ADVERTISEMENT

ಸಂಪಾದಕೀಯ | ಜವಾಹಿರಿ ಹತ್ಯೆ ಭಯೋತ್ಪಾದನೆ ವಿರುದ್ಧ ಮಹತ್ವದ ಗೆಲುವು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 20:45 IST
Last Updated 2 ಆಗಸ್ಟ್ 2022, 20:45 IST
ಅಲ್‌ ಕೈದಾ ಮುಖ್ಯಸ್ಥ ಅಯ್ಮನ್‌ ಅಲ್‌ ಜವಾಹಿರಿ
ಅಲ್‌ ಕೈದಾ ಮುಖ್ಯಸ್ಥ ಅಯ್ಮನ್‌ ಅಲ್‌ ಜವಾಹಿರಿ   

ಅಲ್‌ ಕೈದಾ ಮುಖ್ಯಸ್ಥ ಅಯ್ಮನ್‌ ಅಲ್‌ ಜವಾಹಿರಿಯನ್ನು ಅಮೆರಿಕವು ಡ್ರೋನ್ ದಾಳಿಯಲ್ಲಿ ಹತ್ಯೆ ಮಾಡಿರುವುದು ಭಯೋತ್ಪಾದನೆಯ ವಿರುದ್ಧ ಜಗತ್ತು ಸಾರಿರುವ ಯುದ್ಧಕ್ಕೆ ಸಿಕ್ಕ ಮಹತ್ವದ ಜಯ. ಅಲ್‌ ಕೈದಾದ ಮುಖ್ಯಸ್ಥನಾಗಿದ್ದ ಒಸಾಮಾ ಬಿನ್‌ ಲಾಡೆನ್‌ಗೆ ಈತ ಸಲಹೆಗಾರನಾಗಿದ್ದ. 2011ರಲ್ಲಿಲಾಡೆನ್‌ ಹತ್ಯೆಯಾದ ಬಳಿಕ ಜವಾಹಿರಿ, ಅಲ್‌ ಕೈದಾದ ಮುಖ್ಯಸ್ಥನಾದ.

ಬಿನ್‌ ಲಾಡೆನ್‌ನಷ್ಟು ಚಾಣಾಕ್ಷನಲ್ಲದೇ ಇದ್ದರೂ ಅತ್ಯಂತ ಕಷ್ಟಕರ ಸಂದರ್ಭದಲ್ಲಿ ಅಲ್‌ ಕೈದಾವನ್ನು ಈತ ಮುನ್ನಡೆಸಿದ್ದ.ಅಮೆರಿಕ ಹಾಗೂ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಭಯೋತ್ಪಾದನಾ ಸಂಘಟನೆಯ ಜತೆಗೂ ಹೋರಾಟ ನಡೆಸಬೇಕಿದ್ದ ಸನ್ನಿವೇಶವನ್ನು ನಿಭಾಯಿಸಿದ್ದ. 2014ರಿಂದಲೇ ಅಲ್‌ ಕೈದಾವನ್ನು ಮೂಲೆಗುಂಪು ಮಾಡುವಲ್ಲಿ ಐಎಸ್‌ ಯಶಸ್ವಿಯಾಗಿದೆ. ಹಾಗಿದ್ದರೂ ಜಿಹಾದಿ ವಲಯದಲ್ಲಿ ಅಲ್‌ ಕೈದಾ ತನ್ನ ಪ್ರಸ್ತುತತೆಯನ್ನು ಉಳಿಸಿ ಕೊಂಡಿತ್ತು. ಇದರಲ್ಲಿ ಜವಾಹಿರಿಯ ಪಾತ್ರ ಮಹತ್ವದ್ದಾಗಿತ್ತು. ಈಗ, ಈತನ ಸಾವಿನೊಂದಿಗೆ ಅಲ್‌ ಕೈದಾ ಇನ್ನಷ್ಟು ದುರ್ಬಲವಾಗಿದೆ. ಜವಾಹಿರಿಯ ಉತ್ತರಾಧಿಕಾರಿ ಯಾರು ಎಂಬುದು ಸ್ಪಷ್ಟವಿಲ್ಲ. ಹಾಗಾಗಿ, ಅಲ್‌ ಕೈದಾ ನಾಯಕತ್ವಕ್ಕಾಗಿ ಸಂಘರ್ಷ ಏರ್ಪಡುವ ಸಾಧ್ಯತೆಯೂ ಇದೆ.

