ಸ್ವಯಂಕೃತ ತಪ್ಪುಗಳಿಂದಾಗಿ ಕೆ.ಎನ್. ರಾಜಣ್ಣ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಮಾತಿನ ಮೂಲಕ ಸದ್ದು ಮಾಡುವ ರಾಜಕಾರಣಿಗಳಿಗೆ ‘ರಾಜಣ್ಣ ಪ್ರಕರಣ’ ಪಾಠದಂತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತವಲಯದ ಮುಂಚೂಣಿ ಸೇನಾನಿಯಂತೆ ಗುರುತಿಸಿಕೊಂಡಿದ್ದ ಕೆ.ಎನ್. ರಾಜಣ್ಣ ಅವರು, ‘ಮತ ಕಳವು’ ಆರೋಪಕ್ಕೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಮಾತಿಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದ ಕಾರಣಕ್ಕಾಗಿ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಕೇಂದ್ರ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ಅಧಿಕಾರ ಹಿಡಿಯುತ್ತಿದೆ ಎಂಬ ಗಂಭೀರವಾದ ಆರೋಪ ಮಾಡಿರುವ ರಾಹುಲ್ ಗಾಂಧಿಯವರು, ಅದಕ್ಕೆ ಪೂರಕವಾಗಿ ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 2024ರ ಲೋಕಸಭಾ ಚುನಾವಣೆಗೆ ಬಳಸಿದ್ದ ಮತದಾರರ ಪಟ್ಟಿಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ಬಹಿರಂಗಪಡಿಸಿದ್ದರು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಮೈತ್ರಿಕೂಟದ ನೇತೃತ್ವ ವಹಿಸಿರುವ ಬಿಜೆಪಿಯು ಕೇಂದ್ರ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳನ್ನು ಚುನಾವಣೆಗಳಲ್ಲಿ ಸೋಲಿಸುತ್ತಿದೆ ಎಂಬ ಆರೋಪವನ್ನು ಮುಂದಿಟ್ಟುಕೊಂಡು ದೇಶವ್ಯಾಪಿ ಪ್ರಬಲವಾದ ಹೋರಾಟವೊಂದನ್ನು ರೂಪಿಸಲು ರಾಹುಲ್ ಗಾಂಧಿ ಮುಂದಾಗಿದ್ದಾರೆ. ಈ ಪ್ರಯತ್ನಕ್ಕೆ ಕಾಂಗ್ರೆಸ್‌ನೊಂದಿಗೆ ವಿರೋಧ ಪಕ್ಷಗಳನ್ನು ಒಳಗೊಂಡಿರುವ ‘ಇಂಡಿಯಾ’ ಮೈತ್ರಿಕೂಟವೂ ದನಿಗೂಡಿಸಿದೆ. ಈ ಸಂದರ್ಭದಲ್ಲಿ ತಮ್ಮ ನಾಯಕನ ಮಾತಿಗೆ ವಿರುದ್ಧವಾದ ಹೇಳಿಕೆ ನೀಡುವ ಮೂಲಕ ರಾಜಣ್ಣ ಆಪತ್ತು ತಂದುಕೊಂಡಿದ್ದಾರೆ.ರಾಹುಲ್ ಆರೋಪದಿಂದ ಇಕ್ಕಟ್ಟಿಗೆ ಸಿಲುಕಿದ್ದ ಬಿಜೆಪಿಗೆ ರಾಜಣ್ಣ ಹೇಳಿಕೆ ವರದಾನವಾಗಿತ್ತು. ಅದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರನ್ನು ಮುಜುಗರಕ್ಕೆ ಈಡುಮಾಡಲು ಬಿಜೆಪಿ ತಂತ್ರಗಾರಿಕೆ ರೂಪಿಸತೊಡಗಿತ್ತು. ಇದು ಕಾಂಗ್ರೆಸ್ ನಾಯಕತ್ವವು ರಾಜಣ್ಣ ಅವರನ್ನು ಕಠಿಣವಾಗಿ ಶಿಕ್ಷಿಸಲು ಎಡೆ ಮಾಡಿಕೊಟ್ಟಿತು. ಸಾಮಾನ್ಯ ಸಂದರ್ಭಗಳಲ್ಲಿ ಪಕ್ಷದ ನಾಯಕತ್ವವು ರಾಜೀನಾಮೆ ಪಡೆಯುವ ಮಾರ್ಗವನ್ನು ಆಯ್ದುಕೊಳ್ಳುತ್ತದೆ. ಆದರೆ, ಅದಕ್ಕೆ ಅವಕಾಶವನ್ನೇ ನೀಡದೆ ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಲಾಗಿದೆ.
26 ತಿಂಗಳಿನಿಂದ ಸಚಿವರಾಗಿದ್ದ ರಾಜಣ್ಣ ಅವರು, ಪದೇ ಪದೇ ಲಕ್ಷ್ಮಣರೇಖೆಯನ್ನು ಮೀರಿ ಮಾತನಾಡಿ, ವಿವಾದಗಳನ್ನು ಸೃಷ್ಟಿಸುತ್ತಲೇ ಇದ್ದರು. ಅಧಿಕಾರ ಹಂಚಿಕೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿ, ಹೀಗೆ ಹಲವು ವಿಷಯಗಳಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಕ್ರಾಂತಿ ಆಗಲಿದೆ ಎಂಬ ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷದೊಳಗೆ ತಲ್ಲಣ ಸೃಷ್ಟಿಸಿದ್ದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು– ಸಚಿವರು, ಶಾಸಕರ ಜೊತೆ ನಡೆಸಿದ್ದ ಸಭೆಗೆ ಗೈರಾಗಿದ್ದಲ್ಲದೇ, ಸುರ್ಜೇವಾಲಾ ವಿರುದ್ಧ ಬಹಿರಂಗವಾಗಿಯೇ ಹರಿಹಾಯ್ದಿದ್ದರು. ಇದು ಕಾಂಗ್ರೆಸ್ ನಾಯಕತ್ವವನ್ನು ರಾಷ್ಟ್ರಮಟ್ಟದಲ್ಲಿ ಮುಜುಗರಕ್ಕೆ ಸಿಲುಕಿಸಿತ್ತು. ಸಚಿವ ಸ್ಥಾನವು ಸಾಮೂಹಿಕ ಜವಾಬ್ದಾರಿಯನ್ನು ಒಳಗೊಂಡಿರುತ್ತದೆ. ಸಚಿವರೊಬ್ಬರು ಆಡುವ ಮಾತು ಸರ್ಕಾರ ಮತ್ತು ಆಡಳಿತ ಪಕ್ಷವನ್ನು ಪ್ರತಿನಿಧಿಸುತ್ತದೆ. ಸಚಿವರ ಮಾತಿಗೆ ಸರ್ಕಾರ ಮತ್ತು ಆಡಳಿತ ಪಕ್ಷ ಉತ್ತರದಾಯಿ ಆಗಬೇಕಾಗುತ್ತದೆ. ಸಾಮೂಹಿಕ ಹೊಣೆಗಾರಿಕೆಯನ್ನು ಮರೆತವರಂತೆ ರಾಜಣ್ಣ ಹೇಳಿಕೆಗಳನ್ನು ನೀಡುತ್ತಿದ್ದರು. ಸರ್ಕಾರ ಮತ್ತು ಪಕ್ಷದಲ್ಲಿನ ಚೌಕಟ್ಟು, ನಿಯಮಗಳು ತನಗೆ ಅನ್ವಯವಾಗುವುದಿಲ್ಲ ಎಂಬಂತೆ ಧಾರ್ಷ್ಟ್ಯದಿಂದ ನಡೆದುಕೊಳ್ಳುತ್ತಿದ್ದರು. ಇಲಾಖೆಗೆ ಸಂಬಂಧಿಸಿದ ವಿಷಯಗಳಿಗಿಂತಲೂ ಹೆಚ್ಚಾಗಿ ವಿವಾದಾತ್ಮಕ ರಾಜಕೀಯ ಹೇಳಿಕೆಗಳಿಂದಲೇ ಸದಾ ಸದ್ದು ಮಾಡುತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ರಾಜಣ್ಣ ಇದ್ದಾರೆ ಎಂಬ ಕಾರಣಕ್ಕಾಗಿಯೇ ಕಾಂಗ್ರೆಸ್ ಹೈಕಮಾಂಡ್ ಅವರ ವಿರುದ್ಧ ಕ್ರಮ ಜರುಗಿಸುವ ಪ್ರಯತ್ನ ಮಾಡಿರಲಿಲ್ಲ. ಆದರೆ, ಈಗ ರಾಹುಲ್ ಗಾಂಧಿಯವರ ನಡೆಯ ವಿರುದ್ಧವೇ ರಾಜಣ್ಣ ಹೇಳಿಕೆ ನೀಡಿದ್ದರಿಂದ ಪಕ್ಷದ ಹೈಕಮಾಂಡ್ ಸಚಿವ ಸ್ಥಾನ ಕಿತ್ತುಕೊಳ್ಳುವ ಅತಿ ಕಠಿಣ ಕ್ರಮದ ಅಸ್ತ್ರ ಝಳಪಿಸಿದೆ. ಕಾಂಗ್ರೆಸ್ ಹೈಕಮಾಂಡ್ ಈ ಹಿಂದೆಯೇ ಶಿಸ್ತುಕ್ರಮದ ಹೆಜ್ಜೆ ಇಟ್ಟಿದ್ದರೆ, ವಿಧಾನಮಂಡಲ ಅಧಿವೇಶನದ ಆರಂಭದ ದಿನವೇ ಸಚಿವರೊಬ್ಬರನ್ನು ಸಂಪುಟದಿಂದ ವಜಾಗೊಳಿಸಬೇಕಾದ ಇಕ್ಕಟ್ಟಿಗೆ ಸಿಲುಕುತ್ತಿರಲಿಲ್ಲ.
ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ಕಿತ್ತುಹಾಕಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಪ್ರಜಾಪ್ರಭುತ್ವದ ಕುರಿತ ಚರ್ಚೆಯೂ ಜೋರಾಗಿದೆ. ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿರುವ ತೀರ್ಮಾನ ರಾಹುಲ್ ಗಾಂಧಿಯವರು ಪ್ರತಿಪಾದಿಸುವ ಆಂತರಿಕ ಪ್ರಜಾಪ್ರಭುತ್ವದ ನಿಲುವಿಗೆ ವಿರುದ್ಧವಾದುದು ಎಂಬ ಆಕ್ಷೇಪವೂ ವ್ಯಕ್ತವಾಗಿದೆ. ಸಂಪುಟದಿಂದ ವಜಾಗೊಳಿಸುವ ಮುನ್ನ ತಮ್ಮ ವಿರುದ್ಧದ ಆರೋಪದ ಕುರಿತು ಸಮಜಾಯಿಷಿ ನೀಡುವ ಒಂದು ಅವಕಾಶವನ್ನಾದರೂ ಅವರಿಗೆ ನೀಡಬೇಕಿತ್ತು. ಈ ಹಂತದಲ್ಲಿ ರಾಜಣ್ಣ ಅವರನ್ನು ಶಿಕ್ಷಿಸುವ ನಿರ್ಧಾರದ ಹಿಂದೆ ಪಕ್ಷದೊಳಗಿನ ಅವರ ವಿರೋಧಿಗಳ ಪ್ರಯತ್ನವೂ ಫಲಿಸಿರಬಹುದು. ಆದರೆ, ವಾಚಾಳಿತನ, ಪಕ್ಷದ ನಾಯಕತ್ವವನ್ನೇ ಧಿಕ್ಕರಿಸಿ ಹೇಳಿಕೆ ನೀಡುವಂತಹ ಸ್ವಯಂಕೃತ ತಪ್ಪುಗಳಿಗೆ ರಾಜಣ್ಣ ಬೆಲೆ ತೆತ್ತಿದ್ದಾರೆ. ಇದು ಮಾತಿನ ಮೂಲಕವೇ ಸದ್ದು ಮಾಡಬೇಕೆನ್ನುವ ಚಾಳಿ ಹೊಂದಿರುವ ರಾಜಕಾರಣಿಗಳಿಗೆ ಪಾಠವಾಗಬಲ್ಲ ನಿದರ್ಶನದಂತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.