ಭಾರತದ ಅಪ್ಪಟ ದೇಶಿ ಕ್ರೀಡೆ ಕೊಕ್ಕೊಗೆ ಈಗ ವಿಶ್ವಕಿರೀಟದ ಹೆಗ್ಗಳಿಕೆ. ನವದೆಹಲಿಯಲ್ಲಿ ಮುಕ್ತಾಯಗೊಂಡ ಕೊಕ್ಕೊ ಮೊದಲ ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಭಾರತದ ಮಹಿಳಾ ಮತ್ತು ಪುರುಷ ತಂಡಗಳೆರಡೂ ಚಾಂಪಿಯನ್ ಪಟ್ಟಕ್ಕೇರಿವೆ. ದೇಶದ ವಿವಿಧ ಗ್ರಾಮೀಣ ಪ್ರದೇಶಗಳಿಂದ ಬಂದ ಆಟಗಾರರು ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡು ಸಂಭ್ರಮಿಸಿದ್ದು ಚಾರಿತ್ರಿಕ ಬೆಳವಣಿಗೆ. ಅದರಲ್ಲಿ ಮೈಸೂರು ಜಿಲ್ಲೆಯ ಕುರುಬೂರಿನ ಬಿ. ಚೈತ್ರಾ ಮತ್ತು ಬೆಂಗಳೂರಿನ ಎಂ.ಕೆ. ಗೌತಮ್ ಅವರೂ ಇದ್ದರು. ಇದರೊಂದಿಗೆ ಈ
ಕ್ರೀಡೆಗೆ ಜಾಗತಿಕ ಮಾರುಕಟ್ಟೆಯ ಬಾಗಿಲು ತೆರೆದುಕೊಂಡಿರುವುದು ಕೂಡ ಗಮನಾರ್ಹ. ಈ ಟೂರ್ನಿಯಲ್ಲಿ 23 ದೇಶಗಳಿಗೆ ಸೇರಿದ ತಂಡಗಳು ಭಾಗವಹಿಸಿದ್ದವು. ಏಷ್ಯಾದ ರಾಷ್ಟ್ರಗಳ ತಂಡಗಳಲ್ಲದೆ ಜರ್ಮನಿ, ನೆದರ್ಲೆಂಡ್ಸ್, ಅರ್ಜೆಂಟಿನಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ಪೋಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಅಮೆರಿಕದ ತಂಡಗಳೂ ಇದ್ದವು. ಪುರುಷರ ವಿಭಾಗದಲ್ಲಿ 20 ಹಾಗೂ ಮಹಿಳೆಯರ ವಿಭಾಗದಲ್ಲಿ 19 ತಂಡಗಳು ಸ್ಪರ್ಧಿಸಿದ್ದವು. ದೇಶದ ಬಹುತೇಕ ಶಾಲೆ, ಕಾಲೇಜುಗಳ ದೈಹಿಕ ಶಿಕ್ಷಣದಲ್ಲಿ ಕೊಕ್ಕೊ ಆಟಕ್ಕೆ ಪ್ರಾಶಸ್ತ್ಯ ಇದೆ. ಆದರೆ ಕ್ರಿಕೆಟ್ ಭರಾಟೆಯಲ್ಲಿ ನಗರ ಪ್ರದೇಶಗಳಲ್ಲಿ ಕೊಕ್ಕೊ ಬೇರೂರಿಲ್ಲ. ಆದ್ದರಿಂದ ಇಂದಿಗೂ ಗ್ರಾಮೀಣ ಪ್ರತಿಭೆಗಳೇ ಈ ಆಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ವಿಶ್ವಕಪ್‌ನಲ್ಲಿ ಸ್ಪರ್ಧಿಸಿದ ಭಾರತ ತಂಡ
ಗಳಲ್ಲಿದ್ದ ಹೆಚ್ಚಿನ ಸಂಖ್ಯೆಯ ಆಟಗಾರರು ಹಳ್ಳಿಗಳಿಂದ ಬಂದವರೇ ಆಗಿದ್ದರು. ಉತ್ತಮ ಆಟಗಾರ್ತಿಯಾಗಿ ಗಮನ ಸೆಳೆದ ಚೈತ್ರಾ ಅವರ ಊರು ಕುರುಬೂರಿನಲ್ಲಿ 14 ವರ್ಷಗಳಿಂದ ಕೊಕ್ಕೊ ತರಬೇತಿ ಉತ್ತುಂಗದಲ್ಲಿದೆ. ಆದರೆ ಅಲ್ಲಿ ಕೊಕ್ಕೊ ಮೈದಾನವೇ ಇಲ್ಲ. ಇಲ್ಲಿಯ ಗಣಿತ ಶಿಕ್ಷಕ ಮಂಜುನಾಥ್ ಎಂಬುವರ ಆಸಕ್ತಿಯಿಂದಾಗಿ ಹಲವಾರು ಮಕ್ಕಳು ಭಾರತ ತಂಡದಲ್ಲಿ ಸ್ಥಾನ ಪಡೆಯುವ ಮಟ್ಟಕ್ಕೆ ಬೆಳೆದಿದ್ದಾರೆ.
