ADVERTISEMENT

ತತ್ತರಿಸಿದ ದೂರಸಂಪರ್ಕ ಕ್ಷೇತ್ರಕಾಯಕಲ್ಪಕ್ಕೆ ಸರ್ಕಾರದ ನೆರವು ಅಗತ್ಯ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 3:43 IST
Last Updated 18 ನವೆಂಬರ್ 2019, 3:43 IST
   

ಮೊಬೈಲ್‌ ಫೋನ್‌ ಸೇವೆ ಒದಗಿಸುವ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆಗಳು ಸಾಲದ ಸುಳಿಯಲ್ಲಿ ಸಿಲುಕಿವೆ. ದ್ವಿತೀಯ ತ್ರೈಮಾಸಿಕದಲ್ಲಿ ವೊಡಾಫೋನ್‌ ಐಡಿಯಾ ಮತ್ತು ಭಾರ್ತಿ ಏರ್‌ಟೆಲ್‌ ಸಂಸ್ಥೆಗಳ ಒಟ್ಟು ನಷ್ಟ₹ 74 ಸಾವಿರ ಕೋಟಿ. ದೂರಸಂಪರ್ಕ ವಲಯದ ಒಟ್ಟಾರೆ ಸಾಲ ಸುಮಾರು ₹ 7 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.

ಇದು, ಕಳವಳಕಾರಿ ವಿದ್ಯಮಾನ. ದೂರಸಂಪರ್ಕ ಸಂಸ್ಥೆಗಳ ಪರವಾನಗಿ ಮತ್ತು ತರಂಗಾಂತರ ಬಳಕೆ ಶುಲ್ಕ ಲೆಕ್ಕಹಾಕುವಾಗ ಆ ಸಂಸ್ಥೆಗಳ ದೂರಸಂಪರ್ಕಯೇತರ ವರಮಾನಗಳನ್ನೂ ಪರಿಗಣಿಸಬೇಕು ಎನ್ನುವ ಸರ್ಕಾರದ ವಾದವನ್ನು ಸುಪ್ರೀಂ ಕೋರ್ಟ್‌ ಮಾನ್ಯ ಮಾಡಿದೆ. ಮೊಬೈಲ್‌ ಕಂಪನಿಗಳಿಗೆ ಈ ತೀರ್ಪು ಪ್ರತಿಕೂಲವಾಗಿದೆ. ಸುಪ್ರೀಂ ಕೋರ್ಟ್‌ ತೀರ್ಪಿನಿಂದಾಗಿ ಮೊಬೈಲ್‌ ಕಂಪನಿಗಳು ಸರ್ಕಾರಕ್ಕೆ ಪಾವತಿಸಬೇಕಾದ ಮೊತ್ತ ಸುಮಾರು ₹ 1.42 ಲಕ್ಷ ಕೋಟಿ. ಈ ಮೊತ್ತ ಪಾವತಿಸುವುದಕ್ಕಾಗಿ ಕಂಪನಿಗಳು ತಮ್ಮ ತ್ರೈಮಾಸಿಕ ವಹಿವಾಟಿನಲ್ಲಿ ದೊಡ್ಡ ಮೊತ್ತ ತೆಗೆದು ಇರಿಸಿವೆ.

ನಷ್ಟದ ಪ್ರಮಾಣವು ಬೆಟ್ಟದಂತೆ ಬೆಳೆಯಲು ಇದೇ ಮುಖ್ಯ ಕಾರಣ. ದ್ವಿತೀಯ ತ್ರೈಮಾಸಿಕದಲ್ಲಿ ವೊಡಾಫೋನ್‌ ಸಂಸ್ಥೆಯು ₹ 50,921 ಕೋಟಿ, ಏರ್‌ಟೆಲ್‌ ಕಂಪನಿಯು ₹ 23,045 ಕೋಟಿ, ಆರ್‌ಕಾಂ ₹ 30,142 ಕೋಟಿ ಮತ್ತು ಟಾಟಾ ಟೆಲಿಸರ್ವಿಸಸ್‌ ಸಂಸ್ಥೆಯು ₹ 2,335 ಕೋಟಿ ನಷ್ಟ ಕಂಡಿವೆ. ಸಾಲ ಮತ್ತು ನಷ್ಟದ ಭಾರಕ್ಕೆ ಈ ಕಂಪನಿಗಳು ತತ್ತರಿಸತೊಡಗಿವೆ.

ADVERTISEMENT

ಅನಿಲ್ ಅಂಬಾನಿ ಒಡೆತನದ ರಿಲಯನ್ಸ್‌ ಕಮ್ಯುನಿಕೇಷನ್ಸ್‌ (ಆರ್‌ಕಾಂ) ಈಗಾಗಲೇ ದಿವಾಳಿ ಅಂಚಿಗೆ ಬಂದು ನಿಂತಿದೆ. ವೊಡಾಫೋನ್‌ ಕಂಪನಿಯು ಭಾರತದಲ್ಲಿನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಕುರಿತು ಆಲೋಚಿಸುತ್ತಿದೆ. ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್ ಜಿಯೊ ಹೊರತುಪಡಿಸಿ ಉಳಿದೆಲ್ಲ ಕಂಪನಿಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿವೆ.

