ಬೆಂಗಳೂರು ಮಹಾನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಎಂದು ರಾಜ್ಯ ಸರ್ಕಾರ ಬಿಂಬಿಸುತ್ತಿರುವ ಜೋಡಿ ಸುರಂಗ ರಸ್ತೆ ನಿರ್ಮಾಣ ಯೋಜನೆ, ಸಾರ್ವಜನಿಕ ಹಿತಾಸಕ್ತಿಯ ಜೊತೆಗೆ ಪರಿಸರ ಕಾಳಜಿಯೊಂದಿಗೂ ಮಾಡಿಕೊಳ್ಳುತ್ತಿರುವ ರಾಜಿಯಂತಿದೆ. ₹17,697 ಕೋಟಿ ವೆಚ್ಚದಲ್ಲಿ 16.69 ಕಿ.ಮೀ. ಉದ್ದದ ಜೋಡಿ ಸುರಂಗ ರಸ್ತೆ ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ. ಪರಿಸರಸ್ನೇಹಿ ಹಾಗೂ ಸರ್ಕಾರದ ಖಜಾನೆಗೆ ಹೆಚ್ಚು ಭಾರವಾಗದ ಸಾಧ್ಯತೆಗಳನ್ನು ಯೋಚಿಸದೆ, ಸಾವಿರಾರು ಕೋಟಿ ರೂಪಾಯಿ ಯೋಜನೆಗಳನ್ನೇ ಅಭಿವೃದ್ಧಿಯ ಮಾದರಿಗಳನ್ನಾಗಿ ಬಿಂಬಿಸುವ ಪ್ರಯತ್ನ ಇದಾಗಿದೆ. ಉದ್ದೇಶಿತ ಯೋಜನೆಯಿಂದಾಗಿ, ಬೆಂಗಳೂರು ಮಹಾನಗರದ ಶ್ವಾಸಕೋಶದಂತಿರುವ ಲಾಲ್‌ಬಾಗ್ ಉದ್ಯಾನದ ಜೀವವೈವಿಧ್ಯಕ್ಕೆ ಹಾನಿಯಾಗುವ ಆತಂಕವನ್ನು ಪರಿಸರ ಪ್ರೇಮಿಗಳು ವ್ಯಕ್ತಪಡಿಸಿದ್ದಾರೆ. ರಾಜಧಾನಿಯಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಒಳಚರಂಡಿ ಮತ್ತು ರಾಜಕಾಲುವೆ ಮಾರ್ಗಗಳ ಮೇಲೆ ಉದ್ದೇಶಿತ ಸುರಂಗ ಮಾರ್ಗ ಉಂಟುಮಾಡಬಹುದಾದ ಪರಿಣಾಮ ಯಾವ ಬಗೆಯದೆನ್ನುವುದು ಸ್ಪಷ್ಟವಾಗಿಲ್ಲ. ಸುರಂಗ ಮಾರ್ಗಕ್ಕಾಗಿ ಪರಿಸರ ಪರಿಣಾಮ ಮೌಲ್ಯಮಾಪನ ನಡೆದಿಲ್ಲ; ಯೋಜನೆಯಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ ಎನ್ನುವ ಕಾರಣಕ್ಕಾಗಿ ಯೋಜನೆಯನ್ನು ಪ್ರಶ್ನಿಸಿ ‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿ’ಗೆ ದೂರು ಸಲ್ಲಿಕೆಯಾಗಿದೆ; ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಸಲ್ಲಿಕೆಯಾಗಿದೆ. ಇದರ ನಡುವೆಯೂ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಉತ್ಸುಕವಾಗಿದೆ.
