ಸಂಪಾದಕೀಯ
ಒಳಚರಂಡಿಗಳು ಹಾಗೂ ಶೌಚದ ಗುಂಡಿಗಳನ್ನು ಸ್ವಚ್ಛಗೊಳಿಸಲು ಅನುಸರಿಸುತ್ತಿರುವ ವಿಧಾನಗಳ ಬಗ್ಗೆ ಈಚೆಗೆ ನಡೆದಿರುವ ದೇಶವ್ಯಾಪಿ ಸಾಮಾಜಿಕ ಲೆಕ್ಕ ಪರಿಶೋಧನೆಯೊಂದು, ನಾಚಿಕೆಗೇಡಿನ ಹಾಗೂ ಅಮಾನವೀಯ ಕಾರ್ಯಾಚರಣೆ ಪದ್ಧತಿಗಳು ಇಂದಿಗೂ ಅಸ್ತಿತ್ವದಲ್ಲಿ ಇರುವುದನ್ನು ಬಹಿರಂಗಪಡಿಸಿದೆ. ಕಾನೂನು ನಿಷೇಧದ ನಡುವೆಯೂ ಒಳಚರಂಡಿ ಹಾಗೂ ಶೌಚಗುಂಡಿಗಳನ್ನು ಕೈಯಿಂದಲೇ ಸ್ವಚ್ಛಗೊಳಿಸುವ ಪದ್ಧತಿ ಮುಂದುವರಿದಿದೆ. ಕೇಂದ್ರದ ಸಾಮಾಜಿಕ ನ್ಯಾಯ ಸಚಿವಾಲಯವು 2023ರ ಸೆಪ್ಟೆಂಬರ್‌ನಲ್ಲಿ ಈ ಅಧ್ಯಯನ ನಡೆಸಿದೆ. ಒಳಚರಂಡಿಗಳನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡಿರುವ ಶೇ 90ಕ್ಕೂ ಹೆಚ್ಚು ಕಾರ್ಮಿಕರ ಬಳಿ ಸುರಕ್ಷತಾ ಉಪಕರಣಗಳು ಇರಲಿಲ್ಲ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ. ಸುರಕ್ಷತಾ ಪರಿಕರಗಳನ್ನು ಬಳಸುತ್ತಿದ್ದರು ಎನ್ನಲಾದವರು ಕೂಡ ಕೈಗವಸು ಹಾಗೂ ಗಮ್‌ಬೂಟುಗಳನ್ನಷ್ಟೇ ಧರಿಸುತ್ತಿದ್ದರು. 2022ರಿಂದ 2023ರ ನಡುವೆ ಎಂಟು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ವರದಿಯಾದ ಒಟ್ಟು 54 ಸಾವಿನ ಪ್ರಕರಣಗಳನ್ನು ಈ ಲೆಕ್ಕಪರಿಶೋಧನೆಯು ತನಿಖೆಗೆ ಒಳಪಡಿಸಿದೆ. ಈ ಅವಧಿಯಲ್ಲಿ, ಅಸುರಕ್ಷಿತ ಸ್ವಚ್ಛತಾ ಕಾರ್ಯವನ್ನು ನಿರ್ವಹಿಸುವಾಗ ಒಟ್ಟು 150 ಮಂದಿ ಜೀವ ಕಳೆದುಕೊಂಡಿದ್ದಾರೆ. ಒಳಚರಂಡಿ ಹಾಗೂ ಶೌಚಗುಂಡಿಗಳನ್ನು ಮನುಷ್ಯರೇ ಸ್ವಚ್ಛಗೊಳಿಸುವ ಕೆಲಸದ ಎಲ್ಲ ಆಯಾಮಗಳ ಬಗ್ಗೆ ಸಾಮಾಜಿಕ ಲೆಕ್ಕಪರಿಶೋಧನೆಯು ಪರಿಶೀಲನೆ ನಡೆಸಿದೆ. ಈ ಕಾರ್ಯಕ್ಕೆ ಹೇಗೆ ನೇಮಕ ಮಾಡಿಕೊಳ್ಳಲಾಗುತ್ತದೆ, ಸ್ವಚ್ಛತಾ ಸಮಯದಲ್ಲಿ ಯಾವ ಸುರಕ್ಷತಾ ಕ್ರಮಗಳನ್ನುಪಾಲಿಸಲಾಗುತ್ತದೆ, ಕಾನೂನಿನ ಅರಿವು ಎಷ್ಟರಮಟ್ಟಿಗೆ ಇದೆ ಎನ್ನುವ ಸಂಗತಿಗಳ ಕುರಿತು ಪರಿಶೀಲನೆ ನಡೆಸಲಾಗಿದ್ದು, ಅಧ್ಯಯನದ ಮೂಲಕ ಕಂಡುಕೊಂಡ ಮಾಹಿತಿಯನ್ನು ಸಂಸತ್ತಿಗೆ ತಿಳಿಸಲಾಗಿದೆ.
