ADVERTISEMENT

ಸಂಪಾದಕೀಯ: ರೆಪೊ ದರದಲ್ಲಿ ಯಥಾಸ್ಥಿತಿ, ನಿಯಂತ್ರಣವೂ ಬೇಕು

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 19:43 IST
Last Updated 10 ಡಿಸೆಂಬರ್ 2021, 19:43 IST
ಸಂಪಾದಕೀಯ:
ಸಂಪಾದಕೀಯ:   

ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯು (ಎಂಪಿಸಿ) ತನ್ನ ದ್ವೈಮಾಸಿಕ ಸಭೆಯಲ್ಲಿ, ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಇರುವ ತೀರ್ಮಾನವನ್ನು ಕೈಗೊಂಡಿದೆ. ಅರ್ಥ ವ್ಯವಸ್ಥೆಯ ಚೇತರಿಕೆಗೆ ಹಣಕಾಸು ನೀತಿಯ ಬೆಂಬಲದ ಅಗತ್ಯ ಇದೆ ಎಂದು ಆರ್‌ಬಿಐ ಹೇಳಿದೆ. ಹೊಂದಾಣಿಕೆಯ ಹಣಕಾಸು ನೀತಿಯನ್ನು ಮುಂದುವರಿಸುವ ತೀರ್ಮಾನವನ್ನೂ ಸಮಿತಿಯು ಕೈಗೊಂಡಿದೆ. ರೆ‍ಪೊ ದರದಲ್ಲಿ ಬದಲಾವಣೆ ಮಾಡದೆ ಇರುವುದು ಮತ್ತು ಹೊಂದಾಣಿಕೆಯ ನಿಲುವನ್ನು ಮುಂದುವರಿಸಿದ್ದು ನಿರೀಕ್ಷಿತವಾಗಿಯೇ ಇದೆ. ಅರ್ಥ ವ್ಯವಸ್ಥೆಗೆ ಹಣಕಾಸು ನೀತಿಯ ಬೆಂಬಲದ ಅಗತ್ಯ ಇನ್ನೂ ಇದೆ ಎಂದು ಹೇಳಿರುವುದು ಅರ್ಥ ವ್ಯವಸ್ಥೆಯು ಈಗಲೂ ಸ್ಥಿರತೆಯ ಹಾದಿಗೆ ಬಂದಿಲ್ಲ ಎಂಬುದನ್ನು ಸೂಚಿಸುವಂತೆ ಇದೆ.

ಕೊರೊನಾ ವೈರಾಣುವಿನ ಓಮೈಕ್ರಾನ್ ರೂಪಾಂತರಿ ತಳಿಯು ದೇಶದಲ್ಲಿ ಅಲ್ಲಲ್ಲಿ ಹರಡುತ್ತಿದ್ದು, ಇದು ಅರ್ಥ ವ್ಯವಸ್ಥೆಯ ಚೇತರಿಕೆಯ ಮೇಲೆ ಒಂದಿಷ್ಟು ದುಷ್ಪರಿಣಾಮಗಳನ್ನು ಬೀರಬಹುದೇ ಎಂಬ ಆತಂಕ ಎದುರಾಗಿರುವುದು ನಿಜ. ಇದನ್ನು ಸಮಿತಿಯು ಗುರುತಿಸಿದೆ. ಹೀಗಾಗಿ ಆರ್‌ಬಿಐ ಪ್ರಸಕ್ತ ಹಣಕಾಸು ವರ್ಷದ ಮೂರನೆಯ ತ್ರೈಮಾಸಿಕದಲ್ಲಿ (ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಅವಧಿ) ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ದರದ ಅಂದಾಜನ್ನು ತುಸು ತಗ್ಗಿಸಿದೆ. ಮೂರನೆಯ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ 6.8ರಷ್ಟು ಇರಲಿದೆ ಎಂದು ಈ ಮೊದಲು ಅಂದಾಜು ಮಾಡಿದ್ದ ಆರ್‌ಬಿಐ ಈಗ ಅದನ್ನು ಶೇ 6.56ಕ್ಕೆ ಇಳಿಕೆ ಮಾಡಿದೆ. ಆದರೆ, ಇಡೀ ವರ್ಷದ (2021–22) ಜಿಡಿಪಿ ಬೆಳವಣಿಗೆ ದರದ ಅಂದಾಜಿನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ವಾರ್ಷಿಕ ಜಿಡಿಪಿ ಬೆಳವಣಿಗೆ ದರವು ಶೇ 9.5ರ ಮಟ್ಟದಲ್ಲಿ ಇರಲಿದೆ ಎನ್ನುವ ಮಾತನ್ನು ಆರ್‌ಬಿಐ ಪುನರುಚ್ಚಾರ ಮಾಡಿದೆ. ಸಾರ್ವಜನಿಕರಿಂದ ಮಾರುಕಟ್ಟೆಯಲ್ಲಿ ಸೃಷ್ಟಿಯಾಗುವ ಬೇಡಿಕೆಯುದೇಶದ ಆರ್ಥಿಕ ಬೆಳವಣಿಗೆಯ ಮುಖ್ಯ ಚಾಲಕ ಶಕ್ತಿಗಳಲ್ಲಿ ಒಂದು. ಈ ಬೇಡಿಕೆಯು ಕಡಿಮೆ ಮಟ್ಟದಲ್ಲಿ ಇದೆ. ಖಾಸಗಿ ವಲಯದಿಂದ ಆಗುವ ಬಂಡವಾಳ ವೆಚ್ಚವು ಸಾಂಕ್ರಾಮಿಕಕ್ಕೂ ಮೊದಲಿನ ಹಂತವನ್ನು ತಲುಪಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಇನ್ನೂ ಇದೆ. ಪೂರೈಕೆ ವ್ಯವಸ್ಥೆಯಲ್ಲಿ ಕೂಡ ಒಂದಿಷ್ಟು ಅಡೆತಡೆಗಳು ಉಳಿದಿವೆ.

ದೇಶದಲ್ಲಿನ ಆರ್ಥಿಕ ಚಟುವಟಿಕೆಗಳು ಚುರುಕು ಪಡೆದುಕೊಳ್ಳುತ್ತಿವೆ ಎಂದು ಎಂಪಿಸಿ ಹೇಳಿದೆ. ಆರ್ಥಿಕ ಪುನಶ್ಚೇತನವು ದಿನಕಳೆದಂತೆಲ್ಲ ವಿಸ್ತೃತ ನೆಲೆಯಲ್ಲಿ ಆಗುತ್ತಿದೆ ಎಂದು ಅದು ಹೇಳಿದೆ. ದೀರ್ಘಾವಧಿಗೆ ಸಾಗುವ, ಬಲಿಷ್ಠವಾದ ಮತ್ತು ಎಲ್ಲ ವಲಯಗಳನ್ನೂ ಒಳಗೊಳ್ಳುವ ಆರ್ಥಿಕ ಪುನಶ್ಚೇತನದ ನಿರೀಕ್ಷೆ ಇದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರ ದರವು ಶೇ 5.3ರ ಪ್ರಮಾಣದಲ್ಲಿ ಇರಲಿದೆ ಎಂದು ಎಂಪಿಸಿ ಹೇಳಿದೆ. ಮೂರು ಮತ್ತು ನಾಲ್ಕನೆಯ ತ್ರೈಮಾಸಿಕಗಳಲ್ಲಿ ಹಣದುಬ್ಬರದ ಪ್ರಮಾಣದಲ್ಲಿ ತುಸು ಬದಲಾವಣೆಗಳು ಆಗಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಎಕ್ಸೈಸ್ ಸುಂಕ ಮತ್ತು ಮೌಲ್ಯವರ್ಧಿತ ತೆರಿಗೆ ಪ್ರಮಾಣವನ್ನು ಈಚೆಗೆ ತುಸು ತಗ್ಗಿಸಿರುವ ಪರಿಣಾಮವಾಗಿ, ಈ ತೈಲೋತ್ಪನ್ನಗಳ ಬೆಲೆಯು ದೇಶಿ ಮಾರುಕಟ್ಟೆಯಲ್ಲಿ ಕಡಿಮೆ ಆಗಿದೆ. ಇದರಿಂದ ಒಂದಿಷ್ಟು ಒಳಿತು ಆಗಲಿದೆ ಎನ್ನುವುದು ಎಂಪಿಸಿ ಅಭಿಮತ. ಆದರೆ, ಇಷ್ಟೆಲ್ಲದರ ನಡುವೆ ಹಣದುಬ್ಬರದ ಪರಿಣಾಮವನ್ನು ಕಡೆಗಣಿಸುವಂತೆ ಇಲ್ಲ. ಹಣದುಬ್ಬರದಿಂದ ಗಂಭೀರ ಪರಿಣಾಮಗಳು ಇರುವುದಿಲ್ಲ ಎಂದು ಭಾವಿಸಬಾರದು.

