ADVERTISEMENT

ಮ್ಯಾನ್ಮಾರ್‌ ವಿದ್ಯಮಾನ ಕಳವಳಕಾರಿ ಪ್ರಜಾಪ್ರಭುತ್ವ ಮರುಸ್ಥಾಪನೆಯಾಗಲಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 19:47 IST
Last Updated 2 ಫೆಬ್ರುವರಿ 2021, 19:47 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮ್ಯಾನ್ಮಾರ್‌ನಲ್ಲಿ ನಡೆದ ಕ್ಷಿಪ್ರ ಸೇನಾ ದಂಗೆಯು ಆ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಈವರೆಗೆ ನಡೆಸಿದ್ದ ಎಲ್ಲ ಯತ್ನಗಳಿಗೆ ಬಿದ್ದ ಬಲವಾದ ಕೊಡಲಿ ಪೆಟ್ಟು. ಸೋಮವಾರದ ದಿಢೀರ್‌ ಕಾರ್ಯಾಚರಣೆಯಲ್ಲಿ, ಅಲ್ಲಿನ ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿರುವ ಸೇನೆಯು ಅಧಿಕಾರವನ್ನು ಈಗ ತನ್ನ ವಶಕ್ಕೆ ಪಡೆದಿದೆ. ಒಂದು ವರ್ಷದವರೆಗೆ ತುರ್ತು ಪರಿಸ್ಥಿತಿ ಘೋಷಿಸಿದ್ದಲ್ಲದೆ, ಆಂಗ್‌ ಸಾನ್‌ ಸೂ ಕಿ ಸೇರಿದಂತೆ ದೇಶದ ಹಲವು ರಾಜಕಾರಣಿಗಳನ್ನು ಬಂಧಿಸಿದೆ. ಮ್ಯಾನ್ಮಾರ್‌ನಲ್ಲಿ ಕಳೆದ ನವೆಂಬರ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ‘ದಿ ನ್ಯಾಷನಲ್‌ ಲೀಗ್‌ ಫಾರ್‌ ಡೆಮಾಕ್ರಸಿ’ (ಎನ್‌ಎಲ್‌ಡಿ) ಪಕ್ಷವು
ಅಭೂತಪೂರ್ವ ಎನ್ನುವಂತಹ ಜಯ ಸಾಧಿಸಿತ್ತು. ಎನ್‌ಎಲ್‌ಡಿಯ ಈ ಸಾಧನೆ ಸೇನಾಪಡೆಗಳ ಮುಖ್ಯಸ್ಥರ ಕಣ್ಣು ಕೆಂಪಾಗಿಸಿತ್ತು. ‘ಚುನಾವಣೆಯಲ್ಲಿ ವ್ಯಾಪಕವಾದ ಅಕ್ರಮಗಳು ನಡೆದಿವೆ’ ಎಂದು ಅವರು ದೂರುತ್ತಲೇ ಬಂದಿದ್ದರು. ಪ್ರಜೆಗಳಿಂದ ಆಯ್ಕೆಯಾಗಿದ್ದ ಸರ್ಕಾರವೊಂದನ್ನು ಈಗ ನಿರ್ದಯವಾಗಿ ಕಿತ್ತೆಸೆಯಲಾಗಿದೆ. ದಶಕಗಳ ಕಾಲ ಮಿಲಿಟರಿ ಆಡಳಿತಕ್ಕೆ ಸಿಲುಕಿ ನಲುಗಿದ್ದ
ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವದ ಪುಷ್ಪವು ಅರಳಲು ಆರಂಭಿಸಿತ್ತು. ತನ್ನೆಲ್ಲ ಗಾಯಗಳ ನೋವನ್ನು ಮರೆಯಲು ಆ ದೇಶ ಹವಣಿಸುತ್ತಿತ್ತು. ಅಷ್ಟರಲ್ಲಿಯೇ ಸೇನಾ ಮುಖ್ಯಸ್ಥರು ಮತ್ತೆ ಆಡಳಿತ ಪೀಠ ಏರಿ ಕುಳಿತಿದ್ದಾರೆ.

ಹಾಗೆ ನೋಡಿದರೆ, ಪ್ರಜಾಪ್ರಭುತ್ವಕ್ಕಾಗಿ ಹಂಬಲಿಸುತ್ತಿದ್ದ ಮ್ಯಾನ್ಮಾರ್‌ ಪಾಲಿಗೆ ಕಳೆದ ದಶಕ ಅತ್ಯಂತ ಮಹತ್ವದ್ದು. ದೇಶ ನಿಧಾನವಾಗಿ ಪ್ರಜಾತಂತ್ರ ವ್ಯವಸ್ಥೆಯ ಕಡೆಗೆ ವಾಲುತ್ತಿದ್ದ ಕಾಲಘಟ್ಟ ಅದು. ದೇಶದ ಮೇಲಿನ ಸೇನಾ ಬಿಗಿಹಿಡಿತ 2011ರಿಂದಲೇ ಸಡಿಲಗೊಳ್ಳಲು ಆರಂಭಿಸಿತ್ತು. 2015ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸೂ ಕಿ ಅವರ ಎನ್‌ಎಲ್‌ಡಿ ಪಕ್ಷ ಅಧಿಕಾರದ ಗದ್ದುಗೆಗೆ ಏರಿತು. ಅಧಿಕಾರವನ್ನು ಸಂಪೂರ್ಣವಾಗಿ ಬಿಟ್ಟುಕೊಡಲು ಮನಸ್ಸಿರದ ಸೇನಾ ಮುಖ್ಯಸ್ಥರು ಹಲವು ವಿಷಯಗಳಲ್ಲಿ ಹಸ್ತಕ್ಷೇಪ ನಡೆಸುತ್ತಲೇ ಬಂದಿದ್ದರು. ಆದರೆ, ಪ್ರಜಾಪ್ರಭುತ್ವವಾದಿ ರಾಜಕಾರಣಿಗಳು, ಪ್ರಜಾತಂತ್ರದ ಪ್ರಕ್ರಿಯೆಗಳು ಹಾಗೂ ಸಂಸ್ಥೆಗಳ ಜತೆ ಸಹಮತದಿಂದ ಕೆಲಸ ಮಾಡುವ ಒತ್ತಡ ಬರಬರುತ್ತಾ ಅವರ ಮೇಲೆ ಹೆಚ್ಚುತ್ತಲೇ ಇತ್ತು. ಸೋಮವಾರದ ದಂಗೆಯು ಸೇನಾ ಮುಖ್ಯಸ್ಥರ ಅಧಿಕಾರದಾಹದ ದ್ಯೋತಕ. ಜನರ ಪ್ರತಿಭಟನೆಗಳನ್ನು ಹತ್ತಿಕ್ಕಲು ಸೇನಾ ಮುಖ್ಯಸ್ಥರು ಈ ಹಿಂದೆ ಹಿಂಸಾಮಾರ್ಗವನ್ನು ಅನುಸರಿಸಿದ ಉದಾಹರಣೆಗಳಿವೆ. ರಾಜಕೀಯ ಹಾಗೂ ಪ್ರಜಾತಾಂತ್ರಿಕ ಹಕ್ಕುಗಳಿಗಾಗಿ ಜನ ಬೀದಿಗಿಳಿದು ಹೋರಾಡುವುದನ್ನು ತಡೆಯಲು ಇಂತಹ ಕ್ರಮಗಳಿಗೆ ಸೇನೆ ಮತ್ತೆ ಮುಂದಾಗುವ ಸಾಧ್ಯತೆ ಇಲ್ಲದಿಲ್ಲ. ಸೇನಾ ಮುಖ್ಯಸ್ಥರ ಇಂತಹ ದಬ್ಬಾಳಿಕೆ ವಿರುದ್ಧ ಅಂತರರಾಷ್ಟ್ರೀಯ ಸಮುದಾಯವು ಆರ್ಥಿಕ ದಿಗ್ಬಂಧನದಂತಹ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಆದರೆ, ಮ್ಯಾನ್ಮಾರ್‌ನ ಆರ್ಥಿಕತೆಗೆ ಅಂತಹ ಹೊಡೆತಗಳನ್ನು ತಡೆದುಕೊಳ್ಳುವ ಶಕ್ತಿಯಿಲ್ಲ. ಪ್ರಜಾಪ್ರಭುತ್ವವಾದಿ ದೇಶಗಳ ಪ್ರತಿರೋಧದ ಬಿಸಿಯಿಂದ ರಕ್ಷಣೆ ಪಡೆಯಲು ಮ್ಯಾನ್ಮಾರ್‌ನ ಸೇನಾ ಮುಖ್ಯಸ್ಥರು ಚೀನಾದ ಬೆಂಬಲ ಯಾಚಿಸುವ ಸಾಧ್ಯತೆಗಳು ದಟ್ಟವಾಗಿವೆ. ಭಾರತದ ಜತೆ ಗಡಿ ಹಂಚಿಕೊಂಡಿರುವ ಮ್ಯಾನ್ಮಾರ್‌ನಲ್ಲಿ ನಡೆದಿರುವ ಬೆಳವಣಿಗೆಗಳು ನಮ್ಮ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಸೇನಾ ಆಡಳಿತದ ಚೀನಾ ಪರವಾದ ನಿಲುವಿನಿಂದಾಗಿ ಭಾರತ–ಮ್ಯಾನ್ಮಾರ್‌ ನಡುವಿನ ಸಂಬಂಧ ಸುಧಾರಣೆ ಯತ್ನಗಳು ಹಳಿತಪ್ಪುವ ಸಾಧ್ಯತೆಗಳಿವೆ ಎನ್ನುವ ಆತಂಕವೂ ವ್ಯಕ್ತವಾಗಿದೆ. ದಂಗೆಯಿಂದ ತಲ್ಲಣಗೊಂಡ ನೆರೆಯ ದೇಶದಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಭಾರತ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT