ADVERTISEMENT

ಪ್ರಭಾವಿಗಳ ಮಕ್ಕಳ ಹೊಣೆಗೇಡಿತನ: ತಪ್ಪಿತಸ್ಥರನ್ನು ರಕ್ಷಿಸುವುದು ತರವಲ್ಲ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 19:45 IST
Last Updated 14 ಫೆಬ್ರುವರಿ 2020, 19:45 IST
   

ಹಣ ಹಾಗೂ ಅಧಿಕಾರದ ಬಲವೊಂದಿದ್ದರೆ ಸಾಕು, ಏನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳಬಹುದು ಎಂಬ ಪ್ರವೃತ್ತಿಯು ಪ್ರಭಾವಿಗಳ ಮಕ್ಕಳಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ವಿಲಾಸಿ ಜೀವನದಲ್ಲಿ ಸಂಪೂರ್ಣವಾಗಿ ಮೈಮರೆತು ಶ್ರೀಮಂತಿಕೆಯ ಅಮಲಿನಲ್ಲಿಯೇ ತೇಲುವ ಇಂತಹವರ ಕೆಲವು ಕೃತ್ಯಗಳಿಂದಾಗಿ ಸಮಾಜವು ಕಂಟಕ ಎದುರಿಸುವಂತಾಗಿದೆ. ಇದಕ್ಕೆ ತಾಜಾ ಉದಾಹರಣೆಯೆಂದರೆ
ಇತ್ತೀಚೆಗೆ ಸಂಭವಿಸಿದ ಮೂರು ರಸ್ತೆ ಅಪಘಾತ ಪ್ರಕರಣಗಳು.

ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಹೊಂದಿ, ಮೋಜು–ಮಸ್ತಿ ಮಾಡುತ್ತಾ, ಸಂಚಾರ ನಿಯಮಗಳಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ಕೊಡದೆ, ಯರ‍್ರಾಬಿರ‍್ರಿ ಚಾಲನೆ ಮಾಡುವ ಕೆಲವರ ಪ್ರವೃತ್ತಿಯಿಂದ ದಾರಿಹೋಕರು ಸಂಕಟ ಅನುಭವಿಸಬೇಕಿದೆ. ಶಾಂತಿನಗರದ ಶಾಸಕ ಎನ್‌.ಎ.ಹ್ಯಾರಿಸ್‌ ಅವರ ಪುತ್ರ ಮೊಹಮ್ಮದ್‌ ನಲಪಾಡ್‌ ಚಾಲನೆ ಮಾಡುತ್ತಿದ್ದರು ಎನ್ನಲಾದ ಕಾರು ಅಪಘಾತಕ್ಕೆ ಈಡಾಗಿ, ಮೂರು ವಾಹನಗಳು ಜಖಂಗೊಂಡು, ಆರು ವರ್ಷದ ಬಾಲಕ ಸೇರಿ ನಾಲ್ವರಿಗೆ ಗಾಯಗಳಾಗಿವೆ. ತಾವು ಕಾರು ಚಲಾಯಿಸುತ್ತಿರಲಿಲ್ಲ ಎಂದು ನಲಪಾಡ್‌ ಹೇಳಿಕೊಂಡಿದ್ದಾರೆ. ಆದರೆ, ಹ್ಯಾರಿಸ್‌ ಪುತ್ರ ಈ ಹಿಂದೆ ಪಬ್‌ನಲ್ಲಿ ಯುವಕನೊಬ್ಬನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ ಆರೋಪ ಹೊತ್ತು, ಸುಮಾರು ನಾಲ್ಕು ತಿಂಗಳು ಜೈಲು ಸೇರಿದ್ದನ್ನು ಯಾರೂ ಮರೆತಿರಲಾರರು.

ಮತ್ತೊಂದು ವಿಲಾಸಿ ಕಾರು ಬೆಂಗಳೂರಿನಲ್ಲಿ ನೇರವಾಗಿ ಪೊಲೀಸ್‌ ಚೌಕಿಗೆ ಡಿಕ್ಕಿ ಹೊಡೆದಿದ್ದು ಸಹ ದೊಡ್ಡ ಸುದ್ದಿಯಾಗಿದೆ. ಇದಕ್ಕೆ ಕಾರಣವಾಗಿದ್ದು ಉದ್ಯಮಿಯೊಬ್ಬರ ಪುತ್ರ ಸನ್ನಿ ಸಬರ್‌ವಾಲ್‌ ಎಂಬ ಯುವಕ ಎಂದು ಪೊಲೀಸರು ಹೇಳಿದ್ದಾರೆ. ಅಪಘಾತದ ಬಳಿಕ ಆತ ಮುರಿದುಹೋಗಿದ್ದ ಚೌಕಿಯ ಎದುರು ನಿಂತು ಫೋಟೊ ತೆಗೆಸಿಕೊಂಡು ಅದನ್ನು ಸಾಧನೆ ಎಂಬಂತೆ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿದ್ದು ಆತನ ಮನಃಸ್ಥಿತಿಗೆ ಹಿಡಿದ ಕನ್ನಡಿ. ಇದೀಗ ಸಚಿವ ಆರ್‌. ಅಶೋಕ ಅವರ ಪುತ್ರ ರಸ್ತೆ ಅಪಘಾತಕ್ಕೆ ಕಾರಣವಾಗಿದ್ದಾರೆ ಎನ್ನಲಾದ ಸುದ್ದಿ ಬಂದಿದೆ. ಈ ಅಪಘಾತಕ್ಕೂ ತಮ್ಮ ಪುತ್ರನಿಗೂ ಸಂಬಂಧ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಹೊಸಪೇಟೆ ಬಳಿ ನಡೆದ ಈ ಅಪಘಾತದಲ್ಲಿ ಒಬ್ಬ ಅಮಾಯಕ ದಾರಿಹೋಕ ಹಾಗೂ ಕಾರಿನಲ್ಲಿದ್ದ ಒಬ್ಬರು ಜೀವ ಕಳೆದುಕೊಂಡಿದ್ದಾರೆ.

