ADVERTISEMENT

ಸಂಪಾದಕೀಯ | ಎಂಎಸ್‌ಪಿ: ಧಾನ್ಯ ಖರೀದಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಅಗತ್ಯ

ಸಂಪಾದಕೀಯ
Published 15 ಮಾರ್ಚ್ 2024, 23:49 IST
Last Updated 15 ಮಾರ್ಚ್ 2024, 23:49 IST
   

ಕೃಷಿ ಉತ್ಪನ್ನಗಳ ದರ ಕುಸಿತದಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಲು ಸರ್ಕಾರವೇ ನೇರವಾಗಿ ಮಾರುಕಟ್ಟೆ ಮಧ್ಯಪ್ರವೇಶ ಮಾಡುವುದಕ್ಕಾಗಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆ ಜಾರಿಯಲ್ಲಿದೆ. ಕೇಂದ್ರ ಸರ್ಕಾರ ಈ ಯೋಜನೆಯಡಿ ಕೃಷಿ ಉತ್ಪನ್ನಗಳ ಖರೀದಿಯ ಪೂರ್ಣ ವೆಚ್ಚವನ್ನು ಭರಿಸುತ್ತಿದ್ದು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧೀನ ಸಂಸ್ಥೆಗಳು ಎಂಎಸ್‌ಪಿ ಯೋಜನೆಯಡಿ ಖರೀದಿ ಪ್ರಕ್ರಿಯೆಯನ್ನು ನಿರ್ವಹಿಸುತ್ತಿವೆ. ರಾಜ್ಯದಲ್ಲಿ ಪ್ರತಿವರ್ಷ ಭತ್ತ, ರಾಗಿ ಮತ್ತು ಬಿಳಿ ಜೋಳವನ್ನು ಎಂಎಸ್‌ಪಿ ಯೋಜನೆಯಡಿ ಖರೀದಿಸಲಾಗುತ್ತಿದೆ.  ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ 2.5 ಲಕ್ಷ ಟನ್‌ ಭತ್ತ, 5.99 ಲಕ್ಷ ಟನ್‌ ರಾಗಿ ಮತ್ತು 3 ಲಕ್ಷ ಟನ್‌ ಬಿಳಿ ಜೋಳವನ್ನು ಎಂಎಸ್‌ಪಿ ಯೋಜನೆಯಡಿ ಖರೀದಿಸುವ ನಿರ್ಧಾರವನ್ನು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯ ಮಾಡಿದೆ. ಇದಕ್ಕಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಮತ್ತು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳವನ್ನು ಖರೀದಿ ಏಜೆನ್ಸಿಗಳನ್ನಾಗಿ ನೇಮಿಸಲಾಗಿದೆ. ಧಾನ್ಯ ಖರೀದಿಗೆ ಈ ಮೂರೂ ಸಂಸ್ಥೆಗಳಿಗೆ ನವೆಂಬರ್‌ ತಿಂಗಳಿನಲ್ಲೇ ಜಿಲ್ಲೆಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ಎಂಎಸ್‌ಪಿ ಯೋಜನೆ ಅನುಷ್ಠಾನಕ್ಕೆ ಸಕಾಲದಲ್ಲಿ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳು ನಿರಾಸಕ್ತಿ ತೋರಿರುವುದರಿಂದ ಈಗ ಸಮಸ್ಯೆ ಸೃಷ್ಟಿಯಾಗಿದೆ. 20 ದಿನಗಳಲ್ಲಿ ತರಾತುರಿಯಲ್ಲಿ ಖರೀದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾದ ಒತ್ತಡದ ಸ್ಥಿತಿ ಎದುರಾಗಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸಾರ 2023ರ ಡಿಸೆಂಬರ್‌ ತಿಂಗಳಲ್ಲೇ ರೈತರ ನೋಂದಣಿ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಲಾಗಿತ್ತು. ಈ ವರ್ಷದ ಜನವರಿ 1ರಿಂದ ಆಹಾರಧಾನ್ಯಗಳ ಖರೀದಿ ಆರಂಭ