ಜೋಡಿ ಸುರಂಗ ರಸ್ತೆ ಯೋಜನೆಗೆ ಕಳೆದ ಜುಲೈ 14ರಂದು ಟೆಂಡರ್ ಅಧಿಸೂಚನೆ ಹೊರಡಿಸಲಾಗಿದೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಈ ಯೋಜನೆ ರೂಪಿಸಲಾಗಿದೆ ಎಂದು ಹೇಳುತ್ತಿರುವ ಸರ್ಕಾರ, ಸುಗಮ ಸಂಚಾರಕ್ಕಾಗಿ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದು ಅತ್ಯುತ್ತಮ ಪರಿಹಾರ ಎನ್ನುವ ವಿಶ್ವದ ಎಲ್ಲ ಮಹಾನಗರಗಳ ಅನುಭವದ ಪಾಠವನ್ನು ಕಡೆಗಣಿಸಿದೆ. ಪ್ರಸ್ತುತ ಬೆಂಗಳೂರಿನ ಜನಸಂಖ್ಯೆ ಸುಮಾರು 1.25 ಕೋಟಿಯಷ್ಟಿದ್ದು, ಜನರಿಗಿಂತಲೂ ಅಧಿಕ ಪ್ರಮಾಣದ ವಾಹನಗಳು ಮಹಾನಗರದಲ್ಲಿವೆ. ಈ ವಾಹನಗಳ ಬಳಕೆಯನ್ನು ಕನಿಷ್ಠ ಪ್ರಮಾಣಕ್ಕೆ ಇಳಿಸಲು, ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದು ಅತ್ಯುತ್ತಮ ಮಾರ್ಗವಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್‌ಗಳ ಜೊತೆಗೆ ಮೆಟ್ರೊ ರೈಲುಗಳ ಸಂಚಾರವನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಜನಪ್ರಿಯಗೊಳಿಸುವುದು ಸರ್ಕಾರದ ಆದ್ಯತೆಯಾಗಬೇಕು. ದುರದೃಷ್ಟವಶಾತ್, ಕೊರೊನಾ ನಂತರದ ಅವಧಿಯಲ್ಲಿ ನಗರ ಸಾರಿಗೆ ಬಸ್‌ಗಳ ಸಂಪರ್ಕ ಜಾಲ ದುರ್ಬಲಗೊಂಡಿದೆ. ‘ನಮ್ಮ ಮೆಟ್ರೋ’ ರೈಲು ಪ್ರಯಾಣದರ ಜನಸಾಮಾನ್ಯರಿಗೆ ‘ಹೊರೆ’ ಎನ್ನುವಂತಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಚೇತರಿಕೆ ನೀಡುವುದು ಸಂಚಾರ ದಟ್ಟಣೆಯನ್ನು ಸಹನೀಯಗೊಳಿಸುವ ಹಾಗೂ ಪರಿಸರಸ್ನೇಹಿ ಕ್ರಮವಾಗಿದೆ. ಇದರ ಬದಲಿಗೆ, ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುವ ಸುರಂಗ ಮಾರ್ಗ ಯೋಜನೆಯು ಮಹಾನಗರದ ಪಾಲಿಗೆ ಮತ್ತೊಂದು ಬಿಳಿ ಆನೆಯಾಗುವ ಎಲ್ಲ ಸಾಧ್ಯತೆಯೂ ಇದೆ.
ಸುರಂಗ ರಸ್ತೆಯಿಂದ ಲಾಲ್‌ಬಾಗ್‌ಗೆ ಯಾವುದೇ ಹಾನಿಯಾಗುವುದಿಲ್ಲ; ಉದ್ಯಾನಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತೆ ಮತ್ತೆ ಭರವಸೆ ನೀಡುತ್ತಿದ್ದಾರೆ. ಆದರೆ, ಉದ್ದೇಶಿತ ಯೋಜನೆ ಲಾಲ್‌ಬಾಗ್ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಯೋಜನೆಯ ಅನುಷ್ಠಾನಕ್ಕಾಗಿ ಬಳಸುವ ಭಾರೀ ಯಂತ್ರಗಳು ಹಾಗೂ ನಿರ್ಮಾಣ ಚಟುವಟಿಕೆಗಳು ಜೈವಿಕ ಉದ್ಯಾನದ ಪ್ರಶಾಂತ ವಾತಾವರಣದಲ್ಲಿ ಉಂಟು ಮಾಡಬಹುದಾದ ಹಸ್ತಕ್ಷೇಪವನ್ನು ಊಹಿಸಿಕೊಳ್ಳುವುದೂ ಕಷ್ಟ. ಸುರಂಗ ಮಾರ್ಗಕ್ಕಾಗಿ ಉದ್ಯಾನದ ಮರ–ಗಿಡಗಳನ್ನು ಕಡಿಯುವುದು ಅನಿವಾರ್ಯವಾಗುತ್ತದೆ. ಸಾವಿರಾರು ಸಸ್ಯಪ್ರಭೇದಗಳು ನಾಶವಾಗುತ್ತವೆ. ನಿರ್ಮಾಣ ಕಾಮಗಾರಿಯಿಂದಾಗಿ ಉದ್ಯಾನದಲ್ಲಿರುವ ಕೋಟ್ಯಂತರ ವರ್ಷಗಳ ಅಪೂರ್ವ ಶಿಲಾರಚನೆಗೆ ಧಕ್ಕೆಯಾಗಬಹುದು ಹಾಗೂ ಕೆರೆಯ ಪರಿಸರ ಮತ್ತು ಜೀವವೈವಿಧ್ಯ ತೀವ್ರವಾಗಿ ಗಾಸಿಗೊಳ್ಳುವ ಸಾಧ್ಯತೆಯೂ ಇದೆ. ಯೋಜನೆಯ ಪ್ರತ್ಯಕ್ಷ ಹಾಗೂ ಪರೋಕ್ಷ ಪರಿಣಾಮಗಳು ಯಾವ ರೂಪದಲ್ಲಿರುತ್ತವೆ ಎನ್ನುವುದು ಅಸ್ಪಷ್ಟವಾಗಿದೆ. ವಾಸ್ತವ ಹೀಗಿರುವಾಗ, ಲಾಲ್‌ಬಾಗ್‌ಗೆ ಯಾವುದೇ ಹಾನಿಯಾಗುವುದಿಲ್ಲ ಎನ್ನುವ ಉಪ ಮುಖ್ಯಮಂತ್ರಿಯ ಹೇಳಿಕೆಯನ್ನು ಓರ್ವ ರಾಜಕಾರಣಿಯ ಮಾತಿನಂತೆ ನೋಡಬಹುದೇ ಹೊರತು, ತಜ್ಞರ ಅಭಿಪ್ರಾಯವನ್ನಾಗಿ ಅಲ್ಲ. ಬಂಡವಾಳ ತೊಡಗಿಸುವುದರ ಮೂಲಕ ಸುರಂಗ ರಸ್ತೆ ನಿರ್ಮಿಸುವುದು ಕಷ್ಟವೇನಲ್ಲ. ಆದರೆ, ಲಾಲ್‌ಬಾಗ್‌ನಂಥ ಜೀವಕೋಶಗಳನ್ನು ರೂಪಿಸುವುದಕ್ಕೆ ಬಂಡವಾಳವಷ್ಟೇ ಸಾಕಾಗುವುದಿಲ್ಲ; ಇಚ್ಛಾಶಕ್ತಿ ಹಾಗೂ ನೈತಿಕಶಕ್ತಿಯೂ ಅಗತ್ಯ. ಸುರಂಗ ರಸ್ತೆ ನಿರ್ಮಾಣದಿಂದ ಎಷ್ಟೇ ಅನುಕೂಲಗಳಿದ್ದರೂ, ಲಾಲ್‌ಬಾಗ್ ಸುರಕ್ಷತೆಯ ಮುಂದೆ ಆ ಪ್ರಯೋಜನಗಳು ದೊಡ್ಡದಾಗಿರಲು ಸಾಧ್ಯವಿಲ್ಲ. ಸಾರ್ವಜನಿಕ ಹಾಗೂ ಪರಿಸರದ ಹಿತದೃಷ್ಟಿಯಿಂದ, ಉದ್ದೇಶಿತ ಯೋಜನೆಯ ಪರಿಧಿಯಿಂದ ಲಾಲ್‌ಬಾಗ್ ಹೊರಗಿಡುವುದು ಇಲ್ಲವೇ ಯೋಜನೆಯನ್ನು ಕೈಬಿಡುವುದು ಸರ್ಕಾರದ ಮುಂದಿರುವ ಎರಡು ಜನಪರ ಆಯ್ಕೆಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.