ADVERTISEMENT

ಸಂಪಾದಕೀಯ | ಅತ್ಯಾಚಾರ ಅಪರಾಧಿಗೆ ಶಿಕ್ಷೆ ತ್ವರಿತ ನ್ಯಾಯದಾನಕ್ಕೆ ನಿದರ್ಶನ

ಪ್ರಜಾವಾಣಿ ವಿಶೇಷ
Published 22 ಜನವರಿ 2025, 0:45 IST
Last Updated 22 ಜನವರಿ 2025, 0:45 IST
<div class="paragraphs"><p>ಸಂಪಾದಕೀಯ </p></div>

ಸಂಪಾದಕೀಯ

   

ಕೋಲ್ಕತ್ತದ ಆರ್‌.ಜಿ.ಕರ್ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯದಲ್ಲಿದ್ದ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ, ಆಕೆಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಸಂಜಯ್‌ ರಾಯ್‌ ಅಪರಾಧಿ ಎಂದು ಘೋಷಿಸಿ, ಆತ ಕೊನೆಯುಸಿರು ಇರುವವರೆಗೂ ಜೈಲಿನಲ್ಲಿರಬೇಕು ಎಂದು ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಇದರಿಂದಾಗಿ, ಇಡೀ ದೇಶದ ಗಮನಸೆಳೆದ, ವೈದ್ಯರು ಮತ್ತು ನಾಗರಿಕ ಸಮಾಜದ ಆಕ್ರೋಶಕ್ಕೆ ಕಾರಣವಾದ, ತೀವ್ರ ಪ್ರತಿಭಟನೆಗಳಿಗೆ ದಾರಿ ಮಾಡಿಕೊಟ್ಟ ಪ್ರಕರಣವೊಂದಕ್ಕೆ ತಾರ್ಕಿಕ ಅಂತ್ಯ ಕಾಣಿಸಿದಂತಾಗಿದೆ. ಅಪರಾಧಿ ರಾಯ್‌ ಕೋಲ್ಕತ್ತ ಪೊಲೀಸ್ ಇಲಾಖೆಯಲ್ಲಿ ನಾಗರಿಕ ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದ. ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಕೋಲ್ಕತ್ತ ಪೊಲೀಸರು ನಡೆಸಿದ್ದರು. ನಂತರ ಇದನ್ನು ಸಿಬಿಐಗೆ ವಹಿಸಲಾಯಿತು. ತನಿಖೆಯನ್ನು ತ್ವರಿತವಾಗಿ ನಡೆಸಿದ್ದನ್ನು ಹಾಗೂ ವಿಚಾರಣೆಯನ್ನು ನ್ಯಾಯಾಲಯವು ವಿಳಂಬವಿಲ್ಲದೆ ಪೂರ್ಣಗೊಳಿಸಿದ್ದನ್ನು ಮೆಚ್ಚಬೇಕು. ಅಪರಾಧಿಯನ್ನು ಜೀವನ ಪೂರ್ತಿ ಜೈಲುವಾಸಕ್ಕೆ ಗುರಿಪಡಿಸುವುದು ಮರಣದಂಡನೆಯನ್ನು ಹೊರತುಪಡಿಸಿದ ಅತ್ಯಂತ ಕಠಿಣವಾದ ಶಿಕ್ಷೆಯೆಂದು ಪರಿಗಣಿಸಬಹುದು. ರಾಯ್‌ಗೆ ಮರಣದಂಡನೆ ವಿಧಿಸಬೇಕು ಎಂದು ಸಿಬಿಐ ಕೋರಿ ತ್ತಾದರೂ ಈ ಪ್ರಕರಣವು ಅತ್ಯಂತ ಅಪರೂಪದಲ್ಲಿ ಅಪರೂಪದ್ದಲ್ಲ ಎಂದು ನ್ಯಾಯಾಧೀಶ ಅನಿರ್ಬನ್ ದಾಸ್ ಹೇಳಿದ್ದಾರೆ. ಈ ಕಾರಣದಿಂದಾಗಿಯೇ ರಾಯ್‌ಗೆ ಅವರು ಮರಣದಂಡನೆ ವಿಧಿಸಿಲ್ಲ. ರಾಯ್‌ಗೆ ಗಲ್ಲು ಶಿಕ್ಷೆಯನ್ನೇ ವಿಧಿಸಬೇಕು ಎಂಬ ಆಗ್ರಹವು ಸಂತ್ರಸ್ತೆಯ ಪಾಲಕರಿಂದ, ವೈದ್ಯ ಸಮೂಹದಿಂದ ಹಾಗೂ ಇತರ ಕೆಲವು ವರ್ಗಗಳಿಂದ ಬಂದಿತ್ತು. ಈತನಿಗೆ ಗಲ್ಲು ಶಿಕ್ಷೆ ವಿಧಿಸದೇ ಇದ್ದುದಕ್ಕೆ ಕೆಲವರು ನಿರಾಸೆ ವ್ಯಕ್ತಪಡಿಸಿದ್ದಾರೆ.