ADVERTISEMENT

ಆರ್ಥಿಕ ಬೆಳವಣಿಗೆಗೆ ಇಂಬು ನೀಡುವ ರೀತಿಯಲ್ಲಿ ಹಣಕಾಸು ನೀತಿಗಳು ಇರಬೇಕು ಎಂಬ ವಾದವು ಬಲವಾಗಿಯೇ ಇದೆ. ಆದರೆ, ಎಂಪಿಸಿ ಪಾಲಿನ ಮೂಲ ಕರ್ತವ್ಯಗಳಲ್ಲಿ ಹಣದುಬ್ಬರದ ನಿಯಂತ್ರಣವೂ ಒಂದು. ಈ ಕರ್ತವ್ಯ ನಿಭಾಯಿಸುವ ವಿಚಾರದಲ್ಲಿ ಎಡವಬಾರದು. ವ್ಯವಸ್ಥೆಯಲ್ಲಿ ನಗದು ಹರಿವು ಹೆಚ್ಚಿಸಲು ರೆಪೊ ದರವನ್ನು ಕಡಿಮೆ ಮಟ್ಟದಲ್ಲಿಯೇ ಇರಿಸುವ ತೀರ್ಮಾನ ಸದ್ಯದ ಸಂದರ್ಭದಲ್ಲಿ ಸರಿ ಇರಬಹುದು. ಆದರೆ, ಹಣದ ಹರಿವು ಹೆಚ್ಚಿಸುವ ಭರದಲ್ಲಿ ಹಣದುಬ್ಬರ ಪ್ರಮಾಣವು ಹಿತಕರ ಮಟ್ಟಕ್ಕಿಂತ ಜಾಸ್ತಿ ಆಗದಂತೆಯೂ ನೋಡಿಕೊಳ್ಳಬೇಕಿರುವುದು ಸಮಿತಿಯ ಪ್ರಧಾನ ಕೆಲಸಗಳಲ್ಲಿ ಒಂದು. ಮುಂದಿನ ದಿನಗಳಲ್ಲಿ ತರಕಾರಿ ಬೆಲೆ ತಗ್ಗಲಿದೆ, ಕೇಂದ್ರ ಸರ್ಕಾರ ಕೈಗೊಂಡ ಕೆಲವು ಕ್ರಮಗಳ ಪರಿಣಾಮವಾಗಿ ಅಡುಗೆ ಎಣ್ಣೆ ಬೆಲೆ ಇಳಿಕೆ ಆಗಲಿದೆ ಎಂಬ ನಿರೀಕ್ಷೆಯಲ್ಲಿ ಹಣದುಬ್ಬರ ಶೇ 5.3ರ ಮಟ್ಟದಲ್ಲಿ ಇರಲಿದೆ ಎಂದು ಎಂಪಿಸಿ ಅಂದಾಜು ಮಾಡಿದೆ. ಈ ಮಟ್ಟವು ಎಂಪಿಸಿ ತಾನು ನಿಗದಿ ಮಾಡಿಕೊಂಡಿರುವ ಹಿತಕರ ಮಟ್ಟವಾದ ಶೇ 4ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿಯೇ ಇದೆ ಎಂಬುದನ್ನು ಗಮನಿಸಬೇಕು. ಆರ್‌ಬಿಐ ತಾನು ಈಗ ತೆಗೆದುಕೊಂಡಿರುವ ಹಣಕಾಸಿನ ನಿಲುವನ್ನು ಬದಲಿಸಬೇಕಾದ, ರೆಪೊ ದರ ಹೆಚ್ಚಿಸಿ ನಗದು ಹರಿವನ್ನು ಕಡಿಮೆ ಮಾಡಬೇಕಾದ ಸಂದರ್ಭ ಶೀಘ್ರವೇ ಎದುರಾಗಬಹುದು. ಆರ್ಥಿಕ ಚಟುವಟಿಕೆಗಳಿಗೆ ಬಿರುಸು ತಂದುಕೊಡುವ ಹೊಣೆಯು ಸರ್ಕಾರಗಳ ಮೇಲೆಯೂ ಇದೆ. ಅದು ಆರ್‌ಬಿಐ ಕೆಲಸವೊಂದೇ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.