ADVERTISEMENT

ಸಂಪಾದಕೀಯ: ಕಾಲೇಜುಗಳ ಪುನರಾರಂಭ ತೀರ್ಮಾನ: ಶಿಕ್ಷಣ ವ್ಯವಸ್ಥೆಯ ಚೇತರಿಕೆಗೆ ಪೂರಕ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 19:31 IST
Last Updated 26 ಅಕ್ಟೋಬರ್ 2020, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವೆಂಬರ್‌ 17ರಿಂದ ಕಾಲೇಜುಗಳನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕೊರೊನಾ ಸೋಂಕಿನ ನಿಯಂತ್ರಣದ ಉದ್ದೇಶದಿಂದಾಗಿ ಕೈಗೊಂಡಿದ್ದ ಕ್ರಮಗಳಿಂದ ವ್ಯತ್ಯಯಗೊಂಡಿರುವ ಶೈಕ್ಷಣಿಕ ಚಟುವಟಿಕೆಗಳನ್ನು ಮರಳಿ ಹಳಿಗೆ ತರುವ ಪ್ರಯತ್ನ
ದಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ. ಕೇಂದ್ರ ಸರ್ಕಾರದ ಅನ್‌ಲಾಕ್‌ ಮಾರ್ಗಸೂಚಿ ಮತ್ತು ಯುಜಿಸಿ ನಿರ್ದೇಶನದ ಮೇರೆಗೆ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳು ಪುನರಾರಂಭವಾಗಲಿವೆ. ಕಾಲೇಜು ತೆರೆಯುವ ನಿರ್ಣಯ ಕೈಗೊಂಡಿದ್ದರೂ ತರಗತಿಗಳಿಗೆ ಹಾಜರಾಗುವ ಇಲ್ಲವೇ ಹಾಜರಾಗದಿರುವ ನಿರ್ಧಾರವನ್ನು ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟಿರುವುದು ಸ್ವಾಗತಾರ್ಹ. ತರಗತಿಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರ ತರಬೇಕಾಗಿದೆ. ಹಾಜರಾತಿಯನ್ನು ಕಡ್ಡಾಯಗೊಳಿಸದಿರುವ ಸರ್ಕಾರ, ತರಗತಿಗೆ ಖುದ್ದಾಗಿ ಹಾಜರಾಗದಿರುವ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಆಯ್ಕೆಯನ್ನೂ ಮುಕ್ತವಾಗಿಟ್ಟಿದೆ. ಆಫ್‌ಲೈನ್‌ ಮತ್ತು ಆನ್‌ಲೈನ್‌ ಎರಡನ್ನೂ ಆಯ್ದುಕೊಳ್ಳುವ ಅವಕಾಶವೂನ ವಿದ್ಯಾರ್ಥಿಗಳಿಗಿದೆ. ವಿದ್ಯಾರ್ಥಿಗಳ ಸುರಕ್ಷತೆಗಾಗಿ ಎಲ್ಲ ರೀತಿಯ ಮು‌ನ್ನೆಚ್ಚರಿಕೆ ವಹಿಸಲಾಗುವುದು ಎಂದು ಹೇಳಿರುವ ಸರ್ಕಾರ, ಯಾವುದೇ ವಿದ್ಯಾರ್ಥಿಯ ಆರೋಗ್ಯದಲ್ಲಿ ವ್ಯತ್ಯಯವುಂಟಾ ದರೆ ಸರ್ಕಾರದ ವತಿಯಿಂದಲೇ ಚಿಕಿತ್ಸೆ ನೀಡಲಾ ಗುವುದು ಹಾಗೂ ವಿದ್ಯಾರ್ಥಿಗಳ ಸುರಕ್ಷತೆಗೆ ಸಂಬಂಧಿಸಿದಂತೆ ಪ್ರತೀ ಕಾಲೇಜಿನಲ್ಲೂ ಕಾರ್ಯಪಡೆಯೊಂದನ್ನು ರೂಪಿಸಲಾಗುವುದು ಎಂದು ಹೇಳಿದೆ. ವಿದ್ಯಾರ್ಥಿಗಳ ಕಲಿಕೆ ಹಾಗೂ ಶಿಕ್ಷಕರ ಬೋಧನೆಯ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ‘ಕಲಿಕಾ ನಿರ್ವಹಣೆ ಆನ್‌ಲೈನ್‌ ಪೋರ್ಟಲ್‌’ ಆರಂಭಿಸುವ ಸರ್ಕಾರದ ಉದ್ದೇಶವೂ ಸರಿಯಾಗಿದೆ. ಸುಮಾರು 5 ಲಕ್ಷ ವಿದ್ಯಾರ್ಥಿಗಳು ಈ ಪೋರ್ಟಲ್‌ನ ಪ್ರಯೋಜನ ಪಡೆಯಲಿದ್ದಾರೆ ಎನ್ನಲಾಗಿದೆ. ಮುನ್ನೆಚ್ಚರಿಕೆ ಕ್ರಮಗಳ ನಡುವೆಯೂ ಕಾಲೇಜುಗಳ ಪುನರಾರಂಭವು ಸರ್ಕಾರದ ಪಾಲಿಗೆ ಕಠಿಣವಾದ ಸವಾಲು