ADVERTISEMENT

ಸಂಪಾದಕೀಯ | ಓಮೈಕ್ರಾನ್‌: ಎಚ್ಚರ ತಪ್ಪದಿರಿ ಆರೋಗ್ಯ ವ್ಯವಸ್ಥೆ ಸನ್ನದ್ಧಗೊಳಿಸಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 19:32 IST
Last Updated 24 ಡಿಸೆಂಬರ್ 2021, 19:32 IST
   

ಕೊರೊನಾ ವೈರಾಣುವಿನ ಹೊಸ ರೂಪಾಂತರಿ ತಳಿ ಓಮೈಕ್ರಾನ್‌ ಸೋಂಕು ತಗುಲಿದ 300ಕ್ಕೂ ಅಧಿಕ ಪ್ರಕರಣಗಳು ದೇಶದಲ್ಲಿ ಈಗ ದೃಢಪಟ್ಟಿವೆ. ತಿಂಗಳ ಆರಂಭದಲ್ಲಿ ಒಂದೂ ಪ್ರಕರಣ ಇರಲಿಲ್ಲ. ಕೆಲವೇ ದಿನಗಳಲ್ಲಿ ಇಷ್ಟೊಂದು ಪ್ರಕರಣಗಳು ವರದಿ ಆಗಿದ್ದರಿಂದ ಅಪಾಯದ ಎಚ್ಚರಿಕೆ ಗಂಟೆ ಬಾರಿಸಿದಂತಾಗಿದೆ. ಸೋಂಕು ಮತ್ತೆ ಹರಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ರಾಜ್ಯಗಳಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸುವ ಜತೆಗೆ ಕೆಲವು ಸೂಚನೆಗಳನ್ನು ಸಹ ನೀಡಿದೆ.

‘ಎಂತಹ ಕೆಟ್ಟ ಪರಿಸ್ಥಿತಿಯನ್ನೂ ಎದುರಿಸಲು ಸಜ್ಜಾಗಿ’ ಎಂಬ ಕಿವಿಮಾತು ಹೇಳಿದೆ. ಕೊರೊನಾದ ಹಳೆಯ ಡೆಲ್ಟಾ ತಳಿಗೆ ಹೋಲಿಸಿದರೆ ಓಮೈಕ್ರಾನ್‌ ಹರಡುವ ಸಾಧ್ಯತೆ ಮೂರುಪಟ್ಟು ಹೆಚ್ಚು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಜಿಲ್ಲೆ ಮತ್ತು ಸ್ಥಳೀಯ ಮಟ್ಟದಲ್ಲಿ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇಡುವುದು, ದತ್ತಾಂಶಗಳನ್ನು ಕೂಲಂಕಷವಾಗಿ ವಿಶ್ಲೇಷಿಸುವುದು, ಸನ್ನಿವೇಶಕ್ಕೆ ತಕ್ಕಂತೆ ತಕ್ಷಣ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಕಂಟೈನ್‌ಮೆಂಟ್‌ ವಲಯಗಳನ್ನು ಸಮರ್ಪಕವಾಗಿ ಗುರುತಿಸಿ, ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅತೀ ಮುಖ್ಯ ಎಂದು ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಸೂಚನೆಯಲ್ಲಿ ತಿಳಿಸಲಾಗಿದೆ.

