ADVERTISEMENT

ತೋರಿಕೆಯ ಹೇಳಿಕೆಯಷ್ಟೇ ಸಾಲದು ಉಗ್ರರನ್ನು ಇಮ್ರಾನ್‌ ಮಟ್ಟ ಹಾಕಲಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 19:51 IST
Last Updated 25 ಜುಲೈ 2019, 19:51 IST
ಇಮ್ರಾನ್
ಇಮ್ರಾನ್   

ದೇಶ ಯಾವುದೇ ಇರಲಿ, ರಾಜಕಾರಣಿಗಳು ಬಹಿರಂಗವಾಗಿ ಸತ್ಯ ಹೇಳುವುದು ಕಡಿಮೆ. ಸತ್ಯ ಹೇಳಲೇಬೇಕಾದ ಸಂದರ್ಭ ಬಂದಾಗಲೂ ಅರ್ಧಸತ್ಯ ಹೇಳುವವರೇ ಹೆಚ್ಚು. ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌, ಬಹಿರಂಗವಾಗಿಯೇ ಸತ್ಯವೊಂದನ್ನು ಒಪ್ಪಿಕೊಂಡಿದ್ದಾರೆ, ಅದೂ ಅಮೆರಿಕದ ನೆಲದಲ್ಲಿ. ಅಮೆರಿಕಕ್ಕೆ ಭೇಟಿ ನೀಡಿದ್ದ ಇಮ್ರಾನ್‌ ಖಾನ್‌, ‘ಶಸ್ತ್ರಾಸ್ತ್ರ ತರಬೇತಿ ಪಡೆದು ಅಫ್ಗಾನಿಸ್ತಾನ ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಹೋರಾಡಿದ್ದ 30 ಸಾವಿರದಿಂದ 40 ಸಾವಿರ ಶಸ್ತ್ರಧಾರಿ
ಗಳು ಈಗಲೂ ಪಾಕಿಸ್ತಾನದಲ್ಲಿ ಇದ್ದಾರೆ’ ಎಂದಿದ್ದಾರೆ. ಅಮೆರಿಕದ ಕಾಂಗ್ರೆಸ್‌ ನೆರವು ಹೊಂದಿರುವ ಚಿಂತಕರ ಚಾವಡಿ ‘ಯುಎಸ್‌ ಶಾಂತಿ ಸಂಸ್ಥೆ’ಯ ಸಭೆಯಲ್ಲಿ, ‘ಪಾಕಿಸ್ತಾನದಲ್ಲಿ ಈ ರೀತಿ ಉಗ್ರಗಾಮಿ ಗುಂಪುಗಳು ಸಕ್ರಿಯವಾಗಿರುವುದನ್ನು ಹಿಂದಿನ ಪ್ರಧಾನಿಗಳ್ಯಾರೂ ಅಮೆರಿಕಕ್ಕೆ ತಿಳಿಸಿರಲೇ ಇಲ್ಲ. 15 ವರ್ಷಗಳಿಂದ 40 ಉಗ್ರಗಾಮಿ ಗುಂಪುಗಳು ಪಾಕಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ’ ಎಂದೂ ಇಮ್ರಾನ್‌ ಹೇಳಿದ್ದಾರೆ. ಕಾಶ್ಮೀರದ ನೆಲದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುವ ಉಗ್ರ ಸಂಘಟನೆಗಳಿಗೆ ಪಾಕಿಸ್ತಾನ ಆಶ್ರಯ, ತರಬೇತಿ ಮತ್ತು ನೆರವು ನೀಡುತ್ತಿದೆ ಎಂದು ಭಾರತ ಸರ್ಕಾರವು ಬಹಳ ಹಿಂದಿನಿಂದಲೂ ಹೇಳುತ್ತಿದೆ. ಮುಂಬೈ ದಾಳಿ, ಭಾರತದ ಸಂಸತ್‌ ಮೇಲಿನ ದಾಳಿ ಸಹಿತ ಹಲವು ಪ್ರಕರಣಗಳಲ್ಲಿ ಪ್ರಬಲ ಸಾಕ್ಷ್ಯಗಳನ್ನೂ ಅಂತರರಾಷ್ಟ್ರೀಯ ಸಮುದಾಯದ ಮುಂದೆ ಭಾರತ ಇರಿಸಿದೆ. ಭಾರತೀಯ ಉಪಖಂಡದಲ್ಲಿ ಭಯೋತ್ಪಾದನೆಯನ್ನು ಸಮರ್ಥವಾಗಿ ಮಟ್ಟ ಹಾಕಬೇಕಾದರೆ, ಮೊದಲು ಆ ಕುರಿತ ವಸ್ತುಸ್ಥಿತಿಯನ್ನು ಬಹಿರಂಗವಾಗಿ bಒಪ್ಪಿಕೊಳ್ಳಬೇಕು. ಇಮ್ರಾನ್‌ ಅಂತಹ ಧೈರ್ಯವನ್ನು ಪ್ರದರ್ಶಿಸಿರುವುದು ಸ್ವಾಗತಾರ್ಹ. ಇದೇ ಧೈರ್ಯವನ್ನು ಬಳಸಿ ಅವರು, ತಮ್ಮ ದೇಶದಲ್ಲಿ ಇರುವ ಎಲ್ಲ ಉಗ್ರ ಗುಂಪುಗಳನ್ನು ಸಂಪೂರ್ಣ ಮಟ್ಟ ಹಾಕುವ ದಿಟ್ಟತನವನ್ನೂ ತೋರಬೇಕು. ಅಂತಹ ಇಚ್ಛಾಶಕ್ತಿಯನ್ನು ಅವರಿಂದ ನಿರೀಕ್ಷಿಸಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಉತ್ತರ ಅಷ್ಟು ಸುಲಭವಲ್ಲ.

ಇಮ್ರಾನ್‌ ಖಾನ್‌ ಅವರ ಅಮೆರಿಕ ಭೇಟಿಗೆ ಒಂದು ನಿರ್ದಿಷ್ಟ ಉದ್ದೇಶವಿತ್ತು. ಅವರು ಭಯೋತ್ಪಾದನೆ ನಿಗ್ರಹ ಕುರಿತು ಪರಿಹಾರೋಪಾಯಗಳನ್ನು ಚರ್ಚಿಸಲು ಅಲ್ಲಿಗೆ ಹೋಗಿದ್ದಲ್ಲ. ಪಾಕಿಸ್ತಾನ ಸದ್ಯಕ್ಕೆ ತೀವ್ರ ಆರ್ಥಿಕ ದುಃಸ್ಥಿತಿಯನ್ನು ಎದುರಿಸುತ್ತಿದೆ. ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ದರ ಕಳೆದ ಹಣಕಾಸು ವರ್ಷದಲ್ಲಿ ಶೇ 5 ಇದ್ದದ್ದು, ಈ ವರ್ಷ ಶೇ 3.3ಕ್ಕೆ ಕುಸಿದಿದೆ. ಮುಂದಿನ ವರ್ಷ ಶೇ 2.4ಕ್ಕೆ ಕುಸಿಯಲಿದೆ ಎಂಬ ಅಂದಾಜು ಇದೆ. ಕಳೆದ ಆರ್ಥಿಕ ವರ್ಷವೊಂದರಲ್ಲೇ ಸುಮಾರು ₹ 1.12 ಲಕ್ಷ ಕೋಟಿ ಸಾಲ ಮಾಡಿರುವ ದೇಶವದು. ಈಗ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಮುಂದೆ ಮತ್ತಷ್ಟು ಸಾಲಕ್ಕಾಗಿ ಕೈಚಾಚಿ ನಿಂತಿದೆ. ಕಠಿಣ ಆರ್ಥಿಕ ದುಃಸ್ಥಿತಿಯಿಂದ ದೇಶವನ್ನು ಪಾರು ಮಾಡುವ ನಿಟ್ಟಿನಲ್ಲಿ ಪಾಕ್‌ಗೆ ಅಮೆರಿಕದ ಆರ್ಥಿಕ ನೆರವೂ ಅಗತ್ಯವಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ನಾಶ ಮಾಡಲು ಸೆಪ್ಟೆಂಬರ್‌ವರೆಗೆ ಗಡುವು ವಿಧಿಸಿರುವ ಹಿನ್ನೆಲೆಯಲ್ಲಿ, ಇಮ್ರಾನ್‌ ಖಾನ್‌ ಹೇಳಿಕೆಯನ್ನು ಪರಿಶೀಲಿಸಬೇಕಿದೆ. ಉಗ್ರಗಾಮಿಗಳಿಗೆ ಆರ್ಥಿಕ ನೆರವು ನೀಡುತ್ತಿರುವ ಆರೋಪದಲ್ಲಿ ಹಫೀಜ್‌ ಸಯೀದ್‌ನನ್ನು ಪಾಕಿಸ್ತಾನದ ಸರ್ಕಾರ ಈಗಾಗಲೇ ಬಂಧನದಲ್ಲಿಟ್ಟಿದೆ. ಹಫೀಜ್‌ ಈ ರೀತಿ ಬಂಧನಕ್ಕೆ ಒಳಗಾಗಿರುವುದು ಇದು ಎಂಟನೇ ಬಾರಿ. ಬಂಧನದಲ್ಲಿದ್ದರೂ ಐಷಾರಾಮಿ ಸವಲತ್ತುಗಳನ್ನು ಹೊಂದಿರುವ ಆತನನ್ನು ಮತ್ತೆ ಬಿಡುಗಡೆ ಮಾಡುವುದಿಲ್ಲ ಎನ್ನುವ ಯಾವ ಖಾತರಿಯೂ ಇಲ್ಲ. ಆತನ ವಿರುದ್ಧ ಹಿಂದೆ ನಡೆದಿರುವ ಯಾವ ತನಿಖೆಯೂ ಪೂರ್ಣಗೊಂಡಿಲ್ಲ. ‘ಪಾಕಿಸ್ತಾನದಲ್ಲಿರುವ ಎಲ್ಲ ಉಗ್ರರ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಅವರು ನಡೆಸುತ್ತಿರುವ ದತ್ತಿ ಸಂಸ್ಥೆಗಳು ಮತ್ತು ಶಾಲೆಗಳನ್ನು ಸರ್ಕಾರ ವಶಕ್ಕೆ ಪಡೆದಿದೆ’ ಎಂದು ಇಮ್ರಾನ್‌ ಹೇಳಿರುವುದನ್ನು ಪೂರ್ಣ ನಂಬಲು ಸಾಧ್ಯವಿಲ್ಲ. 2001ರಲ್ಲಿ ಭಾರತದ ಸಂಸತ್‌ ಮೇಲೆ ಉಗ್ರರ ದಾಳಿಯಾದ ಬಳಿಕ, ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಜನರಲ್‌ ಪರ್ವೇಜ್‌ ಮುಷರಫ್‌ ಕೂಡಾ ಇಂತಹದ್ದೇ ಹೇಳಿಕೆಯನ್ನು ನೀಡಿದ್ದರು. ಆ ಬಳಿಕ ಪ್ರಧಾನಿಗಳಾಗಿದ್ದ ಯೂಸುಫ್‌ ರಾಜಾ ಗಿಲಾನಿ ಮತ್ತು ನವಾಜ್‌ ಷರೀಫ್‌ ಕೂಡಾ ಉಗ್ರರ ವಿರುದ್ಧ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದಿದ್ದರು. ಆದರೆ ಪ್ರತಿಸಲವೂ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳ ನೆರವು ಪಡೆಯುವ ನಿಟ್ಟಿನಲ್ಲಿ ಇದು ಪಾಕ್‌ ನಡೆಸುವ ತಂತ್ರಗಾರಿಕೆ ಎನ್ನುವುದು ಸಾಬೀತಾಗುತ್ತಲೇ ಇದೆ. ಇಮ್ರಾನ್‌ ಅವರದ್ದು ಕೇವಲ ತೋರಿಕೆಯ ಹೇಳಿಕೆ ಆಗದಿರಲಿ. ಉಗ್ರರಿಗೆ ಬೆಂಬಲ, ರಕ್ಷಣೆ ನೀಡುತ್ತಿರುವವರನ್ನೂ ಶೀಘ್ರ ಕಠಿಣ ಶಿಕ್ಷೆಗೆ ಗುರಿಪಡಿಸುವ ಎದೆಗಾರಿಕೆಯನ್ನು ಅವರು ಪ್ರದರ್ಶಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT