ADVERTISEMENT

Prajavani Editorial: ಭಾರತ–ಕತಾರ್‌ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ವಿಸ್ತರಣೆ

ಸಂಪಾದಕೀಯ
Published 21 ಫೆಬ್ರುವರಿ 2025, 23:42 IST
Last Updated 21 ಫೆಬ್ರುವರಿ 2025, 23:42 IST
<div class="paragraphs"><p>ಭಾರತ–ಕತಾರ್‌ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ವಿಸ್ತರಣೆ</p></div>

ಭಾರತ–ಕತಾರ್‌ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ವಿಸ್ತರಣೆ

   

ಕತಾರ್‌ ದೊರೆ ಶೇಖ್‌ ತಮೀಮ್‌ ಬಿನ್‌ ಹಮದ್‌ ಅಲ್‌ ಥಾನಿ ಅವರ ಭೇಟಿಯ ಬಳಿಕ ಭಾರತ ಮತ್ತು ಕತಾರ್‌ ನಡುವಣ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ವಿಸ್ತಾರವೂ ಗಾಢವೂ ಆಗಿದೆ. ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕಾಗಿ ಹಲವು ಕರಾರುಗಳಿಗೆ ಎರಡೂ ದೇಶಗಳು ಸಹಿ ಹಾಕಿವೆ. ಕೊಲ್ಲಿ ರಾಷ್ಟ್ರಗಳ ಜೊತೆಗೆ ಭಾರತವು ಹಲವು ಶತಮಾನಗಳಿಂದಲೂ ಉತ್ತಮ ಬಾಂಧವ್ಯ ಹೊಂದಿದೆ. ಸ್ವತಂತ್ರ ಭಾರತದ ಎಲ್ಲ ಸರ್ಕಾರಗಳೂ ಈ ಸಂಬಂಧವನ್ನು ಪೋಷಿಸುತ್ತಾ ಬಂದಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ನಂಟು ಉತ್ತಮಗೊಳ್ಳಲು ವಿಶೇಷ ಗಮನವನ್ನು ಹರಿಸಿದ್ದಾರೆ. ಕೊಲ್ಲಿ ರಾಷ್ಟ್ರಗಳ ಜೊತೆಗೆ ಭಾರತವು ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧವನ್ನಷ್ಟೇ ಹೊಂದಿಲ್ಲ, ಜನರ ನಡುವೆಯೂ ಉತ್ತಮ ಸಂಪರ್ಕ ಇದೆ. ಕೊಲ್ಲಿ ದೇಶಗಳಲ್ಲಿ ಭಾರತದ ದೊಡ್ಡ ಸಂಖ್ಯೆಯ ಜನ ಕೆಲಸ ಮಾಡುತ್ತಿದ್ದಾರೆ. ಕೊಲ್ಲಿ ದೇಶಗಳ ಪೈಕಿ ಕತಾರ್‌ ವಿಶಿಷ್ಟವಾಗಿದೆ. ಈ ದೇಶವು ಪಶ್ಚಿಮದ ದೇಶಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದೆ. ಹಾಗೆಯೇ ಕೊಲ್ಲಿ ಪ್ರದೇಶದ ಇತರ ದೇಶಗಳ ಜೊತೆಗೆ ಗೆಳೆತನದಿಂದ ಇದೆ. ಇಸ್ರೇಲ್‌ ಜೊತೆಗೂ ಅಫ್ಗಾನಿಸ್ತಾನದಂತಹ ಮೂಲಭೂತವಾದಿ ದೇಶದೊಂದಿಗೂ ನಂಟು ಇರಿಸಿಕೊಂಡಿದೆ. ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಈ ಒಂಬತ್ತು ತಿಂಗಳಲ್ಲಿ ಕತಾರ್‌ಗೆ ಎರಡು ಬಾರಿ ಭೇಟಿ ನೀಡಿದ್ದಾರೆ. ಭಾರತವು ಈ ದೇಶಕ್ಕೆ ಎಷ್ಟು ಮಹತ್ವ ನೀಡುತ್ತಿದೆ ಎಂಬುದಕ್ಕೆ ಇದು ಪುರಾವೆಯಾಗಿದೆ. 

