆ. ಸಾರ್ವಜನಿಕ ಕಟ್ಟಡಗಳು ಹಾಗೂ ಕ್ಲಬ್‌ಗಳ ಕಾರ್ಯ ಚಟುವಟಿಕೆಗಳಿಂದಾಗಿ ಮುನ್ನೂರು ಎಕರೆ ‍ಪ್ರದೇಶದಲ್ಲಿದ್ದ ಈ ಉದ್ಯಾನ ಪ್ರಸ್ತುತ 197 ಎಕರೆ ವ್ಯಾಪ್ತಿಗೆ ಸೀಮಿತಗೊಂಡಿದೆ ಹಾಗೂ ಇಲ್ಲಿನ ಪಾರಿಸರಿಕ ಸಮತೋಲನದಲ್ಲೂ ಏರುಪೇರಾಗಿದೆ.

ಹೈಕೋರ್ಟ್‌ ಕಾರ್ಯ ನಿರ್ವಹಿಸುತ್ತಿರುವ ಪ್ರಸಕ್ತ ಕಟ್ಟಡದ ನಿರ್ಮಾಣ ಪೂರ್ಣಗೊಂಡಿದ್ದು 1868ರಲ್ಲಿ. ಹದಿನೆಂಟು ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದ ಈ ಕಟ್ಟಡವನ್ನು ‘ಅಠಾರಾ ಕಚೇರಿ’ ಹೆಸರಿನಿಂದ ಕರೆಯ
ಲಾಗುತ್ತಿತ್ತು. 1956ರಲ್ಲಿ ಹೊಸತಾಗಿ ನಿರ್ಮಾಣಗೊಂಡ ವಿಧಾನಸೌಧಕ್ಕೆ ಆಡಳಿತಾತ್ಮಕ ಕಚೇರಿಗಳು ಸ್ಥಳಾಂತರಗೊಂಡ ನಂತರ, ಅಠಾರಾ ಕಚೇರಿ ಕಟ್ಟಡ ‘ಮೈಸೂರು ಹೈಕೋರ್ಟ್‌’ ಎಂದು ಕರೆಸಿಕೊಂಡು, ನಂತರದಲ್ಲಿ ‘ಕರ್ನಾಟಕ ಹೈಕೋರ್ಟ್‌’ ಎಂದು ಮರು ನಾಮಕರಣಗೊಂಡಿತು. ಕೆಂಪು ಬಣ್ಣದ ಈ ಐತಿಹಾಸಿಕ ಕಟ್ಟಡ ವಸಾಹತು ಯುಗದ ಹೆಗ್ಗುರುತುಗಳಲ್ಲೊಂದಾಗಿ ಉಳಿದುಕೊಂಡಿದೆ. ಆದರೆ, ಸಾವಿರಾರು ವಕೀಲರು, ಕಕ್ಷಿದಾರರು ಹಾಗೂ ವಾಹನಗಳ ನಿಲುಗಡೆಯ ಸದ್ಯದ ಒತ್ತಡವನ್ನು ನಿರ್ವಹಿಸುವ ಧಾರಣಾ ಸಾಮರ್ಥ್ಯ ಈ ಹಳೆಯ ಕಟ್ಟಡ ಹಾಗೂ ಪರಿಸರಕ್ಕಿಲ್ಲ. 2011ರಲ್ಲಿ ವಾಹನಗಳ ನಿಲುಗಡೆಗಾಗಿ ಉದ್ಯಾನದ 4.4 ಎಕರೆ ಪ್ರದೇಶವನ್ನು ನೀಡಿದ್ದ ಸರ್ಕಾರದ ಕ್ರಮವು ಟೀಕೆಗೊಳಗಾಗಿತ್ತು. ಹೈಕೋರ್ಟ್‌ ಕಟ್ಟಡ ಸಮುಚ್ಚಯವನ್ನು ಉದ್ಯಾನದೊಳಗೆ ವಿಸ್ತರಿಸುವ ಪ್ರಸ್ತಾವವನ್ನು, ಸಾರ್ವಜನಿಕರು ಹಾಗೂ ಪರಿಸರವಾದಿಗಳ ವಿರೋಧದಿಂದ ಕೈಬಿಡಲಾಗಿತ್ತು.
