
ದೇಶದ ಸೇನೆಯ ಮಾಜಿ ಮುಖ್ಯಸ್ಥರ ಪುಸ್ತಕದ ಸಂಬಂಧ ಉಂಟಾಗಿರುವ ವಿವಾದದಲ್ಲಿ ಕೇಂದ್ರ ಸರ್ಕಾರದ ಮೌನ ಅನುಮಾನ ಹುಟ್ಟಿಸುವಂತಿದೆ, ಪ್ರಶ್ನೆಗಳಿಗೆ ಕಾರಣ ಆಗುವಂತಿದೆ.
ಭಾರತದ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಕೃತಿಯ ಆಯ್ದಭಾಗಗಳು ಹಲವು ಪ್ರಶ್ನೆಗಳಿಗೆ ಕಾರಣ ಆಗುವಂತಿವೆ. ಯಾವ ಕಾರಣಕ್ಕಾಗಿ ಈ ಪುಸ್ತಕವನ್ನು ಸರ್ಕಾರದ ಪರಿಶೀಲನೆಗೆ ಸಲ್ಲಿಸಲಾಗಿದೆ ಹಾಗೂ ಭಾರತದಲ್ಲಿ ಪ್ರಕಟಣೆಗೆ ಈವರೆಗೆ ಯಾಕೆ ಅನುಮತಿ ನೀಡಲಾಗಿಲ್ಲ ಎನ್ನುವುದು ಅಸ್ಪಷ್ಟವಾಗಿದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ‘ಅಪ್ರಕಟಿತ ಪುಸ್ತಕ’ದ ಆಯ್ದ ಭಾಗಗಳನ್ನು ಸದನದಲ್ಲಿ ಪ್ರಸ್ತಾಪಿಸುವುದಕ್ಕೆ ಕೂಡ ಅನುಮತಿ ನಿರಾಕರಿಸಲಾಗಿದೆ. ಈ ಸಂದರ್ಭದಲ್ಲಿ ಅಡಚಣೆ ಉಂಟುಮಾಡಿದ ಆರೋಪದಲ್ಲಿ 8 ಸಂಸದರನ್ನು ಸದನದಿಂದ ಅಮಾನತುಗೊಳಿಸಲಾಗಿದೆ. ಈ ವಿವಾದದ ಕೇಂದ್ರದಲ್ಲಿ, ವಾಸ್ತವ ಗಡಿ ನಿಯಂತ್ರಣ ರೇಖೆಗೆ ಸಂಬಂಧಿಸಿದಂತೆ 2020ರಲ್ಲಿ ಚೀನಾದೊಂದಿಗಿನ ಸಂಘರ್ಷದ ಸಮಯದಲ್ಲಿ ಲೇಖಕ ಹಾಗೂ ಕೇಂದ್ರ ಸರ್ಕಾರದ ನಾಯಕತ್ವದೊಂದಿಗೆ ನಡೆದ ಮಾತುಕತೆಗಳಿವೆ ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಮಾಲೋಚನೆಯ ನಂತರ ಸೇನಾ ಮುಖ್ಯಸ್ಥರೊಂದಿಗೆ ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಚೀನಾದ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರತಿಕ್ರಿಯೆ ಸಂಪೂರ್ಣವಾಗಿ ಸೇನೆಯ ನಿರ್ಣಯ ಆಗಿರಬಹುದೆಂದು ಹೇಳಿದ್ದಾಗಿ ಹಾಗೂ ಸೇನಾ ಮುಖ್ಯಸ್ಥರು ತಮಗೆ ಸರಿಯೆನ್ನಿಸಿದ್ದನ್ನು ಮಾಡುವಂತೆ ಹೇಳಿದರು ಎನ್ನುವ ವಿವರಗಳು ಪುಸ್ತಕದಲ್ಲಿ ಇವೆ ಎಂದು ಹೇಳಲಾಗಿದ್ದು, ಆ ವಿವರಗಳೇ ವಿವಾದಕ್ಕೆ ಕಾರಣವಾಗಿವೆ.
