ADVERTISEMENT

ಸಂಪಾದಕೀಯ: ಶ್ರೀಲಂಕಾ ಬಿಕ್ಕಟ್ಟು ಶಮನಕ್ಕೆ ಜಗತ್ತಿನ ನೆರವು ಅಗತ್ಯ

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 19:30 IST
Last Updated 11 ಜುಲೈ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನೆರೆಯ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿನ ಬೆಳವಣಿಗೆಗಳು ಅಪಾಯಕಾರಿ ಸ್ಥಿತಿಗೆ ತಲುಪಿವೆ. ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನಿಂದ ತತ್ತರಿಸಿದ್ದ ದೇಶವು ಈಗ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಿದೆ. ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಪ್ರತಿಭಟನಕಾರರ ಒತ್ತಡಕ್ಕೆ ಮಣಿದಿದ್ದಾರೆ; ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಶನಿವಾರ ಘೋಷಿಸಿದ್ದಾರೆ. ಬುಧವಾರ ರಾಜೀನಾಮೆ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ. ವಾರದ ಹಿಂದಿನವರೆಗೆ ಅಧಿಕಾರದ ಮೇಲೆ ರಾಜಪಕ್ಸ ಅವರ ಹಿಡಿತವು ಅತ್ಯಂತ ಬಿಗಿಯಾಗಿಯೇ ಇತ್ತು. ಸೇನೆಯಿಂದ ಸಿಗುವ ರಕ್ಷಣೆಯ ಜತೆಗೆ ಅಧ್ಯಕ್ಷರಿಗೆ ಸಂವಿಧಾನವು ನೀಡಿರುವ ವ್ಯಾಪಕ ಅಧಿಕಾರಗಳು ಇದಕ್ಕೆ ಕಾರಣವಾಗಿದ್ದವು. ಆದರೆ, ಇಂಧನ, ಆಹಾರ ಮತ್ತು ವಿದೇಶಿ ವಿನಿಮಯದ ತೀವ್ರ ಕೊರತೆಯಿಂದ ಭಾರಿ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದ ಜನರ ಆಕ್ರೋಶದ ಮುಂದೆ ಈ ಎಲ್ಲವೂ ನಗಣ್ಯವಾದವು. ಗೊಟಬಯ ಅವರನ್ನು ರಕ್ಷಿಸಿ ಕರೆದೊಯ್ಯುವಲ್ಲಿ ಭದ್ರತಾ ಪಡೆಗಳುಶನಿವಾರ ಯಶಸ್ವಿಯಾಗಿವೆ. ಆದರೆ, ಕೆರಳಿದ ಜನರ ಗುಂಪು ಅಧ್ಯಕ್ಷರ ನಿವಾಸ ಮತ್ತು ಕಚೇರಿಯಲ್ಲಿ ದಾಂದಲೆ ನಡೆಸುವುದನ್ನು ತಡೆಯಲು ಸೇನಾ ಪಡೆಗಳಿಗೆ ಸಾಧ್ಯವಾಗಿಲ್ಲ. ಪ್ರತಿಭಟನೆಯನ್ನು ದಮನ ಮಾಡಲುಸೇನೆಯನ್ನು ನಿಯೋಜಿಸಲು ಗೊಟಬಯ ಅವರು ಹಿಂದೇಟು ಹಾಕಿರಲಿಲ್ಲ. ಅದೇನೇ ಇದ್ದರೂ ಕೊನೆಗೂ ಜನರಿಗೆ ಜಯ ಸಿಕ್ಕಿತು. ಸಿಂಹಳದ ಬೌದ್ಧ ಧರ್ಮೀಯರ ಭಾರಿ ಬೆಂಬಲದೊಂದಿಗೆ ಎರಡು ವರ್ಷಗಳ ಹಿಂದಷ್ಟೇ ಅಧಿಕಾರಕ್ಕೆ ಬಂದಿದ್ದ ಅಧ್ಯಕ್ಷ ರನ್ನುಜನರು ಅಧಿಕಾರದಿಂದ ಅಕ್ಷರಶಃ ಹೊರದಬ್ಬಿದ್ದಾರೆ. ಗೊಟಬಯ ಅವರು ಮೇಲಕ್ಕೆ ಏರಿದ ರೀತಿಯಲ್ಲಿಯೇ ಪಾತಾಳಕ್ಕೆ ಕುಸಿದಿದ್ದಾರೆ. ಇದು, ನಿರಂಕುಶ ನಾಯಕರೆಲ್ಲರಿಗೂ ಪಾಠವಾಗಬೇಕು. ಅಧಿಕಾರದ ಮೇಲೆ ಎಷ್ಟೇ ಗಟ್ಟಿ ಹಿಡಿತ ಇದ್ದರೂ ಅದು ಕಾಯಂ ಅಲ್ಲ ಎನ್ನುವುದು ಅವರ ಗಮನದಲ್ಲಿ ಇರಬೇಕು. ಜನಶಕ್ತಿಯ ಮುಂದೆ ಅದುಒಂದಲ್ಲ ಒಂದು ದಿನ ಮಂಡಿಯೂರಲೇಬೇಕು.