ಆಗಬೇಕಿತ್ತು. ಎರಡು ತಿಂಗಳು ಹತ್ತು ದಿನಗಳ ಕಾಲ ಖರೀದಿಯನ್ನೇ ಆರಂಭಿಸದೆ ಕಾಲಹರಣ ಮಾಡಿದ್ದಾರೆ. ಮಾರ್ಚ್‌ 31ಕ್ಕೆ ಖರೀದಿಯ ಗಡುವು ಮುಗಿಯಲಿದ್ದು, ನೋಂದಾಯಿಸಿಕೊಂಡಿರುವ 1.73 ಲಕ್ಷ ರೈತರಿಂದ ಈ ಗಡುವಿನೊಳಗೆ ಆಹಾರಧಾನ್ಯಗಳನ್ನು ಖರೀದಿಸಬೇಕಿದೆ. ಖರೀದಿ ಕೇಂದ್ರಗಳು ಮತ್ತು ಸಿಬ್ಬಂದಿ ಲಭ್ಯವಿದ್ದಾಗ್ಯೂ ಆಹಾರ‌ಧಾನ್ಯಗಳ ಸಾಗಾಣಿಕೆ ವಾಹನಗಳ ಮೇಲೆ ನಿಗಾ ಇರಿಸಲು ಹೊಸ ತಂತ್ರಾಂಶ ಬಳಕೆಯ ಕಾರಣವನ್ನು ಮುಂದಿಟ್ಟುಕೊಂಡು ಈ ರೀತಿ ವಿಳಂಬ ಮಾಡಿರುವುದು ಸರಿಯಾದ ಕ್ರಮವಲ್ಲ. ಎಂಎಸ್‌ಪಿ ಯೋಜನೆಯಡಿ ಆಹಾರಧಾನ್ಯ ಖರೀದಿಯಂತಹ ರೈತರ ಪರವಾದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ತಾಂತ್ರಿಕ ನೆಪಗಳನ್ನು ಮುಂದಿಟ್ಟುಕೊಂಡು ವಿಳಂಬ ಮಾಡುವುದು ಬೆಳೆಗಾರರಿಗೆ ನ್ಯಾಯ
ನಿರಾಕರಿಸುವಂತಹ ಧೋರಣೆಗೆ ಸಮನಾದುದು. ರಾಜ್ಯದಲ್ಲಿ ಎಂಎಸ್‌ಪಿ ಯೋಜನೆಯಡಿ ಕೃಷಿ ಉತ್ಪನ್ನಗಳ ಖರೀದಿ ಸುಸೂತ್ರವಾಗಿ ನಡೆದ ನಿದರ್ಶನಗಳೇ ವಿರಳ. ಕೆಲವು ವರ್ಷಗಳಿಂದ ಈಚೆಗೆ ದಲ್ಲಾಳಿಗಳು, ವರ್ತಕರು ರೈತರ ಹೆಸರಿನಲ್ಲಿ ಎಂಎಸ್‌ಪಿ ಯೋಜನೆಯನ್ನು ದುರುಪಯೋಗ ಮಾಡಿಕೊಂಡ
ಉದಾಹರಣೆಗಳಿವೆ. ಖರೀದಿ ಕೇಂದ್ರಗಳಲ್ಲಿ ಸರಿಯಾದ ಸೌಕರ್ಯ ಒದಗಿಸದಿರುವುದು, ತೂಕದಲ್ಲಿ ಮೋಸ, ಆಹಾರಧಾನ್ಯಗಳ ಸಾಗಣೆಯನ್ನು ರೈತರಿಂದಲೇ ಮಾಡಿಸುವುದು, ಖರೀದಿ ವೇಳೆ ರೈತರಿಂದ ಲಂಚ ವಸೂಲಿ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ದಲ್ಲಾಳಿಗಳ ಕೂಟ ರೈತರನ್ನು ಶೋಷಿಸುತ್ತಿರುವ ಆರೋಪಗಳು ಪ್ರತಿವರ್ಷ ಕೇಳಿಬರುತ್ತವೆ. ಕೊಬ್ಬರಿ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ತೆಂಗು ಬೆಳೆಗಾರರ ನೆರವಿಗಾಗಿ ಎಂಎಸ್‌ಪಿ ಯೋಜನೆಯಡಿ ಕೊಬ್ಬರಿ ಖರೀದಿಗೆ ಕಳೆದ ತಿಂಗಳು ಆರಂಭಿಸಿದ ಪ್ರಕ್ರಿಯೆಯಲ್ಲಿ ನಡೆದಿರುವ ಅವ್ಯವಹಾರಗಳು ಇದಕ್ಕೆ ಇತ್ತೀಚಿನ ನಿದರ್ಶನ.