ಎರಡೂ ದೇಶಗಳ ಸಂಬಂಧವನ್ನು ವ್ಯೂಹಾತ್ಮಕ ಪಾಲುದಾರಿಕೆಯ ಮಟ್ಟಕ್ಕೆ ಏರಿಸಲು ಒಪ್ಪಿಕೊಳ್ಳಲಾಗಿದೆ ಎಂದು ದೊರೆಯ ಭೇಟಿಯ ಕೊನೆಯಲ್ಲಿ ನೀಡಿದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ದ್ವಿಪಕ್ಷೀಯ ವ್ಯಾಪಾರದ ಮೊತ್ತವನ್ನು ಮುಂದಿನ ಐದು ವರ್ಷಗಳಲ್ಲಿ ದ್ವಿಗುಣಗೊಳಿಸಲು ಯೋಜಿಸಲಾಗಿದೆ. ವ್ಯಾಪಾರದ ಈ ಮೊತ್ತವು ಈಗಿನ 1,400 ಕೋಟಿ ಡಾಲರ್‌ನಿಂದ (ಸುಮಾರು ₹1.22 ಲಕ್ಷ ಕೋಟಿ) 2,800 ಕೋಟಿ ಡಾಲರ್‌ಗೆ (ಸುಮಾರು ₹2.44 ಲಕ್ಷ ಕೋಟಿ) ಏರಿಕೆಯಾಗಲಿದೆ. ಕತಾರ್‌ ದೇಶವು ಭಾರತದಲ್ಲಿ ಸಾವಿರ ಕೋಟಿ ಡಾಲರ್‌ (ಸುಮಾರು ₹86 ಸಾವಿರ ಕೋಟಿ) ಹೂಡಿಕೆ ಮಾಡಲಿದೆ. ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ), ಸೌದಿ ಅರೇಬಿಯಾ, ಒಮಾನ್‌ ಮತ್ತು ಕುವೈತ್‌ ಸದಸ್ಯತ್ವ ಹೊಂದಿರುವ ಗಲ್ಫ್‌ ಕೊ–ಆಪರೇಷನ್‌ ಕೌನ್ಸಿಲ್‌ (ಜಿಸಿಸಿ) ಜೊತೆಗೆ ಭಾರತವು ವ್ಯೂಹಾತ್ಮಕ  ಸಂಬಂಧವನ್ನು ಈಗಾಗಲೇ ಹೊಂದಿದೆ. ಭಾರತದ ವಿದೇಶಾಂಗ ಸಂಬಂಧದಲ್ಲಿ ಈ ಪ್ರದೇಶಕ್ಕೆ ಇರುವ ಮಹತ್ವವನ್ನು ಇದು ತೋರುತ್ತದೆ. ಎರಡು ಕರಾರುಗಳು ಮತ್ತು ಐದು ಒಪ್ಪಂದಗಳಿಗೆ ಭಾರತ–ಕತಾರ್‌ ಸಹಿ ಹಾಕಿವೆ. ಇದರಲ್ಲಿ ಆರ್ಥಿಕ ಸಹಕಾರ, ಯುವಜನ ಕಲ್ಯಾಣ, ಎರಡೂ ಕಡೆಯಲ್ಲಿ ತೆರಿಗೆ ವಿಧಿಸುವಿಕೆಯನ್ನು ತಪ್ಪಿಸುವುದು ಸೇರಿವೆ. ಭಾರತದ ಎಲ್‌ಎನ್‌ಜಿ (ದ್ರವೀಕೃತ ನೈಸರ್ಗಿಕ ಅನಿಲ) ಅಗತ್ಯದ ಶೇಕಡ 45ರಷ್ಟನ್ನು ಕತಾರ್‌ ಪೂರೈಸುತ್ತದೆ. ಈಗ ಇರುವ ದ್ವಿಪಕ್ಷೀಯ ವ್ಯಾಪಾರದ ಅರ್ಧ ಭಾಗದಷ್ಟು ಇದೇ ಆಗಿದೆ. ಕತಾರ್‌ ಎನರ್ಜಿ ಮತ್ತು ಭಾರತದ ಪೆಟ್ರೊನೆಟ್‌ ಎಲ್‌ಎನ್‌ಜಿ ಕಂಪನಿಯು ಬೃಹತ್‌ ಪ್ರಮಾಣದ ಎಲ್‌ಎನ್‌ಜಿ ಪೂರೈಕೆಯ ಒ‍ಪ್ಪಂದ ಮಾಡಿಕೊಂಡಿವೆ. ಈ ಒಪ್ಪಂದದ ಅವಧಿ 20 ವರ್ಷ. ಭಾರತದಲ್ಲಿ ಕತಾರ್‌ನ ಹೂಡಿಕೆ ದೊಡ್ಡ ಪ್ರಮಾಣದಲ್ಲಿ ಇಲ್ಲ. ಹೂಡಿಕೆ ಏರಿಕೆಯ ಒಪ್ಪಂದಗಳನ್ನು ಈಗ ಮಾಡಿಕೊಳ್ಳಲಾಗಿದೆ. 2023–24ರಲ್ಲಿ ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ದ್ವಿಪಕ್ಷೀಯ ವ್ಯಾಪಾರದ ಮೊತ್ತದಲ್ಲಿ ಕುಸಿತವಾಗಿದೆ. ಇದನ್ನು ಏರಿಸುವುದಕ್ಕೂ ಕ್ರಮ ಕೈಗೊಳ್ಳಲಾಗಿದೆ. 

ADVERTISEMENT

ಭಾರತದ ನೌಕಾಪಡೆಯ ಎಂಟು ಮಂದಿ ನಿವೃತ್ತ ಸಿಬ್ಬಂದಿಗೆ ಗೂಢಚರ್ಯೆ ಆರೋಪದಲ್ಲಿ ಕತಾರ್‌ ದೇಶವು 2022ರ ಆಗಸ್ಟ್‌ನಲ್ಲಿ ಮರಣದಂಡನೆ ವಿಧಿಸಿತ್ತು. ಇದರಿಂದಾಗಿ, ದ್ವಿಪಕ್ಷೀಯ ರಾಜತಾಂತ್ರಿಕ ಸಂಬಂಧಕ್ಕೆ ಹೊಡೆತ ಬಿದ್ದಿತ್ತು. ಆದರೆ, ದೊರೆಯು ಎಲ್ಲರನ್ನೂ ಕ್ಷಮಿಸಿದ್ದರು. ಇದು ಸಂಬಂಧದಲ್ಲಿ ಉಂಟಾಗಿದ್ದ ವಿಷಮ ಸ್ಥಿತಿಯನ್ನು ನಿವಾರಿಸಿತು. ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಸಾಧ್ಯತೆಗಳನ್ನು ಎರಡೂ ದೇಶಗಳು ಶೋಧಿಸಿವೆ. ಇದು, ಎರಡೂ ದೇಶಗಳಿಗೆ ಪರಸ್ಪರರ ಮಾರುಕಟ್ಟೆಗೆ ಮುಕ್ತ ಪ್ರವೇಶ ಒದಗಿಸಿ, ದ್ವಿಪಕ್ಷೀಯ ವ್ಯಾಪಾರ ಹೆಚ್ಚಳಕ್ಕೆ ಅವಕಾಶ ಮಾಡಿಕೊಡಲಿದೆ. ಚೀನಾ ಸೇರಿದಂತೆ ಹಲವು ದೇಶಗಳ ಜೊತೆಗೆ ಮುಕ್ತ ಮಾರುಕಟ್ಟೆ ಒಪ್ಪಂದವನ್ನು ಕತಾರ್‌ ಹೊಂದಿದೆ. ಎಫ್‌ಟಿಎಯಲ್ಲಿ ಹಲವು ಅನುಕೂಲಗಳು ಇವೆ. ಹಾಗೆಯೇ ಕೆಲವು ಅನನುಕೂಲಗಳೂ ಇವೆ. ಎಫ್‌ಟಿಎ ಕಾರಣದಿಂದ ಕತಾರ್‌ ಅಥವಾ ಇತರ ದೇಶಗಳು ಅವುಗಳ ಸರಕುಗಳನ್ನು ಭಾರತದಲ್ಲಿ ತಂದು ಬೇಕಾಬಿಟ್ಟಿ ಸುರಿಯದಂತೆ ಎಚ್ಚರಿಕೆಯನ್ನು ವಹಿಸಬೇಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.