ಈ ವಿಶ್ವಕಪ್ ಟೂರ್ನಿಯು ಕೊಕ್ಕೊ ಆಟಕ್ಕೆ ಹೊಸ ಭರವಸೆ ತುಂಬಿದೆ. ಈ ಹಂತದಲ್ಲಿ ಭಾರತ ಕೊಕ್ಕೊ ಫೆಡರೇಷನ್ (ಕೆಕೆಎಫ್‌ಐ) ಮತ್ತು ರಾಜ್ಯ ಕೊಕ್ಕೊ ಸಂಸ್ಥೆಗಳು ಹೆಚ್ಚು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ. ಗ್ರಾಮೀಣ ಭಾಗದಲ್ಲಿ ಕಬಡ್ಡಿ ಮತ್ತು ಕೊಕ್ಕೊ ಎರಡೂ ಸಮಾನ ಜನಪ್ರಿಯತೆ ಹೊಂದಿದ್ದವು. ಆದರೆ ಕಬಡ್ಡಿ ಬಹುಬೇಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿತು. ಏಷ್ಯನ್ ಗೇಮ್ಸ್, ವಿಶ್ವಕಪ್ ಟೂರ್ನಿಗಳಲ್ಲಿ ಸ್ಥಾನ ಪಡೆಯಿತು. ಇವತ್ತು ವಿದೇಶಗಳಲ್ಲಿ ಭಾರತದ ತರಬೇತುದಾರರು ಕಬಡ್ಡಿ ಕಲಿಸುತ್ತಿರುವುದರಿಂದ ಸ್ಪರ್ಧೆಯ ಗುಣಮಟ್ಟ ಹೆಚ್ಚುತ್ತಿದೆ. ಅದೇ ರೀತಿ ಕೊಕ್ಕೊ ಕೂಡ ನೆಲೆ ವಿಸ್ತರಿಸಿ ಕೊಳ್ಳಬೇಕು. 1936ರ ಬರ್ಲಿನ್ ಒಲಿಂಪಿಕ್ ಕೂಟದಲ್ಲಿಯೇ ಕೊಕ್ಕೊ ಪ್ರದರ್ಶನ ಕ್ರೀಡೆಯಾಗಿತ್ತು. ಆದರೂ ಕಬಡ್ಡಿ ರೀತಿಯಲ್ಲಿ ಕೊಕ್ಕೊ ಆಟವನ್ನು ಉನ್ನತ ಸ್ಥಾನಕ್ಕೇರಿಸುವಲ್ಲಿ ಆಡಳಿತಗಾರರು ಸಫಲರಾಗಲಿಲ್ಲ. ಆದ್ದರಿಂದಲೇ ವಿಶ್ವಕಪ್ ಟೂರ್ನಿ ಆಯೋಜಿಸಲು ಇಷ್ಟು ದೀರ್ಘ ಕಾಲ ಕಾಯಬೇಕಾಯಿತು. ಆದರೆ ಈಗ ಅಂತಹ ತಪ್ಪು ಮರುಕಳಿಸದಂತೆ ನೋಡಿಕೊಳ್ಳಬೇಕು. ಸ್ವದೇಶ ಮತ್ತು ವಿದೇಶಗಳಲ್ಲಿ ಕೊಕ್ಕೊ ಅಭಿವೃದ್ಧಿಗೊಳಿಸುವತ್ತ ಕಾರ್ಯಪ್ರವೃತ್ತರಾಗಬೇಕು. ನುರಿತ ತರಬೇತುದಾರರು, ತಾಂತ್ರಿಕ ಸಲಹೆಗಾರರನ್ನು ಸಿದ್ಧಗೊಳಿಸಬೇಕು. ವಿದೇಶಗಳ ಕೊಕ್ಕೊ ತಂಡಗಳಿಗೆ ತರಬೇತು
ದಾರರಾಗಿ ಹೋಗಲು ಭಾರತೀಯರಿಗೆ ಹೆಚ್ಚು ಅವಕಾಶ ಸಿಗುವಂತಾಗಬೇಕು. ಈ ಕ್ರೀಡೆಯಲ್ಲಿ ಗಾಯದ ಸಮಸ್ಯೆ ಹೆಚ್ಚು. ಆದ್ದರಿಂದ ಕ್ರೀಡಾ ವೈದ್ಯಕೀಯ ವಿಜ್ಞಾನ ಪರಿಣತರನ್ನೂ ಒಳಗೊಳ್ಳಬೇಕು. ಒಂದು ವೃತ್ತಿಪರ ವ್ಯವಸ್ಥೆ ರೂಪುಗೊಳ್ಳಬೇಕು. ಇದರಿಂದಾಗಿ ಆಟಗಾರರಿಗೆ ಹಾಗೂ ಸಂಬಂಧಿತ ಪರಿಣತರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ಕೊಕ್ಕೊ ಆಡುವ ದೇಶಗಳ ಸಂಖ್ಯೆ ಹೆಚ್ಚಾದಾಗ ಸಹಜವಾಗಿಯೇ ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಮತ್ತು ಒಲಿಂಪಿಕ್ ಕೂಟಗಳಲ್ಲಿ ಸ್ಥಾನ ಸಿಗುತ್ತದೆ. ಆದರೆ, ವಿದೇಶಗಳಲ್ಲಿ ಕೊಕ್ಕೊ ಕ್ರೀಡೆಯನ್ನು ಜನಪ್ರಿಯಗೊಳಿಸುವ ಭರಾಟೆಯಲ್ಲಿ ನಾವು ಮೈಮರೆಯಬಾರದು. ಈ ಕ್ರೀಡೆಯಲ್ಲಿ ನಾವೀನ್ಯ ಮತ್ತು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳು ವತ್ತಲೂ ಮುಕ್ತವಾಗಿರಬೇಕು. ಈಗ ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರೆ ಭಾರತದ ದೇಶಿ ಕ್ರೀಡೆಯು ವಿಶ್ವಮಟ್ಟದಲ್ಲಿ ಉತ್ತುಂಗಕ್ಕೆ ಏರಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.