
ಗ್ರಾಮೀಣರ ಬದುಕಿನೊಂದಿಗೆ ಮಿಳಿತಗೊಂಡ ‘ಮನರೇಗಾ’ ಹೆಸರನ್ನು ಬದಲಾಯಿಸುವ ಸರ್ಕಾರದ ಪ್ರಯತ್ನ ಸರಿಯಲ್ಲ. ಇದು ಜನಹಿತದ ಹಿತಾಸಕ್ತಿಯಿಂದ ದೂರವಾದ ರಾಜಕೀಯ ನಡವಳಿಕೆ.
‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ’ (ಮನರೇಗಾ) ಹೆಸರನ್ನು ‘ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಆಂಡ್ ಆಜೀವಿಕ ಮಿಷನ್’ (ಗ್ರಾಮೀಣ್) (ವಿಬಿ–ಜಿ ರಾಮ್ ಜಿ) ಎಂದು ಬದಲಾಯಿಸುವ ಕೇಂದ್ರ ಸರ್ಕಾರದ ಪ್ರಯತ್ನ ರಾಜಕೀಯಪ್ರೇರಿತ ಕ್ರಮವಾಗಿದೆ. ಗ್ರಾಮೀಣ ಭಾಗದ ಬಡಜನರಿಗೆ ವರ್ಷದಲ್ಲಿ 125 ದಿನಗಳ ಕೆಲಸವನ್ನು ಖಾತರಿಪಡಿಸುವ ‘ಮನರೇಗಾ’ ಬರೀ ಒಂದು ಕಲ್ಯಾಣ ಯೋಜನೆಯಷ್ಟೇ ಆಗಿರದೆ, ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ನ್ಯಾಯದ ಸಂಕೇತವೂ ಆಗಿದೆ. ಮಹಾತ್ಮ ಗಾಂಧಿ ಅವರ ಹೆಸರನ್ನು ಹೊಂದುವ ಮೂಲಕ ಯೋಜನೆಗೆ ನೈತಿಕ ಮೌಲ್ಯದ ಆಯಾಮವೂ ದೊರೆತಿದೆ. ಹಳ್ಳಿಗಳ ಏಳಿಗೆಯಲ್ಲಿ ದೇಶದ ಅಭಿವೃದ್ಧಿಯನ್ನು ಕಾಣುತ್ತಿದ್ದ ಗಾಂಧೀಜಿ ಅವರ ಹೆಸರು, ಗ್ರಾಮೀಣರ ಬದುಕಿನೊಂದಿಗೆ ಬೆಸೆದುಕೊಂಡ ಯೋಜನೆಗೆ ಅರ್ಥಪೂರ್ಣವೂ ಆಗಿತ್ತು.
ಇದೀಗ ಯೋಜನೆಯ ಹೆಸರನ್ನು ಬದಲಾಯಿಸಲು ಸರ್ಕಾರ ಮುಂದಾಗಿರುವುದಕ್ಕೂ, ಗಾಂಧೀಜಿ ಅವರೊಂದಿಗೆ ಭಾರತೀಯ ಜನತಾ ಪಕ್ಷ ಹಾಗೂ ಸಂಘ ಪರಿವಾರಕ್ಕೆ ಇರುವ ತಾತ್ತ್ವಿಕ ಭಿನ್ನಮತಕ್ಕೂ ಸಂಬಂಧ ಇರುವಂತಿದೆ. ಸರ್ಕಾರದ ಪ್ರಯತ್ನ ಯಶಸ್ವಿಯಾಗಿ ಹೆಸರು ಬದಲಾದರೆ, ದೊಡ್ಡದೊಂದು ಆಡಳಿತ ಕಸರತ್ತು ಎದುರಾಗಲಿದೆ. ಕಾನೂನು ದಾಖಲೆಗಳು, ಬಜೆಟ್‌ಗಳು, ರಾಷ್ಟ್ರೀಯ– ಅಂತರರರಾಷ್ಟ್ರೀಯ ವರದಿಗಳು ಸೇರಿದಂತೆ ವಿವಿಧೆಡೆಗಳಲ್ಲಿ ಈವರೆಗೂ ಬಳಕೆಯಾಗಿರುವ ‘ಎಂನರೇಗಾ’ ಹೆಸರು ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ ಹಾಗೂ ಹೊಸ ಹೆಸರಿನ ಬಳಕೆಗೆ ಸಾರ್ವಜನಿಕ ತೆರಿಗೆ ಹಣ ಪೋಲಾಗಲಿದೆ. ಜನರ ಹಣದಿಂದ ಚಾಲ್ತಿಯಲ್ಲಿರುವ ಯೋಜನೆಗಳ ಹೆಸರುಗಳನ್ನು ಸರ್ಕಾರ ತನ್ನ ಇಚ್ಛೆಗೆ ತಕ್ಕಂತೆ ಬದಲಾಯಿಸುವುದನ್ನು ಬೇಜವಾಬ್ದಾರಿಯುತ ನಡವಳಿಕೆ ಎಂದು ಭಾವಿಸಬೇಕಾಗುತ್ತದೆ.