ಕೋವಿಡ್‌ ದೃಢಪಡುವಿಕೆ ಪ್ರಮಾಣವು ಶೇ 10ರ ಗಡಿ ದಾಟುವ ಮುನ್ನ ಮತ್ತು ಆಮ್ಲಜನಕ ಲಭ್ಯ ಇರುವ ಹಾಸಿಗೆಗಳ ಭರ್ತಿ ಪ್ರಮಾಣ ಶೇ 40 ತಲುಪುವ ಮುನ್ನ ನಿರ್ಬಂಧ ಹಾಗೂ ನಿಷೇಧಗಳನ್ನು ಹೇರಲು ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡಲಾಗಿದೆ. ರಾತ್ರಿ ಕರ್ಫ್ಯೂ ವಿಧಿಸುವುದು, ಹೆಚ್ಚಿನ ಜನ ಸೇರದಂತೆ ತಡೆಯುವುದು, ಮದುವೆ, ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯನ್ನು ಮಿತಿಗೆ ಒಳಪಡಿಸುವುದು ಮತ್ತು ಸಮೂಹ ಸಾರಿಗೆಯಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಸಂಖ್ಯೆಯ ಮೇಲೆ ಮಿತಿ ಹೇರುವಂತಹ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದೂ ತಿಳಿಸಲಾಗಿದೆ. ಈ ಸೂಚನೆಗಳನ್ನು ರಾಜ್ಯ ಸರ್ಕಾರಗಳು ಗಂಭೀರವಾಗಿ ತೆಗೆದುಕೊಂಡು ತಕ್ಷಣ ಕಾರ್ಯಪ್ರವೃತ್ತವಾಗುವ ಅಗತ್ಯವಿದೆ.

ADVERTISEMENT

ದೇಶದ ಶೇ 90ರಷ್ಟು ಜನ ಕನಿಷ್ಠ ಒಂದು ಡೋಸ್‌ ಲಸಿಕೆ ಪಡೆದಿದ್ದಾರೆ. ಕೋವಿಡ್‌ನ ಎರಡನೇ ಅಲೆ ಶುರುವಾಗಿದ್ದ ಹಂತಕ್ಕೆ ಹೋಲಿಸಿದರೆ ಈಗ ಲಸಿಕೆ ಹಾಕುವ ಗುರಿಯಲ್ಲಿ ದೇಶ ದಾಪುಗಾಲು ಹಾಕಿರುವುದೇನೋ ನಿಜ. ಆದರೆ, ‘ಸದ್ಯ ಇರುವ ಕೋವಿಡ್‌ ನಿರೋಧಕ ಲಸಿಕೆಗಳು ಹೊಸ ತಳಿಯ ಸೋಂಕಿನಿಂದ ರಕ್ಷಣೆ ನೀಡುವುದಿಲ್ಲ. ಲಸಿಕೆಯ ಮೂರನೇ ಡೋಸ್‌ ಸಹ ಬೇಕಾಗುತ್ತದೆ’ ಎಂದು ಹೇಳಲಾಗುತ್ತಿದೆ. ಮಕ್ಕಳಿಗೆ ಲಸಿಕೆ ನೀಡುವ ಸಂಬಂಧ ಔಷಧ ನಿಯಂತ್ರಣ ಪ್ರಾಧಿಕಾರ ಇದುವರೆಗೆ ನಿರ್ಧಾರ ತೆಗೆದುಕೊಂಡಿಲ್ಲ. ಒಂದು ಡೋಸ್‌ ಲಸಿಕೆ ಮಾತ್ರ ಪಡೆದವರು ಮತ್ತು ಲಸಿಕೆಯನ್ನೇ ಪಡೆಯದವರು ಸೇರಿ ಶೇ 40ರಷ್ಟು ಜನ ಈ ಸೋಂಕಿನಿಂದ ಹೆಚ್ಚಿನ ಅಪಾಯ ಎದುರಿಸುವ ಸಾಧ್ಯತೆ ಇದೆ. ಅದರಲ್ಲೂ ಸಾಂಕ್ರಾಮಿಕಪೂರ್ವ ಕಾಲಘಟ್ಟದಂತೆ ಜನದಟ್ಟಣೆ ಈಗ ಮತ್ತೆ ಸಾಮಾನ್ಯವಾಗಿದೆ. ಚುನಾವಣೆ ರ‍್ಯಾಲಿಗಳು ಸಹ ಎಂದಿನಂತೆ ನಡೆಯುತ್ತಿವೆ. ಓಮೈಕ್ರಾನ್‌ ಎಷ್ಟು ಅಪಾಯಕಾರಿ ಮತ್ತು ಅದರ ನೈಜ ಪರಿಣಾಮ ಏನೆಂಬುದು ಮುಂದಿನ ಕೆಲವು ವಾರಗಳಲ್ಲಿ ಸ್ಪಷ್ಟವಾಗಿ ಗೋಚರಿಸುವ ಸಾಧ್ಯತೆ ಇದೆ.

