ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಆಗಿರುವ ಭಾರಿ ಹಿನ್ನಡೆಯು ‘ಇಂಡಿಯಾ’ ಮೈತ್ರಿಕೂಟಕ್ಕೆ ಗಾಸಿ ಮಾಡಿದೆ. ಇದರಿಂದಾಗಿ, ಮೈತ್ರಿಕೂಟದ ಉಳಿವಿನ ಬಗ್ಗೆಯೇ ಹೊಸ ಪ್ರಶ್ನೆಗಳು ಎದುರಾಗಿವೆ. ಇಂತಹ ಪ್ರಶ್ನೆಗಳು ಕೇಳಿಬಂದಿರುವುದು ಮೈತ್ರಿಕೂಟದ ಒಳಗಿನಿಂದಲೇ ವಿನಾ ಹೊರಗಿನಿಂದ ಅಲ್ಲ ಎಂಬುದು ಗಂಭೀರವಾದ ವಿಚಾರ. ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷವು ಏಕಾಂಗಿಯಾಗಿ ಹೋರಾಡಿ ಸೋತುಹೋಯಿತು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಶರದ್ ಪವಾರ್ ಅವರ ಎನ್‌ಸಿಪಿ, ಉದ್ಧವ್ ಠಾಕ್ರೆ ಅವರ ಶಿವಸೇನಾ ಒಟ್ಟಾಗಿರುವ ಮಹಾ ವಿಕಾಸ್ ಆಘಾಡಿ (ಎಂವಿಎ) ಹೀನಾಯವಾಗಿ ಸೋತಿತು. ಮೈತ್ರಿಕೂಟದ ನಾಯಕತ್ವ ಸ್ಥಾನದಲ್ಲಿ ಕಾಂಗ್ರೆಸ್ ಇರಬೇಕೇ ಎಂಬ ಪ್ರಶ್ನೆ ಸೋಲಿಗೆ ತಕ್ಷಣದ ಪ್ರತಿಕ್ರಿಯೆಯಾಗಿ ಹೊರಹೊಮ್ಮಿದೆ. ಮೈತ್ರಿಕೂಟವನ್ನು ಮುನ್ನಡೆಸಲು ತಾವು ಸಿದ್ಧ ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಮೈತ್ರಿಕೂಟದ ಒಳಗೆ ಅವರಿಗೆ ವ್ಯಾಪಕ ಬೆಂಬಲವೂ ಇದೆ. ಅವರಿಗೆ ಎನ್‌ಸಿಪಿ ಮತ್ತು ಸಮಾಜವಾದಿ ಪಕ್ಷ ಬೆಂಬಲ ಘೋಷಿಸಿವೆ. ಮಮತಾ ಅವರೇ ಮೈತ್ರಿಕೂಟದ ನಾಯಕತ್ವ ವಹಿಸಿಕೊಳ್ಳಬೇಕು ಎಂದು ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಹೇಳಿದ್ದಾರೆ. ತಾನು ನಾಯಕತ್ವ ಸ್ಥಾನದಲ್ಲಿ ಏಕೆ ಇರಬೇಕು ಎಂಬುದಕ್ಕೆ ಕಾಂಗ್ರೆಸ್ ಪಕ್ಷವು ಕಾರಣಗಳನ್ನು ನೀಡಬೇಕು ಎಂದು ಜಮ್ಮು–ಕಾಶ್ಮೀರ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಎಲ್ಲ ಸಂದರ್ಭಗಳಲ್ಲಿಯೂ ನಾಯಕತ್ವವು ತನ್ನದೇ ಆಗಿರುತ್ತದೆ ಎಂದು ಕಾಂಗ್ರೆಸ್ ಭಾವಿಸಬಾರದು ಎಂದೂ ಅವರು ಹೇಳಿದ್ದಾರೆ. ಕಾಂಗ್ರೆಸ್ ವಿರುದ್ಧ ಮಾತನಾಡಿರುವ ಎಲ್ಲರೂ ‘ಇಂಡಿಯಾ’ ಗುಂಪಿನ ಪ್ರಮುಖ ನಾಯಕರು. ಕಾಂಗ್ರೆಸ್ ನಾಯಕತ್ವದ ಕುರಿತು ಮೈತ್ರಿಕೂಟದ ಒಳಗೆ ಅತೃಪ್ತಿ ಇದೆ ಎಂಬುದನ್ನು ಇದು ತೋರಿಸುತ್ತದೆ.
ಲೋಕಸಭೆ ಚುನಾವಣೆಯ ಫಲಿತಾಂಶದಿಂದಾಗಿ ‘ಇಂಡಿಯಾ’ ಮೈತ್ರಿಕೂಟಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಚೈತನ್ಯ ಬಂದಿತ್ತು. ಆದರೆ, ಆ ಲವಲವಿಕೆ ಈಗ ಕಾಣಿಸುತ್ತಿಲ್ಲ. ಮೈತ್ರಿಕೂಟವು ರೂಪುಗೊಳ್ಳುವ ಸಂದರ್ಭದಲ್ಲಿಯೇ ಕಾಂಗ್ರೆಸ್ ನಾಯಕತ್ವದ ಕುರಿತು ಪ್ರಶ್ನೆಗಳು ಎದ್ದಿದ್ದವು. ಈಗ ಈ ಕೂಗು ಮತ್ತಷ್ಟು ಬಲವಾಗಿದೆ. ಬಿಜೆಪಿಯೊಂದಿಗೆ ನೇರ ಸ್ಪರ್ಧೆ ಇದ್ದಾಗ ಕಾಂಗ್ರೆಸ್‌ನ ಸಾಧನೆಯು ಮೈತ್ರಿಕೂಟದ ಇತರ ಪಕ್ಷಗಳಿಗಿಂತ ಕಳಪೆಯಾಗಿದೆ. ಮೈತ್ರಿಕೂಟದಲ್ಲಿ ಇರುವ ಅತ್ಯಂತ ದೊಡ್ಡ ಪಕ್ಷ ಕಾಂಗ್ರೆಸ್, ಜೊತೆಗೆ ಎಲ್ಲ ರಾಜ್ಯಗಳಲ್ಲಿಯೂ ಈ ಪಕ್ಷಕ್ಕೆ ಅಸ್ತಿತ್ವ ಇದೆ. ಆದರೆ ಕೆಲವು ರಾಜ್ಯಗಳಲ್ಲಿ ಪಕ್ಷದ ಅಸ್ತಿತ್ವವು ಹೆಸರಿಗಷ್ಟೇ ಎಂಬಂತಿದೆ. ಇಂತಹ ಅಸ್ತಿತ್ವದಿಂದ ಚುನಾವಣೆಯಲ್ಲಿ ಯಾವ ಅನುಕೂಲವೂ ಆಗುವುದಿಲ್ಲ. ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಅಥವಾ ರಾಹುಲ್ ಗಾಂಧಿ ಅವರಿಗಿಂತ ಮಮತಾ ಅವರು ಹೆಚ್ಚು ಪರಿಣಾಮಕಾರಿ ನಾಯಕತ್ವ ಒದಗಿಸಬಲ್ಲರು ಎಂದು ಮೈತ್ರಿಕೂಟದ ಹಲವರು ಭಾವಿಸಿದ್ದಾರೆ. ಮೈತ್ರಿಕೂಟದ ಪಾಲುದಾರರಲ್ಲಿ ಹಲವರು ಈ ಭಾವನೆಯನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ತಮಗೆ ಬೆಂಬಲ ಕೊಟ್ಟ ನಾಯಕರಿಗೆ ಮಮತಾ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ನಾಯಕತ್ವದ ವಿಚಾರವು ಮುಂದಿನ ದಿನಗಳಲ್ಲಿ ಇನ್ನಷ್ಟು ಜೋರಾಗಿ ಚರ್ಚೆಗೆ ಒಳಪಡಬಹುದು.
ಯಾವ ವಿಚಾರಗಳನ್ನು ಜನರ ಮುಂದೆ ಇಡಬೇಕು, ಯಾವ ನೀತಿಯನ್ನು ಅನುಸರಿಸಬೇಕು ಎಂಬುದರ ಕುರಿತು ಕೂಡ ಮೈತ್ರಿಕೂಟದಲ್ಲಿ ಭಿನ್ನಾಭಿಪ್ರಾಯ ಇದೆ. ಸಂಸತ್ ಅಧಿವೇಶನದಲ್ಲಿ ಅದಾನಿ ವಿಚಾರವನ್ನು ಇರಿಸಿಕೊಂಡು ಸರ್ಕಾರದ ಮೇಲೆ ಮುಗಿಬೀಳಲು ಕಾಂಗ್ರೆಸ್ ಪಕ್ಷವು ತೀವ್ರ ಉತ್ಸಾಹ ತೋರಿದೆ. ಆದರೆ, ಇತರ ಪಕ್ಷಗಳು ಹಾಗೆ ಮಾಡಿಲ್ಲ. ತೃಣಮೂಲ ಕಾಂಗ್ರೆಸ್ ಪಕ್ಷವಾಗಲೀ ಸಮಾಜವಾದಿ ಪಕ್ಷವಾಗಲೀ ಈ ವಿಚಾರದಲ್ಲಿ ಕಾಂಗ್ರೆಸ್ ಬೆಂಬಲಕ್ಕೆ ನಿಂತಿಲ್ಲ. ಬಾಬರಿ ಮಸೀದಿ ಧ್ವಂಸವನ್ನು ಶ್ಲಾಘಿಸಿ ಶಿವಸೇನಾ (ಯುಬಿಟಿ) ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಪ್ರಕಟಿಸಿದ್ದನ್ನು ಸಮಾಜವಾದಿ ಪಕ್ಷವು ಖಂಡಿಸಿದೆ. ಎಲ್ಲರಿಗೂ ಒಪ್ಪಿಗೆ ಆಗುವಂತಹ ದೊಡ್ಡ ವಿಚಾರವೊಂದು ಮೈತ್ರಿಕೂಟದ ಮುಂದೆ ಇದ್ದಾಗ, ಇತರ ಎಲ್ಲ ವಿಚಾರಗಳಲ್ಲಿಯೂ ಎಲ್ಲರಿಗೂ ಸಹಮತ ಇರಬೇಕು ಎಂದೇನೂ ಇಲ್ಲ. ಆಡಳಿತ ಪಕ್ಷ ಅಥವಾ ಸರ್ಕಾರವನ್ನು ವಿರೋಧಿಸುವುದಕ್ಕಿಂತ ಹೆಚ್ಚಾಗಿ, ಗಟ್ಟಿಯಾದ ನೆಲಗಟ್ಟುಳ್ಳ ಸಾಮಾನ್ಯ ಕಾರ್ಯಸೂಚಿಯೊಂದು ಮೈತ್ರಿಕೂಟಕ್ಕೆ ಬೇಕು. ನಾಯಕತ್ವದ ಕುರಿತು ಗೊಂದಲ ಇದೆ ಮತ್ತು ಈ ವಿಚಾರದಲ್ಲಿ ಒಗ್ಗಟ್ಟು ಇಲ್ಲ ಎಂಬುದರ ಪ್ರದರ್ಶನದಿಂದ ‘ಇಂಡಿಯಾ’ ಗುಂಪಿಗೆ ಹಾನಿಯಲ್ಲದೆ ಅನುಕೂಲವಂತೂ ಆಗದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.