ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ದುಷ್ಕೃತ್ಯಗಳ ತನಿಖೆಯನ್ನು ಎಸ್‌ಐಟಿ ಎಲ್ಲ ಆಯಾಮಗಳಿಂದ ನಡೆಸಬೇಕು; ಅನುಮಾನಕ್ಕೆ ಆಸ್ಪದ ಇಲ್ಲದಂತೆ ಸತ್ಯ ಸಾಬೀತು ಮಾಡಬೇಕು.
ಧರ್ಮಸ್ಥಳದ ಪರಿಸರದಲ್ಲಿ ಅತ್ಯಾಚಾರ, ಕೊಲೆ ಮತ್ತು ಶವಗಳನ್ನು ಸಾಮೂಹಿಕವಾಗಿ ಹೂತಿರುವ ಕೃತ್ಯಗಳು ನಡೆದಿದ್ದು, ಅವುಗಳ ಹಿಂದೆ ಆ ಭಾಗದ ‘ಪ್ರಭಾವಿ ವ್ಯಕ್ತಿಗಳ’ ಕೈವಾಡ ಇದೆ ಎಂದು ವ್ಯಕ್ತಿಯೊಬ್ಬ ನೀಡಿದ ದೂರು ಆಧರಿಸಿ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿರುವುದು ದೇಶದ ಗಮನ ಸೆಳೆದಿದೆ. ಆದರೆ, ತನಿಖಾ ಪ್ರಕ್ರಿಯೆಯ ಬಗ್ಗೆ ಎಸ್‌ಐಟಿ ಮಧ್ಯಂತರ ವರದಿ ಸಲ್ಲಿಸಬೇಕು ಎಂದು ಕೆಲವು ಶಾಸಕರು ಆಗ್ರಹಿಸಿರುವುದು ಈ ಸಂದರ್ಭದಲ್ಲಿ ಸರಿಯಲ್ಲ; ಅಂಥದ್ದೊಂದು ವರದಿಯನ್ನು ಈ ಸಂದರ್ಭದಲ್ಲಿ ಪಡೆದುಕೊಳ್ಳುವುದು ಉಪಯುಕ್ತವಾಗಲಾರದು. ಆರೋಪದ ಸ್ವರೂಪವು ಗಂಭೀರವಾಗಿರುವಾಗ, ಅಪರಾಧದ ಕೃತ್ಯಗಳು ಬಹಳ ದೀರ್ಘ ಅವಧಿಯವರೆಗೆ ನಡೆದಿವೆ ಎಂಬ ಆರೋಪ ಇರುವಾಗ, ಇಲ್ಲಿ ಭಾವನಾತ್ಮಕ ಸಂಗತಿಗಳೂ ಮಿಳಿತವಾಗಿರುವಾಗ, ಆರೋಪಗಳ ಕುರಿತ ತನಿಖೆಯು ಬಹಳ ಸೂಕ್ಷ್ಮವಾಗಿ ಅವಸರವಿಲ್ಲದೆ ನಡೆಯಬೇಕು. ಸತ್ಯವನ್ನು ಹೊರಗೆ ಎಳೆಯಲು ಅಥವಾ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಎಸ್‌ಐಟಿ ಸ್ವತಂತ್ರವಾಗಿ ಕೆಲಸ ಮಾಡಬೇಕು, ಅದು ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿ ಇರಬೇಕು. ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನದ ಆಡಳಿತವನ್ನು ನಿರ್ವಹಿಸುತ್ತಿರುವ ಹೆಗ್ಗಡೆ ಕುಟುಂಬವನ್ನು ಗುರಿಯಾಗಿಸಿಕೊಂಡ ಗುಸುಗುಸು ಮಾತುಗಳು ದಶಕಗಳಿಂದ ಇವೆ. ಒಂದು ದಶಕದ ಹಿಂದೆ ನಡೆದ 17 ವರ್ಷ ವಯಸ್ಸಿನ ಸೌಜನ್ಯಾ ಎನ್ನುವ ಯುವತಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವು, ಹೆಗ್ಗಡೆ ಕುಟುಂಬದ ಬಗ್ಗೆ ಗುಟ್ಟಾಗಿ ಆಡುತ್ತಿದ್ದ ಮಾತುಗಳು ದೊಡ್ಡ ದನಿಯನ್ನು ಪಡೆಯುವಂತೆ ಮಾಡಿತು. ಸೌಜನ್ಯಾ ಹತ್ಯೆ ಪ್ರಕರಣದಲ್ಲಿ ಪೊಲೀಸರು ನಡೆಸಿದ ತನಿಖೆಯು ಅದೆಷ್ಟು ಅದಕ್ಷತೆಯಿಂದ ಕೂಡಿತ್ತೆಂದರೆ, ಅಧಿಕಾರಿಗಳನ್ನು ಹೈಕೋರ್ಟ್ ಕಟುವಾಗಿ ತರಾಟೆಗೆ ತೆಗೆದುಕೊಂಡಿತ್ತು. ತನಿಖೆಯ ಹೊಣೆಯನ್ನು ಸಿಬಿಐ ವಹಿಸಿಕೊಂಡ ನಂತರವೂ ಈ ಪ್ರಕರಣದ ಅಪರಾಧಿಗಳನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ನಾಪತ್ತೆ ಪ್ರಕರಣದ ಸಂದರ್ಭದಲ್ಲಿಯೂ ಸಾರ್ವಜನಿಕರಲ್ಲಿ ಆತಂಕವು ಹೆಚ್ಚಾಗಿತ್ತು. ಈ ಪ್ರಕರಣಗಳು ಉತ್ತರವಿಲ್ಲದ ಪ್ರಶ್ನೆಗಳನ್ನು ಉಳಿಸಿಬಿಟ್ಟಿವೆ.
ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕ ಆಗಿ ಕೆಲಸ ಮಾಡಿರುವುದಾಗಿ ಹೇಳಿಕೊಂಡಿರುವ ವ್ಯಕ್ತಿಯೊಬ್ಬರು, ನೂರಾರು ಮೃತದೇಹಗಳನ್ನು ಹೂತುಹಾಕುವ ಕೆಲಸವನ್ನು 1995ರಿಂದ 2014ರ ನಡುವೆ ತಮ್ಮಿಂದ ಒತ್ತಾಯಪೂರ್ವಕವಾಗಿ ಮಾಡಿಸಲಾಗಿದೆ ಎಂದು ಈಗ ದೂರಿದ್ದಾರೆ. ಹೂತು ಹಾಕಿದ ಹಲವು ಮೃತದೇಹಗಳ ಮೇಲೆ ಲೈಂಗಿಕ ಹಲ್ಲೆ ನಡೆದ ಗುರುತುಗಳು ಇದ್ದವು ಎಂದೂ ಹೇಳಿದ್ದಾರೆ. ಇಂತಹ ಪ್ರಕರಣದಲ್ಲಿ, ಅಸ್ಥಿಪಂಜರದ ತುಂಡುಗಳನ್ನು ಇಟ್ಟುಕೊಂಡು ನಿರ್ಣಯವೊಂದಕ್ಕೆ ಬರುವುದು ಕಷ್ಟದ ಕೆಲಸ. ಆದರೆ, ಎಸ್‌ಐಟಿ ಹೊಣೆಯು ಇಷ್ಟಕ್ಕೇ ಸೀಮಿತ ಆಗಬಾರದು. ಆ ಪ್ರದೇಶಕ್ಕೆ ಸಂಬಂಧಿಸಿದಂತೆ ಇರುವ ಇತರ ಹಲವು ಆರೋಪಗಳನ್ನು ಕೂಡ ಅದು ತನಿಖೆಗೆ ಒಳಪಡಿಸಬೇಕು. ದಶಕವೊಂದರ ಹಿಂದೆ ಟಿ.ವಿ. ವಾಹಿನಿಯೊಂದು ಆ ಭಾಗದಲ್ಲಿ ಯುವತಿಯರು ನಾಪತ್ತೆಯಾಗಿರುವ ಬಗ್ಗೆ ಸರಣಿ ವರದಿಯನ್ನು ಬಿತ್ತರಿಸಿತ್ತು. ಯುವತಿಯರ ನಾಪತ್ತೆ ಆರೋಪವನ್ನು ಮತ್ತೆ ಮತ್ತೆ ಮಾಡಲಾಗಿದೆ ಎಂಬುದು ಗಮನಾರ್ಹ. ಪೊಲೀಸ್ ದಾಖಲೆಗಳನ್ನು ಪರಿಶೀಲಿಸಿ, ಈ ಆರೋಪದ ಬಗ್ಗೆ ಎಸ್‌ಐಟಿ ತನಿಖೆ ನಡೆಸಬಹುದು. ಸಾಕ್ಷ್ಯ ಎಂಬುದಾಗಿ ಹೇಳಿಕೊಂಡು 8,000ಕ್ಕೂ ಹೆಚ್ಚಿನ ವೆಬ್ ಕೊಂಡಿಗಳನ್ನು ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಿರುವ ವಿವಿಧ ಯೂಟ್ಯೂಬರ್‌ಗಳು ಹಾಗೂ ಸ್ಥಳೀಯ ಸಾಮಾಜಿಕ ಕಾರ್ಯಕರ್ತರನ್ನು ಕೂಡ ಎಸ್‌ಐಟಿ ಕರೆಸಿ, ಮಾಹಿತಿ ಪಡೆಯಬೇಕು.
