ADVERTISEMENT

ಟ್ರಾನ್ಸ್‌ಜೆಂಡರ್ ಮಸೂದೆ ಮರುಪರಿಶೀಲನೆ ಅವಶ್ಯ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 19:36 IST
Last Updated 19 ಡಿಸೆಂಬರ್ 2018, 19:36 IST
   

ಲೋಕಸಭೆಯಲ್ಲಿ ಸೋಮವಾರ ಅನುಮೋದನೆ ಪಡೆದ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಮಸೂದೆ –2016’ ಬಗ್ಗೆ ತೀವ್ರ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಹೀಗಾಗಿ, ಈ ಮಸೂದೆಯು ಇನ್ನೂ ಹೆಚ್ಚಿನ ಚರ್ಚೆ ಹಾಗೂ ಸಮಾಲೋಚನೆಗಳಿಗೆ ಒಳಪಡುವುದು ಅಗತ್ಯ. ಟ್ರಾನ್ಸ್‌ಜೆಂಡರ್ ಸಮುದಾಯದ ವಿಚಾರಗಳನ್ನು ಪರಿಶೀಲಿಸುವುದಕ್ಕಾಗಿ 2013ರಲ್ಲಿ ತಜ್ಞರ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿತ್ತು.

ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಸರ್ಕಾರಿ ದಾಖಲೆಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಅಸ್ಪೃಶ್ಯತೆ ಹಾಗೂ ತಾರತಮ್ಯವನ್ನು ಈ ಸಮುದಾಯ ಎದುರಿಸುತ್ತಿದೆ ಎಂದು ಈ ಸಮಿತಿಯು ವರದಿ ನೀಡಿತ್ತು. ನಂತರ, ಗಂಡು, ಹೆಣ್ಣು ಅಥವಾ ತೃತೀಯ ಲಿಂಗಿ ಎಂದು ಗುರುತಿಸಿಕೊಳ್ಳಲು ಟ್ರಾನ್ಸ್‌ಜೆಂಡರ್ ವ್ಯಕ್ತಿಯ ಸ್ವಯಂ ಅಧಿಕಾರದ ಹಕ್ಕನ್ನು ಸುಪ್ರೀಂ ಕೋರ್ಟ್ 2014ರಲ್ಲಿ ಗುರುತಿಸಿತ್ತು. ಅಲ್ಲದೆ, ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾನೂನು ಮಾನ್ಯತೆಯನ್ನು ದೊರಕಿಸಿಕೊಡಬೇಕು ಎಂದೂ ಸುಪ್ರೀಂ ಕೋರ್ಟ್ ತಾಕೀತು ಮಾಡಿತ್ತು.

ಈ ಸಮುದಾಯದ ಜನರು ಎದುರಿಸುವ ಸಾಮಾಜಿಕ ತಾರತಮ್ಯ ನಿವಾರಣೆಗೆ ಕ್ರಮಗಳನ್ನು ಕೈಗೊಳ್ಳುತ್ತಲೇ ಇವರಿಗಾಗಿಯೇ ವಿಶೇಷ ಸಾಮಾಜಿಕ ಕ್ಷೇಮಾಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು ಎಂದೂ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಇದಾದ ನಾಲ್ಕು ವರ್ಷಗಳ ನಂತರ, ಹಲವು ಅನುಮಾನಗಳು ಚರ್ಚೆಗೆ ಒಳಪಟ್ಟಿರುವಾಗಲೇ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ಮಸೂದೆಗೆ ಲೋಕಸಭೆ ಅಂಗೀಕಾರ ನೀಡಿದೆ. ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಪಡೆದುಕೊಳ್ಳಲಾಗಿದ್ದ ಅನೇಕ ಗಳಿಕೆಗಳಿಗೆ ಈ ಮಸೂದೆಯಲ್ಲಿರುವ ಅಂಶಗಳು ಅಡ್ಡಿ ಉಂಟುಮಾಡಲಿವೆ ಎಂಬುದು ಈಗ ವ್ಯಕ್ತವಾಗುತ್ತಿರುವ ಪ್ರಮುಖ ಟೀಕೆ. ‘ಇದು ಹಿನ್ನಡೆಯದು’ ಎಂದು ಈ ಲೈಂಗಿಕ ಅಲ್ಪಸಂಖ್ಯಾತ ಸಮುದಾಯ ಮಾಡುತ್ತಿರುವ ಟೀಕೆಗಳನ್ನು ಪರಾಮರ್ಶಿಸಬೇಕಾದುದು ಅಗತ್ಯ. ಮಸೂದೆಯನ್ನು ಹೆಚ್ಚಿನ ಚರ್ಚೆಗೆ ಒಳಪಡಿಸಬೇಕು.

ADVERTISEMENT

ಲಿಂಗತ್ವ ಎನ್ನುವುದು ವ್ಯಕ್ತಿಗತವಾದ ಅನುಭವ ಎಂಬುದನ್ನು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಆಂದೋಲನ, ಉದ್ದಕ್ಕೂ ಪ್ರತಿಪಾದಿಸಿ ಕೊಂಡೇ ಬರುತ್ತಿದೆ. ತಾನು ಗಂಡು, ಹೆಣ್ಣು ಅಥವಾ ಎರಡೂ ಅಲ್ಲ ಎಂದು ಹೇಳಿಕೊಳ್ಳುವುದು ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರ. ಇಲ್ಲಿ ಸಮಾಜದ ಅಧಿಕಾರ ಚಲಾವಣೆಗೆ ಅವಕಾಶವೇ ಇಲ್ಲ. ಈ ಸ್ವಾತಂತ್ರ್ಯ, ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಅಂತರ್ಗತವಾಗಿದೆ. ಆದರೆ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಮಸೂದೆಯಲ್ಲಿ ಈ ಅಂಶ ಪೂರ್ಣ ಮಾಯವಾಗಿದೆ.

ಭಾಗಶಃ ಹೆಣ್ಣು ಅಥವಾ ಗಂಡು, ಹೆಣ್ಣು –ಗಂಡು ಎರಡೂ ಆಗಿರುವುದು, ಗಂಡೂ ಅಲ್ಲ, ಹೆಣ್ಣೂ ಅಲ್ಲ ಎನ್ನುವ ವ್ಯಕ್ತಿಗಳನ್ನು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳೆಂದು ಈ ಮಸೂದೆ ವಿವರಿಸುತ್ತದೆ. ಆದರೆ, ಈ ಮಸೂದೆಯ ಅನ್ವಯ ಹಕ್ಕುಗಳನ್ನು ಪ್ರತಿಪಾದಿಸಲು ಟ್ರಾನ್ಸ್‌ಜೆಂಡರ್ ವ್ಯಕ್ತಿಯು ತನ್ನ ಲಿಂಗತ್ವ ಅಸ್ಮಿತೆಯ ಪ್ರಮಾಣಪತ್ರವನ್ನು ಪಡೆದುಕೊಳ್ಳಲೇಬೇಕು. ವ್ಯಕ್ತಿಗಳು ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ ಸೇರುತ್ತಾರೋ ಇಲ್ಲವೋ ಎಂಬುದನ್ನು ಪ್ರಮಾಣೀಕರಿಸುವ ಅಧಿಕಾರವನ್ನು ಜಿಲ್ಲಾ ಪರಿಶೀಲನಾ ಸಮಿತಿಗೆ ವಹಿಸುವ ವಿಚಾರ ಮಸೂದೆಯಲ್ಲಿದೆ.