ಪ್ರಸ್ತುತ, ಬೇರೊಂದು ಸ್ಥಳದಲ್ಲಿ ನ್ಯಾಯಾಂಗ ಸಮುಚ್ಚಯವನ್ನು ನಿರ್ಮಿಸಬೇಕೆನ್ನುವ ಬೆಂಗಳೂರು ವಕೀಲರ ಸಂಘದ ಚಿಂತನೆ ಸ್ವಾಗತಾರ್ಹ. ಇದರಿಂದಾಗಿ, ಪ್ರಸಕ್ತ ಕಟ್ಟಡದಲ್ಲಿ ಇರುವ ಸ್ಥಳಾವಕಾಶ ಹಾಗೂ ಸೌಲಭ್ಯಗಳ ಕೊರತೆ ನಿವಾರಣೆಯಾಗಲಿದೆ. ಐತಿಹಾಸಿಕ ಕಟ್ಟಡದಲ್ಲಿನ ಧಾರಣಾ ಸಾಮರ್ಥ್ಯದ ಕೊರತೆ, ಹೈಕೋರ್ಟ್‌ ಸ್ಥಳಾಂತರವನ್ನು ಅನಿವಾರ್ಯವಾಗಿಸಿದೆ.

ಮಹಾನಗರದ ವ್ಯಾಪ್ತಿಯಲ್ಲೇ ಹೈಕೋರ್ಟ್‌ಗೆ ಹೊಸ ಜಾಗ ಗುರ್ತಿಸಬೇಕೆನ್ನುವ ಚಿಂತನೆ ಸರಿಯಾದುದು. ಹಾಗೆಯೇ, ಸ್ಥಳಾಂತರದಿಂದ ತೆರವುಗೊಳ್ಳುವ ಕಟ್ಟಡವನ್ನು ಏನು ಮಾಡಬೇಕೆನ್ನುವ ವಿಷಯವೂ ಮುಖ್ಯವಾದುದು. ಐತಿಹಾಸಿಕ ಸ್ಮಾರಕದ ರೂಪದಲ್ಲಿ ಕೆಂಪು ಕಟ್ಟಡವನ್ನು ಸಂರಕ್ಷಿಸಬಹುದಾಗಿದೆ ಹಾಗೂ ವಾಹನ ನಿಲುಗಡೆ ಪ್ರದೇಶವನ್ನು ತೋಟಗಾರಿಕಾ ಇಲಾಖೆಗೆ ಹಿಂತಿರುಗಿಸಬಹುದಾಗಿದೆ. ಸಂಗ್ರಹಾಲಯದ ರೂಪದಲ್ಲಿಯೂ ಪಾರಂಪರಿಕ ಕಟ್ಟಡವನ್ನು ಬಳಸಿಕೊಳ್ಳಬಹುದಾಗಿದೆ. ತನ್ನ ಹಸುರುವಲಯದಲ್ಲಿ ಒಂದಿಂಚು ಪ್ರದೇಶವನ್ನೂ ಕಳೆದುಕೊಳ್ಳುವ ಸ್ಥಿತಿಯಲ್ಲಿ ಇಂದಿನ ಬೆಂಗಳೂರು ಇಲ್ಲ. ಗಿಡಮರಗಳು, ಜೀವವೈವಿಧ್ಯ ಹಾಗೂ ಸಾರ್ವಜನಿಕರಿಗೆ ಲವಲವಿಕೆಯ ತಾಣವಾಗಿ ಕಬ್ಬನ್‌ ಉದ್ಯಾನವನ್ನು ಉಳಿಸಿಕೊಳ್ಳುವುದು ಮುಖ್ಯ. ಕಾಂಕ್ರೀಟು ರಚನೆಗಳು ಮತ್ತು ಆಡಳಿತದ ಚಟುವಟಿಕೆಗಳ ದಟ್ಟಣೆಯ ಪ್ರದೇಶವಾಗಿ ಉದ್ಯಾನ ಉಳಿಯಬಾರದು. ಹೈಕೋರ್ಟ್‌ ಸ್ಥಳಾಂತರ ಆಡಳಿತಾತ್ಮಕ ಅನುಕೂಲದ ವಿಷಯವಷ್ಟೇ ಆಗಿರದೆ, ನ್ಯಾಯಾಂಗ ಪ್ರಕ್ರಿಯೆಯನ್ನು ಹೆಚ್ಚು ಸುರಳೀತಗೊಳಿಸುವ ಹಾಗೂ ಬೆಂಗಳೂರಿನ ಹಸುರು ವಲಯವನ್ನು ಸಂರಕ್ಷಿಸುವ ಮಹತ್ವದ ನಿರ್ಧಾರವೂ ಆಗಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.