ಶಬರಿಮಲೆ ದೇವಾಲಯಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿ ನೀಡಿರುವ ತೀರ್ಪು ಐತಿಹಾಸಿಕ. ಮುಟ್ಟಾಗುವ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಾಲಯದ ಪ್ರವೇಶ ನಿರ್ಬಂಧಿಸುವುದನ್ನು ಅತ್ಯಗತ್ಯವಾದ ಧಾರ್ಮಿಕ ಆಚರಣೆ ಎಂದು ಪರಿಗಣಿಸಲಾಗದು ಎಂದು 4:1 ಬಹುಮತದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ವ್ಯಭಿಚಾರವನ್ನು ಅಪರಾಧ ವ್ಯಾಖ್ಯೆಯಿಂದ ಹೊರತೆಗೆಯುವಂತಹ ಮತ್ತೊಂದು ಪ್ರಮುಖ ತೀರ್ಪನ್ನೂ ಹಿಂದಿನ ದಿನವಷ್ಟೇ ಸುಪ್ರೀಂ ಕೋರ್ಟ್ ನೀಡಿದೆ.
ಮಹಿಳೆಯನ್ನು ಪುರುಷನ ಸೊತ್ತಾಗಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 497, ಮಹಿಳೆಯ ಘನತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಈ ತೀರ್ಪು ವ್ಯಾಖ್ಯಾನಿಸಿದೆ. ಮಹಿಳಾ ಹಕ್ಕುಗಳ ಪರವಾದ ಈ ತೀರ್ಪುಗಳು ಸಾಂವಿಧಾನಿಕ ನೈತಿಕತೆಯನ್ನು ಎತ್ತಿಹಿಡಿದಿವೆ. ಕಳೆದ ವರ್ಷ ಖಾಸಗಿತನದ ಹಕ್ಕು ಕುರಿತಾದ ತೀರ್ಪು, ನಂತರ ಸಲಿಂಗ ಕಾಮ ಅಕ್ರಮವಲ್ಲ ಎಂದು ಹೇಳಿದ ತೀರ್ಪು ಮತ್ತು ಈಗಿನ ಈ ತೀರ್ಪುಗಳ ಮೂಲಕ ಲಿಂಗತ್ವ ಸಂವೇದನಾಶೀಲತೆಯನ್ನು ಸುಪ್ರೀಂ ಕೋರ್ಟ್ ಪ್ರದರ್ಶಿಸಿದೆ.
ಸಾಂಪ್ರದಾಯಿಕವಾದ ಪುರುಷಪ್ರಧಾನ ಅಲಿಖಿತ ನಿಯಮಗಳನ್ನು ಪ್ರಶ್ನಿಸಲು ಈ ಲಿಖಿತ ಕಾನೂನುಗಳು ಆಸರೆಯಾಗುತ್ತವೆ ಎಂಬುದು ದೊಡ್ಡ ವಿಚಾರ. ಸಾಮಾಜಿಕ ಬದಲಾವಣೆಗೆ ಅತ್ಯಗತ್ಯವಾದ ಪರಿಸರವನ್ನು ಸೃಷ್ಟಿಸಲು ಇಂತಹ ಕಾನೂನುಗಳು ಸಹಕಾರಿಯಾಗುತ್ತವೆ. ನಿಧಾನವಾಗಿ ಆಗುವ ಸಾಮಾಜಿಕ ಬದಲಾವಣೆಗಳಿಗೆ ಕಾನೂನಿನಲ್ಲಿ ಆಗುವ ಬದಲಾವಣೆಗಳು ಮೊದಲ ಹೆಜ್ಜೆ. ಈ ನಿಟ್ಟಿನಲ್ಲಿ ಈ ತೀರ್ಪುಗಳು ಸ್ವಾಗತಾರ್ಹ.