ಕೇಂದ್ರ ಸರ್ಕಾರವು ಸಕಾಲಕ್ಕೆ ನೆರವಿಗೆ ಬರದಿದ್ದರೆ ಇವುಗಳ ಅಸ್ತಿತ್ವ ಉಳಿಯಲಿದೆಯೇ ಎನ್ನುವ ಸಂದೇಹವೂ ಕಾಡುತ್ತಿದೆ. ಈ ಬಿಕ್ಕಟ್ಟು ತೀವ್ರಗೊಳ್ಳಲು ಈ ಕಂಪನಿಗಳ ಸ್ವಯಂಕೃತಾಪರಾಧವೂ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಗ್ಗದ ಕರೆ ದರ, ಅನಾರೋಗ್ಯಕರ ಪೈಪೋಟಿ, ಸಿಬ್ಬಂದಿ ಹೊರೆ, ಅದಕ್ಷ ಕಾರ್ಯನಿರ್ವಹಣೆ ಮತ್ತಿತರ ಕಾರಣಗಳು ನಷ್ಟವನ್ನು ಹೆಚ್ಚಿಸಿವೆ. ಬಿಎಸ್‌ಎನ್‌ಎಲ್‌, ಎಂಟಿಎನ್‌ಎಲ್‌ ಜತೆಗೆ ಖಾಸಗಿ ಕಂಪನಿಗಳಾದ ವೊಡಾಫೋನ್‌ ಐಡಿಯಾ, ಭಾರ್ತಿ ಏರ್‌ಟೆಲ್‌, ರಿಲಯನ್ಸ್‌ ಕಮ್ಯುನಿಕೇಷನ್ಸ್‌, ಟಾಟಾ ಟೆಲಿ ಸರ್ವಿಸಸ್‌ನ (ಮಹಾರಾಷ್ಟ್ರ) ವಹಿವಾಟು ಲಾಭದಾಯಕವಾಗಿಲ್ಲ.

ಸರ್ಕಾರಕ್ಕೆ ಶುಲ್ಕ ಪಾವತಿಸುವ ಸಲುವಾಗಿ ತಮ್ಮ ವರಮಾನದ ಒಂದು ಭಾಗವನ್ನು ಈ ಕಂಪನಿಗಳು ಸುದೀರ್ಘ ಅವಧಿಗೆ ಪ್ರತ್ಯೇಕವಾಗಿ ತೆಗೆದು ಇರಿಸಿರಲಿಲ್ಲ. ಆರ್ಥಿಕ ಹೊಣೆಗಾರಿಕೆ ನಿಭಾಯಿಸಲು ಹಣ ಮೀಸಲು ಇರಿಸುವ ಲೆಕ್ಕಪತ್ರ ನಿರ್ವಹಣೆಯ ಮೂಲ ನಿಯಮವನ್ನೇ ಇವು ಪಾಲಿಸಿಲ್ಲ. ಸರ್ಕಾರ ಈಗ ತುರ್ತಾಗಿ ಮಧ್ಯಪ್ರವೇಶಿಸಬೇಕಾಗಿದೆ. ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ನೆರವಿಗೆ ಧಾವಿಸಿದ್ದಕ್ಕಿಂತ ವಿಭಿನ್ನ ನೆಲೆಯಲ್ಲಿ ಖಾಸಗಿ ಕಂಪನಿಗಳ ನೆರವಿಗೆ ಮುಂದಾಗಬೇಕಾಗಿದೆ. ಈ ವಲಯಕ್ಕೆ ನೀಡಬೇಕಾದ ಪರಿಹಾರದ ಕೊಡುಗೆ ಪರಿಶೀಲಿಸಲು ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿರುವುದು ಸ್ವಾಗತಾರ್ಹ.

ವರಮಾನ ಹಂಚಿಕೆ ಆಧರಿಸಿದ ಲೈಸನ್ಸ್‌ ಶುಲ್ಕ ವಸೂಲಿ ಬಗ್ಗೆ ಪರಾಮರ್ಶಿಸಬೇಕಾಗಿದೆ. ಅಂತರ್‌ ಸಂಪರ್ಕ ಶುಲ್ಕದ ವಿವಾದ ಇತ್ಯರ್ಥಪಡಿಸಬೇಕಾಗಿದೆ. ಡೇಟಾ ಮತ್ತು ಕರೆಗಳಿಗೆ ಸಮಾನ ಶುಲ್ಕ ವಿಧಿಸುವುದನ್ನು ಪರಿಶೀಲಿಸಬೇಕಾಗಿದೆ. ಡಿಜಿಟಲೀಕರಣದಿಂದ ಆರ್ಥಿಕ ಮುನ್ನಡೆಯನ್ನು ತ್ವರಿತವಾಗಿ ಸಾಧಿಸಲು ಸದೃಢ ಸ್ವರೂಪದ ದೂರಸಂಪರ್ಕ ವ್ಯವಸ್ಥೆಯ ಅಗತ್ಯ ಹೆಚ್ಚಿದೆ. ದೀರ್ಘಾವಧಿಯ ಪ್ರಯೋಜನಗಳನ್ನು ಗಮನದಲ್ಲಿ ಇಟ್ಟುಕೊಂಡು ಅಲ್ಪಾವಧಿಯ ಲಾಭ ಬಿಟ್ಟುಕೊಡಲು ಸರ್ಕಾರ ಮನಸ್ಸು ಮಾಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.