
ಅಮೆರಿಕದೊಂದಿಗಿನ ಭಾರತದ ವ್ಯಾಪಾರ ಒಪ್ಪಂದವು ಮಹತ್ವದ್ದಾಗಿದ್ದರೂ, ಕೃಷಿ ವಲಯದ ಹಿತಾಸಕ್ತಿಗೆ ಸಂಬಂಧಿಸಿದ ಗೊಂದಲಗಳು ಮುಂದುವರಿದಿವೆ. ರಷ್ಯಾ ಜೊತೆಗಿನ ಸಂಬಂಧದ ಕುರಿತೂ ಪ್ರಶ್ನೆಗಳು ಎದುರಾಗಿವೆ.
ಭಾರತದೊಂದಿಗಿನ ಸುಂಕ ವ್ಯವಸ್ಥೆಗೆ ಸಂಬಂಧಿಸಿದಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿರುವ ಒಪ್ಪಂದವು ಸಮಗ್ರವಾಗಿರದೆ, ಎರಡೂ ದೇಶಗಳ ನಡುವಣ ವ್ಯಾಪಾರ ಸಮಸ್ಯೆಗಳ ಒಂದು ಭಾಗದ ಮೇಲಷ್ಟೇ ಬೆಳಕು ಚೆಲ್ಲುವಂತಿದೆ. ಈ ಕೊರತೆಯ ನಡುವೆಯೂ ಇದೊಂದು ಮಹತ್ವದ ಒಪ್ಪಂದವಾಗಿದ್ದು, ಅಮೆರಿಕದೊಂದಿಗಿನ ಭಾರತದ ವ್ಯಾಪಾರ ಒಪ್ಪಂದಗಳ ಬಗ್ಗೆ ಕಳವಳ ಹೊಂದಿದ್ದ ವ್ಯಾಪಾರಿಗಳು ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಎಲ್ಲರಿಗೂ ನಿರಾಳಭಾವ ಉಂಟುಮಾಡುವಂತಹದ್ದಾಗಿದೆ. ದ್ವಿಪಕ್ಷೀಯ ಸಂಬಂಧಗಳಲ್ಲಿನ ಸಾಮಾನ್ಯ ಹಿನ್ನಡೆ ನಿವಾರಣೆಗೊಳ್ಳುವ ಭರವಸೆಯೂ ಈ ಒಪ್ಪಂದದಿಂದ ಉಂಟಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್ ಅವರ ಘೋಷಣೆಗೆ ಒಪ್ಪಿಗೆ ನೀಡಿ ಪ್ರತಿಕ್ರಿಯಿಸಿದ್ದಾರೆ. ಉಭಯ ದೇಶಗಳ ವಾಣಿಜ್ಯ ಇಲಾಖೆಗಳು ಘೋಷಣೆಯನ್ನು ಅನುಮೋದಿಸಿವೆ ಹಾಗೂ ಕೆಲವು ವಿವರಣೆಗಳನ್ನೂ ನೀಡಿವೆ. ಭಾರತದಿಂದ ರಫ್ತಾಗುವ ವಸ್ತುಗಳ ಮೇಲಿನ ತೆರಿಗೆಯನ್ನು ಶೇ 50ರಿಂದ ಶೇ 18ಕ್ಕೆ ಅಮೆರಿಕ ಇಳಿಸಲಿದೆ; ಇದೇ ವೇಳೆ, ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳಿಗೆ ಭಾರತ ಯಾವುದೇ ಸುಂಕವನ್ನು ವಿಧಿಸುವುದಿಲ್ಲ ಎಂದು ಟ್ರಂಪ್ ಅವರ ಘೋಷಣೆ ತಿಳಿಸಿದೆ.
ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತದಲ್ಲಿನ ಸಾಮಾನ್ಯ ಪ್ರತಿಕ್ರಿಯೆ ಧನಾತ್ಮಕವಾಗಿದ್ದರೂ, ಈ ಘೋಷಣೆ ಕೆಲವು ಪ್ರಶ್ನೆಗಳಿಗೆ ಆಸ್ಪದ ಕಲ್ಪಿಸಿದೆ. ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳಿಗೆ ಶೂನ್ಯ ಸುಂಕವನ್ನು ವಿಧಿಸುವುದು ಭಾರತದ ಹಿತಾಸಕ್ತಿಯ ದೃಷ್ಟಿಯಿಂದ ಕಳವಳಕ್ಕೆ ಕಾರಣವಾಗುವಂತಿದೆ. ಸುಂಕ ರಹಿತ ವ್ಯವಸ್ಥೆಯಿಂದಾಗಿ ಭಾರತದ ಮಾರುಕಟ್ಟೆ ಯಲ್ಲಿ ಅಮೆರಿಕದ ಉತ್ಪನ್ನಗಳ ಪೂರವೇ ಉಂಟಾಗಬಹುದು. ಇವುಗಳಲ್ಲಿ ಹೈನು ಹಾಗೂ ಕೃಷಿ ಉತ್ಪನ್ನಗಳೂ ಸೇರಿರ ಬಹುದು. ಈ ಪರಿಸ್ಥಿತಿ ಈಗಾಗಲೇ ಸಂಕಷ್ಟದಲ್ಲಿರುವ ಭಾರತದ ಕೃಷಿ ವಲಯಕ್ಕೆ ಮತ್ತಷ್ಟು ತೊಂದರೆ ಉಂಟು ಮಾಡಬಹುದು. ಈ ಹಿನ್ನೆಲೆಯಲ್ಲಿ, ಭಾರತದ ಬೃಹತ್ ಮಾರುಕಟ್ಟೆಯನ್ನು ಅಮೆರಿಕದ ಕೃಷಿ ಉತ್ಪನ್ನಗಳು ತಲಪಲು ಪ್ರಸಕ್ತ ಒಪ್ಪಂದವು ಅನುಕೂಲಕರ ವಾಗಿದೆ ಎಂದಿರುವ ಅಮೆರಿಕದ ಕೃಷಿ ಕಾರ್ಯದರ್ಶಿ ಬ್ರೂಕ್ ರಾಲಿನ್ಸ್ ಹೇಳಿಕೆಯನ್ನು ಗಮನಿಸಬಹುದು. ಆದರೆ, ಭಾರತದ ಕೃಷಿ ವಲಯ ಸಂಪೂರ್ಣ ಸುರಕ್ಷಿತವಾಗಿದೆ ಎಂದು ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ. ಇದೇ ಬಗೆಯ ಭರವಸೆ ಯನ್ನು ಮೋದಿಯವರೂ ಈ ಹಿಂದೆ ನೀಡಿದ್ದಾರೆ. ಆದರೂ, ಪರಿಸ್ಥಿತಿ ಅಷ್ಟು ಸರಳವಾಗಿಲ್ಲ ಎನ್ನುವುದನ್ನು ಅಮೆರಿಕದ ಹೇಳಿಕೆಗಳು ಸೂಚಿಸುವಂತಿವೆ. ರೈತ ಚಳವಳಿಗಳ ಭಾರತೀಯ ಸಮನ್ವಯ ಸಮಿತಿ (ಐಸಿಸಿಎಫ್‌ಎಂ) ಕೂಡ, ಅಮೆರಿಕದ ಕೃಷಿ ಉತ್ಪನ್ನಗಳನ್ನು ತೆರಿಗೆಮುಕ್ತಗೊಳಿಸುವುದರಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆಯ ಮಾತು ಹೇಳಿದೆ.
ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ವಿವರಣೆ ಅಗತ್ಯವಾದ ಹಾಗೂ ಪರಿಹರಿಸಿಕೊಳ್ಳಬೇಕಾದ ಕೆಲವು ವಿಷಯಗಳಿವೆ. ರಷ್ಯಾದಿಂದ ತೈಲ ಖರೀದಿಯನ್ನು ಭಾರತ ನಿಲ್ಲಿಸಿದೆ ಎಂದು ಟ್ರಂಪ್ ಹೇಳಿದ್ದಾರೆ. ಈ ಬಗ್ಗೆ ಭಾರತ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ, ರಷ್ಯಾದಿಂದ ತೈಲ ಖರೀದಿ ಸ್ಥಗಿತಗೊಳಿಸುವ ಬಗ್ಗೆ ಭಾರತದಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಕ್ರೆಮ್ಲಿನ್ ಹೇಳಿದೆ. ರಷ್ಯಾದಿಂದ ತೈಲ ಖರೀದಿಸದಿರುವ ನಿರ್ಧಾರ ಭಾರತದ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವುದರ ಜೊತೆಗೆ, ದೀರ್ಘಕಾಲದ ಹಾಗೂ ನಂಬಿಕೆಗೆ ಅರ್ಹವಾದ ದೇಶದೊಂದಿಗಿನ ಬಾಂಧವ್ಯವನ್ನೂ ಗಾಸಿಗೊಳಿಸುತ್ತದೆ; ವಿಚಿತ್ರ ಮನಃಸ್ಥಿತಿಯ ನಾಯಕನ ನೇತೃತ್ವದ ವಿಶ್ವಾಸಾರ್ಹವಲ್ಲದ ದೇಶದ ಒತ್ತಡಕ್ಕೆ ಭಾರತ ಮಣಿದಂತೆಯೂ ಆಗುತ್ತದೆ. ಸಾರಿಗೆ, ಇಂಧನ ಮತ್ತು ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಅಮೆರಿಕದಲ್ಲಿ 500 ಬಿಲಿಯನ್ ಡಾಲರ್‌ಗಳ ಹೂಡಿಕೆಗೆ ಭಾರತ ಬದ್ಧವಾಗಿದೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಹೇಳಿದ್ದಾರೆ. ಈ ಹೇಳಿಕೆಯ ಬಗ್ಗೆಯೂ ಭಾರತದಿಂದ ಯಾವುದೇ ಸ್ಪಷ್ಟನೆ ದೊರೆತಿಲ್ಲ. ತೆರಿಗೆಗಳನ್ನು ತಕ್ಷಣದಿಂದಲೇ ಕಡಿತಗೊಳಿಸಲಾಗುತ್ತದೆ ಎಂದು ಟ್ರಂಪ್ ಹೇಳಿದ್ದರೆ, ವಿವರಗಳನ್ನು ಸದ್ಯದಲ್ಲೇ ಹಂಚಿಕೊಳ್ಳಲಾಗುವುದು ಎಂದು ಗೋಯಲ್ ಹೇಳಿದ್ದಾರೆ. ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ದೊರೆಯುವಂತೆ ಮಾಡಬೇಕು ಹಾಗೂ ಒಪ್ಪಂದಕ್ಕೆ ಸಂಬಂಧಿಸಿದಂತೆ ಎದುರಾಗಿರುವ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕು. ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲ ಗೊಂದಲ ಹಾಗೂ ಆತಂಕವನ್ನು ವಿಳಂಬವಿಲ್ಲದೆ ಪರಿಹರಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.