‘ಮನರೇಗಾ’ ಯೋಜನೆ ಹೆಸರನ್ನು ಬದಲಿಸುವ ಕೇಂದ್ರ ಸರ್ಕಾರದ ಪ್ರಯತ್ನ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವಂತಿದೆ ಹಾಗೂ ಪಾರದರ್ಶಕತೆಯ ಕೊರತೆಯಿಂದ ಕೂಡಿದೆ. ಯೋಜನೆಯ ಹೆಸರನ್ನು ‘ಪೂಜ್ಯ ಬಾಪು ಗ್ರಾಮೀಣ ರೋಜಗಾರ್ ಖಾತರಿ’ ಎಂದು ಬದಲಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಈಗ ಸಂಸತ್‌ನ ಮುಂದೆ ಮಂಡನೆಯಾಗಲಿರುವ ಮಸೂದೆಯಲ್ಲಿ ‘ಪೂಜ್ಯ ಬಾಪು’ ಎನ್ನುವುದೂ ಕಣ್ಮರೆಯಾಗಿದ್ದು, ಗಾಂಧೀಜಿ ಹೆಸರನ್ನು ಸಂಪೂರ್ಣವಾಗಿ ಹೊರಗಿಟ್ಟು ಯೋಜನೆಗೆ ಹೊಸ ಹೆಸರು ನೀಡಲಾಗಿದೆ. ಹಳೆಯ ಯೋಜನೆಗೆ ಹೊಸ ಹೆಸರು ನೀಡುವ ಮೂಲಕ, ಜನಪ್ರಿಯ ಕಲ್ಯಾಣ ಕಾರ್ಯಕ್ರಮವೊಂದರ ಯಶಸ್ಸನ್ನು ತನ್ನದಾಗಿಸಿಕೊಳ್ಳುವುದು ಸರ್ಕಾರದ ಉದ್ದೇಶ ಆಗಿರುವಂತಿದೆ. ಸರ್ಕಾರದ ಉದ್ದೇಶ ಪ್ರಾಂಜಲವೇ ಆಗಿದ್ದಲ್ಲಿ, ಗ್ರಾಮೀಣ ಭಾರತಕ್ಕೆ ಅನುಕೂಲವಾಗುವ ಹೊಸ ಯೋಜನೆಯೊಂದನ್ನು ರೂಪಿಸಬಹುದಾಗಿತ್ತು. 2047ರ ‘ವಿಕಸಿತ ಭಾರತ’ ಗುರಿಸಾಧನೆಗೆ ‘ವಿಬಿ–ಜಿ ರಾಮ್ ಜಿ’ ಯೋಜನೆ ಪೂರಕವಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಹಾಗಾದರೆ, ‘ವಿಕಸಿತ ಭಾರತ’ಕ್ಕೆ ಗಾಂಧೀಜಿಯ ಅಗತ್ಯವಿಲ್ಲ ಎಂದು ಸರ್ಕಾರ ಭಾವಿಸಿದೆಯೆ? ಗಾಂಧೀಜಿ ಅವರ ವರ್ಚಸ್ಸಿಗೆ ಧಕ್ಕೆ ಉಂಟುಮಾಡುವ ಹೊಸ ಹೊಸ ಸಂಕಥನಗಳು ಚಲಾವಣೆಗೆ ಬರುತ್ತಿರುವ ಸಂದರ್ಭದಲ್ಲಿ, ಆ ಪ್ರಯತ್ನಗಳ ಭಾಗವಾಗಿಯೇ ಹೊಸ ಯೋಜನೆಯನ್ನು ನೋಡುವುದಕ್ಕೆ ಸರ್ಕಾರವೇ ಅವಕಾಶ ಕಲ್ಪಿಸಿದೆ.
ಯೋಜನೆಯೊಂದನ್ನು ಪರಿಷ್ಕರಿಸುವುದು, ಅದರ ಹೆಸರನ್ನು ಬದಲಿಸುವುದು ಸಮಸ್ಯೆ ಏನಲ್ಲ. ಆದರೆ, ಸ್ಪಷ್ಟ ಕಾರಣ ಇಲ್ಲದೆ ಹೆಸರು ಬದಲಾಯಿಸುವುದು ಅಪ್ರಬುದ್ಧ ರಾಜಕಾರಣ ಆಗಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೊಳಿಸಿದ್ದ ಹಲವು ಯೋಜನೆಗಳನ್ನೂ ಬಿಜೆಪಿ ಸರ್ಕಾರ ಮರುನಾಮಕರಣ ಪ್ರಕ್ರಿಯೆಗೆ ಒಳಪಡಿಸಿದೆ. ಹೆಸರು ಬದಲಿಸುವ ಈ ಅಭ್ಯಾಸ, ದ್ವೇಷ ರಾಜಕಾರಣದ ಸಂಕೇತದಂತಿದೆ ಹಾಗೂ ಹೊಸ ಯೋಜನೆಗಳನ್ನು ರೂಪಿಸುವುದಕ್ಕೆ ಅಗತ್ಯವಾದ ಸೃಜನಶೀಲ ಒಳನೋಟಗಳ ಕೊರತೆ ಸರ್ಕಾರಕ್ಕೆ ಇರುವುದನ್ನು ಸೂಚಿಸುವಂತಿದೆ. ಗಾಂಧೀಜಿಯನ್ನು ನಿರ್ದಿಷ್ಟ ಪಕ್ಷವೊಂದಕ್ಕೆ ಸಂಬಂಧಿಸಿದ ಆಸ್ತಿ ಅಥವಾ ವ್ಯಕ್ತಿ ಎಂದು ಸರ್ಕಾರ ಭಾವಿಸಿರುವಂತಿದೆ. ‘ಮನರೇಗಾ’ ಯೋಜನೆಯ ಮರುನಾಮಕರಣವನ್ನು, ಜನರ ಮನಸ್ಸಿನಿಂದ ಗಾಂಧೀಜಿ ಹೆಸರನ್ನು ಅಳಿಸಿಹಾಕುವ ಹುನ್ನಾರ ಎಂದು ಕಾಂಗ್ರೆಸ್ ಆರೋಪಿಸಿದೆ. ಯೋಜನೆಯೊಂದರ ಮೂಲಕ ಉಳಿಯುವ ಅಥವಾ ಅಳಿಯುವ ದುರ್ಬಲ ವ್ಯಕ್ತಿತ್ವ ಗಾಂಧೀಜಿ ಅವರದಲ್ಲ. ಮಹಾತ್ಮನ ಹೆಸರನ್ನು ಹೊಂದುವುದರಿಂದ ಯೋಜನೆಯ ಹಾಗೂ ಸರ್ಕಾರದ ಘನತೆ ಹೆಚ್ಚಾಗುತ್ತದೆ ಎನ್ನುವ ಸತ್ಯ ಹಾಗೂ ವಿವೇಕವನ್ನು ಸರ್ಕಾರ ಮರೆತರೆ, ದೇಶದೊಳಗೆ ಮಾತ್ರವಲ್ಲ, ವಿಶ್ವದೆದುರೂ ತನ್ನ ಸಂಕುಚಿತ ನಡವಳಿಕೆಯನ್ನು ಪ್ರದರ್ಶಿಸಿದಂತಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.