ADVERTISEMENT

ಪ್ರತಿಮಾ ರಾಜಕಾರಣಕ್ಕೆ ಕಾವೇರಿ ಬಳಕೆಯಾಗದಿರಲಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 16:18 IST
Last Updated 21 ನವೆಂಬರ್ 2018, 16:18 IST
   

ವಿಶ್ವಪ್ರಸಿದ್ಧ ‘ಬೃಂದಾವನ ಉದ್ಯಾನ’ದಲ್ಲಿ (ಕೆಆರ್‌ಎಸ್‌) 125 ಅಡಿ ಎತ್ತರದ ಕಾವೇರಿ ಮಾತೆಯ ಪ್ರತಿಮೆಯನ್ನು ಸ್ಥಾಪಿಸುವ ರಾಜ್ಯ ಸರ್ಕಾರದ ಉದ್ದೇಶ ಅಪ್ರಬುದ್ಧ ಚಿಂತನೆ ಹಾಗೂ ಅಗ್ಗದ ಜನಪ್ರಿಯ ಯೋಜನೆ. ₹ 1200 ಕೋಟಿ ವೆಚ್ಚದಲ್ಲಿ ಕೆಆರ್‌ಎಸ್‌ ಉದ್ಯಾನವನ್ನು ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಉತ್ಸಾಹ ವ್ಯಕ್ತಪಡಿಸುತ್ತಿರುವ ಸರ್ಕಾರ, ಯೋಜನೆಯ ಸಾಧಕ ಬಾಧಕಗಳನ್ನು ಕುರಿತು ಆಳವಾಗಿ ಯೋಚಿಸಿದಂತೆ ಕಾಣಿಸುತ್ತಿಲ್ಲ. ಪ್ರತಿಮೆಯ ಜೊತೆಗೆ 360 ಅಡಿ ಎತ್ತರದ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಸಮುಚ್ಚಯದಲ್ಲಿ ವೀಕ್ಷಣಾ ಗೋಪುರ, ಗಾಜಿನಮನೆ, ಒಳಾಂಗಣ ಕ್ರೀಡಾಂಗಣ, ಇತಿಹಾಸವನ್ನು ಪರಿಚಯಿಸುವ ಗ್ಯಾಲರಿಗಳು ಇರಲಿವೆ ಎನ್ನಲಾಗಿದೆ. ಇಷ್ಟೆಲ್ಲ ನಿರ್ಮಾಣಗಳನ್ನು ತಾಳಿಕೊಳ್ಳುವ ಧಾರಣಾಶಕ್ತಿ ಜಲಾಶಯದ ಪರಿಸರಕ್ಕಿದೆಯೇ,
ಉದ್ದೇಶಿತ ಯೋಜನೆಯಿಂದ ಅಣೆಕಟ್ಟೆಗೆ ಏನಾದರೂ ಅಪಾಯ ಉಂಟಾಗಬಹುದೇ ಎನ್ನುವ ಬಗ್ಗೆ ಸರ್ಕಾರ ಏನನ್ನೂ ಹೇಳಿಲ್ಲ. ಆದರೆ, ಜಲಾಶಯದ ಸುತ್ತಮುತ್ತ ನಿರ್ಮಾಣ ಕಾಮಗಾರಿ ಕೈಗೊಳ್ಳುವುದರಿಂದ ಪರಿಸರಕ್ಕೆ ಹಾನಿಯಾಗುವ ಸಾಧ್ಯತೆಯಿದೆ ಎಂದು ಎಂಜಿನಿಯರ್‌ಗಳು ಹೇಳುತ್ತಿದ್ದಾರೆ. ಪ್ರತಿಮೆಯ ನಿರ್ಮಾಣದ ಅಡಿಪಾಯಕ್ಕಾಗಿ ಕನಿಷ್ಠ 40 ಅಡಿ ಆಳದ ಗುಂಡಿ ತೋಡುವ ಅಗತ್ಯವಿದ್ದು, ಇದರಿಂದ ಜಲಾಶಯದ ಸುರಕ್ಷತೆಗೆ ಅಪಾಯ ಉಂಟಾಗಲಿದೆ ಎನ್ನುವುದು ತಜ್ಞರ ಅನಿಸಿಕೆ. ಭೂಕಂಪ ವಲಯದಲ್ಲಿ ಇರುವುದರಿಂದ ಕೂಡ ಕೆಆರ್‌ಎಸ್‌ ಪರಿಸರದಲ್ಲಿ ನಿರ್ಮಾಣ ಕಾಮಗಾರಿಗಳನ್ನು ನಡೆಸುವುದು ಸರಿಯಲ್ಲ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗಿದೆ. ಸರ್ಕಾರದ ಉದ್ದೇಶಿತ ಯೋಜನೆಗೆ ಸುಮಾರು 400 ಎಕರೆ ಭೂಮಿ ಬೇಕಾಗಿದ್ದು, ಕೃಷಿ ಭೂಮಿಯನ್ನು ಮನರಂಜನಾ ಉದ್ದೇಶಕ್ಕೆ ಬಳಸುವುದು ಸೂಕ್ತವಲ್ಲ ಎನ್ನುವ ರೈತ ಮುಖಂಡರ ವಾದವನ್ನೂ ಇಲ್ಲಿ ಗಮನಿಸಬೇಕು.

ಉದ್ದೇಶಿತ ಯೋಜನೆಯನ್ನು ಸರ್ಕಾರವು ಖಾಸಗಿ ಸಹಭಾಗಿತ್ವದಲ್ಲಿ ಪೂರ್ಣಗೊಳಿಸಲು ಮುಂದಾಗಿದ್ದು, ಭೂಮಿ ನೀಡುವಷ್ಟಕ್ಕೆ ಮಾತ್ರ ತನ್ನ ಜವಾಬ್ದಾರಿಯನ್ನು ಸೀಮಿತಗೊಳಿಸಿಕೊಂಡಿದೆ. ಸಾವಿರಾರು ಕೋಟಿ ರೂಪಾಯಿ ಬಂಡವಾಳವನ್ನು ಖಾಸಗಿಯವರು ಹೂಡುವುದರಿಂದ ಉಂಟಾಗುವ ದೂರಗಾಮಿ ಪರಿಣಾಮಗಳನ್ನು ಊಹಿಸುವುದು ಕಷ್ಟವೇನಲ್ಲ. ಪ್ರಸ್ತುತ ಜನಸಾಮಾನ್ಯರ ಕೈಗೆಟಕುವ ಬೃಂದಾವನವನ್ನು ಐಷಾರಾಮಿ ಸ್ಥಳವಾಗಿಸುವುದು ಜನಪರವೂ ಅಲ್ಲ, ಜಲಾಶಯ ನಿರ್ಮಾಣದ ಮೂಲ ಉದ್ದೇಶಕ್ಕೆ ಪ್ರಸ್ತುತ ಯೋಜನೆ ತಕ್ಕುದಾಗಿಯೂ ಇಲ್ಲ. ಇಷ್ಟೆಲ್ಲ ಕಾಮಗಾರಿಯ ನಂತರ ಸರ್ಕಾರಕ್ಕೆ ಬರುವ ವಾರ್ಷಿಕ ಆದಾಯ ಕೇವಲ ₹ 30 ಕೋಟಿ ಎನ್ನುವುದು ಕೂಡ ಯೋಜನೆಯ ಹಿಂದಿನ ಖಾಸಗಿ ಹಿತಾಸಕ್ತಿಯನ್ನು ಸೂಚಿಸುವಂತಿದೆ. ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆ ಎಂದು ಬಣ್ಣಿಸಲಾಗುತ್ತಿರುವ ಗುಜರಾತ್‌ನ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಸ್ಥಾವರ ‘ಕಾವೇರಿ ಪ್ರತಿಮೆ’ಗೆ ಪ್ರೇರಣೆಯಂತಿದೆ. ಪಟೇಲ್ ಪ್ರತಿಮೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್‌ ಪಕ್ಷದ ಮುಖಂಡರೇ ಕಾವೇರಿ ಪ್ರತಿಮೆಯ ಯೋಜನೆಯ ಹಿಂದಿರುವುದು ಸಮಕಾಲೀನ ಪ್ರತಿಮಾ ರಾಜಕಾರಣದ ವಿರೋಧಾಭಾಸವಾಗಿದೆ.

ಸಮುದಾಯದ ಅಭಿಮಾನ, ಕೃತಜ್ಞತೆಗಳ ರೂಪಕವಾಗಬೇಕಿದ್ದ ಪ್ರತಿಮೆಗಳು ರಾಜಕಾರಣದ ಮೇಲಾಟ ಹಾಗೂ ಆರ್ಥಿಕ ಹಿತಾಸಕ್ತಿಯ ರೂಪ ಪಡೆದಿರುವುದು ಸಾಮಾಜಿಕ ದುರಂತ. ಬೃಂದಾವನ ಉದ್ಯಾನವನ್ನು ವಿಶ್ವದರ್ಜೆಯ ಪ್ರವಾಸಿಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಮಾತನ್ನೂ ಸರ್ಕಾರ ಆಡಿದೆ. ಆದರೆ, ರಾಜ್ಯದಲ್ಲಿನ ವಿಶ್ವಪ್ರಸಿದ್ಧ ಪ್ರವಾಸಿಕೇಂದ್ರಗಳನ್ನು ನಾವು ಯಾವ ರೀತಿ ಅಭಿವೃದ್ಧಿಪಡಿಸಿದ್ದೇವೆ ಎನ್ನುವುದನ್ನು ನೋಡಿದರೆ ಸರ್ಕಾರದ ಕಾಳಜಿಯ ನೈಜತೆ ಬಹಿರಂಗವಾಗುತ್ತದೆ. ಬಹುತೇಕ ‍ಪ್ರವಾಸಿಸ್ಥಳಗಳು ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಈಗಾಗಲೇ ಇರುವ ಪ್ರವಾಸೋದ್ಯಮದ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗದವರು, ಹೊಸ ಅವಕಾಶಗಳನ್ನು ಸೃಷ್ಟಿಸಹೊರಡುವುದು ತಮಾಷೆಯಾಗಿದೆ. ಜವಾಬ್ದಾರಿಯುತ ಸರ್ಕಾರವೊಂದು ವಾಸ್ತವಿಕ ನೆಲೆಗಟ್ಟಿನಲ್ಲಿ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸಬೇಕು. ಅದನ್ನು ಹೊರತುಪಡಿಸಿ ಪ್ರತಿಮಾ ರಾಜಕಾರಣದಲ್ಲಿ ತೊಡಗುವುದು ಜನರನ್ನು ಮರುಳುಗೊಳಿಸುವ ಭಾವನಾತ್ಮಕ ತಂತ್ರವಲ್ಲದೆ ಬೇರೇನೂ ಅಲ್ಲ. ರೈತಪರ ಎಂದು ಹೇಳಿಕೊಳ್ಳುತ್ತಿರುವ ಸರ್ಕಾರ, ಕಾವೇರಿ ಪ್ರತಿಮೆಯ ಯೋಜನೆಯನ್ನು ಕೈಬಿಡುವುದು ಜಲಾಶಯದ ಸುರಕ್ಷತೆಯ ದೃಷ್ಟಿಯಿಂದಲೂ ರೈತರ ಹಿತದೃಷ್ಟಿಯಿಂದಲೂ ಒಳ್ಳೆಯದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.