ಮರಣದಂಡನೆ ವಿಧಿಸಲಾಗುವ ಅಥವಾ ಮರಣ ದಂಡನೆ ವಿಧಿಸಬೇಕು ಎಂದು ಕೋರಲಾಗುವ ಪ್ರತಿ ಪ್ರಕರಣವೂ ನ್ಯಾಯದಾನ ವ್ಯವಸ್ಥೆಯ ಮೂಲ ತತ್ವ ಗಳನ್ನು ಮತ್ತೊಮ್ಮೆ ಹೇಳುವುದಕ್ಕೆ ಒಂದು ಸಂದರ್ಭವಾಗಿ ಒದಗಿಬರುತ್ತದೆ. ಅಪರಾಧಿಗೆ ಮರಣ ದಂಡನೆ ವಿಧಿಸುವುದು ಅಂದರೆ, ಪ್ರಭುತ್ವವು ವ್ಯಕ್ತಿಯೊಬ್ಬ ನನ್ನು ಕೊಲ್ಲುವುದು. ಈ ರೀತಿ ಮಾಡುವುದರಿಂದ ನ್ಯಾಯದಾನದ ಆಶಯವನ್ನೇ ಮರೆತಂತೆ ಆಗುತ್ತದೆ. ಕೇರಳದ ನ್ಯಾಯಾಲಯವೊಂದು 24 ವರ್ಷ ವಯಸ್ಸಿನ ಯುವತಿಯೊಬ್ಬಳಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಈ ಯುವತಿಯು ತನ್ನ ಪ್ರಿಯಕರನಿಗೆ ಕಷಾಯದಲ್ಲಿ ವಿಷ ಬೆರೆಸಿ ಕೊಟ್ಟು, ಆತನನ್ನು ಕೊಂದಿದ್ದಳು. ಯುವತಿಗೆ ಮರಣದಂಡನೆ ವಿಧಿಸಿದ್ದರಿಂದಾಗಿ ಸಂತ್ರಸ್ತ ವ್ಯಕ್ತಿ ಹಾಗೂ ಆತನ ಕುಟುಂಬಕ್ಕೆ ನ್ಯಾಯ ಸಿಕ್ಕಂತೆ ಆಗಿದೆ ಎಂದು ಹಲವರು ಪ್ರಶಂಸಿಸಿದ್ದಾರೆ. ಆದರೆ, ಅಪರಾಧಿ ಸ್ಥಾನದಲ್ಲಿ ನಿಂತಿರುವ ವ್ಯಕ್ತಿಗೆ ತನ್ನ ವ್ಯಕ್ತಿತ್ವದಲ್ಲಿ ಸುಧಾರಣೆ ತಂದುಕೊಳ್ಳಲು ಅವಕಾಶವನ್ನೇ ಕೊಡದೆ, ಆ ವ್ಯಕ್ತಿಯ ಜೀವ ತೆಗೆಯುವುದರಿಂದ ಆಗುವ ಅನ್ಯಾಯದ ಬಗ್ಗೆ ಹೆಚ್ಚಿನವರು ಮಾತನಾಡುತ್ತಿಲ್ಲ. ನಿಜವಾದ ನ್ಯಾಯದಾನ ವ್ಯವಸ್ಥೆಯು ಅಪರಾಧಿಯಲ್ಲಿ ಸುಧಾರಣೆ ತರುವ ಉದ್ದೇಶವನ್ನು ಹೊಂದಿರುತ್ತದೆಯೇ ವಿನಾ ಅಪರಾಧಿಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶವನ್ನು ಹೊಂದಿರುವುದಿಲ್ಲ. ಅಪರಾಧಿಯನ್ನು ಕೊಂದು, ನ್ಯಾಯದಾನ ಆಗಿದೆ ಎಂದು ಭಾವಿಸುವುದು ಆದಿಯುಗದ ನ್ಯಾಯದಾನದ ಪರಿಕಲ್ಪನೆ. ಅದು, ಹತ್ಯೆಗೆ ಹತ್ಯೆಯ ಮೂಲಕ ಸೇಡು ತೀರಿಸಿಕೊಂಡು, ನ್ಯಾಯದಾನ ಆಯಿತು ಎಂದು ಭಾವಿಸುವ ಆಲೋಚನೆ. ಈ ವಿಚಾರಗಳನ್ನು ಕೋಲ್ಕತ್ತದ ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಅಪರಾಧಿಯು ಜೀವ ಇರುವವರೆಗೆ ಜೈಲಿನಲ್ಲೇ ಇರಬೇಕು ಎಂಬ ಆದೇಶ ಕೂಡ ಆ ವ್ಯಕ್ತಿಗೆ ತನ್ನಲ್ಲಿ ಸುಧಾರಣೆ ತಂದುಕೊಳ್ಳುವ ಹಾಗೂ ಸಮಾಜದಲ್ಲಿ ಮತ್ತೆ ಒಂದಾಗುವ ಅವಕಾಶವನ್ನು ನಿರಾಕರಿಸುತ್ತದೆ. ಶಿಕ್ಷೆಯು ಎಷ್ಟು ಕಠಿಣ ಎಂಬುದಕ್ಕಿಂತಲೂ ಶಿಕ್ಷೆ ಆಗುವುದು ಖಚಿತ ಎನ್ನುವ ವಾತಾವರಣವು ಅಪರಾಧ ಕೃತ್ಯ ಆಗುವುದನ್ನು ತಡೆಯುವ ಕೆಲಸ ಮಾಡುತ್ತದೆ ಎಂಬ ಮಾತು ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯಲ್ಲಿ ಇದೆ. ಕೋಲ್ಕತ್ತದಲ್ಲಿ ನಡೆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಜೊತೆ ಮಹಿಳೆಯರ ಸುರಕ್ಷತೆ, ಕೆಲಸದ ಸ್ಥಳಗಳಲ್ಲಿನ ಸುರಕ್ಷತೆ, ಪೊಲೀಸರು ಮತ್ತು ಇತರ ಕೆಲವು ಅಧಿಕಾರಿಗಳ ನಡತೆಯಂತಹ ವಿಚಾರಗಳು ಬೆಸೆದುಕೊಂಡಿವೆ. ಅಪರಾಧಿಗೆ ಮರಣದಂಡನೆ ವಿಧಿಸುವುದರಿಂದ ಈ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ವೈಯಕ್ತಿಕ ಜೀವನ ಅಥವಾ ಸಮಾಜ ಜೀವನದಲ್ಲಿ ಕೊಲ್ಲುವುದರಿಂದ ಯಾವ ಸಮಸ್ಯೆಗೂ ಪರಿಹಾರ ಸಿಗದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.