ADVERTISEMENT

ಕಳಸಾ–ಬಂಡೂರಿ: ತೊಡಕು ನಿವಾರಣೆ ಕಾಲಮಿತಿಯಲ್ಲಿ ನೀರು ದೊರಕಿಸಿಕೊಡಿ

ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ತಕ್ಷಣ, ಕಾಮಗಾರಿ ಆರಂಭಿಸಿ ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳಬೇಕು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 19:30 IST
Last Updated 21 ಫೆಬ್ರುವರಿ 2020, 19:30 IST
   

ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ನಗರ ಮತ್ತು ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಬವಣೆ ನೀಗಿಸಬಹುದಾದ ಮಹದಾಯಿ ನೀರನ್ನು ಆಶ್ರಯಿಸಿದ ಕಳಸಾ–ಬಂಡೂರಿ ಯೋಜನೆ ಅನುಷ್ಠಾನಕ್ಕೆ ಇದ್ದ ತೊಡಕನ್ನು ಸುಪ್ರೀಂ ಕೋರ್ಟ್‌ ತೀರ್ಪು ನಿವಾರಿಸಿದೆ. ನಾಲ್ಕು ದಶಕಗಳ ಕಾಲ ನಿರಂತರವಾಗಿ ನಡೆಸಿದ ಹೋರಾಟಕ್ಕೆ ಕೊನೆಗೂ ನ್ಯಾಯ ಸಿಕ್ಕಂತಾಗಿದೆ.

ಮಹದಾಯಿ ಜಲವಿವಾದ ನ್ಯಾಯಮಂಡಳಿಯ ಐತೀರ್ಪಿನ ಕುರಿತ ತಕರಾರುಗಳನ್ನು ಆಲಿಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ದ್ವಿಸದಸ್ಯ ಪೀಠವು ಐತೀರ್ಪು ಆಧರಿಸಿ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕರ್ನಾಟಕಕ್ಕೆ ನಿಜವಾಗಿ ಸಿಗಬೇಕಾಗಿರುವಷ್ಟು ನೀರಿನ ಪಾಲು ಐತೀರ್ಪಿನಲ್ಲಿ ಸಿಕ್ಕಿಲ್ಲ ಎಂದು ನಮ್ಮ ರಾಜ್ಯ ಸರ್ಕಾರ ಹಾಗೂ ಐತೀರ್ಪು ಪ್ರಶ್ನಿಸಿ ಗೋವಾ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗಳನ್ನು ಜುಲೈ 15ರಿಂದ ಸತತ ವಿಚಾರಣೆ ನಡೆಸುವುದಾಗಿಯೂ ನ್ಯಾಯಪೀಠ ಹೇಳಿದೆ.

ಬಹುಕಾಲದಿಂದ ನನೆಗುದಿಗೆ ಬಿದ್ದಿರುವ ಕನ್ನಡಿಗರ ಹಕ್ಕೊತ್ತಾಯಕ್ಕೆ ಪೂರ್ಣಪ್ರಮಾಣದಲ್ಲಿ ಅಲ್ಲದಿದ್ದರೂ ಒಂದು ಹಂತದವರೆಗೂ ಮನ್ನಣೆ ದೊರೆತಿದೆ. ಮಹದಾಯಿ ಜಲವಿವಾದ ನ್ಯಾಯಮಂಡಳಿಯು 2018ರಲ್ಲಿ ನೀಡಿದ ಐತೀರ್ಪಿನಲ್ಲಿ ಕರ್ನಾಟಕಕ್ಕೆ 13.42 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದೆ.ಕರ್ನಾಟಕಕ್ಕೆ ಹಂಚಿಕೆಯಾಗಿರುವ ನೀರಿನಲ್ಲಿ 3.90 ಟಿಎಂಸಿ ಅಡಿ ನೀರನ್ನು ಮಲಪ್ರಭಾ ನದಿಗೆ ಹರಿಸಲು ಅವಕಾಶ ಕೂಡ ದೊರೆತಿದೆ. ಈ ನೀರಿನ ಬಳಕೆಗೆ ಇರುವ ತೊಡಕು ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದ ತಕ್ಷಣ ನಿವಾರಣೆಯಾಗಲಿದೆ.

ADVERTISEMENT

ಕೇಂದ್ರ ಪರಿಸರ ಇಲಾಖೆಯು ಕಳಸಾ–ಬಂಡೂರಿ ನಾಲಾ ಯೋಜನೆಗೆ ಈಗಾಗಲೇ ಒಪ್ಪಿಗೆ ಸೂಚಿಸಿದೆ. ಕೇಂದ್ರ ಜಲ ಆಯೋಗ ಹಾಗೂ ಅರಣ್ಯ ಇಲಾಖೆಯ ಅನುಮತಿ ಇನ್ನಷ್ಟೇ ಸಿಗಬೇಕಿದೆ. ಈ ಯೋಜನೆ ಜಾರಿಗೊಂಡರೆ ಬಾಗಲಕೋಟೆ, ಧಾರವಾಡ, ಗದಗ ಹಾಗೂ ಬೆಳಗಾವಿ ಜಿಲ್ಲೆಗಳ ಕೆಲವು ಪ್ರದೇಶಗಳ ನೀರಿನ ಬವಣೆ ನೀಗಲಿದೆ. ರೈತರಿಗೂ ಅನುಕೂಲವಾಗಲಿದೆ.

ಕರ್ನಾಟಕವು ತನ್ನ ಪಾಲಿನ ನೀರನ್ನು ಬಳಸಿಕೊಳ್ಳಲು ತೊಡಕು ಉಂಟಾಗಿರುವುದು ಇದೇ ಮೊದಲೇನಲ್ಲ. ಕೃಷ್ಣಾ ಮತ್ತು ಕಾವೇರಿ ಕೊಳ್ಳಗಳ ನೀರಿನ ಹಂಚಿಕೆ ವಿಚಾರದಲ್ಲೂ ರಾಜ್ಯ ತೊಡಕುಗಳನ್ನು ಎದುರಿಸುತ್ತಲೇ ಬಂದಿದೆ. ಬಚಾವತ್ ಆಯೋಗದ ತೀರ್ಪಿನ ಅನುಸಾರ ಕೃಷ್ಣಾ ನದಿ ನೀರಿನ ನಮ್ಮ ಪಾಲನ್ನು ಸಮರ್ಪಕವಾಗಿ ಬಳಸಿಕೊಳ್ಳಲು 1994ರಲ್ಲಿ ಮುಂದಾದ ಅಂದಿನ ಮುಖ್ಯಮಂತ್ರಿ
ಎಚ್.ಡಿ. ದೇವೇಗೌಡರು ಕೃಷ್ಣಾ ಭಾಗ್ಯ ಜಲನಿಗಮ ಸ್ಥಾಪಿಸಿ, ಕೃಷ್ಣಾ ಬಾಂಡ್ ಬಿಡುಗಡೆ ಮಾಡಿ ಸಂಪನ್ಮೂಲ ಕ್ರೋಡೀಕರಣ ಮಾಡಿದರು. ಯೋಜನೆ ಅನುಷ್ಠಾನವೂ ಆಯಿತು.

ಕೃಷ್ಣಾ ಜಲವಿವಾದ ನ್ಯಾಯಮಂಡಳಿಯ ಅಂತಿಮ ತೀರ್ಪು 2010ರಲ್ಲಿ ಬಂತು. ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು 2011–2020 ಅನ್ನು ‘ನೀರಾವರಿ ದಶಕ’ ಎಂದು ಘೋಷಿಸಿ, ಎಲ್ಲ ಯೋಜನೆಗಳನ್ನು ಅನುಷ್ಠಾನ ಮಾಡುವುದಾಗಿ ಹೇಳಿದರು. ರಾಜಕೀಯ ಕಾರಣಗಳು ಏನೇ ಇರಲಿ, ಆ ಮಾತು ಈಡೇರಲಿಲ್ಲ. ಈಗ ಮತ್ತೆ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಕಾವೇರಿ, ಕೃಷ್ಣಾ ಕೊಳ್ಳಗಳ ನೀರನ್ನು ಪೂರ್ತಿ ಬಳಸಿಕೊಳ್ಳಲು ಅವರು ಇಚ್ಛಾಶಕ್ತಿ ತೋರಬೇಕು. ಮಹದಾಯಿ ಯೋಜನೆಯುನಾಲ್ಕು ದಶಕಗಳ ಹಿಂದೆಯೇ ರೂಪುಗೊಂಡರೂ ಇಲ್ಲಿಯವರೆಗೂ ಅದು ಸಾಕಾರಗೊಂಡಿಲ್ಲ.

2006ರಲ್ಲಿ ಜೆಡಿಎಸ್‌–ಬಿಜೆಪಿ ಮೈತ್ರಿ ಸರ್ಕಾರದ ಅವಧಿಯಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಜಲಸಂಪನ್ಮೂಲ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಅವರು ಕಳಸಾ–ಬಂಡೂರಿ ನಾಲಾ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಆಗ ಗೋವಾ ಸರ್ಕಾರ ತಕರಾರು ತೆಗೆದಿದ್ದರಿಂದ ಕಾಮಗಾರಿಯನ್ನು ಪೂರ್ಣಗೊಳಿಸಲು ಆಗಿಲ್ಲ. ಈಗ ಅಧಿಸೂಚನೆ ಹೊರಡಿಸಿದ ತಕ್ಷಣ, ಕಾಮಗಾರಿ ಆರಂಭಿಸಿ ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳಬೇಕು. ಯೋಜನೆ ಅನುಷ್ಠಾನಕ್ಕೆ ಬೇಕಾದ ಅನುದಾನವನ್ನೂ ಬಜೆಟ್‌ನಲ್ಲಿ ತೆಗೆದಿರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.