ಧಾರ್ಮಿಕ ಆಚರಣೆಗಳಲ್ಲಿ ಕನಿಷ್ಠ ಮಾನದಂಡಗಳನ್ನು ಕಾಪಾಡಿಕೊಳ್ಳುವಲ್ಲಿ ಮೂಲಭೂತ ಹಕ್ಕುಗಳ ತತ್ವ ನ್ಯಾಯಶಾಸ್ತ್ರದಲ್ಲಿ ಪರಿಗಣನೆಗೆ ಒಳಪಡುತ್ತಿರುವುದು ಪ್ರಗತಿ ಪರವಾದದ್ದು. ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಹೇಳಿರುವ ಮಾತುಗಳು ಪ್ರಸ್ತುತ. ‘ಸಂವಿಧಾನದ 25ನೇ ವಿಧಿ, ಎಲ್ಲರಿಗೂ ಅನ್ವಯವಾಗುತ್ತದೆ. ಪ್ರಾರ್ಥಿಸುವ ಹಕ್ಕನ್ನು ಮಹಿಳೆಗೆ ನಿರಾಕರಿಸಲು ಧರ್ಮದ ಮುಖವಾಡ ಹಾಕಲಾಗದು. ಮಹಿಳೆಯರನ್ನು ಕಡಿಮೆ ದರ್ಜೆಯವರಾಗಿ ಪರಿಗಣಿಸುವುದು ಸಾಂವಿಧಾನಿಕ ನೈತಿಕತೆಗೆ ಪೂರಕವಾಗುವುದಿಲ್ಲ’ ಎಂದಿರುವುದು ಸರಿಯಾದದ್ದು. ‘ಋತುಚಕ್ರದ ಕಾರಣದಿಂದಾಗಿ ಮಹಿಳೆಯನ್ನು ದೇವಾಲಯದ ಹೊರಗಿಡುವುದು ಮಹಿಳೆಯ ಘನತೆಗೆ ಕುಂದು. ಅಷ್ಟೇ ಅಲ್ಲ, ಇದು ಅಸ್ಪೃಶ್ಯತೆಗೆ ಸಮ. ಹೀಗಾಗಿ ಇದು ಸಂವಿಧಾನ ವಿರೋಧಿ’ ಎಂದು
ಚಂದ್ರಚೂಡ್ ವ್ಯಾಖ್ಯಾನಿಸಿದ್ದಾರೆ. ಆದರೆ, ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಅವರು, ರಾಷ್ಟ್ರದಲ್ಲಿ ಸೆಕ್ಯುಲರ್ ವಾತಾವರಣವನ್ನು ಕಾಪಾಡಿಕೊಳ್ಳಲು ಆಳವಾದ ಧಾರ್ಮಿಕ ಅರ್ಥಗಳಿರುವ ವಿಚಾರಗಳಲ್ಲಿ ಮಧ್ಯಪ್ರವೇಶ ಸಲ್ಲದು ಎಂಬಂಥ ಅಭಿಪ್ರಾಯ
ವ್ಯಕ್ತಪಡಿಸಿದ್ದಾರೆ.
‘ತಾರತಮ್ಯಪೂರ್ಣ ಎಂದು ಕಂಡು ಬಂದರೂ ಧಾರ್ಮಿಕ ಆಚರಣೆಗಳಲ್ಲಿ ಮಧ್ಯಪ್ರವೇಶಿಸುವುದು ಕೋರ್ಟ್‌ನ ಕೆಲಸ ಅಲ್ಲ. ವಿಚಾರ
ಪರತೆ ಅಥವಾ ತರ್ಕಬದ್ಧತೆಯ ಪರಿಕಲ್ಪನೆಗಳನ್ನು ಧಾರ್ಮಿಕ ವಿಚಾರಗಳಿಗೆ ತರಬಾರದು. ‘ಸತಿ’ಯಂತಹ ಸಾಮಾಜಿಕ ಪಿಡುಗುಗಳನ್ನು ಹೊರತಪಡಿಸಿ ಯಾವ ಧಾರ್ಮಿಕ ಆಚರಣೆಗಳನ್ನು ಕೈಬಿಡಬೇಕು ಎಂಬುದನ್ನು ನಿರ್ಧರಿಸುವುದು ಕೋರ್ಟ್‌ಗಳಿಗೆ ಸೇರಿದ್ದಲ್ಲ’ ಎಂದೂ ಅವರು ಹೇಳಿದ್ದಾರೆ. ಮಹಿಳಾ ಹಕ್ಕುಗಳ ಪರವಾದ ತೀರ್ಪಿಗೆ ಭಿನ್ನ ದನಿ ಮಹಿಳಾ ನ್ಯಾಯಮೂರ್ತಿಯಿಂದ ಬಂದಿದೆ ಎಂಬುದು ವಿಪರ್ಯಾಸ. ಆದರೆ, ಅದು ಅವರ ಅಭಿಪ್ರಾಯ. ಮಹಿಳಾ ನ್ಯಾಯಮೂರ್ತಿ ಎಂದು ಗುರಿ ಇರಿಸಿ ಟೀಕೆ ಮಾಡುವುದೂ ಅಗತ್ಯವಿಲ್ಲ.