ಈ ಪರಿಶೀಲನಾ ಸಮಿತಿಯ ಶಿಫಾರಸಿನ ಮೇಲೆ ಜಿಲ್ಲಾ ಮ್ಯಾಜಿಸ್ಟ್ರೇಟರು ಪ್ರಮಾಣಪತ್ರವನ್ನು ನೀಡುತ್ತಾರೆ. ಈ ಸಮಿತಿಯಲ್ಲಿ ವೈದ್ಯಕೀಯ ಅಧಿಕಾರಿ, ಮಾನಸಿಕ ತಜ್ಞ , ಜಿಲ್ಲಾ ಕ್ಷೇಮಾಭಿವೃದ್ಧಿ ಅಧಿಕಾರಿ, ಸರ್ಕಾರಿ ಅಧಿಕಾರಿ ಹಾಗೂ ಟ್ರಾನ್ಸ್‌ಜೆಂಡರ್ ವ್ಯಕ್ತಿಯೊಬ್ಬರು ಇರುತ್ತಾರೆ. ಇಂತಹದ್ದೊಂದು ಪ್ರಕ್ರಿಯೆ ಸೃಷ್ಟಿಸಬಹುದಾದ ಸಮಸ್ಯೆಗಳ ಬಗ್ಗೆ ಆತಂಕ ವ್ಯಕ್ತವಾಗುತ್ತಿರುವುದು ಸಹಜ. ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ಉದ್ಯೋಗ ಮೀಸಲು ಅಥವಾ ಶೈಕ್ಷಣಿಕ ಅವಕಾಶಗಳನ್ನು ಮೀಸಲಿಡುವ ವಿಚಾರದ ಬಗ್ಗೆಯೂ ಈ ಮಸೂದೆ ಮೌನ ತಾಳಿದೆ. ಸಾಮಾಜಿಕ ಹಾಗೂ ಆರ್ಥಿಕ ತಾರತಮ್ಯದ ವಿರುದ್ಧ ಶಿಕ್ಷೆಯ ವಿಧಾನಗಳ ಬಗೆಗೂ ಯಾವುದೇ ಪ್ರಸ್ತಾಪ ಇಲ್ಲ.

ಈಗಿರುವ ಕೆಲವು ಕ್ರಿಮಿನಲ್ ಹಾಗೂ ವೈಯಕ್ತಿಕ ಕಾನೂನುಗಳು, ಪುರುಷ ಹಾಗೂ ಮಹಿಳೆ ಎಂದಷ್ಟೇ ಲಿಂಗತ್ವಗಳನ್ನು ಗುರುತಿಸುತ್ತವೆ. ಈ ಎರಡೂ ಲಿಂಗತ್ವದ ಜೊತೆ ಗುರುತಿಸಿಕೊಳ್ಳದ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ಇಂತಹ ಕಾನೂನುಗಳು ಹೇಗೆ ಅನ್ವಯವಾಗುತ್ತವೆ ಎಂಬುದು ಸ್ಪಷ್ಟವಿಲ್ಲ. ಇದೇ ವಿಷಯಕ್ಕೆ ಸಂಬಂಧಿಸಿದಂತೆ 2014ರಲ್ಲಿಡಿಎಂಕೆ ನಾಯಕ ತಿರುಚ್ಚಿ ಶಿವ ಅವರು ಖಾಸಗಿ ಸದಸ್ಯರ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ್ದರು. 2015ರಲ್ಲಿ ಈ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವೂ ಆಗಿದೆ. ಶಿವ ಅವರ ಮಸೂದೆಯಲ್ಲಿರುವ ಪ್ರಗತಿಪರ ಅಂಶಗಳೂ ಈಗಿನ ಮಸೂದೆಯಲ್ಲಿಲ್ಲ ಎಂಬುದು ವಿಷಾದನೀಯ. ಹೀಗಾಗಿ ರಾಜ್ಯಸಭೆಯಲ್ಲಿ ಈ ಮಸೂದೆಯನ್ನು ಮಂಡಿಸುವ ಸಮಯದಲ್ಲಿ ದೋಷಗಳನ್ನು ಸರಿಪಡಿಸುವುದು ಅವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.