ಗೌರವಾನ್ವಿತ ಜನರಲ್ ಒಬ್ಬರು ಬರೆದಿರುವ ಪುಸ್ತಕವನ್ನು ಭಾರತದಲ್ಲಿ ಪ್ರಕಟಿಸಲು ಅನುಮತಿ ನೀಡುವುದಕ್ಕೆ ವಿಳಂಬ ಆಗುತ್ತಿರುವುದೇಕೆ ಎನ್ನುವ ಕಾರಣವನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕಾಗಿದೆ. ಕೃತಿಯಲ್ಲಿನ ಯಾವುದಾದರೂ ಸಂಗತಿಯ ಬಗ್ಗೆ ಆಕ್ಷೇಪವಿದ್ದಲ್ಲಿ, ಅದರ ಬಗ್ಗೆ ಲೇಖಕರಿಗೆ ಮನವರಿಕೆ ಮಾಡಿಕೊಡಬಹುದಾಗಿದೆ. ಈ ಮೊದಲು, ನಿವೃತ್ತ ಸೇನಾನಾಯಕರು ಹಾಗೂ ಅಧಿಕಾರಿಗಳು ತಮ್ಮ ವೃತ್ತಿಜೀವನದ ಅನುಭವಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸಿರುವ ನಿದರ್ಶನಗಳಿವೆ. ಹಾಗಾಗಿ, ಜನರಲ್ ನರವಣೆ ಅವರ ಕೃತಿಯ ಪ್ರಕಟಣೆಗೆ ಸೂಕ್ತ ಕಾರಣ ನೀಡದೆ ಅನುಮತಿ ನಿರಾಕರಿಸಲಾಗದು. ಹಾಗೆಯೇ, ಸಾರ್ವಜನಿಕ ಹಿತಾಸಕ್ತಿ ಹೊಂದಿರುವ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸುವ ಅಧಿಕಾರ ರಾಹುಲ್ ಗಾಂಧಿ ಅವರಿಗಿದೆ ಎನ್ನುವುದನ್ನೂ ಗಮನಿಸಬೇಕು. ಸದನಕ್ಕೆ ಸಂಬಂಧಿಸದ ವಿಷಯಗಳನ್ನು ಉಲ್ಲೇಖಿಸಲು ಅವಕಾಶವಿಲ್ಲ ಎನ್ನುವ ಕಾರಣ ನೀಡಿ, ರಾಹುಲ್ ಅವರಿಗೆ ಮಾತನಾಡುವ ಅವಕಾಶವನ್ನು ಸ್ಪೀಕರ್ ನಿರಾಕರಿಸಿದ್ದಾರೆ. ಆದರೆ, ಮೂಲವನ್ನು ಉಲ್ಲೇಖಿಸಿ ಹಾಗೂ ಪಠ್ಯದ ನೈಜತೆಯನ್ನು ಪ್ರಮಾಣೀಕರಿಸುವ ಮೂಲಕ ಸಂಸದರು ಸದನದಲ್ಲಿ ವಿಷಯ ಪ್ರಸ್ತಾಪಿಸಲು ಅವಕಾಶವಿದೆ.
ಸೇನಾ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ವಿವಾದಾಸ್ಪದ ಸಂವಾದ ನಡೆದಿದೆ ಎನ್ನುವುದಕ್ಕೆ ಯಾವ ಅಧಿಕೃತ ಆಧಾರವೂ ಇಲ್ಲ. ಒಂದುವೇಳೆ, ಆ ಬಗೆಯ ಮಾತುಕತೆ ನಡೆದಿರುವುದೇ ನಿಜವಾಗಿದ್ದಲ್ಲಿ, ಪ್ರಧಾನಿ ಹಾಗೂ ರಕ್ಷಣಾ ಸಚಿವರು ಸೇರಿದಂತೆ ಸರ್ಕಾರದ ನಾಯಕತ್ವವು ದೇಶದ ಭದ್ರತೆಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮವಾದ ತೀರ್ಮಾನವನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಹೇಳಬೇಕಾಗುತ್ತದೆ. ಭಾರತದ ಸೇನೆಯು ಸದಾ ಚುನಾಯಿತ ಸರ್ಕಾರದ ಅಧೀನದಲ್ಲಿಯೇ ಕಾರ್ಯ ನಿರ್ವಹಿಸಿದೆ; ಸೇನಾ ನಾಯಕತ್ವ ಹಾಗೂ ರಣತಂತ್ರಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶನ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಮತ್ತೊಂದು ದೇಶದೊಂದಿಗಿನ ಸಂಘರ್ಷಕ್ಕೆ ಸಂಬಂಧಿಸಿದ ವಿಷಯದಲ್ಲಿ ಸೇನೆಯ ಪರಿಗಣನೆಗಳ ಮೇಲೆ ತೀರ್ಮಾನ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ಪ್ರಸ್ತುತ ವಿವಾದಕ್ಕೆ ಸಂಬಂಧಿಸಿದಂತೆ, ನರವಣೆ ಅವರೊಂದಿಗೆ ನಡೆದಿದೆ ಎನ್ನಲಾದ ಸಂಭಾಷಣೆ ನೈಜವೋ ಕಲ್ಪಿತವೋ ಎನ್ನುವುದನ್ನು ಪ್ರಧಾನಿ ಅವರು ಸ್ಪಷ್ಟಪಡಿಸಬೇಕು. ಸಂಭಾಷಣೆ ನಡೆದಿರುವುದು ಸುಳ್ಳಾಗಿದ್ದಲ್ಲಿ ಆರೋಪಕ್ಕೆ ಸಂಬಂಧಿಸಿದ ಹೊಣೆಗಾರಿಕೆ ಜನರಲ್ ನರವಣೆ ಅವರದ್ದೇ ಆಗಿರುತ್ತದೆ. ಸರ್ಕಾರದಿಂದ ಉತ್ತರ ಬಯಸುತ್ತಿರುವ ರಾಹುಲ್ ಗಾಂಧಿ ಮತ್ತಿತರರನ್ನು ‘ದೇಶದ್ರೋಹಿ’ಗಳು ಎಂದು ಕರೆಯುವುದು, ಮುಜುಗರದ ಸಂಗತಿಗಳಿಂದ ಪಾರಾಗಲು ಬಳಸುವ ದಿಕ್ಕುತಪ್ಪಿಸುವಿಕೆಯ ಪರಿಚಿತ ಮಾದರಿ ಹಾಗೂ ಆಕ್ರೋಶವನ್ನು ಹೋಲುವಂತಿದೆ. ಇಂಥ ನಡವಳಿಕೆಯು ರಾಜಕೀಯ ಹಿತಾಸಕ್ತಿಗಳನ್ನು ಮುಂದುವರಿಸುವುದರ ಜೊತೆಗೆ, ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭದಲ್ಲಿನ ಸರ್ಕಾರದ ಹೊಣೆಗಾರಿಕೆಯ ಕುರಿತ ಪ್ರಶ್ನೆಗಳನ್ನು ಬಲಪಡಿಸುವಂತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.