ಇಲ್ಲಿನ ಆರೋಪಗಳಿಗೆ ಸಂಬಂಧಿಸಿದ ಚಿತ್ರಣವು ಗೋಜಲು ಗೋಜಲಾಗಿದೆ. ಪ್ರಶ್ನಾರ್ಹವಾದ ಆಸ್ತಿ ವಹಿವಾಟುಗಳು, ಕಿರುಸಾಲಕ್ಕೆ ಸಂಬಂಧಿಸಿದ ಕೆಲವು ವಿವಾದಗಳು ಕೂಡ ಈಗ ಮುನ್ನೆಲೆಗೆ ಬಂದಿವೆ. ದೇವಸ್ಥಾನವನ್ನು ಜೈನ ಸಮುದಾಯಕ್ಕೆ ಸೇರಿದ ಕುಟುಂಬವೊಂದು ನಿರ್ವಹಿಸುತ್ತಿದೆ ಎನ್ನುವುದು ಕೂಡ ಕೆಲವರಿಗೆ ಅಪಥ್ಯವಾಗಿರಬಹುದು. ಆದರೆ, ಇದಕ್ಕೆ ಸುಪ್ರೀಂ ಕೋರ್ಟ್ 1976ರಲ್ಲೇ ಸ್ಪಷ್ಟವಾಗಿ ಉತ್ತರ ನೀಡಿದೆ. ದೇವಸ್ಥಾನವು ಹೆಗ್ಗಡೆ ಕುಟುಂಬದ್ದು, ಅದರ ಆಡಳಿತ ನಿರ್ವಹಣೆಯು ವಂಶಪಾರಂಪರ್ಯವಾಗಿ ಧರ್ಮಾಧಿಕಾರಿಯ ಕೈಯಲ್ಲಿ ಇರುತ್ತದೆ ಎಂದು ಕೋರ್ಟ್ ಹೇಳಿದೆ. ಈಗ ಬಂದಿರುವ ಆರೋಪಗಳ ಹರವು ಗಮನಿಸಿದಾಗ, ಆರೋಪಗಳ ಬಗ್ಗೆ ಎಸ್‌ಐಟಿ ಸಮಗ್ರ ತನಿಖೆ ನಡೆಸುವುದು ಅಗತ್ಯ. ಇದು ರೋಚಕವಾಗಿ ಕಾಣುವಂತಹ ಒಂದು ಆರೋಪಕ್ಕೆ ಸಂಬಂಧಿಸಿದ ವಿಚಾರ ಅಲ್ಲ; ಬದಲಿಗೆ, ಇದೇ ಬಗೆಯ ಇನ್ನೂ ಕೆಲವು ಆರೋಪಗಳ ಇತಿಹಾಸ ಇರುವುದರ ಕುರಿತಾದದ್ದು. ಇಂತಹ ಆರೋಪಗಳನ್ನು ಉಪೇಕ್ಷಿಸಿದರೆ ವಿಶ್ವಾಸಕ್ಕೆ ಚ್ಯುತಿ ಬರುತ್ತದೆ. ಇಲ್ಲಿ ನಡೆದಿರುವುದು ದುರುದ್ದೇಶದ, ಕೆಟ್ಟ ಹೆಸರು ತರುವ ಅಭಿಯಾನವೋ ಅಥವಾ ಸತ್ಯವನ್ನು ಮುಚ್ಚಿಹಾಕುವ ಪ್ರಯತ್ನವೋ ಎಂಬುದು ತನಿಖೆಯಿಂದ ಬಯಲಾಗಬೇಕು. ಎಸ್‌ಐಟಿಯು ಅಗತ್ಯವಿರುವ ಎಲ್ಲ ಆಯಾಮಗಳಿಂದ ತನಿಖೆ ನಡೆಸಬೇಕು. ಸತ್ಯವನ್ನು ಅನುಮಾನಗಳಿಗೆ ಎಡೆಯಿಲ್ಲದಂತೆ ಸಾಬೀತು ಮಾಡುವ ಗುರಿಯನ್ನು ಎಸ್‌ಐಟಿ ಇರಿಸಿಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.