ADVERTISEMENT

ಕಸ್ತೂರಿರಂಗನ್‌ ವರದಿ ತಿರಸ್ಕಾರವಿವೇಚನಾಯುತ ನಿರ್ಧಾರ ಬೇಕು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 19:40 IST
Last Updated 20 ಡಿಸೆಂಬರ್ 2018, 19:40 IST
ರರರ
ರರರ   

ಪಶ್ಚಿಮಘಟ್ಟ ಸಂರಕ್ಷಣೆಗೆ ಸಂಬಂಧಿಸಿದಂತೆ ಕಸ್ತೂರಿರಂಗನ್‌ ಸಮಿತಿಯು ನೀಡಿದ್ದ ವರದಿಯ ಸಾಧಕ–ಬಾಧಕಗಳನ್ನು ಪರಿಶೀಲಿಸಲು ರಚಿಸಲಾಗಿದ್ದ ಸಚಿವ ಸಂಪುಟದ ಉಪಸಮಿತಿಯು ಮಹತ್ವದ ಈ ವರದಿಯನ್ನೇ ತಿರಸ್ಕರಿಸಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಕೈಗಾರಿಕೆ ಅಭಿವೃದ್ಧಿ, ಮರಳು ಮತ್ತು ಕಲ್ಲು ಗಣಿಗಾರಿಕೆ, ಜಲವಿದ್ಯುತ್‌ ಯೋಜನೆ ಹಾಗೂ ಸ್ಥಳೀಯ ಅಭಿವೃದ್ಧಿ ಚಟುವಟಿಕೆಗಳಿಗೆ ವರದಿಯ ಅನುಷ್ಠಾನದಿಂದ ಅಡ್ಡಿಯಾಗುತ್ತದೆ ಎನ್ನುವ ಕಾರಣ ನೀಡಿ ಸಮಿತಿಯು ಈ ನಿರ್ಧಾರಕ್ಕೆ ಬಂದಿದೆ. ಇದಕ್ಕೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದು ಸಮಿತಿ ಅಧ್ಯಕ್ಷರಾದ ಅರಣ್ಯ ಸಚಿವ ಆರ್‌. ಶಂಕರ್‌ ವಿಧಾನಪರಿಷತ್ತಿನಲ್ಲಿ ತಿಳಿಸಿದ್ದಾರೆ.

ಈ ತೀರ್ಮಾನಕ್ಕೆ ನಾವು ಅಂಟಿಕೊಂಡರೆ, ಅಪರೂಪದ ಜೀವಜಾಲವನ್ನು ಹೊಂದಿರುವ ಘಟ್ಟದ ಸಂರಕ್ಷಣೆಗೆ ಮಾಡುತ್ತಿರುವ ಪ್ರಯತ್ನಕ್ಕೆ ಅಡ್ಡಿಪಡಿಸಿದ ಕುಖ್ಯಾತಿಗೆ ಕರ್ನಾಟಕ ಪಾತ್ರವಾಗಲಿದೆ. ವರದಿಯ ಬಗ್ಗೆ ಪಶ್ಚಿಮಘಟ್ಟ ‍ಪ್ರದೇಶ ವ್ಯಾಪ್ತಿಯ ಜನರಿಗೆ, ಜನಪ್ರತಿನಿಧಿಗಳಿಗೆ ಸರ್ಕಾರ ಸರಿಯಾದ ಮಾಹಿತಿಯನ್ನೇ ನೀಡಲಿಲ್ಲ. ಊಹಾಪೋಹಗಳೇ ವಿಜೃಂಭಿಸಿದವು. ಕೇಂದ್ರ ಸರ್ಕಾರ ಮೂರು ಸಲ ಹೊರಡಿಸಿದ್ದ ಕರಡು ಅಧಿಸೂಚನೆಗಳನ್ನು ಈ ಊಹಾಪೋಹಗಳ ಆಧಾರದ ಮೇಲೆಯೇ ಕರ್ನಾಟಕ ತಿರಸ್ಕರಿಸಿತ್ತು.

ನಾಲ್ಕನೇ ಸಲ ಕರಡು ಅಧಿಸೂಚನೆ ಹೊರಬಿದ್ದ ನಂತರವೂ ‘ಕಸ್ತೂರಿರಂಗನ್‌ ವರದಿಯನ್ನು ಯಾವುದೇ ಕಾರಣಕ್ಕೂ ಒಪ್ಪುವ ಪ್ರಶ್ನೆಯೇ ಇಲ್ಲ’ ಎಂದು ಕರ್ನಾಟಕ ಪುನರುಚ್ಚರಿಸಿದೆ. ಇದರಿಂದಾಗಿ, ಪಶ್ಚಿಮಘಟ್ಟ ಪರಿಸರಕ್ಕೆ ಪ್ರತಿಕೂಲವಾಗುವ ಅಭಿವೃದ್ಧಿ ಚಟುವಟಿಕೆಗಳಿಂದ ಅದನ್ನು ರಕ್ಷಿಸುವ ಹೊಣೆಗಾರಿಕೆಯಿಂದ ಕರ್ನಾಟಕ ನುಣುಚಿಕೊಂಡಂತಾಗಿದೆ. ಸೂಕ್ಷ್ಮ ವಲಯದ ವ್ಯಾಪ್ತಿಯ ಜನರ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುವಂತೆ ವರದಿಯಲ್ಲಿ ಕೊಂಚ ಮಾರ್ಪಾಟು ಮಾಡಬೇಕು. ಈ ಬಗ್ಗೆ ರಾಜ್ಯ ದನಿ ಎತ್ತಲಿ. ಅದನ್ನು ಬಿಟ್ಟು ಹೀಗೆ ಸಾರಾಸಗಟಾಗಿ ತಿರಸ್ಕರಿಸಲು ಹೋಗುವುದು ವಿಹಿತವಲ್ಲ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಇದನ್ನು ಕೆಟ್ಟ ನಿಲುವು ಎನ್ನಬೇಕಾಗುತ್ತದೆ.

ADVERTISEMENT

ಪಶ್ಚಿಮಘಟ್ಟದ ಶೇ 64ರಷ್ಟು ಭಾಗವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಮಾಧವ ಗಾಡ್ಗೀಳ್‌ ಸಮಿತಿ ಗುರುತಿಸಿತ್ತು. ಈ ವರದಿಯನ್ನು ಪರಿಷ್ಕರಿಸಲು ರಚಿಸಲಾದ ಕಸ್ತೂರಿರಂಗನ್‌ ಸಮಿತಿಯು ಪಶ್ಚಿಮಘಟ್ಟದ ಶೇ 37ರಷ್ಟು ಭಾಗವನ್ನಷ್ಟೇ (60,000 ಚದರ ಕಿ.ಮೀ.) ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿದೆ. ಆದರೆ ಈ ವರದಿಗೆ ಪ್ರತಿರೋಧ ತೋರಿದ ಕೇರಳ ಸರ್ಕಾರ, ರಾಜ್ಯದ ವ್ಯಾಪ್ತಿಯ 3115 ಚದರ ಕಿ.ಮೀ. ಅರಣ್ಯ ಪ್ರದೇಶವನ್ನು ವರದಿಯ ಪರಿಧಿಯಿಂದ ಹೊರಗೆ ಇರಿಸುವಲ್ಲಿ ಯಶಸ್ವಿಯಾಯಿತು.

ಇದೀಗ, ಕರ್ನಾಟಕದ 20,668 ಚ.ಕಿ.ಮೀ., ಮಹಾರಾಷ್ಟ್ರದ 17,340 ಚ.ಕಿ.ಮೀ., ಕೇರಳದ 9,993 ಚ.ಕಿ.ಮೀ., ತಮಿಳುನಾಡಿನ 6916 ಚ.ಕಿ.ಮೀ., ಗೋವಾದ 1,461 ಚ.ಕಿ.ಮೀ. ಮತ್ತು ಗುಜರಾತ್‌ನ 449 ಚ.ಕಿ.ಮೀ. ಪರಿಸರ ಸೂಕ್ಷ್ಮಪ್ರದೇಶವೆಂದು ಗುರುತಿಸಿ ಕರಡು ಅಧಿಸೂಚನೆ ಹೊರಡಿಸಲಾಗಿದೆ. 2017ರಲ್ಲಿ ತಮಿಳುನಾಡು ಸರ್ಕಾರವು ಕೆಲ ತಕರಾರುಗಳೊಂದಿಗೆ ವರದಿಗೆ ಒಪ್ಪಿಗೆ ನೀಡಿದೆ. ಕರ್ನಾಟಕ ಮಾತ್ರ ಕರಡು ಅಧಿಸೂಚನೆಗಳನ್ನು ತಿರಸ್ಕರಿಸುತ್ತಲೇ ಬಂದಿದೆ.

ಇದು, ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯದ ಸಂಘರ್ಷಕ್ಕೆ ಕಾರಣವಾಗಬಹುದು. ವರದಿಗೆ ಭಾರಿ ವಿರೋಧ ತೋರಿದ ಕೇರಳ ಮತ್ತು ತಮಿಳುನಾಡು ಸಹ ಇಂದು ವರದಿಗೆ ಒಪ್ಪಿಗೆ ನೀಡಿವೆ. ಆದರೆ ಕರ್ನಾಟಕವನ್ನು ಹೊರಗಿಟ್ಟು ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರ ವಲಯವನ್ನು ರಕ್ಷಿಸಲು ಸಾಧ್ಯವಾಗದು. ಈ ವರ್ಷದ ಮುಂಗಾರಿನಲ್ಲಿ ಕೊಡಗು ಜಿಲ್ಲೆಯಲ್ಲಿ ನಡೆದ ಪ್ರಕೃತಿ ವಿಕೋಪಕ್ಕೆ ಅನಿಯಂತ್ರಿತ ಅಭಿವೃದ್ಧಿಯೂ ಒಂದು ಕಾರಣ ಎಂಬ ಮಾತಿದೆ. ಹಾಗಾಗಿರಾಜ್ಯ ಸರ್ಕಾರ ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.