ವಿವಾಹ ಪಾವಿತ್ರ್ಯವನ್ನು ರಕ್ಷಿಸಲು ಐಪಿಸಿಯ ಸೆಕ್ಷನ್ 497 ಇರಬೇಕು ಎಂದು ಕೇಂದ್ರ ಸರ್ಕಾರ ಹೇಳಿತ್ತು. ವಿವಾಹ ಎಂಬುದು ಗಂಡು– ಹೆಣ್ಣಿನ ನಡುವೆ ಸಮಾನ ನೆಲೆಯ ಸಂಬಂಧ ಎಂದು ಅರ್ಥೈಸುವಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಇಲ್ಲಿ ಎದ್ದು ಕಾಣಿಸುತ್ತದೆ. ‘ವ್ಯಭಿಚಾರ ಈಗ ಅಪರಾಧವಲ್ಲದೆ ಇದ್ದರೂ ಅದನ್ನು ತಪ್ಪು ಎಂದೇ ಪರಿಗಣಿಸಬೇಕಾಗುತ್ತದೆ. ಮದುವೆ ಮುರಿದುಕೊಳ್ಳಲು ಅಥವಾ ವಿಚ್ಛೇದನಕ್ಕೆ ಇದನ್ನು ಕಾರಣವಾಗಿ ಬಳಸಿಕೊಳ್ಳಬಹುದು’ ಎಂಬುದನ್ನೂ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಸೆಕ್ಷನ್ 497ರಲ್ಲಿದ್ದ ದ್ವಿಮುಖ ಧೋರಣೆ ಎದ್ದುಕಾಣಿಸುವಂತಹದ್ದು. ಈ ಪ್ರಕಾರ, ವ್ಯಭಿಚಾರ ಎಂಬುದು ಇಬ್ಬರು ಪುರುಷರ ಸಮಸ್ಯೆ. ಬೇರೊಬ್ಬನ ಪತ್ನಿ ಜೊತೆಗೆ ಆತನ ಸಮ್ಮತಿ ಅಥವಾ ಪರೋಕ್ಷ ಒಪ್ಪಿಗೆ ಇಲ್ಲದೆ ಹೊಂದುವ ಲೈಂಗಿಕ ಸಂಬಂಧ ವ್ಯಭಿಚಾರವಾಗುತ್ತದೆ. ಅಂತಹ ಪುರುಷನಿಗೆ ಶಿಕ್ಷೆ ವಿಧಿಸಲು ಅವಕಾಶ ಇತ್ತು. ಆದರೆ ಇದೇ ರೀತಿ ವಿವಾಹಬಾಹಿರ ಸಂಬಂಧವನ್ನು ಪತಿ ಹೊಂದಿದ್ದರೂ ಮಹಿಳೆಗೆ ಈ ಕಾನೂನು ಬಳಸುವ ಹಕ್ಕನ್ನು ನಿರಾಕರಿಸಲಾಗಿತ್ತು. ಈ ತಾರತಮ್ಯದ ಕಾನೂನು ಸರಿಪಡಿಸುವುದಕ್ಕಾಗಿ ಸಾಂಪ್ರದಾಯಿಕ ನೈತಿಕತೆಯ ಮೌಲ್ಯಗಳನ್ನು ಎದುರುಹಾಕಿಕೊಳ್ಳುವ ದಿಟ್ಟತನವನ್ನು ಪ್ರದರ್ಶಿಸಲು ನಮ್ಮ ರಾಜಕಾರಣಿಗಳ ವರ್ಗ ಮುಂದಾಗಲಿಲ್ಲ. ಈಗಲೂ ಈ ತೀರ್ಪಿನ ಬಗ್ಗೆ ವಾದವಿವಾದಗಳು ಮುಂದುವರಿದಿವೆ. ಪ್ರಗತಿಪರವಾದ ಆಧುನಿಕ ಸಮಾಜಕ್ಕೆ ಪೂರಕವಾದ ಕಾನೂನುಗಳ ರಚನೆಗೆ ನ್ಯಾಯಾಂಗ ಮುಂದಾಗಬೇಕಾಗಿದೆ ಎಂಬುದು ಸದ್ಯದ ಕಟುವಾಸ್ತವ. ಪ್ರಜಾಪ್ರಭುತ್ವ ಸಮಾಜದಲ್ಲಿ ಎಲ್ಲರಿಗೂ ಸಮಾನ ಹಕ್ಕು ಹಾಗೂ ಅವಕಾಶಗಳಿರಬೇಕು. ಚಲಾಯಿಸಬೇಕೇ ಅಥವಾ ಬೇಡವೇ ಎಂಬುದು ವ್ಯಕ್ತಿಯದೇ ಆಯ್ಕೆಯಾಗಬೇಕೇ ಹೊರತು ಲಿಂಗತ್ವ ಅಡ್ಡಿಯಾಗಬಾರದು ಎಂಬಂತಹ ಸಂದೇಶ ಈ ತೀರ್ಪುಗಳಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.