ADVERTISEMENT

ಸಂಪಾದಕೀಯ: ಡಿಜಿಟಲ್ ಮಾಧ್ಯಮ ನಿಯಂತ್ರಣ ಸದಾಶಯದ್ದೇ? ಅನುಚಿತವೇ?

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 19:30 IST
Last Updated 24 ಸೆಪ್ಟೆಂಬರ್ 2020, 19:30 IST
   

ಸುದರ್ಶನ್ ನ್ಯೂಸ್ ಹೆಸರಿನ ಟಿ.ವಿ. ವಾಹಿನಿಯೊಂದು ‘ಬಿಂದಾಸ್ ಬೋಲ್’ ಎನ್ನುವ ಕಾರ್ಯಕ್ರಮವೊಂದರಲ್ಲಿ ಒಂದು ಸಮುದಾಯವನ್ನು ಕೆಟ್ಟದ್ದಾಗಿ ಚಿತ್ರಿಸುವಂತಹ ಕಂತುಗಳನ್ನು ಪ್ರಸಾರ ಮಾಡಿದ ಆರೋಪ ಎದುರಿಸುತ್ತಿದೆ. ಈ ಕಾರ್ಯಕ್ರಮದ ಬಗ್ಗೆ ಈಗ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ‘ಡಿಜಿಟಲ್‌ ಮಾಧ್ಯಮಗಳನ್ನು ನಿಯಂತ್ರಣಕ್ಕೆ ಒಳಪಡಿಸುವ ಅಗತ್ಯವಿದೆ’ ಎಂದು ಪ್ರಮಾಣಪತ್ರವನ್ನು ಸಲ್ಲಿಸಿದೆ.

ಯಾರು ಬೇಕಿದ್ದರೂ ಡಿಜಿಟಲ್ ಮಾಧ್ಯಮವನ್ನು ಶುರು ಮಾಡಬಹುದು, ದ್ವೇಷಪೂರಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಹುದು, ದ್ವೇಷ ಹರಡುವ ಬರಹ ಪ್ರಕಟಿಸಬಹುದು. ಹಾಗಾಗಿ, ಸಂಪೂರ್ಣವಾಗಿ ಅನಿಯಂತ್ರಿತವಾಗಿರುವ ಇಂತಹ ಮಾಧ್ಯಮಗಳನ್ನು ನಿಯಂತ್ರಣಕ್ಕೆ ಒಳಪಡಿಸುವ ಅಗತ್ಯ ಇದೆ ಎಂದು ಕೇಂದ್ರವು ಹೇಳಿದೆ.

ಈ ವಾದವನ್ನು ಎಚ್ಚರಿಕೆಯಿಂದ ಸ್ವಾಗತಿಸಬಹುದು; ಕೆಲವು ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಒಂದಿಷ್ಟು ಪ್ರಶ್ನೆಗಳನ್ನು ಆಳುವವರ ಮುಂದಿರಿಸಬಹುದು. ಭಾರತದ ಆನ್‌ಲೈನ್‌ ಮಾಧ್ಯಮಗಳ ಮೂಲಕ ದ್ವೇಷ ಹರಡಲಾಗುತ್ತಿದೆ, ಇದು ಸಾವು–ನೋವು, ಆಸ್ತಿ ಹಾನಿಗೆ ಕೂಡ ಕಾರಣವಾಗಿದೆ ಎಂಬ ಮಾತಿಗೆ ಪುಷ್ಟಿ ನೀಡುವ ನಿದರ್ಶನಗಳು ಹಲವು ಇವೆ. ಡಿಜಿಟಲ್‌ ಜಗತ್ತಿನಲ್ಲಿ ಕ್ರಿಯಾಶೀಲ ಆಗಿರುವ ಮಾಧ್ಯಮಗಳು ಸಾಂಸ್ಥಿಕ ಚೌಕಟ್ಟಿನಲ್ಲಿ ಇರಲೇಬೇಕು ಎಂಬುದಿಲ್ಲ; ಅವು ಎಲ್ಲಿಂದ ಕೆಲಸ ನಿರ್ವಹಿಸುತ್ತವೆ ಎಂಬುದು ಎಲ್ಲ ಸಂದರ್ಭಗಳಲ್ಲೂ ತಿಳಿದಿರುವುದಿಲ್ಲ; ಅವುಗಳ ಹಿಂದೆ ಯಾರಿದ್ದಾರೆ ಎಂಬುದು ಓದುಗರಿಗೆ ಅಥವಾ ವೀಕ್ಷಕರಿಗೆ ಗೊತ್ತಿರುತ್ತದೆ ಎಂಬ ಖಾತರಿ ಇಲ್ಲ; ಇಂತಹ ಮಾಧ್ಯಮಗಳು ನಿಷ್ಪಕ್ಷಪಾತ ಸುದ್ದಿಯನ್ನು ನೀಡುತ್ತವೆಯೋ ಅಥವಾ ಸುದ್ದಿಯ ಹೆಸರಿನಲ್ಲಿ ನಿರ್ದಿಷ್ಟ ವಿಚಾರಗಳ ಪರ ಪ್ರಚಾರ ನಡೆಸುತ್ತವೆಯೋ ಎಂಬುದು ಕೆಲವೊಮ್ಮೆ ಮೇಲ್ನೋಟಕ್ಕೆ ಗೊತ್ತಾಗುವುದಿಲ್ಲ. ಇವೆಲ್ಲ ಕಾರಣಗಳು, ‘ಡಿಜಿಟಲ್ ಮಾಧ್ಯಮಗಳನ್ನು ನಿಯಂತ್ರಿಸಬೇಕು’ ಎಂಬ ವಾದಕ್ಕೆ ಪುಷ್ಟಿ ಕೊಡುತ್ತವೆ.

ADVERTISEMENT

ಮುದ್ರಣ ಮಾಧ್ಯಮದ ಗುಣಮಟ್ಟ ಕಾಯಬೇಕಾದ, ಅದನ್ನು ಇನ್ನಷ್ಟು ಉತ್ತಮಪಡಿಸಲು ಶ್ರಮಿಸಬೇಕಾದ ಹೊಣೆ ಹೊತ್ತಿರುವ ಸಂಸ್ಥೆ ಭಾರತೀಯ ಪತ್ರಿಕಾ ಮಂಡಳಿ. ಸಂಸತ್ತು ರೂಪಿಸಿದ ಒಂದು ಕಾಯ್ದೆಯ ಮೂಲಕ ಈ ಸಂಸ್ಥೆಗೆ ಜನ್ಮ ನೀಡಲಾಯಿತು. ಇಂಥದ್ದೊಂದು ಮಂಡಳಿಯನ್ನು ಡಿಜಿಟಲ್‌ ಮಾಧ್ಯಮಗಳಿಗಾಗಿ ರೂಪಿಸುವ ಅಥವಾ ಪತ್ರಿಕಾ ಮಂಡಳಿಯ ವ್ಯಾಪ್ತಿಗೆ ಡಿಜಿಟಲ್ ಮಾಧ್ಯಮಗಳನ್ನೂ ತರಬಲ್ಲ ಅಧಿಕಾರ ಇರುವುದು ಸಂಸತ್ತಿಗೆ. ಹೀಗಿರುವಾಗ, ಡಿಜಿಟಲ್ ಮಾಧ್ಯಮಗಳ ನಿಯಂತ್ರಣಕ್ಕೆ ನಿಯಮ ರೂಪಿಸಬಹುದು ಎನ್ನುವ ಮಾತನ್ನು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ಹೇಳಿರುವುದರ ಔಚಿತ್ಯ ಏನು ಎಂಬ ಪ್ರಶ್ನೆ ಮೂಡುತ್ತದೆ. ಇಂತಹ ಮಾಧ್ಯಮಗಳನ್ನು ಸದುದ್ದೇಶದಿಂದ ನಿಯಂತ್ರಿಸಬೇಕು ಎಂದಾದರೆ, ಅದಕ್ಕೆ ಸಂಬಂಧಿಸಿದ ಕರಡನ್ನು ವಿಸ್ತೃತ ಚರ್ಚೆಗಳ ಮೂಲಕ ಸಿದ್ಧಪಡಿಸಬಹುದು.

ಡಿಜಿಟಲ್ ಮಾಧ್ಯಮ ಆರಂಭಿಸುವುದು ಮುದ್ರಣ ಅಥವಾ ಟಿ.ವಿ. ಮಾಧ್ಯಮ ಆರಂಭಿಸುವುದಕ್ಕಿಂತ ಕಡಿಮೆ ಖರ್ಚಿನದು ಎಂಬ ನಂಬಿಕೆ ಇದೆ. ಹಾಗಾಗಿ, ಅತ್ಯಂತ ವೃತ್ತಿಪರ ಮನೋಭಾವದ ಪತ್ರಕರ್ತರು ಡಿಜಿಟಲ್ ಜಗತ್ತಿನಲ್ಲಿ ಜವಾಬ್ದಾರಿಯುತವಾಗಿ ‍ಪತ್ರಿಕಾವೃತ್ತಿ ನಡೆಸುತ್ತಿರುವ ಉದಾಹರಣೆಗಳೂ ಇವೆ. ‘ನಿಯಂತ್ರಣ’ದ ಹೆಸರಿನಲ್ಲಿ, ಡಿಜಿಟಲ್ ಜಗತ್ತಿನ ಮೇಲೆ ಚರ್ಚೆಯೇ ಇಲ್ಲದೆ ನಿಯಂತ್ರಣ ವಿಧಿಸಿದರೆ, ಒಳ್ಳೆಯ ಕೆಲಸಗಳಿಗೂ ಅಡಚಣೆ ಎದುರಾಗುವ ಅಪಾಯ ಇದೆ.

ಡಿಜಿಟಲ್ ಜಗತ್ತಿನ ಮಾಧ್ಯಮಗಳು ಕಾನೂನು ಮೀರಿ ಕಾರ್ಯಕ್ರಮ ಪ್ರಸಾರ ಮಾಡಿದರೆ, ವರದಿ ಪ್ರಕಟಿಸಿದರೆ ಅದನ್ನು ಈಗಿರುವ ಕೆಲವು ಕಾನೂನುಗಳ ಮೂಲಕವೇ ನಿಭಾಯಿಸಲು ಅವಕಾಶ ಇದೆ. ದ್ವೇಷ ಹರಡುವಿಕೆ, ಮಾನಹಾನಿ, ನ್ಯಾಯಾಂಗ ನಿಂದನೆ, ಶಾಂತಿ ಕದಡಲು ಯತ್ನಿಸುವುದು... ಇಂತಹ ಕೃತ್ಯಗಳನ್ನು ಹತ್ತಿಕ್ಕಲು ಹೊಸ ನಿಯಮಗಳನ್ನು ರೂಪಿಸಬೇಕಾದ ಅಗತ್ಯ ಕಾಣುವುದಿಲ್ಲ. ಬದಲಿಗೆ, ಡಿಜಿಟಲ್ ಜಗತ್ತಿನಲ್ಲಿ ಕಿಡಿಗೇಡಿತನದಿಂದ ವರ್ತಿಸುವವರ ವಿರುದ್ಧ ರಾಜಕೀಯವಾಗಿ ನಿಷ್ಪಕ್ಷಪಾತ ಧೋರಣೆಯಿಂದ ಕ್ರಮ ಜರುಗಿಸುವ ಇಚ್ಛಾಶಕ್ತಿಯ ಅಗತ್ಯ ಇದೆ.

ತನ್ನ ರಾಜಕೀಯ ನಿಲುವಿಗೆ ಪೂರಕವಾದ ‘ದ್ವೇಷ’ದ ಮಾತುಗಳನ್ನು ಪೋಷಿಸುವ, ತನ್ನ ನಿಲುವಿಗೆ ವಿರುದ್ಧವಾದ ‘ದ್ವೇಷ’ವನ್ನು ಮಾತ್ರ ಕಾನೂನಿನ ಮೂಲಕ ಹತ್ತಿಕ್ಕುವ ಧೋರಣೆಗೆ ಪಕ್ಷಭೇದ ಇಲ್ಲ. ಇಂತಹ ಧೋರಣೆಯಿಂದ ಬಿಡಿಸಿಕೊಳ್ಳಬೇಕಿರುವುದು ಕೂಡ ಇಂದಿನ ಅಗತ್ಯಗಳಲ್ಲಿ ಒಂದು. ಇಂಥವುಗಳ ಬಗ್ಗೆ ಗಮನ ನೀಡುವ ಬದಲು, ಚರ್ಚೆಯೇ ಇಲ್ಲದೆ, ಡಿಜಿಟಲ್ ಮಾಧ್ಯಮಗಳನ್ನು ನಿಯಂತ್ರಿಸಬೇಕು ಎಂದು ಹೇಳಿಬಿಡುವುದು ಸೂಕ್ತವಾಗಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.