ಅಮೆರಿಕದ ದಾಳಿಯ ಸಂದರ್ಭದಲ್ಲಿ ಜವಾ ಹಿರಿಯು ಕಾಬೂಲ್‌ನಲ್ಲಿರುವ ‘ಸುರಕ್ಷಿತ ಮನೆ’ಯಲ್ಲಿ ಇದ್ದ. ಅಫ್ಗಾನಿಸ್ತಾನದ ರಾಜಧಾನಿಯಲ್ಲಿಯೇ ಈತ ಆಶ್ರಯ ಪಡೆದುಕೊಂಡಿದ್ದ ಎಂಬ ವಾಸ್ತವವು ಅಲ್ಲಿನ ತಾಲಿಬಾನ್‌ ಸರ್ಕಾರವು ಈತನಿಗೆ ಯಾವ ಮಟ್ಟದ ರಕ್ಷಣೆ ಒದಗಿಸಿತ್ತು ಎಂಬುದನ್ನು ತೋರಿಸುತ್ತದೆ. ಅಲ್‌ ಕೈದಾ ಮತ್ತು ಇತರ ಎಲ್ಲ ಉಗ್ರಗಾಮಿ ಸಂಘಟನೆಗಳ ಜತೆಗಿನ ಸಂಪರ್ಕ ಕಡಿದುಕೊಳ್ಳುವುದಾಗಿ ತಾಲಿಬಾನ್‌ ಸರ್ಕಾರವು ಭರವಸೆ ಕೊಟ್ಟಿತ್ತು.

ADVERTISEMENT

ಅಮೆರಿಕ ಮತ್ತು ತಾಲಿಬಾನ್‌ ನಡುವೆ 2020ರ ಫೆಬ್ರುವರಿಯಲ್ಲಿ ನಡೆದ ಒಪ್ಪಂದದಲ್ಲಿ ಈ ಭರವಸೆ ಕೊಡಲಾಗಿತ್ತು. ಇಂತಹ ಸಂಘಟನೆಗಳು ಅಫ್ಗಾನಿಸ್ತಾನದಿಂದ ಕಾರ್ಯಾಚರಣೆ ನಡೆಸಲು ಅವಕಾಶ ಕೊಡುವುದಿಲ್ಲ ಎಂದೂ ಹೇಳಿತ್ತು. ಅಲ್‌ ಕೈದಾ ಮುಖ್ಯಸ್ಥನಿಗೆ ಆಶ್ರಯ ಕೊಡುವ ಮೂಲಕ ತಾನು ಬದಲಾಗಿಲ್ಲ ಎಂಬುದನ್ನು ತಾಲಿಬಾನ್‌ ತೋರಿಸಿದೆ. ಅಮೆರಿಕದಿಂದ ಉದಾರವಾಗಿ ಆರ್ಥಿಕ ನೆರವು ಪಡೆದುಕೊಳ್ಳುವುದಕ್ಕಾಗಿ, ಜವಾಹಿರಿ ಇದ್ದ ಸ್ಥಳದ ಬಗ್ಗೆ ಪಾಕಿಸ್ತಾನದ ಸೇನೆಯು ಅಮೆರಿಕಕ್ಕೆ ಮಾಹಿತಿ ನೀಡಿರಬಹುದು ಎಂಬ ಮಾತು ಇದೆ.

ಅಲ್‌ ಕೈದಾ ಜತೆಗೆ ನಂಟು ಬೇಡ ಎಂದು ಪ್ರತಿಪಾದಿಸುವ ತಾಲಿಬಾನ್‌ನ ಒಂದು ಬಣವು ಅಮೆರಿಕಕ್ಕೆ ಮಾಹಿತಿ ನೀಡಿರುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ಇದು ನಿಜವಾಗಿದ್ದರೆ, ತಾಲಿಬಾನ್‌ ಸರ್ಕಾರ
ದೊಳಗಿನ ಕಾಳಗ ತೀವ್ರಗೊಳ್ಳಬಹುದು. ದಕ್ಷಿಣ ಏಷ್ಯಾದ ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಕ್ಷೋಭೆಗೆ ಇದು ಕಾರಣವಾಗಬಹುದು.

ಭಾರತದೊಳಕ್ಕೆ ಅಲ್‌ ಕೈದಾ ನುಸುಳುವಂತೆ ಮಾಡಲು ಜವಾಹಿರಿ ಪ್ರಯತ್ನಿಸಿದ್ದ. ಅದಕ್ಕಾಗಿ ಆತ ಪ್ರತ್ಯೇಕ ಘಟಕವೊಂದನ್ನು ಕೂಡ ರಚಿಸಿಕೊಂಡಿದ್ದ. ಆದರೆ, ಈ ಪ್ರಯತ್ನಕ್ಕೆ ಅಂತಹ ಯಶಸ್ಸು ದೊರೆಯಲಿಲ್ಲ. ಜಿಹಾದಿ ಗುಂಪುಗಳಿಗೆ ಭಾರತೀಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿಕೊಳ್ಳುವುದಕ್ಕೂ ಆತ ಬಯಸಿದ್ದ. ಇಸ್ಲಾಂ ಮೇಲೆ ಆಗುತ್ತಿರುವ ದಾಳಿಯ ವಿರುದ್ಧ ಹೋರಾಡಬೇಕು ಎಂದು ಆಗಾಗ ಬಿಡುಗಡೆ ಮಾಡಿದ್ದ ವಿಡಿಯೊಗಳಲ್ಲಿ ಈತ ವಿನಂತಿ ಮಾಡಿಕೊಂಡಿದ್ದ. ಬಿಜೆಪಿಯ ವಕ್ತಾರರಾಗಿದ್ದ ನೂಪುರ್ ಶರ್ಮಾ ಅವರು ಪ್ರವಾದಿ ಮಹಮ್ಮದ್‌ ಕುರಿತು ನೀಡಿದ್ದ ‘ಅವಹೇಳನಕಾರಿ’ ಹೇಳಿಕೆಯ ಬಳಿಕ ಭಾರತದ ವಿರುದ್ಧ ಜಿಹಾದ್‌ಗೂ ಜವಾಹಿರಿ ಕರೆ ನೀಡಿದ್ದ.

ಈತನ ಸಾವಿನೊಂದಿಗೆ ಅಲ್‌ ಕೈದಾ ಇನ್ನಷ್ಟು ದುರ್ಬಲಗೊಳ್ಳುತ್ತದೆ. ಆದರೆ, ಬಲ ಉಡುಗಿಲ್ಲ ಮತ್ತು ಪ್ರಸ್ತುತತೆ ಮಾಸಿಲ್ಲ ಎಂಬುದನ್ನು ತೋರಿಸಲು ಅಲ್‌ ಕೈದಾದ ಉಗ್ರರು ಸಂದರ್ಭಕ್ಕಾಗಿ ಕಾಯಬಹುದು. ಹಾಗಾಗಿ, ಭಯೋತ್ಪಾದನೆ ಮೇಲೆ ಭಾರತವು ಇರಿಸಿದ್ದ ನಿಗಾವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಭಯೋತ್ಪಾದನೆಯ ವಿರುದ್ಧ ಭಾರತವು ನಡೆಸುತ್ತಿರುವ ಹೋರಾಟವು ತೋಳ್ಬಲ ಮತ್ತು ಸೇನಾ ಕ್ರಮಕ್ಕೆ ಸೀಮಿತ ಆಗಬಾರದು. ದೇಶದೊಳಗೆ ಸೃಷ್ಟಿಯಾಗಿರುವ ಅತೃಪ್ತಿಯನ್ನು ಶಮನಗೊಳಿಸುವ ಪ್ರಯತ್ನ ಆಗಬೇಕು. ಜವಾಹಿರಿ ಸಾವಿನ ನಂತರದಲ್ಲಿ ಎದುರಾಗುವ ಸನ್ನಿವೇಶವನ್ನು ಎದುರಿಸಲು ಭಾರತ ಮತ್ತು ಇತರ ದೇಶಗಳು ಸಜ್ಜಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.