ಗಡುವು ಮುಗಿಯುವ ಸಮಯ ಸಮೀಪಿಸಿರುವ ಈ ಹಂತದಲ್ಲಿ ಖರೀದಿ ಪ್ರಕ್ರಿಯೆಗೆ ತರಾತುರಿಯಲ್ಲಿ ಚಾಲನೆ ನೀಡಲಾಗಿದೆ. ಎಂಎಸ್‌ಪಿ ಯೋಜನೆ ಅನುಷ್ಠಾನದಲ್ಲಿ ಪ್ರತಿವರ್ಷ ಸಮಸ್ಯೆಗಳು ಸೃಷ್ಟಿಯಾಗುತ್ತಿರುವುದು ನಮ್ಮ ಆಡಳಿತ ವ್ಯವಸ್ಥೆಯು ರೈತಸ್ನೇಹಿಯಾಗಿ ವರ್ತಿಸುತ್ತಿಲ್ಲ ಎಂಬುದನ್ನು ಎತ್ತಿ ತೋರಿಸುತ್ತದೆ. ಈ ಬಾರಿ ಆಹಾರಧಾನ್ಯಗಳ ಖರೀದಿಯಲ್ಲಿ ಇಷ್ಟೊಂದು ದೀರ್ಘಕಾಲದ ವಿಳಂಬ ಮಾಡಿರುವುದಕ್ಕೆ ಖರೀದಿ ಏಜೆನ್ಸಿಗಳು, ಆಹಾರ ಇಲಾಖೆಯ ಅಧಿಕಾರಿಗಳು ಹೊಣೆಗಾರರು. ವಿಳಂಬದ ಪರಿಣಾಮವಾಗಿ ಈಗ ಖರೀದಿ ಕೇಂದ್ರಗಳಲ್ಲಿ ನೂಕುನುಗ್ಗಲು ಸೃಷ್ಟಿಯಾಗುವ ಸಾಧ್ಯತೆಯೂ ಇದೆ. ನಿಗದಿಯಂತೆ ಕೇಂದ್ರ ಸರ್ಕಾರವು ಮಾರ್ಚ್‌ 31ಕ್ಕೆ ಖರೀದಿ ಪ್ರಕ್ರಿಯೆಯನ್ನು ಅಂತ್ಯಗೊಳಿಸಿದರೆ ನೋಂದಾಯಿತ ರೈತರಲ್ಲಿ ಹೆಚ್ಚಿನವರು ತಮ್ಮ ಆಹಾರಧಾನ್ಯಗಳನ್ನು ಎಂಎಸ್‌ಪಿ ಯೋಜನೆಯಡಿ ಮಾರಾಟ ಮಾಡುವ ಅವಕಾಶದಿಂದ ವಂಚಿತರಾಗಬಹುದು. ಈಗ ಆಗಿರುವ ಲೋಪಗಳನ್ನು ಸರಿಪಡಿಸಿಕೊಳ್ಳುವುದರ ಜತೆಯಲ್ಲೇ ಖರೀದಿ ಪ್ರಕ್ರಿಯೆಯ ಅವಧಿ ವಿಸ್ತರಣೆಗೆ ರಾಜ್ಯ ಸರ್ಕಾರವು ತಡ ಮಾಡದೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು. ಕೇಂದ್ರ ಸರ್ಕಾರದ ಮನವೊಲಿಸಿ, ಅನುಮತಿಯನ್ನೂ ಪಡೆಯಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ, ಎಂಎಸ್‌ಪಿ ಯೋಜನೆಯಡಿ ಕೃಷಿ ಉತ್ಪನ್ನಗಳ ಖರೀದಿ ಪ್ರಕ್ರಿಯೆಯಲ್ಲಿ ಪದೇ ಪದೇ ಸಮಸ್ಯೆಗಳು ಸೃಷ್ಟಿಯಾಗುವುದನ್ನು ತಪ್ಪಿಸಲು ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಖರೀದಿ ವಿಳಂಬ, ಅವ್ಯವಹಾರ, ರೈತರ ಶೋಷಣೆಯಂತಹ ಪ್ರಕರಣಗಳಲ್ಲಿ ಅಧಿಕಾರಿಗಳು, ಸಿಬ್ಬಂದಿಯನ್ನು ಹೊಣೆಗಾರರನ್ನಾಗಿ ಮಾಡಿದರೆ ಮಾತ್ರ ಸುಧಾರಣೆ ನಿರೀಕ್ಷಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.