ಎನ್ನುವುದರಲ್ಲಿ ಅನುಮಾನವಿಲ್ಲ. ಬೋಧಕವರ್ಗ ಮತ್ತು ವಿದ್ಯಾರ್ಥಿಗಳ ಆರೋಗ್ಯದ ರಕ್ಷಣೆಗೆ ವ್ಯವಸ್ಥೆ ಮಾಡುವುದು ಸುಲಭವಲ್ಲ. ಕಾಲೇಜುಗಳ ಜೊತೆಗೆ ಸರ್ಕಾರದ ಅಧೀನದಲ್ಲಿರುವ ಹಾಸ್ಟೆಲ್‌ಗಳನ್ನೂ ಪುನರಾರಂಭಿಸುವುದು ಅನಿವಾರ್ಯ. ಹಾಸ್ಟೆಲ್‌ಗಳಲ್ಲಿ ಅಂತರ ಕಾಪಾಡಲು ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಶಾಲಾ ವಿದ್ಯಾರ್ಥಿಗಳು ಇರುವಲ್ಲಿಯೇ ಕಲಿಕೆ ಸಾಧ್ಯವಾಗುವಂತೆ ರೂಪಿಸಿದ್ದ ‘ವಿದ್ಯಾಗಮ’ ಯೋಜನೆಯನ್ನು ರದ್ದುಪಡಿಸಿರುವ ಸರ್ಕಾರ, ಈಗ ಕಾಲೇಜುಗಳನ್ನು ತೆರೆಯಲು ಹೊರಟಿರುವ ನಿರ್ಧಾರ ಕೆಲವರ ಟೀಕೆಗೆ ಒಳಗಾಗಿದೆ. ಆದರೆ, ವಿದ್ಯಾಗಮ ಯೋಜನೆಯ ಕೇಂದ್ರದಲ್ಲಿರುವ ಮಕ್ಕಳಿಗೂ ಕಾಲೇಜು ವಿದ್ಯಾರ್ಥಿಗಳಿಗೂ ಬಹಳಷ್ಟು ವ್ಯತ್ಯಾಸವಿದೆ. ಎಳೆಯ ಮಕ್ಕಳು ಸ್ವಯಂ ಶಿಸ್ತನ್ನು ಅಳವಡಿಸಿಕೊಳ್ಳುವುದು ಕಷ್ಟ. ಆದರೆ, ಕಾಲೇಜು ವಿದ್ಯಾರ್ಥಿಗಳು ಸರಿ– ತಪ್ಪುಗಳ ಬಗ್ಗೆ ನಿರ್ಧಾರ ಕೈಗೊಳ್ಳಬಲ್ಲರು. ಹಾಗಾಗಿ, ಕಾಲೇಜುಗಳನ್ನು ಆರಂಭಿಸುವ ನಿರ್ಧಾರವು ತಾರ್ಕಿಕವಾಗಿ ಸರಿಯಾದುದು. ಕೊರೊನಾ ಕಾರಣದಿಂದಾಗಿ ಕಾಲೇಜುಗಳ ಆರಂಭವನ್ನು ಇನ್ನಷ್ಟು ವಿಳಂಬ ಮಾಡುವುದು ವಿದ್ಯಾರ್ಥಿಗಳ ಕಲಿಕೆಗೆ ತೊಡಕಾಗುವ ಸಮಸ್ಯೆಯಿದೆ. ಕೊರೊನಾದೊಂದಿಗೆ ಹೊಂದಿಕೊಂಡು ಬದುಕುವ ಸ್ಥಿತಿ ಅನಿವಾರ್ಯ ಎನ್ನುವಂತಾಗಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಾಲೇಜುಗಳಿಂದ ದೂರವಿರಬೇಕೆಂದು ಬಯಸುವುದರಲ್ಲಿ ಅರ್ಥವಿಲ್ಲ. ಶೈಕ್ಷಣಿಕ ವರ್ಷ ಯಶಸ್ವಿಯಾಗುವ ದಿಸೆಯಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳ ಹೊಣೆಗಾರಿಕೆಯೂ ಇದೆ. ವಿನಾಕಾರಣ ಆತಂಕಪಡದಿರುವುದರ ಜೊತೆಗೆ, ಮೈಮರೆವಿಗೆ ಒಳಗಾಗದಿರುವುದೂ ಅಗತ್ಯ. ಕಾಲೇಜು ಜೀವನದಲ್ಲಿ ಸ್ವಾಭಾವಿಕವಾದ ತುಂಟಾಟಕ್ಕೆ ವಿದ್ಯಾರ್ಥಿಗಳು ಸ್ವಯಂ ಕಡಿವಾಣ ಹಾಕಿಕೊಂಡು, ಶೈಕ್ಷಣಿಕ ಚಟುವಟಿಕೆಗಳಲ್ಲಿ ಸ್ವಯಂಶಿಸ್ತು ಅನುಸರಿಸಬೇಕಾಗಿದೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಾತ್ರವಲ್ಲದೆ, ಸಮಾಜದಲ್ಲಿ ಕೂಡ ಕಾಲೇಜಿನ ಹಂತ ಅತ್ಯಂತ ಪ್ರೌಢವಾದುದು ಎನ್ನುವುದನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಸಾಬೀತು ಮಾಡಬೇಕಾಗಿದೆ. ಕಾಲೇಜುಗಳ ಪುನರಾರಂಭ, ಮುಂದಿನ ಹಂತದಲ್ಲಿ ಎಸ್ಎಸ್ಎಲ್‌ಸಿ ಮತ್ತು ಪಿಯು ತರಗತಿಗಳನ್ನು ಆರಂಭಿಸುವ ದೃಷ್ಟಿಯಿಂದಲೂ ಮುಖ್ಯವಾದುದು. ಶೈಕ್ಷಣಿಕ ವ್ಯವಸ್ಥೆ ಸುರಳೀತವಾಗಿ ಸಾಗುವಂತಾಗಲು ತರಗತಿಗಳು ನಡೆಯಬೇಕಾದುದು ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT