ADVERTISEMENT

ಸಂಪಾದಕೀಯ | ಅತ್ಯಾಚಾರ: ಶಿಕ್ಷೆಯ ಅಮಾನತು ಆದೇಶ; ನ್ಯಾಯದ ಮರುವ್ಯಾಖ್ಯಾನದ ಸಮಯ

ಸಂಪಾದಕೀಯ
Published 25 ಡಿಸೆಂಬರ್ 2025, 23:30 IST
Last Updated 25 ಡಿಸೆಂಬರ್ 2025, 23:30 IST
_
_   

ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ ಕುಲದೀಪ್‌ ಸಿಂಗ್‌ ಸೆಂಗರ್‌ ಅನುಭವಿಸುತ್ತಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ, ಷರತ್ತುಬದ್ಧ ಜಾಮೀನು ನೀಡಿರುವ ದೆಹಲಿ ಹೈಕೋರ್ಟ್‌ ನಿರ್ದೇಶನ ಸಾಮಾಜಿಕ ಕಳವಳಕ್ಕೆ ಕಾರಣ ಆಗಬಹುದಾದ ವಿದ್ಯಮಾನ. 2019ರಲ್ಲಿ ದೆಹಲಿಯ ವಿಚಾರಣಾ ನ್ಯಾಯಾಲಯ ಸೆಂಗರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದನ್ನು ಪ್ರಶ್ನಿಸಿ ಸೆಂಗರ್‌ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಇತ್ಯರ್ಥ ಆಗುವವರೆಗೂ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ ಅಮಾನತ್ತಿನಲ್ಲಿರಿಸಿದೆ. ಈ ನಿರ್ದೇಶನ ನ್ಯಾಯಸಮ್ಮತವಲ್ಲ ಎಂದು ಹೇಳಿರುವ ಸಂತ್ರಸ್ತೆ, ಸೆಂಗರ್‌ಗೆ ವಿಧಿಸಲಾದ ಶಿಕ್ಷೆಯನ್ನು ಅಮಾನತುಗೊಳಿಸುವ ಮೂಲಕ ತನ್ನ ಕುಟುಂಬಕ್ಕೆ ಸಾವಿಗೆ ಕಡಿಮೆ ಇಲ್ಲದ ಶಿಕ್ಷೆ ವಿಧಿಸಲಾಗಿದೆ ಎಂದಿದ್ದಾರೆ. ಅಂಥ ವ್ಯಕ್ತಿಗಳು ಹೊರಗೆ ಬಂದರೆ ನಾವು ಸುರಕ್ಷಿತವಾಗಿರುವುದು ಹೇಗೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತೆಯ ಆತಂಕ ನಿರಾಧಾರವಾದುದೇನೂ ಅಲ್ಲ. ಅತ್ಯಾಚಾರ ಪ್ರಕರಣದ ದೂರು ದಾಖಲು ಮಾಡಲು ಹೊರಟ ಕ್ಷಣದಿಂದಲೂ ಸಂತ್ರಸ್ತೆ ದುರಂತಗಳ ಸರಮಾಲೆಯನ್ನೇ ಎದುರಿಸಿದ್ದಾರೆ. ಆಕೆಯ ತಂದೆ ಹಲ್ಲೆಗೊಳಗಾಗಿ ಪೊಲೀಸ್ ಕಸ್ಟಡಿಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಕುಟುಂಬದ ಇಬ್ಬರು ಮಹಿಳೆಯರು ಹಾಗೂ ಸಂತ್ರಸ್ತೆಯ ಬೆಂಬಲಕ್ಕೆ ನಿಂತಿದ್ದ ವಕೀಲರೊಬ್ಬರು ವಾಹನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಎಲ್ಲ ಘಟನೆಗಳಲ್ಲೂ ಸೆಂಗರ್‌ ಪಾತ್ರವಿದೆ ಎಂದು ಹೇಳಲಾಗಿದೆ. ಅತ್ಯಾಚಾರಿಯನ್ನು ರಕ್ಷಿಸಲು ಇಡೀ ರಾಜಕೀಯ ವ್ಯವಸ್ಥೆ ನೀಡಿದ ಪ್ರತ್ಯಕ್ಷ ಹಾಗೂ ಪರೋಕ್ಷ ಬೆಂಬಲ ಹಾಗೂ ಸಾಕ್ಷ್ಯನಾಶ ಪ್ರಯತ್ನಗಳ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾದ ನಂತರವಷ್ಟೇ ಸೆಂಗರ್‌ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಲಾಯಿತು. ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶ ಮಾಡದಿದ್ದರೆ, ಸಂತ್ರಸ್ತೆ ಮತ್ತಷ್ಟು ಸಂಕಟಗಳನ್ನು ಎದುರಿಸಬೇಕಾಗುತ್ತಿತ್ತು ಎನ್ನುವುದರಲ್ಲಿ ಅನುಮಾನವೇನೂ ಇಲ್ಲ. ಅಪರಾಧ ಕೃತ್ಯಗಳ ಸರಮಾಲೆಯ ಕೇಂದ್ರದಲ್ಲಿರುವ ವ್ಯಕ್ತಿಗೆ ವಿಧಿಸಲಾದ ಶಿಕ್ಷೆಯನ್ನು ಅಮಾನತುಗೊಳಿಸಿರುವುದು ಸಹಜವಾಗಿಯೇ ಸಂತ್ರಸ್ತೆ ಮತ್ತು ಸಮಾಜದ ಆತಂಕಕ್ಕೆ ಕಾರಣವಾಗಿದೆ.