ಕೋವಿಡ್‌ನ ಮೊದಲ ಅಲೆ ಮುಗಿಯುವ ಹೊತ್ತಿನಲ್ಲೇ ‘ಎರಡನೇ ಅಲೆಯೂ ಬಂದೆರಗಲಿದೆ’ ಎಂದು ತಜ್ಞರು ಎಚ್ಚರಿಸುತ್ತಲೇ ಇದ್ದರು. ಮೊದಲ ಅಲೆಯ ಸಂದರ್ಭದಲ್ಲಿ ಸಿದ್ಧತೆಗೆ ಸಮಯವಿಲ್ಲದೆ ಒದ್ದಾಡಿದ್ದ ರಾಜ್ಯ ಸರ್ಕಾರ, ಎರಡನೇ ಅಲೆಯನ್ನು ಎದುರಿಸಲು ಕಾಲಾವಕಾಶವಿದ್ದರೂ ಅಣಿಗೊಂಡಿರಲಿಲ್ಲ. ರಾಜ್ಯದಲ್ಲಿ ಕೋವಿಡ್‌ಗೆ ತುತ್ತಾದವರಲ್ಲಿ ಹಲವರು ಸಕಾಲದಲ್ಲಿ ಚಿಕಿತ್ಸೆ, ವೆಂಟಿಲೇಟರ್‌, ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ಜೀವ ಕಳೆದುಕೊಂಡ ಕಹಿ ನೆನಪು ಇನ್ನೂ ಕಾಡುತ್ತಿದೆ. ಇಂತಹ ಸಮಯದಲ್ಲೇ ಓಮೈಕ್ರಾನ್‌ ವಕ್ಕರಿಸಿದೆ. ದೇಶದಲ್ಲಿ ಓಮೈಕ್ರಾನ್‌ ಸೋಂಕು ಪ್ರಕರಣಗಳು ಹೆಚ್ಚು ವರದಿಯಾಗಿರುವ ರಾಜ್ಯಗಳಲ್ಲಿ ಕರ್ನಾಟಕ ಸಹ ಒಂದಾಗಿದೆ.

ಕೋವಿಡ್‌ ನಿಯಂತ್ರಣಕ್ಕಾಗಿ ಈ ಹಿಂದೆ ಆರಂಭಿಸಿದ್ದ ಬಹುತೇಕ ಕೇಂದ್ರಗಳನ್ನು ಯಾವುದೇ ವಿವೇಚನೆ ಇಲ್ಲದೆ ಮುಚ್ಚಲಾಗಿದೆ. ಅವುಗಳನ್ನು ಜರೂರಾಗಿ ಪುನರಾರಂಭಿಸಬೇಕು. ಜಿಲ್ಲಾ ಕೇಂದ್ರಗಳಲ್ಲಿ ಔಷಧಿಗಳ ದಾಸ್ತಾನು ಸಮರ್ಪಕವಾಗಿಲ್ಲ ಎಂಬ ವರದಿಗಳೂ ಇವೆ. ಎಲ್ಲ ಕಡೆಗಳಲ್ಲಿ ಜೀವರಕ್ಷಕ ಔಷಧಿಗಳ ಅಗತ್ಯ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು. ಕೇಂದ್ರ ಆರೋಗ್ಯ ಇಲಾಖೆಯ ಸೂಚನೆಯಂತೆ, ಸ್ಥಳೀಯ ಸಾಂಕ್ರಾಮಿಕ ಪ್ರವೃತ್ತಿಗಳ ಮೇಲೂ ನಿಗಾ ಇಟ್ಟಿರಬೇಕು. ಜನರೂ ಅಷ್ಟೆ, ಸಾಂಕ್ರಾಮಿಕದ ಅಪಾಯದ ಕುರಿತು ಅಸಡ್ಡೆ ತೋರದೆ ಪೂರ್ಣ ಎಚ್ಚರ ವಹಿಸಬೇಕು. ಸರ್ಕಾರ– ಸಮುದಾಯ ಒಂದಾಗಿ ಈ ಸಾಂಕ್ರಾಮಿಕವನ್ನು ಹಿಮ್ಮೆಟ್ಟಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.