ಗೊಟಬಯ ಅವರು ರಾಜೀನಾಮೆ ನೀಡಬೇಕು ಎಂಬುದೇ ಪ್ರತಿಭಟನಕಾರರ ಮುಖ್ಯ ಆಗ್ರಹವಾಗಿತ್ತು. ಆದರೆ, ಅವರು ಹುದ್ದೆಯಿಂದ ಕೆಳಗಿಳಿದ ಮಾತ್ರಕ್ಕೆ ಆ ದೇಶವು ಎದುರಿಸುತ್ತಿರುವ ಬಿಕ್ಕಟ್ಟು ಕೊನೆಯಾಗುವುದಿಲ್ಲ. ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಲೇ ಬೇಕಾಗುತ್ತದೆ. ಶ್ರೀಲಂಕಾದ ಜನರ ಆಕ್ರೋಶವು ರಾಜಪಕ್ಸ ಅವರಿಗೆ ಮಾತ್ರ ಸೀಮಿತವಲ್ಲ. ಗೊಟಬಯ ಅವರ ಜತೆಗೆ ಸೇರಿಕೊಂಡಿರುವ ಎಲ್ಲರ ಮೇಲೆಯೂ ಜನರಿಗೆ ಸಿಟ್ಟು ಇದೆ. ಹಾಗೆ ನೋಡಿದರೆ, ಎಲ್ಲ ರಾಜಕಾರಣಿಗಳ ಮೇಲೆಯೂ ಜನರು ಆಕ್ರೋಶಗೊಂಡಿದ್ದಾರೆ. ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಅವರ ನಿವಾಸಕ್ಕೂ ಪ್ರತಿಭಟನಕಾರರು ಶನಿವಾರ ಬೆಂಕಿ ಹಚ್ಚಿದ್ದಾರೆ. ಸಾಮೂಹಿಕವಾಗಿರುವ ಆಕ್ರೋಶದಿಂದಾಗಿ ದೇಶದಲ್ಲಿ ಸ್ಫೋಟಕ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಸರ್ಕಾರದ ಸಂಸ್ಥೆಗಳ ವಿರುದ್ಧ ತಿರುಗುವ ಅಪಾಯವೂ ಇದೆ. ಇದು ಶ್ರೀಲಂಕಾವನ್ನು ಅರಾಜಕತೆಗೆ ತಳ್ಳಬಹುದು.

ಎಲ್ಲ ಪಕ್ಷಗಳ ಪ್ರಾತಿನಿಧ್ಯವೂ ಇರುವ, ಸಮುದಾಯಗಳ ಪ್ರತಿನಿಧಿಗಳನ್ನೂ ಸೇರಿಸಿಕೊಂಡ ನಿಜಕ್ಕೂ ರಾಷ್ಟ್ರೀಯ ಎನಿಸುವಂತಹ ಸರ್ಕಾರವೊಂದು ಆ ದೇಶಕ್ಕೆ ಅಗತ್ಯ ಇದೆ. ಇದು ಅಲ್ಲಿನ ರಾಜಕೀಯ ಅಗತ್ಯ. ಆದರೆ, ಈ ಪರಿಹಾರವು ದೇಶದ ಆರ್ಥಿಕ ಮತ್ತು ಇತರ ಸಮಸ್ಯೆಗಳಿಗೆ ಪರಿಹಾರ ಒದಗಿಸಬಹುದೇ ಎಂಬುದು ಈಗ ಸ್ಪಷ್ಟವಿಲ್ಲ. ವಿವಿಧ ರಾಜಕೀಯ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯ ಮರೆತು ಜತೆಗೆ ಸೇರಿ ಕೆಲಸ ಮಾಡಿದರೂ ಆರ್ಥಿಕ ಬಿಕ್ಕಟ್ಟು ಹಾಗೆಯೇ ಉಳಿಯಬಹುದು. ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಜತೆಗೆ ಶ್ರೀಲಂಕಾ ನಡೆಸಿದ ಮಾತುಕತೆಯು ಈವರೆಗೆ ಫಲ ಕೊಟ್ಟಿಲ್ಲ. ಈಗ ಎದುರಿಸುತ್ತಿರುವ ಅಸ್ಥಿರತೆಯಿಂದಾಗಿ ಆ ದೇಶಕ್ಕೆ ನೆರವು ನೀಡುವ ಐಎಂಎಫ್‌ನ ಉತ್ಸಾಹ ಉಡುಗಬಹುದು. ಭಾರತವೂ ಸೇರಿದಂತೆ ಜಗತ್ತಿನ ಇತರ ದೇಶಗಳು ಶ್ರೀಲಂಕಾಕ್ಕೆ ದೊಡ್ಡ ಪ್ರಮಾಣದಲ್ಲಿ ಮತ್ತು ಯಾವ ಷರತ್ತೂ ಇಲ್ಲದೆ ಆಹಾರ ಮತ್ತು ಇತರ ಬೆಂಬಲ ಒದಗಿಸಬೇಕು. ಅಂತರ ರಾಷ್ಟ್ರೀಯ ಭೌಗೋಳಿಕ ರಾಜಕಾರಣದ ನೆಲೆಯಲ್ಲಿಯೇ ಶ್ರೀಲಂಕಾದ ಬಿಕ್ಕಟ್ಟನ್ನು ಜಗತ್ತು ಈವರೆಗೆ ನೋಡಿದೆ. ಈ ಧೋರಣೆ ಬದಲಾಗಬೇಕು. ಶ್ರೀಲಂಕಾದ ಸೇನೆಯು ಇಡೀ ಪರಿಸ್ಥಿತಿಯನ್ನು ದೂರದಿಂದ ನೋಡುತ್ತಾ ನಿಂತಿದೆ. ಸನ್ನಿವೇಶ ಇಷ್ಟೊಂದು ಸ್ಫೋಟಕವಾಗಿರುವ ಕಾರಣ, ಮಧ್ಯಪ್ರವೇಶಿಸುವ ತಹತಹ ಸೇನೆಗೆ ಉಂಟಾಗಬಹುದು. ಇದು ಆಗದಂತೆ ನೋಡಿಕೊಳ್ಳಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.