ನ್ಯಾಯ ವ್ಯವಸ್ಥೆಯಲ್ಲಿ ಮಹಿಳಾ ಸುರಕ್ಷತೆ ಮತ್ತು ಅತ್ಯಾಚಾರ ಪ್ರಕರಣಗಳು ಅತ್ಯಂತ ಸೂಕ್ಷ್ಮ ಸಂಗತಿಗಳು. ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಬಾಧಿತರ ಸುರಕ್ಷತೆಗೆ ಧಕ್ಕೆ ಆಗಬಹುದಾದ ಸಾಧ್ಯತೆಗಳನ್ನು ನ್ಯಾಯಾಲಯಗಳು ಎಚ್ಚರದಿಂದ ಪರಿಶೀಲಿಸುತ್ತವೆ.ಅಪರಾಧಿಗಳಿಗೆ ನ್ಯಾಯದ ಪ್ರಕ್ರಿಯೆಯ ಹಕ್ಕನ್ನು ನಿರಾಕರಿಸುವುದು ಸಾಧ್ಯವಿಲ್ಲವಾದರೂ, ಅತ್ಯಾಚಾರದಂತಹ ಅಪರಾಧಗಳಲ್ಲಿ ಸಂತ್ರಸ್ತರ ಸುರಕ್ಷತೆಗೆ ಆದ್ಯತೆ ನೀಡಬೇಕಾಗುತ್ತದೆ. ಪ್ರಸಕ್ತ ಪ್ರಕರಣದಲ್ಲಿ ಅಪರಾಧಿಯ ಕುಖ್ಯಾತಿಯನ್ನು ಯಾರೂ ನಿರ್ಲಕ್ಷಿಸಲು ಸಾಧ್ಯವಾಗದಂತಹದ್ದು. ಸೆಂಗರ್‌ ಜೈಲಿನಿಂದ ಹೊರಗೆ ಬಂದರೆ, ಆತನಿಗಿರುವ ರಾಜಕೀಯ ಹಾಗೂ ಜಾತಿ ಪ್ರಭಾವ ಸಂತ್ರಸ್ತೆಯ ಮೇಲೆ ಒತ್ತಡ ಹೇರುವ ಸಾಧ್ಯತೆ ಇದ್ದೇ ಇದೆ. ಸಿಬಿಐ ಮತ್ತು ಸಂತ್ರಸ್ತೆಯ ವಿರೋಧದ ನಡುವೆಯೂ ಹೈಕೋರ್ಟ್‌ ನಿರ್ದೇಶನ ನೀಡಿರುವುದು, ಅಪರಾಧಿಯ ಶಿಕ್ಷೆಯನ್ನು ಅಮಾನತ್ತಿನಲ್ಲಿ ಇರಿಸಿರುವುದು ಸಾರ್ವಜನಿಕರ ಅಚ್ಚರಿ ಮತ್ತು ಆತಂಕಕ್ಕೆ ಕಾರಣವಾಗಿದೆ. ರಾಜಕೀಯ, ಹಣ ಹಾಗೂ ಜಾತಿ ಬೆಂಬಲ ಹೊಂದಿರುವ ವ್ಯಕ್ತಿ, ಯಾವ ಬೆಂಬಲವೂ ಇಲ್ಲದ ಸಂತ್ರಸ್ತೆಯನ್ನು ಹಣಿಯಲಿಕ್ಕೆ ಯಾವ ಕೆಲಸವನ್ನಾದರೂ ಮಾಡಲಿಕ್ಕೆ ಹೇಸಲಾರ ಎನ್ನುವುದಕ್ಕೆ ಆತನ ಹಿನ್ನೆಲೆಯೇ ನಿದರ್ಶನದಂತಿದೆ.

ಅತ್ಯಾಚಾರ ಕೃತ್ಯಗಳು ಸಾಮಾನ್ಯ ಎನ್ನುವಂತಾಗಿರುವ ಸಂದರ್ಭದಲ್ಲಿ, ಅತ್ಯಾಚಾರಿಗಳಿಗೆ ಗರಿಷ್ಠ ಕಠಿಣ ಶಿಕ್ಷೆ ವಿಧಿಸುವ ಮೂಲಕ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳಿಗೆ ಕಡಿವಾಣ ಹಾಕಬೇಕು ಎನ್ನುವ ಸಾರ್ವಜನಿಕ ಅಭಿಪ್ರಾಯ ಬಲವಾಗುತ್ತಿದೆ. ಅತ್ಯಾಚಾರ ಪ್ರಕರಣಗಳನ್ನು ನ್ಯಾಯಾಲಯಗಳೂ ಗಂಭೀರವಾಗಿ ಪರಿಗಣಿಸುತ್ತಿದ್ದು, ವಿಚಾರಣೆಗಳನ್ನು ತ್ವರಿತವಾಗಿ ನಡೆಸುತ್ತಿವೆ ಹಾಗೂ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುತ್ತಿವೆ. ಇಂಥ ಸಂದರ್ಭದಲ್ಲಿ, ಉನ್ನಾವೊ ಪ್ರಕರಣದಲ್ಲಿ ಅಪರಾಧಿಗೆ ದೊರಕಿರುವ ತಾತ್ಕಾಲಿಕ ಪರಿಹಾರ ಸಾರ್ವಜನಿಕರ ದೃಷ್ಟಿಯಲ್ಲಿ ಕಾನೂನು ಪ್ರಕ್ರಿಯೆಯ ಹಿಮ್ಮುಖ ಚಲನೆಯಂತೆ ಕಾಣಿಸುತ್ತದೆ. ಉನ್ನಾವೊದಂಥ ಪ್ರಕರಣಗಳು ವೈಯಕ್ತಿಕ ಘಟನೆಗಳಾಗಿರದೆ, ನ್ಯಾಯಕ್ಕಾಗಿ ಜನಸಾಮಾನ್ಯರು ನಡೆಸುವ ಹೋರಾಟ ಹಾಗೂ ಮಹಿಳಾ ದೌರ್ಜನ್ಯ ವಿರೋಧಿ ಆಂದೋಲನದ ಸಂಕೇತಗಳಾಗಿವೆ. ಇಂಥ ಹೋರಾಟಗಳಿಗೆ ಆಗುವ ಹಿನ್ನಡೆ ಸಮಾಜ ಹಾಗೂ ಮೌಲ್ಯಾಧಾರಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವಂತಹದ್ದು; ನ್ಯಾಯವ್ಯವಸ್ಥೆಯ ಬಗೆಗಿನ ಸಾರ್ವಜನಿಕ ವಿಶ್ವಾಸಾರ್ಹತೆಯಲ್ಲಿ ಕಂಪನಗಳನ್ನು ಉಂಟುಮಾಡುವಂತಹದ್ದು. ಹೈಕೋರ್ಟ್‌ ನಿರ್ದೇಶನವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಸಂತ್ರಸ್ತೆ ಹೇಳಿದ್ದಾರೆ. ಇದರೊಂದಿಗೆ, ಸಂತ್ರಸ್ತರ ಸುರಕ್ಷತೆ ಹಾಗೂ ಅಪರಾಧಿಯ ಹಕ್ಕುಗಳ ನಿರ್ಣಾಯಕ ಪರಾಮರ್ಶೆ ಸಾಧ್ಯವಾಗಬಹುದು. ನ್ಯಾಯದ ಹಾದಿ ದೀರ್ಘವಾದುದು ಹಾಗೂ ಆ ಹಾದಿಯಲ್ಲಿ ಸಂತ್ರಸ್ತರೊಂದಿಗೆ ನ್ಯಾಯವೂ ಅಗ್ನಿಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದಕ್ಕೆ ಉನ್ನಾವೊ ಪ್ರಕರಣ ನಿದರ್ಶನದಂತಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.