ADVERTISEMENT

ಮಕ್ಕಳ ದುರ್ವರ್ತನೆಗಳು ಕೆಲವು ಪ್ರಭಾವಿಗಳಿಗೆ ನಾಚಿಕೆ ಉಂಟುಮಾಡದಿರುವುದು ನೋವಿನ ಸಂಗತಿ. ತಮ್ಮ ಮಕ್ಕಳು ಹಾಡಹಗಲೇ ತಪ್ಪು ಮಾಡಿ ಸಿಕ್ಕಿಬಿದ್ದರೂ ಕಾನೂನಿನ ಹಿಡಿತದಿಂದ ಬಿಡಿಸಿಕೊಳ್ಳುವುದು ಅವರಿಗೆ ಕರಗತವಾಗಿದೆ. ಪೋಷಕರೊಂದಿಗೆ ವ್ಯವಸ್ಥೆಯೂ ಸೇರಿ ತಪ್ಪಿತಸ್ಥರ ರಕ್ಷಣೆಗೆ ನಿಲ್ಲುವುದು ಸಮಾಜಕ್ಕೆ ಕೆಟ್ಟ ಸಂದೇಶವನ್ನು ರವಾನಿಸುತ್ತದೆ.ಹೊಸಪೇಟೆ ಅಪಘಾತ ಪ್ರಕರಣದಲ್ಲಿ ನಡೆದಿರುವ ಬೆಳವಣಿಗೆಗಳೇ ಇದಕ್ಕೆ ನಿದರ್ಶನ. ಮಾಮೂಲಿ ಅಪಘಾತ ಪ್ರಕರಣಗಳಾದರೆ ಸಂಬಂಧಿಕರು ದಿನವಿಡೀ ಗೋಗರೆದರೂ ಮರಣೋತ್ತರ ಪರೀಕ್ಷೆ ನಡೆಯುವುದಿಲ್ಲ. ಆದರೆ, ಪ್ರಭಾವಿಗಳ ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳಾದರೆ ರಾತ್ರೋರಾತ್ರಿ ಮರಣೋತ್ತರ ಪರೀಕ್ಷೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳುತ್ತವೆ. ಇಂತಹ ತರಾತುರಿಯೇ ನಾನಾ ಬಗೆಯ ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ.

ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಮಕ್ಕಳು ದಾರಿ ತಪ್ಪಿದಾಗ ಅವರನ್ನು ತಿದ್ದುವ ಜವಾಬ್ದಾರಿ ಪಾಲಕರದು. ಅದು ಆಗದಿದ್ದಾಗ, ಕಾನೂನು ಕ್ರಮಕ್ಕೆ ಅಡ್ಡಿಯಂತೂ ಆಗಬಾರದು. ಆದರೆ, ಇಂದಿನ ಪ್ರಭಾವಿಗಳಿಂದ ಅಂತಹ ನೈತಿಕ ನಡೆಯನ್ನು ನಿರೀಕ್ಷಿಸಲು ಸಾಧ್ಯವೇ? ಶ್ರೀಮಂತಿಕೆಯ ಅಹಮಿಕೆಯನ್ನು ತಮ್ಮ ಮನೆಯಲ್ಲಿ ತೋರಿಸಿಕೊಂಡರೆ ಯಾರೂ ಆಕ್ಷೇಪಿಸಲಾರರು. ಕಾನೂನಿನ ಎದುರು ಎಲ್ಲರೂ ಸಮಾನರು. ತಪ್ಪು ಯಾರೇ ಮಾಡಿದರೂ ಶಿಕ್ಷೆ ಅನುಭವಿಸಲೇಬೇಕು. ತಪ್ಪಿತಸ್ಥರ ರಕ್ಷಣೆಗೆ ನಿಂತರೆ ತಮ್ಮ ವೃತ್ತಿಗೇ ಅಪಚಾರ ಬಗೆದಂತೆ ಎಂಬುದನ್ನು ಪೊಲೀಸರು, ವೈದ್ಯರು ನೆನಪಿಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.