ಜೀವ ಕಳೆದುಕೊಂಡಿರುವ 54 ಸಫಾಯಿ ಕರ್ಮಚಾರಿಗಳಲ್ಲಿ 49 ಮಂದಿ ಯಾವುದೇ ಸುರಕ್ಷತಾ ಪರಿಕರ ಗಳನ್ನು ಧರಿಸಿರಲಿಲ್ಲ. 27 ಪ್ರಕರಣಗಳಲ್ಲಿ, ಸಫಾಯಿ ಕರ್ಮಚಾರಿಗಳಿಂದ ಯಾವುದೇ ಬಗೆಯಲ್ಲಿ ಸಮ್ಮತಿ ಪಡೆದು ಕೊಂಡಿರಲಿಲ್ಲ ಹಾಗೂ ಕೆಲಸದಲ್ಲಿ ಇರುವ ಅಪಾಯಗಳ ಬಗ್ಗೆ ಅವರಿಗೆ ಯಾವುದೇ ರೀತಿಯಲ್ಲಿ ಮಾಹಿತಿ ನೀಡಿರಲಿಲ್ಲ. ಒಳಚರಂಡಿಗಳನ್ನು ಹಾಗೂ ಶೌಚಗುಂಡಿಗಳನ್ನು ಕೈಗಳನ್ನು ಬಳಸಿ ಸ್ವಚ್ಛಗೊಳಿಸುವ ಪದ್ಧತಿಯನ್ನು ನಿಷೇಧಿಸುವ ಹಾಗೂ ಆ ಕಾರ್ಯದಲ್ಲಿ ತೊಡಗಿದವರಿಗೆ ಪುನರ್ವಸತಿ ಕಲ್ಪಿಸುವ ಕಾಯ್ದೆಯ ಬಗ್ಗೆ ಈ ಅಧ್ಯಯನ ನಡೆದಿದೆ. ಇಂತಹ ಕೆಲಸಗಳನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಹೊರಡಿಸಿದೆ; ‘ಸ್ವಚ್ಛ ಭಾರತ’ ಅಭಿಯಾನದ ಅಡಿಯಲ್ಲಿ ಹಲವು ಆದೇಶಗಳನ್ನು ಹಾಗೂ ಸಲಹೆಗಳನ್ನು ನೀಡಲಾಗಿದೆ. ಮನುಷ್ಯರು ಕೈಗಳನ್ನು ಬಳಸಿ ಹೊಲಸನ್ನು ಸ್ವಚ್ಛಗೊಳಿಸುವುದನ್ನು ದೇಶದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಂತ್ರಗಳನ್ನು ಬಳಸಿ ಈ ಕೆಲಸ ಮಾಡಲು ಸಾಧ್ಯವಿಲ್ಲದಿದ್ದರೆ, ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಕೈಗಳನ್ನು ಬಳಸಿ ಸ್ವಚ್ಛಗೊಳಿಸಲು ಅವಕಾಶ ಇದೆ. ಕೈಗಳನ್ನು ಬಳಸಿ ಸ್ವಚ್ಛಗೊಳಿಸುವ ಕಾರ್ಯ ಹೇಗೆ ನಡೆಯಬೇಕು ಎಂಬ ಬಗ್ಗೆ ನಿರ್ದಿಷ್ಟವಾದ ಸೂಚನೆಗಳೂ ಇವೆ. ಈ ಸೂಚನೆಗಳನ್ನು ಉಲ್ಲಂಘಿಸಿ, ಯಂತ್ರಗಳಿಂದ ಸಾಧ್ಯವಿರುವಲ್ಲಿ ಮನುಷ್ಯರನ್ನು ಬಳಸಿ ಸ್ವಚ್ಛಗೊಳಿಸುವುದು ಅಮಾನವೀಯ ಹಾಗೂ ಮಾನವಹಕ್ಕುಗಳ ಉಲ್ಲಂಘನೆ.
ಶೌಚಗುಂಡಿಗಳನ್ನು ಕೈಯಿಂದ ಸ್ವಚ್ಛಗೊಳಿಸುವುದು ಅತ್ಯಂತ ಹೀನಾಯವಾದ ಹಾಗೂ ಮನುಷ್ಯನ ಘನತೆಯನ್ನು ಕುಗ್ಗಿಸುವ ವೃತ್ತಿಯಾಗಿದೆ. ಬಡತನ, ಜಾತಿ, ಅನಕ್ಷರತೆ, ಹಿಂದುಳಿದಿರುವಿಕೆ ಮತ್ತು ದಬ್ಬಾಳಿಕೆಯು ಹೇಗೆ ಅಪಾಯಕಾರಿ ಬಗೆಯಲ್ಲಿ ಒಗ್ಗೂಡುತ್ತವೆ ಎನ್ನುವುದನ್ನು ಇದು ತೋರಿಸುತ್ತದೆ. ಮನುಷ್ಯರನ್ನು ಈ ಬಗೆಯಲ್ಲಿ ಹೀನಾಯವಾಗಿ ನಡೆಸಿಕೊಳ್ಳುವ ಪದ್ಧತಿಯು ನಗರಗಳಲ್ಲಿ, ಪಟ್ಟಣಗಳಲ್ಲಿ ಹಾಗೂ ಹಳ್ಳಿಗಳಲ್ಲಿ ಶತಮಾನಗಳಿಂದಲೂ ಜಾರಿಯಲ್ಲಿದೆ. ಇದನ್ನು ಕೊನೆಗೊಳಿಸುವುದಕ್ಕೆ ಕಾನೂನಿನಿಂದಲೂ ಸಾಧ್ಯವಾಗಿಲ್ಲ. ಯಂತ್ರಗಳನ್ನು ಬಳಸಿ ಶುಚಿಗೊಳಿಸುವುದು ದುಬಾರಿ ಎಂಬ ನೆಪ ಹೇಳಿ, ನಗರಗಳಲ್ಲಿ ಆ ಕೆಲಸವನ್ನು ಸಫಾಯಿ ಕರ್ಮಚಾರಿಗಳಿಂದ ಮಾಡಿಸಲಾಗುತ್ತಿದೆ. ಸ್ವಚ್ಛತೆಯ ಕೆಲಸದಲ್ಲಿ ತೊಡಗಿದ್ದಾಗ ಮೃತಪಟ್ಟವರಿಗೆ ಪರಿಹಾರ ಮೊತ್ತವನ್ನೂ ಸಮರ್ಪಕವಾಗಿ ನೀಡಲಾಗುತ್ತಿಲ್ಲ ಎಂಬ ಆರೋಪಗಳಿವೆ. ಹಲವು ಕಡೆಗಳಲ್ಲಿ ಸಫಾಯಿ ಕರ್ಮಚಾರಿಗಳಿಗೆ ಪುನರ್ವಸತಿ ಕಲ್ಪಿಸುವ ಯೋಜನೆಗಳು ಪ್ರಗತಿ ಸಾಧಿಸಿಲ್ಲ. ಯಂತ್ರಗಳನ್ನು ಬಳಸಿ ಸ್ವಚ್ಛಗೊಳಿಸುವ ವ್ಯವಸ್ಥೆ ರೂಪಿಸುವ ರಾಷ್ಟ್ರೀಯ ಯೋಜನೆಯು ಅಲ್ಪ ಪ್ರಗತಿಯನ್ನಷ್ಟೇ ಸಾಧಿಸಿದೆ. ಒಳಚರಂಡಿ ಹಾಗೂ ಶೌಚಗುಂಡಿಗಳ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಸಫಾಯಿ ಕರ್ಮಚಾರಿಗಳ ಬಗ್ಗೆ ಸಮೀಕ್ಷೆ ನಡೆಸಿ, ಅದರ ವರದಿಯನ್ನು ಬಹಿರಂಗಪಡಿಸುವ ಮೂಲಕ ಕೇಂದ್ರ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ. ಆ ವರದಿಯನ್ನು ಆಧರಿಸಿ ಕೆಲವು ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಕೈಯಿಂದ ಗಲೀಜು ಬಳಿಯುವ ಅಮಾನವೀಯ ಪದ್ಧತಿಯು ಸಂಪೂರ್ಣವಾಗಿ ಇಲ್ಲವಾಗುವಂತೆ ಮಾಡುವ ಇಚ್ಛಾಶಕ್ತಿಯನ್ನು ಕೇಂದ್ರ ಸರ್ಕಾರ ಪ್ರದರ್ಶಿಸಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.